ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದಲ್ಲಿ ಚೆಸ್‌ ಬೆಳಕು

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ಚೆಸ್ ಸಂಘಟಕರು ಮತ್ತು ಆಟಗಾರರಿಗೆ ಇದು ನಲಿವಿನ ಕ್ಷಣ. ಶಿರಸಿ, ಹೊನ್ನಾವರ, ಕುಮಟಾದಂಥ ಸಣ್ಣ ಊರುಗಳ ಆಟಗಾರರು ಹುಬ್ಬಳ್ಳಿಗೆ ಬಂದು ಚೆಸ್ ಆಡಿ ಬಹುಮಾನಗಳನ್ನು ಗೆದ್ದುಕೊಂಡು ಹೋಗುತ್ತಿದ್ದುದನ್ನು ಕಂಡು ಬೆರಗಾಗುತ್ತಿದ್ದವರು ಈಗ ಇಲ್ಲಿನ ಹುಡುಗರು ಪರ ಊರುಗಳಲ್ಲಿ ಆಡಿ ಪ್ರಶಸ್ತಿಗಳೊಂದಿಗೆ ಮರಳುವುದನ್ನು ಕಂಡು ಖುಷಿಪಡುತ್ತಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಇಂಥ ಸಂತಸದ ಕ್ಷಣಗಳನ್ನು ಸಾಕಷ್ಟು ಅನುಭವಿಸಿದವರು ಈ ಬಾರಿ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಮೈಸೂರಿನಲ್ಲಿ ಇತ್ತೀಚೆಗೆ ಕರ್ನಾಟಕ ಸಂಯುಕ್ತ ಚೆಸ್ ಸಂಸ್ಥೆ (ಯುಕೆಸಿಎ) ಹಮ್ಮಿಕೊಂಡಿದ್ದ ೧೭ ವರ್ಷದೊಳಗಿನವರ ರಾಜ್ಯ ಟೂರ್ನಿಯ ಬಾಲಕ ಮತ್ತು ಬಾಲಕಿಯರ ವಿಭಾಗಗಳೆರಡರಲ್ಲೂ ಚಾಂಪಿಯನ್ ಪಟ್ಟ ಹುಬ್ಬಳ್ಳಿ ಆಟಗಾರರ ಮುಡಿಗೆ ಏರಿರುವುದು ಇದಕ್ಕೆ ಕಾರಣ. ಪಟ್ನಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟೂರ್ನಿಗೆ ಹುಬ್ಬಳ್ಳಿಯ ಆದಿತ್ಯ ಬಿ.ಕಲ್ಯಾಣಿ ಮತ್ತು ವಾಣಿ ಎಸ್.ಇಂದ್ರಾಳಿ ಅವರನ್ನು ಕಳುಹಿಸಿಕೊಡುತ್ತಿದ್ದಾರೆ. ರಾಷ್ಟ್ರಮಟ್ಟದ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸು ತ್ತಿರುವವರ ಪೈಕಿ ಇಬ್ಬರು ಇಲ್ಲಿನವರೇ ಎಂಬುದು ಅಪರೂಪದ ಸಾಧನೆ.

ಆದಿತ್ಯ ಕಲ್ಯಾಣಿ ಈಗ ಇನ್ನೂ ಹದಿಮೂರು ವರ್ಷ ವಯಸ್ಸಿನ ಬಾಲಕ. ತನಗಿಂತ ಹೆಚ್ಚು ರೇಟಿಂಗ್ ಹೊಂದಿರುವ ಆಟಗಾರರನ್ನು ಮೈಸೂರಿನಲ್ಲಿ ಮಣಿಸಿದ ಇವರು ಒಟ್ಟು ಒಂಬತ್ತೂ ಸುತ್ತುಗಳಲ್ಲಿ ಜಯ ಸಾಧಿಸಿ ಗಮನ ಸೆಳೆದಿದ್ದರು.
ವಾಣಿ ಇಂದ್ರಾಳಿ ಈಗ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಶಾಲಾ ಮಟ್ಟದ ಟೂರ್ನಿಗಳಲ್ಲಿ ಈಗಾಗಲೇ ಎರಡು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವ ಇದೆ ಅವರಿಗೆ. ೧೭ ವರ್ಷದೊಳಗಿನ ವಯೋಮಾನದವರ ವಿಭಾಗದಲ್ಲಿ ಮೊದಲ ಬಾರಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಅವರು ಭರವಸೆಯಿಂದ ಪಟ್ನಾ ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ.     

ಅಬಾಕಸ್ ನಿಂದ ಚೆಸ್ ವರೆಗೆ
ಆದಿತ್ಯ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭ. ದೈಹಿಕ ಕಸರತ್ತಿನ ಆಟಗಳಲ್ಲಿ ಒಂದಷ್ಟೂ ಆಸಕ್ತಿ ತೋರಿಸಿದ ಅವರ ಗಮನವೆಲ್ಲ ಬುದ್ದಿಮತ್ತೆ ಹೆಚ್ಚಿಸುವ ಆಟಗಳ ಕಡೆಗೆ ಇತ್ತು. ಹೀಗಾಗಿ ಪಾಲಕರು ಅಬಾಕಸ್‌ಗೆ ಸೇರಿಸಿದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹುಮಾನಗಳು ಬಂದವು. ನಂತರ ಚೆಸ್‌ಗೆ ಪದಾರ್ಪಣೆ ಮಾಡಿ ಅಲ್ಲಿಯೂ ಪ್ರತಿಭೆ ಬೆಳಗಿದರು. ಚಿನ್ಮಯ ಶಾಲೆಯ ವಿದ್ಯಾರ್ಥಿಯಾಗಿರುವ ಆದಿತ್ಯ ಕೇರಳದ ತ್ರಿಶೂರ್‌ನಲ್ಲಿ ಕಳೆದ ವರ್ಷ ನಡೆದ ಚಿನ್ಮಯ ವಿದ್ಯಾಲಯಗಳ ಅಖಿಲ ಭಾರತ ಮಟ್ಟದ ಚೆಸ್ ಟೂರ್ನಿಯ 12 ವರ್ಷದೊಳ ಗಿನವರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.

ಹುಬ್ಬಳ್ಳಿ ಉದಯನಗರದ ಸರೋಜಾ ಮತ್ತು ಬಸವರಾಜ್ ದಂಪತಿ ಪುತ್ರ ಆದಿತ್ಯ ಕಲ್ಯಾಣಿ ಮೂರು ವರ್ಷಗಳ ಹುಡುಗನಿದ್ದಾಗಲೇ ಚೆಸ್ ನಡೆಗಳನ್ನು ಕಲಿಯ ತೊಡಗಿದ್ದರು. ಶ್ರೀಕೃಷ್ಣ ಉಡುಪ ಅವರ ಬಳಿ ತರಬೇತಿ ಪಡೆಯುತ್ತಿದ್ದಾಗ ವೇಗದ ನಡೆಗಳನ್ನು ಬೇಗನೇ ಕಲಿತುಕೊಂಡು ಒಂದೇ ವರ್ಷದಲ್ಲಿ ಪ್ರಮುಖ ಟೂರ್ನಿಗಳಲ್ಲಿ ಭಾಗವಹಿಸಲು ಆರಂಭಿಸಿದರು. 2011 ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಟೂರ್ನಿಯಲ್ಲಿ ಒಂಬತ್ತು ವರ್ಷದೊಳಗಿನವರ ವಿಭಾಗ ದಲ್ಲಿ ಮತ್ತು ಕುಂದಾಪುರದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಟೂರ್ನಿಯಲ್ಲಿ 11 ವರ್ಷದೊಳಗಿನವರ ವಿಭಾಗ ದಲ್ಲಿ ನಾಲ್ಕನೇ ಸ್ಥಾನ ಗೆದ್ದುಕೊಂಡು ಆರಂಭಿಕ 1346 ರೇಟಿಂಗ್ ಹೊಂದಿದರು.

ಹೈದರಾಬಾದ್‌ನಲ್ಲಿ ನಡೆದ ಫಿಡೆ ರೇಟೆಡ್ ಟೂರ್ನಿ ಯಲ್ಲಿ ಪಾಲ್ಗೊಂಡು 35 ಪಾಯಿಂಟ್‌ಗಳನ್ನು ಹೆಚ್ಚಿಸಿ ಕೊಂಡರು. ಕಳೆದ ವರ್ಷಾಂತ್ಯದಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಆದಿತ್ಯ ಪಾಲಿಗೆ ಬಂದಿತು. 11 ವರ್ಷದೊಳಗಿನವರ ವಿಭಾಗದಲ್ಲಿದ್ದ ಒಟ್ಟು ನಾಲ್ಕು ಮಂದಿ ಪೈಕಿ ಧಾರವಾಡ ಜಿಲ್ಲೆಯ ಏಕೈಕ ಆಟಗಾರ ಇವರಾಗಿದ್ದರು.

ಇಂದ್ರಾಳೀಸ್ ಸ್ಕೂಲ್ ಆಫ್ ಲೈಫ್ ಸ್ಕಿಲ್ಸ್ ನಲ್ಲಿ ಚೆಸ್ ಅಭ್ಯಾಸ ಮುಂದುವರಿಸುತ್ತಿರುವ ಆದಿತ್ಯ ಆನ್‌ಲೈನ್ ಮೂಲಕ ಶ್ರೀಕೃಷ್ಣ ಉಡುಪ ಅವರಿಂದ ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ‘ವಿಶ್ವನಾಥನ್ ಆನಂದ್ ಆಟ ಇಷ್ಟ, ಆದರೆ ಯಾರನ್ನೂ ಮಾದರಿಯಾಗಿ ಇರಿಸಿಕೊಳ್ಳಲು ಇಷ್ಟವಿಲ್ಲ. ತರಬೇತುದಾರರು ಹೇಳಿಕೊಟ್ಟ ತಂತ್ರಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವುದು ನನ್ನ ರೀತಿ’ ಎನ್ನುತ್ತಾರೆ ೧೬೯೬ ರೇಟಿಂಗ್ ಪಾಯಿಂಟ್ ಹೊಂದಿರುವ ಆದಿತ್ಯ.

ಆಟಿಕೆ ಕೇಳಿದ ಆ ದಿನ...
ವಾಣಿ ಇಂದ್ರಾಳಿ ತಂದೆ ಶ್ರೀನಿವಾಸ ಜೊತೆಯಲ್ಲಿ ಮೊದಲಿಗೆ ಚೆಸ್ ಆಡುತ್ತಿದ್ದರು. ಆದರೆ ಮಗಳಿಗೆ ಚೆಸ್ ಪಾಠ ಹೇಳಿದ್ದು ತಾಯಿ ಉಷಾ. ಮನೆಯ ಮುಂದೆ ತಳ್ಳುಗಾಡಿಯಲ್ಲಿ ಆಟಿಕೆಗಳನ್ನು ಮಾರಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸಹಜವಾಗಿ ಅದನ್ನು ಕೇಳಿದ ಪುಟಾಣಿ ವಾಣಿಗೆ ಆ ದಂಪತಿ ತೆಗೆಸಿಕೊಟ್ಟದ್ದು ಚೆಸ್ ಬೋರ್ಡ್. ಐದನೇ ತರಗತಿಯಲ್ಲಿದ್ದಾಗ ವಿಶೇಷ ಆಸಕ್ತಿಯಿಂದ ಚೆಸ್ ಕಲಿತ ಅವರು ಮೊದಲು ತಂದೆಯನ್ನೇ ಮಣಿಸಿದರು. ಇದು ಅವರ ಆಸಕ್ತಿಯನ್ನು ಹೆಚ್ಚಿಸಲು ಕಾರಣವಾಯಿತು. ಮಗಳ ಕುತೂಹಲವನ್ನು ಗುರುತಿಸಿದ ಪಾಲಕರು ಶ್ರೀಕೃಷ್ಣ ಉಡುಪ ಬಳಿ ತರಬೇತಿಗೆ ಸೇರಿಸಿದರು.

ಮೊದಲ ವರ್ಷದಿಂದಲೇ ಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಟೂರ್ನಿಗೆ ಆಯ್ಕೆಯಾದ ಅವರು ನಿರಂತರ ಮೂರು ವರ್ಷ ಏಳು ಪಾಯಿಂಟ್‌ ಗಳೊಂದಿಗೆ ಮರಳಿದರು. ರಾಷ್ಟ್ರಮಟ್ಟದಲ್ಲೂ ಕಂಚು ಗೆದ್ದರು. ಹತ್ತನೇ ತರಗತಿಗೆ ಬಂದಾಗ ಮೊದಲ ಸ್ಥಾನ ಗೆದ್ದು ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಮತ್ತೆ ಮೂರನೇ ಸ್ಥಾನ ಸಿಗಲು ನೆರವಾದರು. ಆರಂಭದಲ್ಲಿ ಮುಕ್ತ ವಿಭಾಗದ ಅನ್ ರೇಟೆಡ್ ಬಾಲಕಿಯರ ಉತ್ತಮ ಆಟಗಾರ್ತಿ ಎಂದು ಗುರುತಿಸಿಕೊಂಡಿದ್ದ ವಾಣಿ ಈಗ ೧೫೩೨ ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.  ‘ಯಾರನ್ನೂ ಮಾದರಿ ಯಾಗಿಟ್ಟುಕೊಂಡಿಲ್ಲ. ಸ್ವಂತ ಶೈಲಿಯಲ್ಲಿ ಆಡಿ ಮಹಿಳಾ ಗ್ರಾಂಡ್ ಮಾಸ್ಟರ್ ಆಗಬೇಕು’ ಎಂಬುದು ವಾಣಿ ಆಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT