ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಊಟದ ಹಬ್ಬ

Last Updated 11 ಮೇ 2015, 19:30 IST
ಅಕ್ಷರ ಗಾತ್ರ

ನಿಜ, ಉತ್ತರ ಕರ್ನಾಟಕ ಊಟದ ರುಚಿಯೇ ಹಾಗಿದೆ. ಈ ಊಟದಲ್ಲಿ ಖಾರವೇ ಮುಂದಾದರೂ ಸ್ವಾದದಲ್ಲಿ ಹಿಂದಿಲ್ಲ. ವಿಶ್ವದ ಯಾವ ಭಾಗದಲ್ಲೂ ಸಿಗದ ಅಪರೂಪದ ಮೆನು ಇದು. ಹಾಗೆಯೇ ಈ ಊಟವನ್ನು ಸವಿಯುವುದೂ ಒಂದು ಕಲೆ. ಅದನ್ನು ಆ ಶೈಲಿಯಲ್ಲಿಯೇ ತಿನ್ನಬೇಕು. ತಪ್ಪಿದರೆ ಗಂಟಲಲ್ಲಿ ಸಿಕ್ಕ ರೊಟ್ಟಿ ಚೂರು ಮೂಗಿನಲ್ಲೂ, ಕಣ್ಣಿನಲ್ಲೂ ನೀರು ಹರಿಸುವುದು.

ಕಟ್ ಅಂತ ಖಡಕ್ ರೊಟ್ಟಿ ಮುರಿದುಕೊಂಡು, ಅದನ್ನು ಗಟ್ಟಿ ಮೊಸರು, ಗುರೆಳ್ಳು ಹಿಂಡಿ (ಚಟ್ನಿ) ಅಥವಾ ಅಗಸಿ ಹಿಂಡಿಯಲ್ಲಿ ಅದ್ದಿಕೊಂಡು, ಬದನೆಕಾಯಿ ಎಣ್ಣೆಗಾಯಿ ಪಲ್ಯದೊಂದಿಗೆ ಬಾಯಿಗಿಟ್ಟುಕೊಂಡರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸ್ವಾದ...
ಇಂತಹ ವಿಶೇಷ ರುಚಿಯನ್ನು ಬೆಂಗಳೂರಿನ ಮಂದಿಗೂ ಪರಿಚಯಿಸಲು ಮುಂದಾಗಿದೆ ಕಾರ್ಟಿಯರ್ ಹೋಟೆಲ್ಸ್ ಗುಂಪಿನ ‘ಸೌತ್‌ ರುಚೀಸ್’. ಇದೇ 15ರಿಂದ 20ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಉತ್ತರ ಕರ್ನಾಟಕ ಊಟದ ಹಬ್ಬದಲ್ಲಿ ರೊಟ್ಟಿಯದೇ ಜಾತ್ರೆ.

ಅತೀ ದೊಡ್ಡ ರೊಟ್ಟಿ
ಮೇ 15ರಂದು ಮಧ್ಯಾಹ್ನ 12ಕ್ಕೆ ಆರಂಭವಾಗುವ ಊಟದ ಹಬ್ಬದಲ್ಲಿ ಅತಿ ದೊಡ್ಡ ರೊಟ್ಟಿಯನ್ನು ಪ್ರದರ್ಶನಕ್ಕಿಡಲಾಗುತ್ತಿದೆ. ಈವರೆಗೆ ಇಷ್ಟು ದೊಡ್ಡ ರೊಟ್ಟಿಯನ್ನು ಕಂಡವರಿಲ್ಲ. ರೊಟ್ಟಿಯನ್ನು ಇಷ್ಟು ದೊಡ್ಡದಾಗಿ ತಟ್ಟುವುದು, ಬೇಯಿಸುವುದೂ ಸವಾಲಿನ ಸಂಗತಿ. ಗದಗದಿಂದ ಬಂದ ಅನುಭವಿ ಬಾಣಸಿಗರು ಈ ರೊಟ್ಟಿಯನ್ನು ತಯಾರಿಸಲಿದ್ದಾರೆ.

ಖಡಕ್ ರೊಟ್ಟಿ: ಉತ್ತರ ಕರ್ನಾಟಕದ ಊಟದಲ್ಲಿ ಖಡಕ್ ರೊಟ್ಟಿಗೆ ಮೊದಲ ಸ್ಥಾನ. ಮೆತ್ತಗಿನ ರೊಟ್ಟಿ ಅಥವಾ ಚಪಾತಿ ಇದ್ದರೂ ಮೊದಲೊಂದು ಖಡಕ್‌ ರೊಟ್ಟಿ ಕಡಿದರೆ ಮಾತ್ರ ಈ ಭಾಗದ ಮಂದಿಗೆ ಸಮಾಧಾನ. ಖಡಕ್‌ ರೊಟ್ಟಿ ಜೋಳದ್ದೂ ಆಗಿರಬಹುದು. ಆದರೆ ಸಜ್ಜೆ ಖಡಕ್‌ ರೊಟ್ಟಿಗೆ ಹೆಚ್ಚು ಬೇಡಿಕೆ.

ಎಂದೂ ತಿನ್ನದೇ ಇರುವವರಿಗೆ ಇದು ಗಂಟಲಿಗೆ ಅಥವಾ ಹೊಟ್ಟೆಗೆ ಚುಚ್ಚುವುದೇನೊ ಎನ್ನುವ ಭಯ. ಆದರೆ ಈ ರೊಟ್ಟಿ ನೋಡಲು ಮಾತ್ರ ಖಡಕ್‌, ಹೊಟ್ಟೆಗೆ ಹಿತ. ಇದು ಚಪಾತಿಗಿಂತಲೂ ಬೇಗ ಕರಗುತ್ತದೆ. ಬಾಯಿಯಲ್ಲಿ ನಿಧಾನಕ್ಕೆ ಅಗಿಯುವುದರಿಂದ ಗಂಟಲಿಗೂ ಚುಚ್ಚದು. ಹೊಟ್ಟೆಗೆ ಇಳಿಯುವತನಕ ಅದರ ‘ಖಡಕ್’ ಗುಣ ಮಿದುವಾಗಿರುತ್ತದೆ.

ವಿಧ–ವಿಧ ಪಲ್ಯದ ನಂಟು
ಎಣ್ಣೆಗಾಯಿ, ಝುಣಕ ಬಿಟ್ಟರೆ ರೊಟ್ಟಿಯೊಂದಿಗೆ ಹೆಚ್ಚು ರುಚಿ ನೀಡುವ ಮತ್ತೊಂದು ಪಲ್ಯ ಎಂದರೆ ಮಿಕ್ಸ್ ದಾಲ್. ಅಂದರೆ ನಾಲ್ಕಾರು ಪ್ರಕಾರದ ಬೇಳೆಗಳನ್ನು ಸೇರಿಸಿ, ಕುದಿಸಿ ಒಗ್ಗರಣೆ ಕೊಟ್ಟು ಮಾಡುವ ಪಲ್ಯ. ಮಡಕೆ ಕಾಳುಗಳನ್ನು ನೆನೆಸಿ, ಮೊಳಕೆ ಬರುವಂತೆ ಮಾಡಿ ಬೆಳ್ಳುಳ್ಳಿ, ಮಸಾಲೆ ಖಾರ, ಹುಳಿಗೆ ಒಂದಷ್ಟು ಹುಣಸೆ ರಸ ಸೇರಿಸಿ ಮಾಡುವ ಉಸುಳಿ ಸಹ ರೊಟ್ಟಿಯೊಂದಿಗೆ ರುಚಿಗಟ್ಟುತ್ತದೆ. ಪಕ್ಕದಲ್ಲಿ ಕೆಂಪು ಮೆಣಸಿನಕಾಯಿ ಚಟ್ನಿ ಇದ್ದರಂತೂ ಅದು ಪರಿಪೂರ್ಣ ಊಟ.

ಉತ್ತರ ಭಾಗದ ಬಾಣಸಿಗರ ದಂಡು
ಈ ಊಟದ ಹಬ್ಬಕ್ಕೆ ವಿಶೇಷ ಊಟ ತಯಾರಿಸಲು ಗದಗಿನಿಂದ ಹತ್ತು ಜನ ತಜ್ಞ ಬಾಣಸಿಗರನ್ನು ಕರೆ ತರಲಾಗಿದೆ. ಆ ಭಾಗದ ರುಚಿಯಲ್ಲಿ ಒಂದಿಷ್ಟೂ ವ್ಯತ್ಯಾಸವಾಗದಂತಹ ಸ್ವಾದವನ್ನು ಕಟ್ಟಿ ಕೊಡುವುದು ಇವರ ಕೆಲಸ.

ಲಕ್ಕಿ ಡಿಪ್
ಇಲ್ಲಿಗೆ ಊಟಕ್ಕೆ ಬರುವವರಿಗೆ ಒಂದು ಜವಾಬ್ದಾರಿ ಇದೆ. ತಮಗೆ ಯಾವ ಖಾದ್ಯ ಇಷ್ಟವಾಯಿತು, ಏಕೆ ಇಷ್ಟವಾಯಿತು ಎನ್ನುವ ಮಾಹಿತಿಯನ್ನು ಅವರು ಕೂಪನ್ ತುಂಬಿ ಕೊಡಬೇಕು. ಅದರಲ್ಲಿ ಆಯ್ಕೆಯಾದ ಅದೃಷ್ಟಶಾಲಿ ಗ್ರಾಹಕರಿಗೆ ಉಚಿತ ಊಟದ ಕೂಪನ್‌ ನೀಡಲಾಗುತ್ತದೆ.

ಹೀಗೆ ಈ ಐದು ದಿನಗಳ ಊಟದ ಹಬ್ಬದಲ್ಲಿ ಹೆಚ್ಚು ಜನರ ಮೆಚ್ಚುಗೆ ಪಡೆಯುವ ಖಾದ್ಯ ಸೌತ್‌ ರುಚಿಯ ರೆಗ್ಯುಲರ್‌ ಮೆನುನಲ್ಲಿ ಜಾಗ ಪಡೆಯಲಿದೆ. 

**
ಮೇ 15ರಿಂದ 20ರವರೆಗೆ ಹತ್ತು ದಿನಗಳ ಕಾಲ ನಡೆಯಲಿರುವ ‘ಉತ್ತರ ಕರ್ನಾಟಕದ ಊಟದ ಹಬ್ಬ’ದಲ್ಲಿ ಪ್ರತಿದಿನ ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹಾಗೂ ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಊಟ ಲಭ್ಯವಿರುತ್ತದೆ. ಸಂಜೆ 4ರಿಂದ 7 ಗಂಟೆಯವರೆಗೂ ತಿಂಡಿಯ (ಸ್ನ್ಯಾಕ್ಸ್)ಯ ಸಮಯ. ಊಟದ ಬೆಲೆ ₹ 55 ರಿಂದ ಹಾಗೂ ತಿಂಡಿಯ ಬೆಲೆ ₹ 25 ರಿಂದ ಆರಂಭ.
ಟೇಬಲ್ ಕಾಯ್ದಿರಿಸಲು: 080 2350 9555/ 78998 30606 ಅಥವಾ www.cartierhotels.in‌

ನಮ್ಮೂರ ಊಟ
ನಮಗೆ ಅಂತರರಾಷ್ಟ್ರೀಯ ಆಹಾರಗಳೂ ಗೊತ್ತಿವೆ. ಚೈನೀಸ್ ಫುಡ್‌, ಆಸ್ಟ್ರೇಲಿಯನ್‌ ಫುಡ್‌ ಎಂದು ಬಾಯಿ ಚಪ್ಪರಿಸಿ ತಿನ್ನುತ್ತೇವೆ. ಅವು ನಮ್ಮ ಪರಿಸರದಲ್ಲಿ, ನಮ್ಮ ಪ್ರಕೃತಿಗೆ ಹೊಂದಿಕೊಳ್ಳಬಲ್ಲವೇ ಎಂಬುದನ್ನೂ ಆಲೋಚಿಸುವುದಿಲ್ಲ. ಆದರೆ ನಮ್ಮ ಅಕ್ಕ–ಪಕ್ಕದ ಊರಿನ, ರಾಜ್ಯಗಳ ಸಮೃದ್ಧ ಊಟಗಳೇ ನಮಗೆ ಗೊತ್ತಿಲ್ಲ. ಅಂತಹ ಅಪರೂಪದ ಊಟಗಳನ್ನು ಬೆಂಗಳೂರಿನ ಜನರಿಗೆ ಪರಿಚಯಿಸುವುದು ಈ ಹಬ್ಬದ ಉದ್ದೇಶ. ಮೊದಲ ಬಾರಿ ಉತ್ತರ ಕರ್ನಾಟಕ ಊಟ, ಮುಂದಿನ ಬಾರಿ ಮತ್ತೊಂದು ಭಾಗ, ಇನ್ನೊಂದು ರಾಜ್ಯದ ಊಟಗಳ ಹಬ್ಬವನ್ನೂ ಮಾಡುವ ಆಲೋಚನೆ ಇದೆ.

ಊಟ ಕೇವಲ ಹೊಟ್ಟೆಗೆ ಸಂಬಂಧಿಸಿದ್ದಲ್ಲ. ಅದು ನಮ್ಮ ಆರೋಗ್ಯ, ಚೈತನ್ಯ, ನಮ್ಮ ಆಯುಷ್ಯವನ್ನೂ ನಿರ್ಧರಿಸುತ್ತದೆ. ಹೀಗಾಗಿ ಆರೋಗ್ಯಕರ ಆದರೆ ಅಷ್ಟೇ ಸ್ವಾದಿಷ್ಟ ಊಟವನ್ನು ಬಡಿಸಬೇಕು ಎನ್ನುವುದು ನಮ್ಮ ಉದ್ದೇಶ. ಜನರಿಗೆ ಬದಲಾವಣೆ ಬೇಕು. ಹಾಗೆಂದು ನಮಗೆ ಒಗ್ಗದ ಆಹಾರಗಳನ್ನು ತಂದು ಅವರ ಮೇಲೆ ಪ್ರಯೋಗಿಸುವುದು ಸರಿಯಲ್ಲ. ಆದ್ದರಿಂದ ನಮ್ಮ ದೇಶದ, ನಮ್ಮ ಸುತ್ತಮುತ್ತಲಿನ ರಾಜ್ಯಗಳ ಆಹಾರ ಪದ್ಧತಿಗಳನ್ನು ಒಂದೊಂದಾಗಿ ಈ ಮಹಾನಗರಕ್ಕೆ ಪರಿಚಯಿಸುವ ಪ್ರಯತ್ನವಿದು.
ಪ್ರದೀಪ್‌ ಜಿ.ಆರ್‌, ವ್ಯವಸ್ಥಾಪಕ ನಿರ್ದೇಶಕ, ಸೌತ್ ರುಚೀಸ್

*
ಊಟದ ಮೆನು
ರೊಟ್ಟಿ: ಜೋಳದ ರೊಟ್ಟಿ (ಬಿಸಿ ರೊಟ್ಟಿ, ಖಡಕ್ ರೊಟ್ಟಿ) ಸಜ್ಜೆ ರೊಟ್ಟಿ (ಖಡಕ್).
ಪಲ್ಯ: ಬದನೆಕಾಯಿ ಎಣ್ಣೆಗಾಯಿ, ಬೇಳೆ ಪಲ್ಯ (ಕಪ್ಪು ಚೆನ್ನಾ, ಕೆಂಪು ಚೆನ್ನಾ ಬೇಳೆ), ಮಡಕಿ ಕಾಳು ಪಲ್ಯ, ತಾಜಾ ತರಕಾರಿ ಪಲ್ಯ (ಸೌತೆಕಾಯಿ, ಬೆಂಡೆಕಾಯಿ,  ಪಡವಲಕಾಯಿ, ಆಲೂಗಡ್ಡೆ ಇತ್ಯಾದಿ),  ಚವಳಿಕಾಯಿ ಪಲ್ಯ, ಝುಣಕ ವಡಿ. ರೈತಾ ( ತರಕಾರಿ ರೈತಾ, ಜೋಳದ ರೈತಾ), ಸಲಾಡ್.
ಸಾಂಬಾರು: ತಿಳಿಸಾರು, ತರಕಾರಿ ಸಾಂಬಾರು, ನುಗ್ಗೆಕಾಯಿ ಸಾಂಬಾರು.
ಹಿಂಡಿ (ಚಟ್ನಿ): ಶೇಂಗಾ, ಅಗಸಿ, ಗುರೆಳ್ಳು ಹಿಂಡಿ, ಕೆಂಪು ಮೆಣಸಿನಕಾಯಿ ಚಟ್ನಿ.
ಸಿಹಿ: ಹೋಳಿಗೆ (ಶೇಂಗಾ ಹೋಳಿಗೆ, ಎಳ್ಳಿನ ಹೋಳಿಗೆ, ಹೂರಣ ಹೋಳಿಗೆ), ಕಡಬು, ಗೋಧಿ ಹುಗ್ಗಿ, ಪಾಯಸ.

ತಿಂಡಿ ಮೆನು
ಗಿರ್ಮಿಟ್ಟಿ, ಚುರುಮುರಿ  ಚೂಡಾ, ಅವಲಕ್ಕಿ ಸೂಸಲಾ, ಸಾಬೂದಾನಿ ಸೂಸಲಾ,  ಚುರುಮುರಿ ಸೂಸಲಾ ಇತ್ಯಾದಿ. ಬಜ್ಜಿ (ಮೆಣಸಿನಕಾಯಿ ಬಜ್ಜಿ, ದೊಡ್ಡ ಮೆಣಸಿನಕಾಯಿ ಬಜ್ಜಿ, ಬಾಳೇಕಾಯಿ ಬಜ್ಜಿ, ಮಿಕ್ಸ್ ತರಕಾರಿ ಬಜ್ಜಿ ಇತ್ಯಾದಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT