ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಸೊಗಡು

ಕೆಪಿಎಲ್‌
Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ಒಡೆಯರ್‌ ಕೆಪಿಎಲ್‌ ಟೂರ್ನಿ ಆರಂಭ ಗೊಳ್ಳುತ್ತಿದ್ದಂತೆ ಹುಬ್ಬಳ್ಳಿ–ಧಾರವಾಡ ಅವಳಿ ನಗರ ಸೇರಿದಂತೆ ಉತ್ತರ ಕರ್ನಾಟಕದ ಕ್ರಿಕೆಟ್‌ ಪ್ರಿಯರು ಪುಳಕ ಗೊಂಡಿದ್ದಾರೆ. ರೋಚಕತೆ ತುಂಬಿದ ಚುಟುಕು ಕ್ರಿಕೆಟ್‌ ಟೂರ್ನಿಯೊಂದಕ್ಕೆ ಹುಬ್ಬಳ್ಳಿ ಮೊದಲ ಬಾರಿ ಆತಿಥ್ಯ ವಹಿಸುತ್ತಿರುವುದು ಅವರ ಸಂಭ್ರಮಕ್ಕೆ ಒಂದು ಕಾರಣವಾದರೆ ಈ ಭಾಗದ ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿರುವುದು ಇನ್ನೊಂದು ಕಾರಣ. ಹುಬ್ಬಳ್ಳಿಯಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಕಲ್ಪಿಸಿರುವುದು ಹಾಗೂ ಸಿನಿಮಾ ನಟರು ಕಣಕ್ಕಿಳಿಯುತ್ತಿರುವುದು ಈ ಭಾಗದ ಜನರಿಗೆ ಇನ್ನಷ್ಟು ರೋಮಾಂಚನ ತಂದಿದೆ. 

ಒಟ್ಟು 14 ದಿನಗಳಲ್ಲಿ ನಡೆಯುವ 24 ಪಂದ್ಯಗಳ ಪೈಕಿ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯ ಸೇರಿದಂತೆ ಏಳು ಪಂದ್ಯಗಳಿಗೆ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನ ಆತಿಥ್ಯ ವಹಿಸಲಿದೆ.

ರಣಜಿ ಸೇರಿದಂತೆ ದೇಶೀ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ ಆಟಗಾರರೊಂದಿಗೆ ಕೆಎಸ್‌ಸಿಎ ಧಾರವಾಡ ವಲಯದ ವಿವಿಧ ಟೂರ್ನಿಗಳಲ್ಲಿ ಮಿಂಚು ಹರಿಸಿದವರು ಈ ಭಾಗದ ಆಟಗಾರರ ಪಟ್ಟಿಯಲ್ಲಿದ್ದಾರೆ. ಇವರ ಪೈಕಿ ಬಹುತೇಕರು ಕಳೆದ ಎರಡು ಬಾರಿ ಕೆಪಿಎಲ್‌ ಆಡಿದವರಾದ್ದರಿಂದ ಭರವಸೆ ಮೂಡಿಸಿದ್ದಾರೆ. ಹೆಚ್ಚಿನವರು ಅವಳಿ ನಗರದವರಾಗಿದ್ದು ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗ ಭಾಗ ದವರೂ ಇದ್ದಾರೆ. ಆದರೆ ಅವರೆಲ್ಲರೂ ತಮ್ಮ ಕ್ರಿಕೆಟ್‌ ಜೀವನದ ಹೆಚ್ಚಿನ ದಿನಗಳನ್ನು ಹುಬ್ಬಳ್ಳಿ–ಧಾರವಾಡದಲ್ಲೇ ಕಳೆದವರು.

ಹಿರಿಯ ಆಟಗಾರ, ಆನಂದ ಕಟ್ಟಿ ಸೇರಿದಂತೆ ಅವಳಿ ನಗರದ ಒಟ್ಟು ಎಂಟು ಮಂದಿ ಹಾಗೂ ಸಮೀಪ ಜಿಲ್ಲೆಗಳ ಆರು ಮಂದಿ ಈ ಬಾರಿಯ ಕೆಪಿಎಲ್‌ನಲ್ಲಿ ವಿವಿಧ ತಂಡಗಳ ಪರವಾಗಿ ಆಡಲಿದ್ದಾರೆ. ಇವರ ಪೈಕಿ ಕೆಲವರು ಮಾತ್ರ ಕೆಪಿಎಲ್‌ಗೆ ಹೊಸಬರು.

ಧಾರವಾಡದ ಆನಂದ ಕಟ್ಟಿ, ನಿತಿನ್‌ ಭಿಲ್ಲೆ, ವಿ.ಪ್ರಸನ್ನ ಪಾಟೀಲ, ಶೊಹೆಬ್‌ ಮ್ಯಾನೇಜರ್‌ ಹಾಗೂ ಪರಪ್ಪ ಮೊರಡಿ ಹುಬ್ಬಳ್ಳಿ ಟೈಗರ್ಸ್‌ ಪರ ಆಡಲಿದ್ದಾರೆ. ಬೆಳಗಾವಿಯ ರೋನಿತ್‌ ಮೋರೆ, ಧಾರವಾಡದ ಪವನ್‌ ದೇಶಪಾಂಡೆ ಮತ್ತು ಗದಗ ಮೂಲದ ಅನಿರುದ್ಧ ಜೋಶಿ ಮಂಗಳೂರು ಯುನೈಟೆಡ್‌ ತಂಡದಲ್ಲಿದ್ದಾರೆ. ಕಾರವಾರದ ರಿತೇಶ ಭಟ್ಕಳ್‌ ಬಳ್ಳಾರಿ ಟಸ್ಕರ್ಸ್‌ ಪರ ಆಡಲಿದ್ದು ಬೆಳಗಾವಿ ಮೂಲದ ದೀಪಕ್‌ ಚೌಗುಲೆ ಬಿಜಾಪುರ ಬುಲ್ಸ್‌ ಪರ ಮತ್ತು ರೋಹನ್‌ ಕದಂ ಹಾಗೂ ಜೀಶನ್‌ ಸೈಯದ್‌ ಅಲಿ ಬೆಳಗಾವಿ ಪ್ಯಾಂಥರ್ಸ್‌ ತಂಡದಲ್ಲಿದ್ದಾರೆ. ಹುಬ್ಬಳ್ಳಿಯ ಶಿಶಿರ್ ಭವಾನೆ ಮತ್ತು ಧಾರವಾಡದ ರಾಜು ಭಟ್ಕಳ್‌ ಮೈಸೂರು ವಾರಿಯರ್ಸ್‌ ಪರ ಕಣಕ್ಕಿಳಿಯಲಿದ್ದಾರೆ.  

ಮಾಜಿ ರಣಜಿ ಆಟಗಾರ ಆನಂದ ಕಟ್ಟಿ ಬಲಗೈ ಬ್ಯಾಟ್ಸ್‌ಮನ್‌ ಮತ್ತು ಎಡಗೈ ಸ್ಪಿನ್ನರ್‌. ಬೆಳಗಾವಿಯಲ್ಲಿ ಹುಟ್ಟಿ ಧಾರವಾಡದಲ್ಲಿ ಕ್ರಿಕೆಟ್‌ನ ‘ಆನಂದ’ ಕಂಡ ಕಟ್ಟಿ 42 ವರ್ಷ ವಯಸ್ಸಿನಲ್ಲೂ ಉತ್ಸಾಹದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ರಣಜಿ ತಂಡದ ಮಧ್ಯಮ ವೇಗಿ ರೋನಿತ್ ಮೋರೆ ಐಪಿಎಲ್‌ನಲ್ಲೂ ಮಿಂಚಿರುವ ಆಟಗಾರ. ಕೆಪಿಎಲ್‌ನಿಂದಲೇ ಬೆಳಕಿಗೆ ಬಂದ ರೈಲ್ವೆ ತಂಡದ ರಣಜಿ ಆಟಗಾರ ನಿತಿನ್‌ ಭಿಲ್ಲೆ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌. ಅಗತ್ಯ ಬಿದ್ದರೆ ಗ್ಲೌಸ್‌ ಬಿಚ್ಚಿಟ್ಟು ಬೌಲಿಂಗ್‌ ಕೂಡ ಮಾಡಬಲ್ಲ ಛಲವಂತ.

ಕವರ್‌ ಡ್ರೈವ್‌ ಮತ್ತು ಲೆಗ್‌ ಗ್ಲಾನ್ಸ್‌ ಪ್ರಿಯ ಎಡಗೈ ಬ್ಯಾಟ್ಸ್‌ಮನ್‌ ಶಿಶಿರ್‌ ಭವಾನೆ ಸಿ.ಕೆ.ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿದವರು. ಕಳೆದ ಎರಡು ಕೆಪಿಎಲ್‌ ಟೂರ್ನಿಗಳಲ್ಲೂ ಆಡಿರುವ ಅವರಿಗೆ ಚುಟುಕು ಕ್ರಿಕೆಟ್‌ನಲ್ಲಿ ಈಗಾಗಲೇ ಸಾಕಷ್ಟು ಅನುಭವ ಆಗಿದೆ.
13ರಿಂದ 25 ವರ್ಷದೊಳಗಿನವರ ವಯೋಮಾನದ ಎಲ್ಲ ಬಗೆಯ ಕ್ರಿಕೆಟ್‌ನಲ್ಲೂ ಆಡಿದ ಅನುಭವಿ ಪವನ್‌ ದೇಶಪಾಂಡೆ ಎಡಗೈ ಬ್ಯಾಟ್ಸ್‌ಮನ್‌ ಮತ್ತು ಆಫ್‌ಸ್ಪಿನ್ನರ್‌. ಬ್ಯಾಟ್ಸ್‌ಮನ್‌ ಆಗಿಯೇ ಹೆಚ್ಚು ಮಿಂಚಿದ್ದಾರೆ. ಮಧ್ಯಮ ವೇಗಿ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಶೊಹೆಬ್‌ ಮ್ಯಾನೇಜರ್‌ ಆಲ್‌ ರೌಂಡರ್‌. ಅಚ್ಚು ಮತ್ತು ಗಾಲಿ ಕಾರ್ಖಾನೆ ಗಾಗಿ ಆಡಿ ಹೆಸರು ಮಾಡಿದ್ದಾರೆ.

ಪರಪ್ಪ ಮೊರಡಿ ಅತ್ಯುತ್ತಮ ಎಡಗೈ ಮಧ್ಯಮ ವೇಗಿ. ಕೆಳ ಕ್ರಮಾಂಕದ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ತಾಕತ್ತು ಅವರಿಗಿದೆ. ರಿತೇಶ್‌ ಭಟ್ಕಳ್‌ ಈಗ ದಕ್ಷಿಣ ಕನ್ನಡದಲ್ಲಿ ಕಾಲೇಜು ವಿದ್ಯಾರ್ಥಿ; ಆಫ್‌ ಸ್ಪಿನ್ನರ್‌ ಮತ್ತು ಬಲಗೈ ಬ್ಯಾಟ್ಸ್‌ಮನ್‌.

ಬೆಳಗಾವಿಯ ದೀಪಕ್‌ ಚೌಗುಲೆ ಆಲ್‌ರೌಂಡರ್ ಆಗಿದ್ದರೂ ಆಫ್‌ಸ್ಪಿನ್‌ ಮೂಲಕ ಜಾದೂ ಮಾಡಬಲ್ಲ ಆಟಗಾರ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮತ್ತು ಆಫ್‌ ಸ್ಪಿನ್ನರ್‌ ಅನಿರುದ್ಧ ಜೋಶಿ ಹುಟ್ಟೂರು ಗದಗ. ಎಡಗೈ ಆಟಗಾರ ರೋಹನ್‌ ಕದಂ ಆರಂಭಿಕ ಬ್ಯಾಟ್ಸ್‌ ಮನ್‌. ಜೀಶನ್ ಸೈಯದ್‌ ಅಲಿ ಬಲಗೈ ಬ್ಯಾಟ್ಸ್‌ಮನ್‌ ಹಾಗೂ ಆಫ್‌ ಸ್ಪಿನ್ನರ್‌. ಬಲಗೈ ಮಧ್ಯಮ ವೇಗಿಯಾಗಿರುವ ರಾಜು ಭಟ್ಕಳ್‌ ಬ್ಯಾಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಬಲ್ಲ ಆಟಗಾರ. ಅನುಭವಿ ಆಟಗಾರ ಪ್ರಸನ್ನ ಪಾಟೀಲ ಎಡಗೈ ಸ್ಪಿನ್‌ ಜಾದೂಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT