ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಶಿಕ್ಷಕರನ್ನು ರೂಪಿಸುವುದು ಹೇಗೆ?

ಅಕ್ಷರ ಗಾತ್ರ

ಶೈಕ್ಷಣಿಕ ಪುಸ್ತಕಗಳಿಗೆ ಸಂಬಂಧಿಸಿದಂತೆ ಸ್ವರ್ಣ ಯುಗವನ್ನು ನಾವು ಪ್ರವೇಶಿಸಿ­ದ್ದೇ­ವೆಯೇ ಎಂಬ ಅಚ್ಚರಿ ನನಗಾಗತೊಡಗಿದೆ. ಮೊದ­ಲಿಗೆ ಮಕ್ಕಳಲ್ಲಿ ಶಿಸ್ತು ರೂಢಿಸುವ ಮಹತ್ವ­ವನ್ನು ಸಾರುವ ಪಾಲ್ ಟಫ್ ಅವರು ಬರೆದ ‘ಹೌ ಚಿಲ್ಡ್ರನ್‌ ಸಕ್ಸೀಡ್’ ಎಂಬ ಪುಸ್ತಕ ಹೊರಬಂತು. 2012ರ ಸೆಪ್ಟೆಂಬರ್‌ನಲ್ಲಿ ಈ ಪುಸ್ತಕ ಪ್ರಕಟವಾಗಿತ್ತು. ಆನಂತರ ಅಮಂಡಾ ರಿಪ್ಲೆ ಅವರ ‘ದ ಸ್ಮಾರ್ಟೆಸ್ಟ್‌ ಕಿಡ್ಸ್‌ ಇನ್‌ ದ ವರ್ಲ್ಡ್’  ಪುಸ್ತಕ ಪ್ರಕಟವಾಯಿತು. ಕಳೆದ ವರ್ಷ­ವಷ್ಟೇ ಪ್ರಕಟವಾದ ಈ ಪುಸ್ತಕದಲ್ಲಿ ಅಮೆರಿಕದ ಶಾಲಾ ತರಗತಿಗಳಲ್ಲಿ ಎಲ್ಲಿ ತಪ್ಪಾ­ಗುತ್ತಿದೆ. ಇತರ ದೇಶಗಳು ತಮ್ಮ ಕ್ಲಾಸ್‌­ರೂಮ್‌­ಗಳಲ್ಲಿ ಅನುಸರಿಸುತ್ತಿರುವ ಆದರ್ಶ ಮಾದರಿಗಳು ಯಾವುವು  ಎಂಬುದರ ಬಗ್ಗೆ ವಿವರಿಸಲಾಗಿತ್ತು.

ಈಗ ಎಲಿಜಬೆತ್ ಗ್ರೀನ್ ಸರದಿ. ಅವರ ‘ಬಿಲ್ಡಿಂಗ್‌ ಎ ಬೆಟರ್‌ ಟೀಚರ್: ಹೌ ಟೀಚಿಂಗ್ ವರ್ಕ್ಸ್ (ಅಂಡ್‌ ಹೌ ಟು ಟೀಚ್ ಇಟ್‌ ಟು ಎವೆರಿವನ್)’  ಪುಸ್ತಕ ಮುಂದಿನ ವಾರ ಪ್ರಕಟ­ಗೊ­ಳ್ಳ­ಲಿದೆ. ಕಳೆದ ವಾರಾಂತ್ಯ ಆ ಪುಸ್ತಕದ ಆಯ್ದ ಭಾಗ­ವನ್ನು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ­ಯಲ್ಲಿ ಪ್ರಕಟಿಸಲಾಗಿತ್ತು. ಮೊದ­ಲೆ­ರಡು ಪುಸ್ತಕ­­ಗಳು ‘ನ್ಯೂಯಾರ್ಕ್ ಟೈಮ್ಸ್‌’ನ ಅತ್ಯು­ತ್ತಮ ಪುಸ್ತಕಗಳ ಯಾದಿಯಲ್ಲಿ ಕಾಣಿಸಿ­ಕೊಂಡಿ­ದ್ದವು. ಗ್ರೀನ್ ಅವರ ಪುಸ್ತಕ ಸಹ ಈ ಪಟ್ಟಿಗೆ ಸೇರ­­ಲಿದೆ ಎಂಬುದು ನನ್ನ ಊಹೆ. ಆ ಅರ್ಹತೆ ಅದಕ್ಕಿದೆ.

ಕಳೆದ ಕೆಲ ದಶಕಗಳಿಂದ ಅಮೆರಿಕದಲ್ಲಿ ಖಾಸಗಿ ಶಾಲೆಗಳ ಅಭಿಯಾನ ಕಾವು ಪಡೆದಿದೆ. ಯಾವ ಮಗುವೂ ತರಗತಿಯಲ್ಲಿ ಹಿಂದೆ ಬೀಳ­ಬಾರದು ಎಂಬ ಚಳವಳಿಯೂ ತೀವ್ರತೆ ಪಡೆದಿದೆ.  ತರಗತಿಯಲ್ಲಿ ಮಕ್ಕಳ ಕಲಿಕಾ ಸಾಧನೆ ಹೆಚ್ಚಿಸು­ವುದು ಹೇಗೆ ಎಂಬ ಕುರಿತು ಸುಧಾರಣಾ­ವಾದಿಗಳ ಗುಂಪು ಹಾಗೂ ಶಿಕ್ಷಕರ ಸಂಘಟನೆಗಳು ಜಗಳ­ವಾಡು­ತ್ತಲೇ ಇವೆ. ಸುಧಾ­ರಣಾ­ವಾದಿಗಳು ಇದಕ್ಕೆ ಉತ್ತರದಾಯಿ­ತ್ವವೇ ಸೂಕ್ತ ಮದ್ದು ಎನ್ನುತ್ತಿ­ದ್ದಾರೆ. ಶಿಕ್ಷಕ ಸಂಘ­ಟನೆಗಳು ತಮಗೆ ಸ್ವಾಯತ್ತತೆ ಬೇಕು ಅನ್ನುತ್ತಿವೆ.

ಶಿಕ್ಷಕರ ಉತ್ತರದಾಯಿತ್ವದ ಬಗ್ಗೆ ವಾದಿಸುವ ಸುಧಾರಣಾ­ವಾದಿಗಳು, ಶಾಲೆ­ಗಳಲ್ಲಿ ವಿದ್ಯಾರ್ಥಿ­ಗಳನ್ನು ವಿಸ್ತೃತವಾದ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳುತ್ತಾರೆ. ಶಿಕ್ಷಕರನ್ನು ಸಹ ಪದೇ ಪದೇ ಮೌಲ್ಯಮಾಪನಕ್ಕೆ ಒಳಪಡಿಸ­ಬೇಕು ಎಂದೂ ಅವರು ಒತ್ತಾಯಿಸುತ್ತಾರೆ. ಸ್ವಾಯ­­ತ್ತತೆಗೆ ಆಗ್ರಹಿಸುತ್ತಿರುವ ಶಿಕ್ಷಕ ಸಂಘಟನೆ­­ಗಳು, ಶಿಕ್ಷಕರನ್ನೂ ಇತರ ವೃತ್ತಿಪರರಂತೆ ಪರಿ­­ಗಣಿಸ­­­ಬೇಕು ಎಂಬ ಬೇಡಿಕೆ ಮುಂದಿಡುತ್ತಿವೆ. ಆದರೆ ಇವು ಶಿಕ್ಷಕರ ತರಬೇತಿ ಬಗ್ಗೆ ಮೌನವಾಗಿವೆ.

ಅಮೆರಿಕದಲ್ಲಿ ಆಗುವುದೇ ಹೀಗೆ.  ಅನುಭವ­ವಿಲ್ಲದ ಶಿಕ್ಷಕ–ಶಿಕ್ಷಕಿ ಯಾವುದೇ ತರಬೇತಿ­ಯಿಲ್ಲದೇ ಮೊದಲ ದಿನ ಮಕ್ಕಳ ಮುಂದೆ ನಿಲ್ಲು­ತ್ತಾರೆ. ತಡವರಿಸುತ್ತ, ಏಳುತ್ತ, ಬೀಳುತ್ತ ಯಶಸ್ವಿ ಶಿಕ್ಷಕರಾಗಿ ರೂಪುಗೊಳ್ಳುತ್ತಾರೆ. ಕೆಟ್ಟ ಶೈಕ್ಷಣಿಕ ಸನ್ನಿವೇಶಗಳಲ್ಲಿ, ಸಾಧಾರಣ ಶಿಕ್ಷಕರು ಕಲಿಕೆಯನ್ನು ಉಲ್ಲಾಸಮಯ ಚಟುವಟಿಕೆ ಯಾಗಿ­ಸುವುದು ಹೇಗೆ ಎಂಬುದರ ಕುರಿತು ಯೋಚಿ­ಸುವ ಗೋಜಿಗೂ ಹೋಗುವುದಿಲ್ಲ.  ಆದರ್ಶ ವಾತಾವರಣ ಇರುವ ಶಾಲೆಗಳಲ್ಲೂ ಸಹ ಇನ್ನೂ ತರಬೇತಿ ಹಂತದಲ್ಲಿರುವ ಶಿಕ್ಷಕ­ರಿಂದ ಪಾಠ ಮಾಡಿಸಲಾಗುತ್ತದೆ.

ಸಾವಿರಾರು ಮಕ್ಕಳಿಗೆ ಪಾಠ ಹೇಳುವ ಶಿಕ್ಷಕ­ರಿಗೆ ನೀಡುವ ತರಬೇತಿಯ ಮಟ್ಟವನ್ನು ಹೆಚ್ಚಿಸ­ಬೇಕು ಎಂಬ ಕೂಗು ಇತ್ತೀಚೆಗೆ ತೀವ್ರವಾಗಿದೆ. ಶಿಕ್ಷಣ ಕ್ಷೇತ್ರದ ಕೆಲ ಕ್ರಾಂತಿಕಾರಿಗಳು ಮುಂದಿ­ಟ್ಟಿರುವ ಈ ವಾದವನ್ನು ಎಲಿಜಬೆತ್ ಗ್ರೀನ್ ತಮ್ಮ ಪುಸ್ತಕ­ದಲ್ಲಿ ಬೆಂಬಲಿಸುತ್ತಾರೆ. ಶಿಕ್ಷಕ ವೃತ್ತಿಯಲ್ಲಿ­ರುವ ಬಹುತೇಕರು ನಂಬುವಂತೆ ಉತ್ತಮ ಶಿಕ್ಷಕರು ಹುಟ್ಟಿನಿಂದಲೇ ಆ ಕೌಶಲ ಪಡೆದಿರು­ತ್ತಾರೆ ಎಂಬ ವಾದದಲ್ಲೂ ಹುರುಳಿಲ್ಲ ಎಂದು ಗ್ರೀನ್ ಅಭಿಪ್ರಾಯಪಡುತ್ತಾರೆ. ಅವರ ಪುಸ್ತಕ­ದಲ್ಲಿನ ಮುಖ್ಯ ಪಾತ್ರಗಳು ಬೋಧನಾ ವಿಧಾನ­ವನ್ನು ಹಲವು ಕೌಶಲಗಳಾಗಿ ವಿಭಜಿಸಿವೆ. ಶಿಕ್ಷಕ­ರಾಗು­ವವರಿಗೆ ಆ ಕೌಶಲಗಳನ್ನು ಕಲಿಸ­ಬಹುದು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಉತ್ತಮ ಶಿಕ್ಷಕರಾಗಬೇಕಾದರೆ ನೀವು ಮೇಧಾವಿಗಳಾಗಬೇಕಿಲ್ಲ. ಚರ್ಚೆಯನ್ನು ಹೇಗೆ ಮುನ್ನಡೆಸಬೇಕು ಎಂದು ತಿಳಿದಿದ್ದರೆ ಸಾಕು ಎಂದು ಗ್ರೀನ್ ಇತ್ತೀಚೆಗೆ ಹೇಳಿದ್ದರು. ಮಕ್ಕಳು ಹೇಗೆ ತಪ್ಪು ಮಾಡುತ್ತಾರೆ, ಹೇಗೆ ಯೋಚಿಸು­ತ್ತಾರೆ, ಅದಕ್ಕೆ ಹೇಗೆ ಪ್ರತಿಕ್ರಿಯಿಸ­ಬೇಕು ಎಂದು ತಿಳಿ­ದಿದ್ದರೆ ಸಾಕು. ಇಂತಹ ಕೌಶಲಗಳು ಕೆಲವರಿಗೆ ಸುಲಭ­ವಾಗು­ತ್ತವೆಯೇ? ಹೌದು. ಆದರೆ, ತರಬೇತಿಯ ಮೂಲಕವೂ ಇಂತಹ ವಿಚಾರಗಳನ್ನು ಹೇಳಿಕೊಡಬಹುದು.

ಗ್ರೀನ್ ಅವರ ಪುಸ್ತಕದಲ್ಲಿನ ಪ್ರಮುಖ ಪಾತ್ರ ದೇಬೊರಾ ಬಾಲ್ ಎಂಬ ಮಹಿಳೆಯದ್ದು. ಪ್ರಾಥ­ಮಿಕ ಶಾಲೆಯ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ಬಾಲ್, ಹಂತ-ಹಂತವಾಗಿ ಮೇಲಕ್ಕೆ ಏರಿ ಮಿಚಿಗನ್ ವಿಶ್ವವಿದ್ಯಾಲಯದ ಶಿಕ್ಷಣ ಶಾಲೆಯ ಡೀನ್ ಹುದ್ದೆಗೆ ಏರಿದವರು. ದೇಬೊರಾ ಪಾಠ ಮಾಡುವುದನ್ನು ಕೇಳುವಾಗ ಸಂಗೀತ ಆಲಿಸಿದಂತೆ ಇರುತ್ತದೆ ಎಂಬ ಮಾತು ಪುಸ್ತಕ­ದಲ್ಲಿ ಬರುತ್ತದೆ. ಬಾಲ್‌ಗೆ ಈ ಪರಿಣತಿ ಒಮ್ಮೆಲೆ ಬಂದಿದ್ದಲ್ಲ. ಅಭ್ಯಾಸ, ಅನುಭವದ ಮೂಲಕವೇ ಬಾಲ್ ಅತ್ಯುತ್ತಮ ಶಿಕ್ಷಕಿಯಾಗಿದ್ದಾರೆ.

‘ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ತರಬೇತಿ ನೀಡುವುದಕ್ಕಿಂತ ಹೆಚ್ಚು ಮಹತ್ವವನ್ನು ಇತರ ವಿಚಾರ­ಗಳಿಗೆ ಏಕೆ ನೀಡುತ್ತವೆ’ ಎಂಬ ಅಧ್ಯಾ­ಯವೂ ಗ್ರೀನ್ ಅವರ ಪುಸ್ತಕದಲ್ಲಿದೆ. ಆದರೆ  ದೇಬೊರಾ ಬಾಲ್, ಮಿಚಿಗನ್ ವಿಶ್ವವಿದ್ಯಾಲಯ­ದಲ್ಲಿ ಈಗ ಇದನ್ನು ಬದಲಿಸಲು  ಹೊರ­ಟಿ­ದ್ದಾರೆ. ಶಿಕ್ಷಕರಿಗೂ ಉತ್ತಮ ತರಬೇತಿ ಬೇಕು, ಬೋಧ­ನೆಗೆ ಅಗತ್ಯವಾದ ಕೌಶಲ, ಪರಿಕರಗಳನ್ನು ಅವರು ಹೊಂದಿರಬೇಕು ಎಂದು ಬಾಲ್ ಹೇಳುತ್ತಾರೆ.

ಪರವಾನಗಿ ಪಡೆಯುವ ಮುನ್ನ ನಿಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು ಎಂಬ ನಿಯ­ಮ­­ವನ್ನು ಇತರ ವೃತ್ತಿಗಳಂತೆ ಶಿಕ್ಷಕ ವೃತ್ತಿಗೂ ಕಡ್ಡಾಯ ವಾಗಿಸಬೇಕಿತ್ತು. ಕೂದಲು ಕತ್ತರಿಸು ವವರು ಹಾಗೂ ವಿಮಾನ ಹಾರಿಸುವ­ವ­ರಿಗೆ ಶಿಕ್ಷಕರಾಗುವವರಿಗಿಂತ ಉತ್ತಮ ತರ­ಬೇತಿ ದೊರಕುತ್ತದೆ ಎಂದು ಗ್ರೀನ್ ಈ ಪುಸ್ತಕದಲ್ಲಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT