ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಉಂಡಿ ಪಂಚಮಿ

Last Updated 25 ಜುಲೈ 2014, 19:30 IST
ಅಕ್ಷರ ಗಾತ್ರ

ನಾಗ ಪಂಚಮಿ ಎಂದರೆ ಅದು ಬರೀ ಒಂದು ಹಬ್ಬವಲ್ಲ. ಊಟ-ಉಪಹಾರದ ಅಬ್ಬರ. ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಶ್ರಾವಣದ ಈ ಮೊದಲ ಹಬ್ಬವನ್ನು ಬರಮಾಡಿಕೊಳ್ಳುವ ಬಗೆಯೇ ವಿಶಿಷ್ಟ. ಬಗೆಬಗೆಯ ಉಂಡಿ ಮಾಡಿ, ಹಂಚಿ ತಿಂದು ಖುಷಿ ಪಡುವ ಹಬ್ಬವಿದು.

ಹುಟ್ಟಿದೂರು, ಉಂಡಾಡಿದ ಕೇರಿಯನ್ನು ಬಿಟ್ಟು ಬೆಂಗಳೂರಲ್ಲೇ ಬದುಕು ಕಟ್ಟಿಕೊಂಡಿರುವ ಉತ್ತರ ಕರ್ನಾಟಕದ ಮಂದಿ ಉಂಡಿ ಹಬ್ಬ, ಪಂಚಮಿಯನ್ನು ಹೇಗೆಲ್ಲ ಆಚರಿಸುತ್ತಾರೆ ಎನ್ನುವುದು ನಿಜಕ್ಕೂ ರೋಚಕ.

ಉತ್ತರ ಕರ್ನಾಟಕದ ಲಕ್ಷಾಂತರ ಜನರು ಬೆಂಗಳೂರಿನ ನೆಲ–ನೀರನ್ನು ಹಂಚಿಕೊಂಡು ಬದುಕುತ್ತಿದ್ದಾರೆ. ಈ ‘ಮೆಟ್ರೊ’ ನಗರದ ಜೀವನ ಶೈಲಿಯನ್ನೂ ತಮ್ಮದೇ ಬದುಕಿನ ಭಾಗವೆಂದುಕೊಂಡ ಈ ಜನ, ಪಂಚಮಿ, ಚೌತಿಯಂಥ ಹಬ್ಬದಲ್ಲಿ ಮಾತ್ರ ಊರಿಗಲ್ಲ ತಮ್ಮೂರಿನ ನೆನಪು ಬಿತ್ತುವುದನ್ನು ಮರೆಯುವುದಿಲ್ಲ.

ಉಂಡಿ ಕಟ್ಟಿ, ಹಂಚುವ ಹಬ್ಬ...
ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುವ ಈ ಹಬ್ಬದಲ್ಲಿ ಉಂಡಿಯೇ ರಾಜ. ಆಟಿ ತಿಂಗಳ ಅಮಾವಾಸ್ಯೆ ಕಳೆದು ಐದನೇ ದಿನಕ್ಕೆ ಈ ಹಬ್ಬವನ್ನು ಆಚರಿಸುವುದಿದೆ. ಪ್ರತಿವರ್ಷ ಸಾಮಾನ್ಯವಾಗಿ ಸೋಮವಾರ, ಶುಕ್ರವಾರ ಅಥವಾ ಶನಿವಾರವೇ ಹಬ್ಬದ ಆರಂಭ. ಈ ಬಾರಿ ಶನಿವಾರದ (ಜುಲೈ 26) ಅಮಾವಾಸ್ಯೆಯೊಂದಿಗೆ ಪಂಚಮಿ ಸಂಭ್ರಮ ಗರಿ ಬಿಚ್ಚುತ್ತಿದೆ.

ಈ ಹಬ್ಬದಂದು ಊಟಕ್ಕಿಂತ ಫಲಾಹಾರದ ಸಡಗರವೇ ಹೆಚ್ಚು. ಫಲಾಹಾರ ಎಂದರೆ ರುಚಿಗೆ ಒಬ್ಬಟ್ಟು, ಖಾರಕ್ಕೆ ನಿಪ್ಪಟ್ಟು ಮಾಡಿ ಮುಗಿಸುವ ಜಾಯಮಾನ ಈ ಜನರದ್ದಲ್ಲ. ತರಹೇವಾರಿ ಬಣ್ಣಬಣ್ಣದ ಉಂಡಿಗಳು. ಒಂದಲ್ಲ ಎರಡಲ್ಲ, ಐದು ತರಹದ ಉಂಡಿಗಳಿಂದ ಹಿಡಿದು 11, 21, 31... ಹೀಗೆ ಲೆಕ್ಕವಿಲ್ಲದಂತೆ ಸಾಗುತ್ತದೆ ಉಂಡಿ ಬಂಡಿ. ಆ ಮನೆಯಲ್ಲಿ ಎಷ್ಟು ಬಗೆಯ ಉಂಡಿ ಎನ್ನುವುದು ಹಬ್ಬದ ಆಕರ್ಷಣೆಗಳಲ್ಲಿ ಒಂದು. ಕಡಿಮೆ ಎಂದರೂ ಐದು ಪ್ರಕಾರದ ಉಂಡೆಗಳನ್ನಂತೂ ಮಾಡಲೇಬೇಕು.

ಸಾಮಾನ್ಯವಾಗಿ ಉಂಡಿ ಕಟ್ಟುವ ಕೆಲಸ ವಾರ ಮುಂಚೆಯೇ ಆರಂಭವಾಗುತ್ತದೆ. ಗಂಡನ ಮನೆ ಸೇರಿದ ಹೆಣ್ಣು ಮಕ್ಕಳನ್ನು ಕರೆಯುವುದು ಈ ಹಬ್ಬದ ವಿಶೇಷ. ಹೀಗೆ ಅಪರೂಪಕ್ಕೊಮ್ಮೆ ತವರು ಸೇರುವ ಹೆಣ್ಮಕ್ಕಳ ಮನ ಹಗುರ ಮಾಡಿ, ಚೀಲ ಭಾರ ಮಾಡಿ ಕಳುಹಿಸುವುದರಲ್ಲಿಯೇ ಹಬ್ಬದ ಔಚಿತ್ಯವಿದೆ. ಗಂಡನ ಮನೆಯ ಕಷ್ಟ–ಸುಖದ ಭಾವ ಬಿಚ್ಚಿಕೊಳ್ಳುತ್ತ ಉಂಡಿ ಕಟ್ಟುತ್ತಾರೆ. ಕಟ್ಟಿದ ಉಂಡಿ ಜೋಡಿಸಿ, ಡಬ್ಬದಲ್ಲಿ ತುಂಬಿಡುವ ಹೊತ್ತಿಗೆ ದೇಹ ದಣಿದರೂ, ನೋವು–ನಲಿವು ಹಂಚಿಕೊಂಡ ಮನ ಮಾತ್ರ ಹಗುರ.

ಉಂಡಿ ಕಟ್ಟುವ ಗತ್ತು
ವಿವಿಧ ಧಾನ್ಯ, ಬೆಲ್ಲ, ತುಪ್ಪ ಬಳಸಿ ಮಾಡುವ ಉಂಡಿಗಳು ದೇಹಕ್ಕೂ ಹಿತ, ಬಾಯಿಗೂ ರುಚಿ. ತಂಬಿಟ್ಟು, ಅಳ್ಳಿಟ್ಟಿನ ಉಂಡಿ, ಅರಳುಂಡಿ, ಎಳ್ಳುಂಡಿ, ದಾಣಿ ಉಂಡಿಯಂತೂ ಪಟ್ಟಿಯಲ್ಲಿ ಇರಲೇಬೇಕು. ಅವರವರ ಚೈತನ್ಯ, ಆಸಕ್ತಿ, ಸಡಗರವನ್ನು ಉಂಡಿಗಳ ಬಗೆ ಅವಲಂಬಿಸುತ್ತದೆ. ನವಣೆ ಉಂಡಿ, ಶೇಂಗಾ ಉಂಡಿ, ಬೇಸನ್ ಉಂಡಿ, ಬೂಂದಿ ಉಂಡಿ, ಅಂಟಿನ ಉಂಡಿ, ಹುರಿಗಡ್ಲಿ ಉಂಡಿ, ಅವಲಕ್ಕಿ ಉಂಡಿ, ರವೆ ಉಂಡಿ... ಹೀಗೆ ಪಟ್ಟಿ ಅವರವರ ಶಕ್ತ್ಯಾನುಸಾರ ಬೆಳೆಯುತ್ತದೆ.

ಉಂಡಿ ಕಟ್ಟುವುದು ಒಂದು ಕೆಲಸ ಮಾತ್ರವಲ್ಲ, ಕಲೆ. ಯಾವ ಉಂಡಿಗೆ ಯಾವ ಹಿಟ್ಟು, ಅದನ್ನೆಷ್ಟು ಹೊತ್ತು ಹುರಿಯಬೇಕು, ಎಷ್ಟು ತುಪ್ಪ, ಎಷ್ಟು ಸಕ್ಕರೆ ಸೇರಿಸಬೇಕು. ಯಾವ ಉಂಡಿಗೆ ಸಕ್ಕರೆ, ಯಾವ ಉಂಡಿಗೆ ಬೆಲ್ಲ, ಎಷ್ಟೊತ್ತು ಬೆರೆಸಬೇಕು, ಹೇಗೆ ಕಲೆಸಬೇಕು ಎನ್ನುವುದೆಲ್ಲ ಇಲ್ಲಿ ಮುಖ್ಯವಾಗುತ್ತದೆ.

ಉಂಡಿಗೆ ಅದರದೇ ಆದ ಸಾಂಪ್ರದಾಯಿಕ ರೂಪ, ಆಕಾರವಿದೆ. ಆಕಾರ ಆಚೀಚೆ ಆಗಬಾರದು. ಹದ ತಪ್ಪಿದರೆ ರುಚಿಯಷ್ಟೇ ಅಲ್ಲ, ರೂಪವೂ ಕೆಡುವುದಿದೆ. ಅದು ಸಾಕಷ್ಟು ಶ್ರಮ ಬೇಡುವ ಕೆಲಸ. ಬಾಯಿಗಿಟ್ಟರೆ ಕರಗುವ ಉಂಡಿಗಳನ್ನು ಕಟ್ಟುವ ಕೈಗಳು ಮಾತ್ರ ಗಟ್ಟಿಯಾಗಿರಬೇಕು.

ಕೊಬ್ರಿ–ಕುಬಸ
ಚೌತಿ ದಿನ ನಾಗಪ್ಪನಿಗೆ ಹಾಲೆರೆದು ಉಂಡಿಗಳ ನೈವೇದ್ಯ ಮಾಡಿ, ಬಂದು ಬಳಗದ ಮನೆಗೆಲ್ಲ ‘ಕೊಬ್ರಿ–ಕುಬಸ’ದ ಜಾತ್ರೆ ಸಾಗುತ್ತದೆ. ತಂಬಿಟ್ಟು, ಉಂಡಿಗಳು, ಕೊಬ್ಬರಿ ಬಟ್ಟಲು, ಬತ್ತದ ಅರಳು, ಕುಬಸದ ಖಣ ಸೇರಿಸಿಟ್ಟ ತಟ್ಟೆಯೊಂದನ್ನು ಮನೆ–ಮನೆಗೆ ಕೊಟ್ಟು ಬರುವುದೇ ಈ ಪದ್ಧತಿ.
ಖಾರ ಮರೆಯೂದಿಲ್ಲ
ಇದೆಲ್ಲ ಬರೀ ಸಿಹಿಯ ಮಾತಾಯಿತು. ಸಿಹಿ ತಿಂದ ಬಳಿಕ ನಾಲಿಗೆ ಒಂದಿಷ್ಟು ಚುರು ಚುರು ಅನ್ನದಿದ್ದರೆ ಉತ್ತರ ಕರ್ನಾಟಕದ ಮಂದಿಗೆ ಸಮಾಧಾನವಿಲ್ಲ. ಬಾಯಿ ತುಂಬಾ ಒಣ ಖಾರ ಹಾಕಿ ಮಾಡುವ ಕರಂ–ಕುರುಂ ಚಕುಲಿ, ಚೂಡಾ, ಅವಲಕ್ಕಿ ತಿನ್ನುತ್ತಿದ್ದರೆ ಕಿವಿಯೂ ಉರಿಯಬೇಕು. ಅಂಥ ಖಾರ ಅದು. ಕೆಲವರ ಖಾರದ ತಿಂಡಿ ಮುಗಿಸಿದ ನಂತರ ಸಿಹಿ ತಿಂದು ಖಾರ ಮರೆಯುತ್ತಾರೆ. ಇನ್ನೂ ಕೆಲವರು ಸಿಹಿ ತಿಂದ ಮೇಲೆ ಖಾರ ತಿಂದು ಉಸಿರೆಳೆಯುತ್ತಾರೆ.


ಆರ್ಡರ್‌ ಚಾಲೂ...
ನೋಡ್ರಿ ಅಕ್ಕಾರ, ನಮ್ಮೂರ ಹೆಣ್ಮಕ್ಕಳು ಅಂದ್ರ ಹೆಚ್ಚೇ ಭಾವನಾ ಜೀವಿಗಳು. ಪಂಚಮಿಯಂಥ ಹಬ್ಬ ಅಂದ್ರ ಅವರಿಗೆ ಎಳೆತನದ ನೆನಪ ತರೂ ದಿನಾರಿ. ಆದ್ರ ದುಡಿಮಿ ಒಳಗ ದಣಿದು ಬರೂ ಅವರಿಗೆ ಮನಿಗಿ ಬಂದು ಉಂಡಿ ಕಟ್ಟೂ ತಾಳ್ಮಿ ಇರಂಗಿಲ್ರಿ.

ಈ ಸಲಾ ಅಂತೂ ಇನ್ನೂ ಪಂಚಮಿ ವಾರೊಪ್ಪತ್ತ ಇದ್ದಾಗ ಉಂಡಿ ಆರ್ಡರ್ ಬರಾಕ ಚಾಲೂ ಆಗ್ಯಾವ್ರಿ. ಪಂಚಮಿ ಉಂಡಿಗಂತ ಗಾಂಧಿ ಬಜಾರಿನ್ಯಾಗ ಹೊಸ ಉಂಡಿ ಅಂಗಡಿ ಆರಂಭ ಮಾಡಿವಿ. ಅಲ್ಲಿ ಕಡಿಮಿ ಏನಿಲ್ರಿ, ಹತ್ತಿಪ್ಪತ್ತು ಬಗೆಯ ಉಂಡಿ ಮಾಡಿ ಇಟ್ಟಿವ್ರಿ. ಹಂಗ ಮಾರಾಟಾನೂ ಆಗ್ತಾವ್ರಿ, ಹಿಂಗ ತಯಾರಿ ಕೆಲಸಾನೂ ನಡೆದದ್ರಿ. ಮನ್ಯಾಗ ಹುಬ್ಬಳ್ಳಿ– ಧಾರವಾಡ, ಬಿಜಾಪುರದಿಂದ ಅವ್ವಂದ್ರು–ಅಕ್ಕಂದ್ರು ಬಂದು ಉಂಡಿ ಕಟ್ಟಾಕ ಕುಂತ ಬಿಟ್ಟಾರ್ರಿ.
–ತಿಮ್ಮಣ್ಣ ಹೊಸೂರ, ಉತ್ತರ ಕರ್ನಾಟಕ ಫುಡ್ ಸ್ಟೋರ್
(ಮಾಹಿತಿಗೆ: 94482 61201)

ನಾವಿದ್ದಲ್ಲೇ ನಮ್ಮೂರು...

ಬೆಂಗಳೂರು ಎನ್ನುವುದು ಹತ್ತಾರು ಭಾಗದ ಜನರು ಬಂದು ಸೇರುವ ಸಾಗರ. ಇಲ್ಲಿ ಉತ್ತರ ಕರ್ನಾಟಕ ಮಂದಿಯ ಪಾಲು ದೊಡ್ಡದಿದೆ. ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬಿಜಾಪುರ, ಗುಲ್ಬರ್ಗ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 12 ಲಕ್ಷ  ಜನರು ಇಲ್ಲಿ ಕೂಡಿದ್ದೇವೆ. ಎಲ್ಲರೂ ಒಂದೆಡೆ ಸೇರಿ ಇದ್ದಲ್ಲಿಯೇ ನಮ್ಮೂರನ್ನು ಕಟ್ಟಿಕೊಂಡಿದ್ದೇವೆ. ಪಂಚಮಿ–ಚೌತಿಯಂಥ ಹಬ್ಬಗಳಿಗೆ ಎಲ್ಲರನ್ನೂ ಆಹ್ವಾನಿಸಿ ನಮ್ಮೂರ ಊಟದೊಂದಿಗೆ ನಮ್ಮ ಸಂಸ್ಕೃತಿ–ಪರಂಪರೆಯನ್ನೂ ಬಿತ್ತಿ, ಬೆಳೆಸುವ ಹಾಗೂ ಇಲ್ಲಿನ ಜನರಿಗೂ ಅದರ ಘಮ ಹಂಚುವ ಪ್ರಯತ್ನ ಸಾಗಿದೆ.

ಒಬ್ಬೊಬ್ಬರು ಒಂದೊಂದು ಬಗೆಯ ಉಪಾಹಾರ ಮಾಡಿ, ಪರಸ್ಪರ ಹಂಚಿಕೊಂಡು ಒಂದೆಡೆ ಸೇರಿ ಹಬ್ಬ ಆಚರಿಸುತ್ತೇವೆ. ಮನೆಯಲ್ಲಿ ಮಾಡಲಾಗದವರು ಊರ ತುಂಬ ಹಬ್ಬಿಕೊಂಡಿರುವ ಉತ್ತರ ಕರ್ನಾಟಕ ಆಹಾರ ಮಳಿಗೆಗಳಿಗೆ ದಾಳಿ ಇಡುತ್ತಾರೆ.
–ಚಂದ್ರಶೇಖರ ಸಾಂಬ್ರಾಣಿ, ಉತ್ತರ ಕರ್ನಾಟಕ ಸಂಘದ ಅಧ್ಯಕ್ಷ
(ವೆಬ್‌ಸೈಟ್: http://uttarakarnatakasangha.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT