ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಸಿನಿಮಾ ಪುಸ್ತಕಕ್ಕೆ ಸಮ

Last Updated 25 ಮೇ 2016, 19:32 IST
ಅಕ್ಷರ ಗಾತ್ರ

* ತುಂಬ ತಡವಾಗಿ ಬಾಲಿವುಡ್ ಅಂಗಳ ಪ್ರವೇಶಿಸಿದಿರಿ. ನಟನೆಯತ್ತ ನಿಮ್ಮ ಮನಸ್ಸು ಹೊರಳಲು ಕಾರಣ?
ಹಾಂ, ನಾನು ಬಾಲಿವುಡ್ ಪ್ರವೇಶಿಸಿದ್ದು ತಡವಾಗಿಯೇ. ಆದರೆ ಅದಕ್ಕಿಂತೂ ಮುಂಚೆಯೇ ನಾನು ನಟನೆಯಲ್ಲಿ ತೊಡಗಿಕೊಂಡಿದ್ದೆ. ನನಗೆ ಛಾಯಾಗ್ರಹಣದಲ್ಲಿ ಹೆಚ್ಚು ಆಸಕ್ತಿ. ಚಿತ್ರಗಳ ಮೂಲಕ ಕಥೆ ಹೇಳುವ ಪರಿಪಾಠ ನನ್ನಲ್ಲಿ ಅಂತರ್ಗತವಾಗಿತ್ತು.  ಅದು ನನ್ನನ್ನು ನಟನಾ ಜಗತ್ತಿಗೆ ಕರೆತಂದಿದೆ ಎಂದರೆ ತಪ್ಪಾಗಲಾರದು.

ನಾನು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು 34ನೇ ವರ್ಷದಲ್ಲಿ. 14 ವರ್ಷ ರಂಗಭೂಮಿಯಲ್ಲಿ ಪಳಗಿದೆ. ಒಂದು ನಾಟಕದಲ್ಲಿ ಗಾಂಧಿ ಪಾತ್ರಕ್ಕಾಗಿ 27 ಕೆ.ಜಿ ತೂಕ ಇಳಿಸಿಕೊಂಡಿದ್ದೆ. ಆ ಪಾತ್ರ ನನಗೆ ವಿಶಿಷ್ಟ ಮನ್ನಣೆ ದೊರಕಿಸಿಕೊಟ್ಟಿತು.  ಹಾಸ್ಯ ಪಾತ್ರವಿರಲಿ, ಗಂಭೀರ ಪಾತ್ರವಿರಲಿ ಎಲ್ಲಾ ಪಾತ್ರಕ್ಕೂ ಒಗ್ಗಿಕೊಳ್ಳುವಂತೆ ನನ್ನನ್ನು ತಯಾರು ಮಾಡಿದ್ದು ರಂಗಭೂಮಿ.  ಈ ನಿಟ್ಟಿನಲ್ಲಿ ರಂಗಭೂಮಿ ನನಗೆ ಸಾಕಷ್ಟು ಕಲಿಸಿದೆ. ನಾನು ರಂಗಭೂಮಿ ವಿದ್ಯಾರ್ಥಿ.

* ನೀವು ನಟನೆಗೆ ಬರುವುದರಲ್ಲಿ ನಿಮ್ಮ ತಾಯಿಯ ಪ್ರಭಾವ ಬಹಳವೇ ಇದೆ. ಆ ಬಗ್ಗೆ ಹೇಳಿ?
ನನ್ನೊಳಗಿನ ನಟನೆಯನ್ನು ಜಾಗೃತಗೊಳಿಸಿದ್ದು ನನ್ನ ತಾಯಿ. ಆಕೆಗೆ 31 ವರ್ಷವಾಗಿದ್ದಾಗ ನನ್ನ ತಂದೆ ತೀರಿಕೊಂಡರು. ನಾಲ್ಕು ಮಕ್ಕಳನ್ನು ಆಕೆ ಬೆಳೆಸಿದ ಪರಿ ಅದ್ಭುತ.

ಅವಳು ನಮ್ಮ ಕನಸುಗಳಿಗೆ ಎಂದಿಗೂ ಕಡಿವಾಣ ಹಾಕಲಿಲ್ಲ. ಯಾವುದೇ ಕೆಲಸವಿದ್ದರೂ ಜತೆಗಿದ್ದು, ಪ್ರೋತ್ಸಾಹ ನೀಡುತ್ತಿದ್ದರು. ಎಲ್ಲಾ ಪೋಷಕರು ಮಕ್ಕಳಿಗೆ ಸಿನಿಮಾ ನೋಡಬೇಡಿ ಎನ್ನುತ್ತಿದ್ದಾಗ ನನ್ನ ತಾಯಿ ಸಿನಿಮಾಕ್ಕೆ ಹೋಗು ಎನ್ನುತ್ತಿದ್ದರು. ಆಕೆಯ ಪ್ರಕಾರ ಒಂದು ಒಳ್ಳೆಯ ಸಿನಿಮಾ ಒಂದು ಪುಸ್ತಕಕ್ಕೆ  ಸಮ. ಬಾಲ್ಯದಲ್ಲಿ ಸಿನಿಮಾಗಳನ್ನು ನೋಡಿದ್ದು ನಟನೆಗೆ ಉತ್ತಮವಾದ ಅಡಿಪಾಯ ಹಾಕಿಕೊಟ್ಟಿದೆ.

* ಇಲ್ಲಿಯವರೆಗೆ ಸುಮಾರು 70 ಸಿನಿಮಾಗಳಲ್ಲಿ ನಟಿಸಿದ್ದೀರಿ.  ನೀವು ಸಿನಿಮಾ ಆಯ್ದುಕೊಳ್ಳುವ ಮಾನದಂಡ ಯಾವುದು?
ಸಿನಿಮಾ ಚೆನ್ನಾಗಿ ಮೂಡಿಬರಲು ಮೊದಲ ಅಸ್ತ್ರ ನಿರ್ದೇಶಕನ ಬಳಿ ಇರುತ್ತದೆ. ಆತನಲ್ಲಿ ಸಾಮರ್ಥ್ಯ ಇದ್ದರೆ ನಟರಿಂದ ಉತ್ತಮ ನಟನೆಯನ್ನು ತೆಗೆಸುತ್ತಾನೆ. ದೋಣಿಗೆ ನಾವಿಕ ಹೇಗೆ ಮುಖ್ಯವೋ ಸಿನಿಮಾಗೆ ನಿರ್ದೇಶಕನೂ ಮುಖ್ಯ. ಸ್ಟಾರ್ ನಟರು ಸಹಕಲಾವಿದರ ನಟನೆಯನ್ನು ಮುಚ್ಚಿಬಿಡುತ್ತಾರೆ ಎಂಬ ಮಾತಿದೆ.

ಆದರೆ ಯಾವ ನಟರೂ ಅದರಲ್ಲೂ ಸ್ಟಾರ್‌ ನಟರು ಎಂದೂ ಹಾಗೆ ಮಾಡುವುದಿಲ್ಲ. ಕೊಟ್ಟು ತೆಗೆದುಕೊಳ್ಳುವ ಹಾಗೆ ಸಹಕಲಾವಿದರ ನಟನೆಗೆ ಪೂರಕವಾಗಿ ನಿಲ್ಲುತ್ತಾರೆ. ಕೊನೆಯದಾಗಿ ಚಿತ್ರಕಥೆ. ಒಂದೊಳ್ಳೆ ಚಿತ್ರಕಥೆ ಒಳ್ಳೆಯ ನಿರ್ದೇಶಕನನ್ನು ರೂಪಿಸುತ್ತದೆ. ಅಡಿಪಾಯ ಚೆನ್ನಾಗಿದ್ದರೆ ಕಟ್ಟಡ ಸುರಕ್ಷಿತ ಹಾಗಾಗಿ ನನಗೆ ಕಥೆಯೂ ಮುಖ್ಯ.

* ಗುಣಮಟ್ಟದ ಕೊರತೆಯಿಂದ ಭಾರತೀಯ ಸಿನಿಮಾ ನಲುಗುತ್ತಿದೆಯೇ?
ಖಂಡಿತ. ಅದರಲ್ಲಿ ಚರ್ಚೆ ಮಾಡುವ ಮಾತೇ ಇಲ್ಲ. ವರ್ಷದಲ್ಲಿ ಮೂರು ನಾಲ್ಕು ಸಿನಿಮಾಗಳು ಮಾತ್ರ ವಿಭಿನ್ನ ಆಲೋಚನೆಯೊಂದಿಗೆ ಮೂಡಿಬರುತ್ತಿವೆ. ಭಾರತೀಯ ಸಿನಿಮಾಗಳು ಎಂದು ಒಟ್ಟಾರೆಯಾಗಿ ಹೇಳುವುದಕ್ಕಿಂತ ಚಲನಚಿತ್ರ (ಮೂವಿ) ಮತ್ತು ಸಿನಿಮಾ ಎಂದು ಪ್ರತ್ಯೇಕಿಸೋಣ.

ಚಲನಚಿತ್ರಗಳು ಸಾಮಾನ್ಯ ಜನರಿಗಾಗಿ ತೆರೆಕಾಣುತ್ತವೆ ಅವರಿಗೆ ಸಿನಿಮಾದಲ್ಲಿ ಹಾಡು ಬೇಕು, ಮರ ಸುತ್ತುವ ನಟ ಬೇಕು. ಆದರೆ ಸಿನಿಮಾಗಳು ಬೇರೆ ರೀತಿಯ ಹೊಳಹುಗಳನ್ನು ಒಳಗೊಂಡಿರುತ್ತವೆ. ಪ್ರತಿ ವರ್ಷ ಇಂತಹ ವಿಭಿನ್ನ  ಅಭಿವ್ಯಕ್ತಿಯ ಎರಡು– ಮೂರು ಸಿನಿಮಾಗಳು ತೆರೆಕಾಣುತ್ತವೆ.

ಆದರೆ ಈಗ ಸಿನಿಮಾ ನೋಡುವ ಪ್ರವೃತ್ತಿಯೇ ಬದಲಾಗುತ್ತಿದೆ. ಚಲನಚಿತ್ರ ಮತ್ತು ಸಿನಿಮಾಗಳ ನಡುವಿನ ಪರದೆ ತೆಳುವಾಗುತ್ತಿದೆ. ‘ದಿಲ್‌ವಾಲೆ’, ‘ತಮಾಷಾ’ ಇಂತಹ ಮನರಂಜನಾತ್ಮಕ ಚಿತ್ರಗಳ ಜತೆಗೆ ‘ಪೀಕು’, ‘ಮಸಾನ್‌’ನಂಥ ಸಿನಿಮಾಗಳನ್ನು ಜನರು ಇಷ್ಟ ಪಟ್ಟಿದ್ದಾರೆ.

* ಕಲಾತ್ಮಕ ಚಿತ್ರಗಳನ್ನೇ ಸಿನಿಮಾ ಎಂದು  ಕರೆಯುತ್ತಿದ್ದೀರಾ? 

ಯಾವುದೇ ಹಾಡುಗಳನ್ನು ಹಾಕದೆ ವಾಸ್ತವವಾಗಿ ಚಿತ್ರಿಸಿದ್ದೇವೆ ಎಂದ ಮಾತ್ರಕ್ಕೆ ಅದನ್ನು ಕಲಾತ್ಮಕ ಚಿತ್ರ ಎನ್ನಲು ಹೇಗೆ ಸಾಧ್ಯ? ಕಲಾತ್ಮಕ ಚಿತ್ರ ಹಣೆಪಟ್ಟಿಯೊಂದಿಗೆ ಕೆಲವು ಅತ್ಯಂತ ಕೆಟ್ಟ ಸಿನಿಮಾಗಳು ಬಂದಿವೆ. ಸಿನಿಮಾದಲ್ಲಿ ನಿಜವಾದ ಕಲಾತ್ಮಕತೆ ಇದ್ದರೆ ಮಾತ್ರ ಅದೊಂದು ಅದ್ಭುತ ಸಿನಿಮಾವಾಗುತ್ತದೆ. ಹೊಸ ವಿಧಾನದಲ್ಲಿ ಕಥೆಯನ್ನು ಹೇಳಿದರೆ ಜನರು ಇಷ್ಟಪಡುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಮರಾಠಿಯ ‘ಸೈರಟ್‌’ ಸಿನಿಮಾ ಸಾಕ್ಷಿ.

* ಟಿ.ವಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟ ಅನುಭವ ನಿಮಗಿದೆ. ಅಲ್ಲಿ ನೀವು ಎದುರಿಸಿದ ಸವಾಲುಗಳೇನು?
ಅಂತಹ ವಿಭಿನ್ನ ಸವಾಲುಗಳೇನೂ ಇಲ್ಲ. ಹಿರಿತೆರೆಯ ಮೇಲೂ ನಾನು ಜನರೊಂದಿಗೆ ಸಂವಹನ ನಡೆಸುತ್ತೇನೆ. ಇಲ್ಲಿಯೂ ಸಹ ಅದೇ ಸಂವಹನ ಅವಶ್ಯಕ. ಆದರೆ ವೀಕ್ಷಕರ ವರ್ಗ ಬೇರೆಯದ್ದಾಗಿರುತ್ತದೆ ಅಷ್ಟೆ.

* ಬೆಂಗಳೂರಿನ ಜತೆಗಿನ ಅನುಭವಗಳನ್ನು ಹಂಚಿಕೊಳ್ಳಿ.
1964ರಿಂದ ನನಗೆ ಬೆಂಗಳೂರಿನ ನಂಟಿದೆ. ನನ್ನ ಚಿಕ್ಕಮ್ಮ ಮತ್ತು ಅನೇಕ ಸ್ನೇಹಿತರು ಇಲ್ಲಿ ನೆಲೆಸಿದ್ದಾರೆ. ಒಂದು ಲೆಕ್ಕದಲ್ಲಿ ದಿನ ಬಿಟ್ಟು ದಿನ ಇಲ್ಲಿಗೆ ಬರುತ್ತೇನೆಂದರೆ ತಪ್ಪಾಗಲಾರದು. ಆದರೆ ಈಗಿನ ಟ್ರಾಫಿಕ್‌ ನೆನಸಿಕೊಂಡರೆ ಬೆಂಗಳೂರು ಭಯವಾಗುತ್ತದೆ. ಮುಂಚೆ  ಇಲ್ಲಿನ ವಾತಾವರಣ ಇಷ್ಟವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT