ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಭರವಸೆ

ಕೆಪಿಎಲ್‌
Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕರ್ನಾಟಕ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ‘ಹುಬ್ಬಳ್ಳಿ ಟೈಗರ್ಸ್‌’ ತಂಡ ತವರು ಅಂಗಣವಾದ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನದ ನೆಟ್ಸ್‌ನಲ್ಲಿ ಅಭ್ಯಾಸ ನಿರತವಾಗಿತ್ತು. ಧಾರವಾಡದ ಆಟಗಾರ, ರೈಲ್ವೆ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ನಿತಿನ್‌ ಭಿಲ್ಲೆ ಅವರು ತಂಡದ ಜೊತೆ ಇದ್ದರು. ಇವರೊಂದಿಗೆ ಸ್ಥಳೀಯ ಆಟಗಾರ, ಲೆಗ್‌ ಸ್ಪಿನ್ನರ್ ಕಿಶೋರ ಕಾಮತ್‌ ಕೂಡ ಇದ್ದರು. ಕಳೆದ ಬಾರಿ ತಂಡದಲ್ಲಿದ್ದ ಭಿಲ್ಲೆಗೆ ಈ ಬಾರಿ ಅವಕಾಶ ಸಿಗಲಿಲ್ಲ. ಆದರೂ ಅವರನ್ನು ತಂಡ ಅಭ್ಯಾಸಕ್ಕೆ ಕರೆಸಿಕೊಂಡಿತ್ತು.

ಭಿಲ್ಲೆ ಹಾಗೂ ಕಿಶೋರ ಇಬ್ಬರೂ ಉತ್ಸಾಹದಿಂದ ನೆಟ್ಸ್‌ನಲ್ಲಿ ಬ್ಯಾಟಿಂಗ್‌–ಬೌಲಿಂಗ್‌ನಲ್ಲಿ ತೊಡಗಿದ್ದರು.  ‘ನಮ್ಮ ಹುಬ್ಬಳ್ಳಿ’ಯಲ್ಲಿ ನಡೆಯುವ ಕೆಪಿಎಲ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಅದಮ್ಯ ಆಸೆ ಅವರಲ್ಲಿತ್ತು. ಇಂಥ ಆಸೆ, ಕನಸು, ಭರವಸೆಯನ್ನು ಈಡೇರಿಸುವ ಕೆಪಿಎಲ್‌ ಈ ಬಾರಿಯೂ ಉತ್ತರ ಕರ್ನಾಟಕದ ಹತ್ತಕ್ಕೂ ಹೆಚ್ಚು ಆಟಗಾರರಿಗೆ ಅವಕಾಶ ಒದಗಿಸಿದೆ.

ರಾಜ್ಯದ 120ಕ್ಕೂ ಹೆಚ್ಚು ಮಂದಿ ಆಟಗಾರರು ಭಾಗವಹಿಸುವ ಕೆಪಿಎಲ್ ಗ್ರಾಮೀಣ ಭಾಗದ ಯುವ ಆಟಗಾರರಿಗೆ ಕೇವಲ ಹೊಡಿ–ಬಡಿ ಆಟ ಮಾತ್ರವಲ್ಲ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಆಟಗಾರರ ಜೊತೆ ಒಡನಾಡುವ, ಅವರೊಂದಿಗೆ ಡಗ್‌ಔಟ್‌ನಲ್ಲಿ ಕುಳಿತುಕೊಳ್ಳುವ, ಹೋಟೆಲ್‌ ಕೊಠಡಿಯಲ್ಲಿ ಕಳೆಯುವ ಅವಕಾಶವನ್ನು ಒದಗಿಸುತ್ತದೆ. ಈ ಕಾರಣದಿಂದಲೇ ಕೆಪಿಎಲ್‌ ಹೊಸ ತಲೆಮಾರಿನ ಹುಡುಗರ ಚಿಮ್ಮು ಹಲಗೆಯಾಗಿ ಮಾರ್ಪಟ್ಟಿದೆ.

ಕಳೆದ ಬಾರಿ ಪ್ರಶಸ್ತಿ ಗೆದ್ದ ಮೈಸೂರು ವಾರಿಯರ್ಸ್‌ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹುಬ್ಬಳ್ಳಿಯ ಎಡಗೈ ಬ್ಯಾಟ್ಸ್‌ಮನ್‌ ಶಿಶಿರ್ ಭವಾನೆ ಒಂದು ದಶಕದಿಂದ ವಯೋಮಾನದವರ ಕ್ರಿಕೆಟ್‌ ಟೂರ್ನಿಗಳಲ್ಲಿ ಪ್ರಮುಖ ಆಟಗಾರನಾಗಿ ಮಿಂಚಿದ್ದಾರೆ. ಆದರೆ ರಣಜಿ ಮತ್ತು ಐಪಿಎಲ್‌ ಅಂಗಣಕ್ಕೆ ಕಾಲಿಡಲು ಅವರಿಗೆ ನೆರವಾದದ್ದು ಕೆಪಿಎಲ್‌.

ಇಂಥ ಸಾಧ್ಯತೆಗಳು ಕೆಪಿಎಲ್ ಅನ್ನು ಉತ್ತರ ಕರ್ನಾಟಕದ ಆಟಗಾರರು ಆಸೆಗಣ್ಣಿನಿಂದ ನೋಡುವಂತೆ ಮಾಡಿದೆ. ಕಳೆದ ಬಾರಿ ಉತ್ತರ ಕರ್ನಾಟಕದ ಐದು ಮಂದಿ ಆಟಗಾರರನ್ನು ಹೊಂದಿದ್ದ ಹುಬ್ಬಳ್ಳಿ ಟೈಗರ್ಸ್‌ ಈ ಬಾರಿ ಹರಾಜು ಸಂದರ್ಭದಲ್ಲಿ ಸ್ಥಳೀಯ ಆಟಗಾರರನ್ನು ಖರೀದಿಸಿರಲಿಲ್ಲ. ಆದರೆ ಈಗ ಕಿಶೋರ ಕಾಮತ್ ಮತ್ತು ನಿತಿನ್‌ ಭಿಲ್ಲೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಇರಾದೆ ಹೊಂದಿದೆ.
ಬುಲ್ಸ್‌ನಲ್ಲಿ ಹೆಚ್ಚು ಆಟಗಾರರು

ಏಳು ತಂಡಗಳ ಪೈಕಿ ಬಿಜಾಪುರ ಬುಲ್ಸ್‌ನಲ್ಲಿ ಉತ್ತರ ಕರ್ನಾಟಕದವರು ಹೆಚ್ಚು ಮಂದಿ ಇದ್ದಾರೆ. ಹರಾಜಿನಲ್ಲಿ ಈ ಭಾಗದ ಇಬ್ಬರು ಆಟಗಾರರನ್ನು ಖರೀದಿಸಿದ್ದ ತಂಡ ಈಗ ನಾಲ್ವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ರಾಯಚೂರಿನ ಮಧ್ಯಮ ವೇಗಿ ಶರಣಗೌಡ, ಬಾಗಲಕೋಟೆಯ ಬ್ಯಾಟ್ಸ್‌ಮನ್‌ ಅಕ್ಷಯ ಅಂಗಡಿ, ಸುರಪುರದ ಚುರುಕಿನ ಫೀಲ್ಡರ್‌ ರಾಜಾ ನಾಯಕ್‌ ಮತ್ತು ವಿಜಯಪುರದ ಆಲ್‌ರೌಂಡರ್‌ ಯಾಸಿರ್‌ ನಿಹಾಲ್‌ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

‘ಕಳೆದ ಬಾರಿ ಬೆಂಗಳೂರಿನ ಕೆ.ಸಿ.ಕಾರ್ಯಪ್ಪ ಅವರ ಮೇಲೆ ಐಪಿಎಲ್‌ ಫ್ರಾಂಚೈಸ್‌ ಕೋಲ್ಕತ್ತ ನೈಟ್‌ ರೈಡರ್ಸ್‌ನ ಕಣ್ಣು ಬೀಳುವಂತೆ ಮಾಡಿದ್ದೆವು. ಈ ಬಾರಿ ಯಾವ ಆಟಗಾರನಿಗೆ ಅದೃಷ್ಟ ಒಲಿಯುತ್ತದೆ ಎಂದು ಹೇಳಲಾಗದು. ಪಂದ್ಯಗಳನ್ನು ಗೆಲ್ಲುವುದರ ಜೊತೆಯಲ್ಲಿ ಗ್ರಾಮೀಣ ಪ್ರದೇಶದ ಆಟಗಾರರು ಮಿಂಚಲು ಅವಕಾಶ ಕೂಡ ಲಭಿಸಬೇಕು ಎಂಬುದು ನಮ್ಮ ಆಶಯ. ಈ ಉದ್ದೇಶದಿಂದ ನಮ್ಮ ಭಾಗದ ಆಟಗಾರರಿಗೆ ಆದ್ಯತೆ ನೀಡಲಾಗಿದೆ’ ಎಂದು ಫ್ರಾಂಚೈಸ್‌ನ ಕಿರಣ ಕಟ್ಟಿಮನಿ ತಿಳಿಸಿದರು.

ಜೀಶನ್‌ ಅಲಿ ಸೈಯದ್‌ ಕೆಪಿಎಲ್‌ನ ನಾಲ್ಕು ಋತುಗಳಿಂದಲೂ ಬೆಳಗಾವಿ ಪ್ಯಾಂಥರ್ಸ್‌ ಜೊತೆ ಇದ್ದಾರೆ. ಈ ಬಾರಿ 18 ವರ್ಷ ವಯಸ್ಸಿನ ಬೆಳಗಾವಿಯ ವೇಗಿ ಸುನಿರನ್‌ ಚೌಹಾಣ್‌ಗೆ ಅವಕಾಶ ಕೊಟ್ಟಿರುವ ತಂಡ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸುಮಿತ್ ಶಿರಬೂರಕರ ಅವರನ್ನೂ ತಂಡಕ್ಕೆ ಸೇರಿಸಿಕೊಂಡಿದೆ.

‘ಪಂದ್ಯ ಆಡಲು ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದು ಹೇಳಲಾಗದು. ಆದರೆ ಕೆಪಿಎಲ್‌ ತಂಡದ ಜೊತೆ ಇರಲು ಸಾಧ್ಯವಾದರೆ ಆಟಗಾರರ ದೇಹಭಾಷೆಯೇ ಬದಲಾಗುತ್ತದೆ. ಕಳೆದ ನಾಲ್ಕು ಋತುಗಳಿಂದ ಇದನ್ನು ಗಮನಿಸುತ್ತಾ ಬಂದಿದ್ದೇನೆ’ ಎಂದು ತಂಡದ ಮುಖ್ಯ ಆಡಳಿತಾಧಿಕಾರಿ ಜೋಸೆಫ್‌ ಹೂವರ್‌ ಹೇಳಿದರು.

ಮಿಂಚು ಹರಿಸಬಲ್ಲರೇ?
ಕಳೆದ ಬಾರಿ ಉತ್ತರ ಕರ್ನಾಟಕದ 13 ಮಂದಿ ಆಟಗಾರರು ವಿವಿಧ ತಂಡಗಳಲ್ಲಿದ್ದರೂ ಶಿಶಿರ್‌ ಭವಾನೆ ಹೊರತುಪಡಿಸಿ ಉಳಿದ ಯಾರಿಗೂ ಪರಿಣಾಮಕಾರಿ ಆಟ ಆಡಲು ಸಾಧ್ಯವಾಗಿರಲಿಲ್ಲ. ಎರಡು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಳಗೊಂಡಂತೆ ಟೂರ್ನಿಯ ಉತ್ತಮ ಆಟಗಾರ ಪಟ್ಟವನ್ನೂ ಹೆಗಲಿಗೇರಿಸಿಕೊಂಡಿದ್ದ ಶಿಶಿರ್‌ ಎಂಟು ಪಂದ್ಯಗಳಲ್ಲಿ 300ಕ್ಕೂ ಹೆಚ್ಚು ರನ್‌ ಗಳಿಸಿದ್ದರು. ಶೊಯೆಬ್‌ ಮ್ಯಾನೇಜರ್‌, ನಿತಿನ್ ಭಿಲ್ಲೆ, ರೋನಿತ್ ಮೋರೆ, ಪವನ್‌ ದೇಶಪಾಂಡೆ, ಅನಿರುದ್ಧ ಜೋಶಿ ಮುಂತಾದವರು ನಿರೀಕ್ಷೆ ಹುಸಿ ಮಾಡಿದ್ದರು.

ಈ ಬಾರಿ ಮತ್ತೆ ಭರವಸೆಯ ಪಥದಲ್ಲಿ ಇವರು ಹೆಜ್ಜೆ ಹಾಕಿದ್ದಾರೆ. ಜೊತೆಯಲ್ಲಿ ಆಲ್‌ರೌಂಡರ್‌ ಸಮರ್ಥ ಊಟಿ, ಎಡಗೈ ಸ್ಪಿನ್ನರ್‌ ಲಿಖಿತ್ ಬನ್ನೂರು ಮುಂತಾದ ಹೊಸಬರು ಕೂಡ ಇದ್ದಾರೆ. ಸೆಪ್ಟೆಂಬರ್‌ 3ರಂದು ಹುಬ್ಬಳ್ಳಿಯಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಉತ್ತರ ಕರ್ನಾಟಕದ ಹೃದಯ ಭಾಗದಿಂದ ತೊಡಗುವ ಜೈತ್ರಯಾತ್ರೆ ಯಾರನ್ನು ಎಲ್ಲಿಯವರೆಗೆ ಕರೆದೊಯ್ಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT