ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದಲ್ಲಿ ಮಳೆ ಚುರುಕು

ಗೋಡೆ ಕುಸಿದು ತಾಯಿ, ಮಗು ಸೇರಿ ಮೂವರ ಸಾವು
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲವೆಡೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಳೆಯಾಗಿದ್ದು ಮನೆ ಕುಸಿತದ ಪ್ರತ್ಯೇಕ ಪ್ರಕರಣಗಳಲ್ಲಿ ತಾಯಿ, ಹಸುಗೂಸು ಮತ್ತು ಬಾಲಕಿ ಸೇರಿ ಮೂವರು ಮೃತಪಟ್ಟಿದ್ದಾರೆ.

ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬೆಳಗುಂಪಾ ಗ್ರಾಮದಲ್ಲಿ  ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆ ಕುಸಿದು ಬಿದ್ದು ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬ ಬಾಲಕಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

2ನೇ ತರಗತಿಯಲ್ಲಿ ಓದುತ್ತಿದ್ದ ಭಾಗ್ಯವಂತಿ ಚಂದ್ರಕಾಂತ ಕಟ್ಟಿಮನಿ (7) ಮೃತಪಟ್ಟಿದ್ದು, ಈಕೆಯ ಗೆಳತಿ ಸುಪ್ರಿತಾ ಧೂಳಪ್ಪ ತಳಕೇರಿ (7) ಗಾಯಗೊಂಡು ಪೇಠಶಿರೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ.

ಗುಂಡಗುರ್ತಿ ಪ್ರಭಾರ ಉಪ ತಹಶೀಲ್ದಾರ್‌ ಮಲ್ಲಿಕಾರ್ಜುನ ರೆಡ್ಡಿ ರಾಜಾಪುರ ಮತ್ತು ಪಿಎಸ್ಐ ಚಂದ್ರಶೇಖರ ತಿಗಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಇರಕಲ್ ಗ್ರಾಮದಲ್ಲಿ ಸೋಮವಾರ ರಾತ್ರಿ ಗುಡಿಸಲಿನ ಗೋಡೆ ಕುಸಿದು ತಾಯಿ ಈರಮ್ಮ (23) ಹಾಗೂ ಮೂರು ತಿಂಗಳ  ಕುಸುಮಾ ಮೃತಪಟ್ಟಿದ್ದಾರೆ.

ಸುತ್ತಲೂ ಗೋಡೆ ನಿರ್ಮಿಸಿ, ಅದರ ಮೇಲೆ ಹುಲ್ಲಿನ ಹೊದಿಕೆ ಹಾಕಿ ಗುಡಿಸಲು ನಿರ್ಮಿಸಲಾಗಿತ್ತು. ಮೂರು ದಿನಗಳಿಂದ ಸುರಿದ ಮಳೆಗೆ ಗೋಡೆಗಳು ನೆನೆದಿದ್ದವು. ಮಲಗಿದ್ದ ವೇಳೆ ಗೋಡೆ ಕುಸಿದು ಮಗು ಸ್ಥಳದಲ್ಲಿಯೇ ಮೃತಪಟ್ಟರೆ, ಗಾಯಗೊಂಡ ಈರಮ್ಮ ಅವರು ಕವಿತಾಳ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾಳೆ. ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲೆಯಲ್ಲಿ ಬೋಂಗಾ: ರಾಯಚೂರು ಜಿಲ್ಲೆ ಮಸ್ಕಿ ಸಮೀಪ ತುಂಗಭದ್ರಾ ಎಡದಂಡೆ ನಾಲೆಯ ಮೈಲ್‌ 68ರ ಸೇತುವೆಯ ಪಕ್ಕದಲ್ಲಿ ಮಂಗಳವಾರ ಬೆಳಿಗ್ಗೆ ಎರಡು ಅಡಿಗಳಷ್ಟು ದೊಡ್ಡದಾದ ಬೋಂಗಾ (ಕೋಡಿ) ಬಿದ್ದು, ಅಪಾರ ಪ್ರಮಾಣದ ನೀರು ಪಕ್ಕದ ಹಳ್ಳಕ್ಕೆ ಹರಿದು ಹೋಗುತ್ತಿದೆ.

ಕಾಲುವೆಯ ಕೆಳ ಭಾಗದಲ್ಲಿರುವ ಮಾನ್ವಿ, ಸಿರವಾರ, ರಾಯಚೂರು ಭಾಗದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.

ಗುಲ್ಬರ್ಗ ನಗರದಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ಗಂಟೆ ಉತ್ತಮ ಮಳೆಯಾಗಿದೆ. ಯಾದಗಿರಿ, ಬೀದರ್‌ ಜಿಲ್ಲೆಗಳಲ್ಲಿ  ಸಾಧಾರಣ ಮಳೆಯಾಗಿದೆ.

ಮತ್ತೆ ಮಳೆ ಚುರುಕು: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಚುರುಕುಗೊಂಡಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿ­ನಲ್ಲಿ ಸೋಮವಾರ ಮಧ್ಯರಾತ್ರಿ ಸುರಿದ ಭಾರಿ ಮಳೆ ಯಿಂದ ಬಡಚಿ ಸಮೀಪ ಹಳ್ಳ ತುಂಬಿ ಜೇವರ್ಗಿ– ಸಂಕೇಶ್ವರ ರಸ್ತೆ ಸೇತುವೆ ಮುಳುಗಡೆಯಾಗಿದ್ದರಿಂದ ಸಂಜೆವರೆಗೆ ವಾಹನ ಸಂಚಾರಕ್ಕೆ ಅಡಚ ಣೆಯಾಗಿತ್ತು.

ಮಂಗಳವಾರ ಬೆಳಿಗ್ಗೆ 5 ರಿಂದ ರಾತ್ರಿ 8 ಗಂಟೆ ವರೆಗೆ ಗಂಟೆಯವರೆಗೆ ಸಂಚಾರ ಸ್ಥಗಿತ ಗೊಂಡಿತ್ತು. ಅಥಣಿ ತಾಲ್ಲೂಕಿ­ನಲ್ಲಿ 24 ಗಂಟೆ ಅವಧಿಯಲ್ಲಿ 60 ಮಿ.ಮೀ. ಮಳೆಯಾಗಿದ್ದು, ಯಕ್ಕಂಚಿ– ಅಥಣಿ ಪರ್ಯಾಯ ರಸ್ತೆಯ ಮೇಲೂ ನೀರು ನಿಂತು ಸಂಚಾರಕ್ಕೆ ಅಡೆತಡೆ ಉಂಟಾಯಿತು.

ಬಾಗಲಕೋಟೆ ನಗರ ಮತ್ತು ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಕೂಡಲಸಂಗಮ ಮತ್ತು ಜಮಖಂಡಿ ತಾಲ್ಲೂಕಿನ ಜಕ್ಕನೂರ, ಕುಂಚನೂರ, ಲಿಂಗದಳ್ಳಿ ಭಾಗದಲ್ಲಿ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿತ್ತು.

ಬನಹಟ್ಟಿ, ಜಮಖಂಡಿ, ಹುನಗುಂದ, ಅಮೀನಗಡ ವ್ಯಾಪ್ತಿಯಲ್ಲಿ ಜಿಟಿ ಜಿಟಿ ಮಳೆಯಾಗಿದೆ. ವಾರದ ಈಚೆಗೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾ­ಗುತ್ತಿದ್ದು, ಕೃಷಿಗೆ ಅನುಕೂಲವಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಾದ್ಯಂತ ಸತತ 3–4 ದಿನಗಳಿಂದ ಸುರಿಯುತ್ತಿರುವ ಮಳೆ­ಯಿಂದ ಕೆರೆ ತುಂಬಿ ಹರಿದು ರಸ್ತೆಗಳು ಜಲಾವೃ ತಗೊಂಡಿವೆ. ಮೂಕಬಸರಿಕಟ್ಟಿ ಗ್ರಾಮದಲ್ಲಿ ಗೋಡೆ ಕುಸಿದುಬಿದ್ದ ಪರಿಣಾಮ ಎತ್ತು ಸತ್ತಿರುವ ಘಟನೆ ವರದಿಯಾಗಿದೆ.
(ಪೂರಕ ಮಾಹಿತಿ ವಿವಿಧ ಬ್ಯೂರೋಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT