ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕಾಣದ ಪ್ರಶ್ನೆಗೆ ಉತ್ತರ ಹುಡುಕಿದ ಭೂಪರು!

Last Updated 24 ಡಿಸೆಂಬರ್ 2014, 5:29 IST
ಅಕ್ಷರ ಗಾತ್ರ

ಬೆಳಗಾವಿಯಲ್ಲಿ ನಡೆದಿದ್ದು ಚಳಿಗಾಲದ ಅಧಿವೇಶನ. ಆದರೆ ಇಲ್ಲಿ ಅಧಿವೇಶನ ನಡೆದಷ್ಟೂ ದಿನ ಚಳಿ ಇರಲಿಲ್ಲ. ಹೊರಗೆ ಮೋಡ ಕವಿದ ವಾತಾವರಣ. ಆಗಾಗ ತುಂತುರು ಮಳೆ. ಸದನದ ಒಳಗೂ ಮೋಡ ಕವಿದ ವಾತಾವರಣ. ಆದರೆ ಅಲ್ಲಿ ತುಂತುರು ಮಳೆ ಇರಲಿಲ್ಲ. ಗುಡುಗು, ಸಿಡಿಲಿನ ಆರ್ಭಟ. ಸುವರ್ಣ ಸೌಧದ ಹೊರಗೆ ಪ್ರತಿಭಟನೆಯ ಬಿಸಿ. ವಿಧಾನ ಮಂಡಲದ ಕಲಾಪದಲ್ಲಿ ಕಣ್ಣೀರು. ಇದನ್ನು ಮೊಸಳೆ ಕಣ್ಣೀರು ಎಂದು ಜರೆದವರೇ ಜಾಸ್ತಿ.

ಸಂಸ್ಕೃತದಲ್ಲಿ ‘ತೇನ ವಿನಾ ತೃಣಮಪಿ ನ ಚಲತಿ’ ಎಂಬ ಮಾತಿದೆ. ದೇವರ ಇಚ್ಛೆ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸುವುದಿಲ್ಲ ಎಂಬುದು ಆ ಮಾತಿನ ಅರ್ಥ. ಆದರೆ ವಿಧಾನ ಮಂಡಲ ಮತ್ತು ಆಧುನಿಕ ಸಮಾಜದಲ್ಲಿ ‘ತೇನ’ ಎಂದರೆ ದೇವರಲ್ಲ. ಇಲ್ಲಿ ರಾಜಕಾರಣ. ರಾಜಕೀಯ ಇಲ್ಲದೆ ಯಾವ ಮಾತೂ ಇಲ್ಲ. ಯಾವ ಕೃತಿಯೂ ಇಲ್ಲ. ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ.

ಕುಂದಾನಗರಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸುಮಾರು ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೇ ಚರ್ಚೆ ನಡೆಯಿತು. ಒಂದಿಬ್ಬರು ಸದಸ್ಯರನ್ನು ಬಿಟ್ಟರೆ ಉಳಿದವರು ಸಮಸ್ಯೆಯ ಮೂಲಕ್ಕೆ ಹೋಗಲಿಲ್ಲ. ಮೇಲು ಮೇಲಿನ ಮಾತಿನಲ್ಲಿಯೇ ಕಾಲಹರಣ ಮಾಡಿದರು. ಶಾಲೆ ಇಲ್ಲ, ಆಸ್ಪತ್ರೆ ಇಲ್ಲ, ಅಭಿವೃದ್ಧಿ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು. ಆದರೆ ಇದಕ್ಕೆಲ್ಲಾ ಕಾರಣ ಯಾರು ಎನ್ನುವುದನ್ನು ಪತ್ತೆ ಮಾಡುವ ಸಾಹಸಕ್ಕೆ ಹೋಗಲಿಲ್ಲ. ಅದಕ್ಕೇ ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ.ಆರ್.ರಮೇಶ ಕುಮಾರ್ ‘ಇದೊಂದು ಆರೋಪಿಯ ಹೆಸರೇ ಇಲ್ಲದ ಎಫ್ಐಆರ್’ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸುಮಾರು ಮೂರೂವರೆ ತಾಸುಗಳ ಕಾಲ ಉತ್ತರ ನೀಡಿದರು. ಅದರಲ್ಲಿಯೂ ಸಮಸ್ಯೆಯ ಆಳವನ್ನು ಶೋಧಿಸುವ ಸುಳಿವು ಇರಲಿಲ್ಲ.
ಕುಡಿಚಿ ಶಾಸಕ ಪಿ.ರಾಜೀವ ಮಾತ್ರ ಇಂತಹ ಯತ್ನವೊಂದನ್ನು ನಡೆಸಿದರು. ಇಲ್ಲಿನ ಸಮಸ್ಯೆಯ ಮೂಲವನ್ನು ಬಿಚ್ಚಿಟ್ಟರು. ಆದರೆ ಅವರ ಯತ್ನ ಸಂಪೂರ್ಣವಾಗಿ ನಿಷ್ಫಲವಾಯಿತು. ಯಾರೂ ಅದರತ್ತ ಗಮನವನ್ನೇ ನೀಡಲಿಲ್ಲ. ‘ಏನೋ ಹುಡುಗ, ಏನೇನೋ ಮಾತನಾಡುತ್ತಾನೆ’ ಎಂದುಕೊಂಡರು. ಕೆಲವೇ ಕೆಲವು ಸದಸ್ಯರು ರಾಜೀವ ಅವರ ಬೆನ್ನು ತಟ್ಟಿದರು.

ಉತ್ತರ ಕರ್ನಾಟಕದ ಸಮಸ್ಯೆಯ ಬೇರನ್ನು ಹುಡುಕಿ ಅದನ್ನು ಕಿತ್ತು ಹಾಕದೇ ಇದ್ದರೆ ನಂಜುಂಡಪ್ಪ ವರದಿಯ ಆಧಾರದಲ್ಲಿ 16 ಸಾವಿರ ಕೋಟಿಯೋ, 30 ಸಾವಿರ ಕೋಟಿಯೋ ಅಥವಾ ಒಂದು ಲಕ್ಷ ಕೋಟಿ ರೂಪಾಯಿ ಕೊಟ್ಟರೂ ಅದು ಉಪಯೋಗಕ್ಕೆ ಬರುವುದಿಲ್ಲ ಎಂಬುದು ರಾಜೀವ್ ವಾದ.

ಅವರ ವಾದದಲ್ಲಿ ಕೊಂಚ ಜೀವ ಇದೆ. ರಾಜೀವ್‌ ಹೇಳುತ್ತಾರೆ ‘ದಕ್ಷಿಣ ಕರ್ನಾಟಕದಲ್ಲಿ ಒಂದು ಗ್ರಾಮ ಪಂಚಾಯ್ತಿಯಲ್ಲಿ 15 ಸದಸ್ಯರಿರುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಒಂದು ಗ್ರಾಮ ಪಂಚಾಯ್ತಿಯಲ್ಲಿ 35ರಿಂದ 40 ಸದಸ್ಯರಿರುತ್ತಾರೆ. 72 ಮಂದಿ ಸದಸ್ಯರಿರುವ ಗ್ರಾಮ ಪಂಚಾಯ್ತಿಯೂ ಇಲ್ಲಿ ಇದೆ. ದಕ್ಷಿಣ ಕರ್ನಾಟಕದಲ್ಲಿ ಒಂದು ಹೋಬಳಿಯ ಜನಸಂಖ್ಯೆ 35 ಸಾವಿರದಿಂದ
45 ಸಾವಿರ. ಆದರೆ ಇಲ್ಲಿ ಒಂದು ಹೋಬಳಿಯ ಜನಸಂಖ್ಯೆ ಒಂದೂವರೆ ಲಕ್ಷದಿಂದ 2 ಲಕ್ಷ. ರಾಜ್ಯ ಸರ್ಕಾರ ಅಖಂಡ ಕರ್ನಾಟಕಕ್ಕೆ ಒಂದೇ ಯೋಜನೆ, ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಸಂಪತ್ತನ್ನು ಹಂಚುವುದಾಗಿ ಹೇಳುತ್ತದೆ. ಉದಾಹರಣೆಗೆ ಯಾವುದೋ ಒಂದು ಯೋಜನೆಗೆ 20 ಕೋಟಿ ಹಣವನ್ನು ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಹಂಚಲಾಗುತ್ತದೆ. ಆದರೆ ಇದು ನಿಜವಾದ ಅರ್ಥದಲ್ಲಿ ಸಮಾನ ಅಲ್ಲ. ಯಾಕೆಂದರೆ ಕೇವಲ 3 ತಾಲ್ಲೂಕು ಗಳನ್ನು ಹೊಂದಿರುವ ಕೊಡಗು ಜಿಲ್ಲೆಗೂ ₨ 20 ಕೋಟಿ, 13 ತಾಲ್ಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೂ 20 ಕೋಟಿ ಎಂದರೆ ಹೇಗೆ?’ ಎಂದು ಅವರು ಪ್ರಶ್ನೆ ಮಾಡುತ್ತಾರೆ.

ರಾಜೀವ ಅವರ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಇನ್ನೂ ಪಾಳೇಗಾರಿಕೆ ಇದೆ. ಚಳಿಗಾಲದ ಅಧಿವೇಶನದಲ್ಲಿ ಪ್ರತಿ ಬಾರಿ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಕೊಡಿಸುವ ಬಗ್ಗೆ ಚರ್ಚೆ, ಧರಣಿ, ಹೋರಾಟ ಎಲ್ಲವೂ ನಡೆಯುತ್ತದೆ. ಆದರೆ ಯಾರದ್ದೋ ಕಬ್ಬಿನ ಗದ್ದೆಯಲ್ಲಿ ಬೆಳೆದ ಕಬ್ಬನ್ನು ಇನ್ಯಾರೋ ದೋಚಿಕೊಂಡು ಹೋಗುತ್ತಾರೆ. ಆ ಬಗ್ಗೆ ಚರ್ಚೆಯೇ ಆಗುವುದಿಲ್ಲ. ಅದಕ್ಕೆ ಪರಿಹಾರ ಒದಗಿಸಬೇಕು ಎಂದು ಯಾರಿಗೂ ಅನ್ನಿಸುವುದೇ ಇಲ್ಲ ಎಂದು ಅವರು ವ್ಯಥೆ ಪಡುತ್ತಾರೆ.

ಯಾವುದೋ ಒಂದು ಸರ್ವೆ ನಂಬರ್ ಹೊಲದಲ್ಲಿರುವ ಕಬ್ಬನ್ನು ಬಲಾತ್ಕಾರದಿಂದ ಇನ್ನೊಬ್ಬ ಕತ್ತರಿಸಿಕೊಂಡು ಹೋಗುತ್ತಾನೆ. ಹೊಲದ ಮೂಲ ಒಡೆಯ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾನೆ. ಪೊಲೀಸರು ಕಳ್ಳನನ್ನು ಪ್ರಶ್ನೆ ಮಾಡಿದರೆ ಆತ ಅದು ನನ್ನದೇ ಹೊಲ ಎನ್ನುತ್ತಾನೆ. ಅದಕ್ಕೆ ಒಂದಿಷ್ಟು ನಕಲಿ ದಾಖಲೆಗಳನ್ನೂ ಒದಗಿಸುತ್ತಾನೆ. ಆಗ ಪೊಲೀಸರು ಇದು ಸಿವಿಲ್ ಪ್ರಕರಣ ಎಂದು ಹೇಳಿ ನ್ಯಾಯಾಲಯದ ಮೊರೆ ಹೋಗಲು ಹೇಳುತ್ತಾರೆ. ಆಗ ಹೊಲದ ನಿಜವಾದ ಒಡೆಯ ನ್ಯಾಯಾಲಯಕ್ಕೆ ಮೊರೆ ಹೋಗುತ್ತಾನೆ. ಈಗ ಹೊಲದ ಒಡೆಯನಿಗೆ ಕಬ್ಬು ಉಳಿಸಿಕೊಳ್ಳುವುದಕ್ಕಿಂತ ಹೊಲ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಪೊಲೀಸ್ ಠಾಣೆ, ನ್ಯಾಯಾಲಯ ಎಂದು ಆತ ತಿರುಗುತ್ತಿರುತ್ತಾನೆ. ಇತ್ತ ಕಬ್ಬನ್ನು ಬಲಾತ್ಕಾರದಿಂದ ಕತ್ತರಿಸಿಕೊಂಡು ಹೋಗಿ ಸಕ್ಕರೆ ಕಾರ್ಖಾನೆಗೆ ಹಾಕಿದವನು ಹಣವನ್ನು ಪಡೆದುಕೊಳ್ಳುತ್ತಾನೆ. ಅಲ್ಲದೆ ಪ್ರಕರಣ ಇತ್ಯರ್ಥವಾಗುವ ತನಕ ಹೊಲ ಕೂಡ ಅವನ ಕಬ್ಜಾದಲ್ಲಿಯೇ ಇರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸದೆ ಒಂದು ಟನ್ ಕಬ್ಬಿಗೆ ಎಷ್ಟು ಹಣ ಕೊಟ್ಟರೆ ಏನು ಬಂತು ಎಂಬುದು ಅವರ ಪ್ರಶ್ನೆ. ಗದ್ದೆಯಲ್ಲಿ ಇರುವ ಕಬ್ಬನ್ನು ಅಕ್ರಮವಾಗಿ ಕತ್ತರಿಸಿಕೊಂಡು ಹೋಗುವುದು ಒಂದೆಡೆಯಾದರೆ, ವಾಹನದಲ್ಲಿ ಸಾಗಿಸುತ್ತಿರುವ ಕಬ್ಬು ದೋಚುವ ಪ್ರವೃತ್ತಿಯೂ ಇಲ್ಲಿ ಇದೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಯಾವುದೇ ಕಾನೂನು ಇಲ್ಲಿ ಅನ್ವಯವಾಗುವುದಿಲ್ಲ.

‘ಈ ಮಾತನ್ನು ಯಾರೂ ನಂಬುತ್ತಿಲ್ಲ. ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕೂಡ ನಂಬುವುದಿಲ್ಲ. ಪೊಲೀಸರ ಮಾತನ್ನು ಕೇಳಲ್ಲ ಅಂದ್ರೆ ‘ಏನ್ರಿ, ಯಾರ್ರಿ ಅದು, ಇಲ್ಲಿ ಕರ್ಕೊಂಡು ಬನ್ನಿ’ ಎನ್ನುತ್ತಾರೆ. ಆದರೆ ಅವರಿಗೆ ನಿಜವಾದ ಸಮಸ್ಯೆಯನ್ನು ಅರಿವು ಮಾಡಿಸುವುದು ಇನ್ನೂ ಸಾಧ್ಯವಾಗಿಲ್ಲ’ ಎಂದು ರಾಜೀವ್ ದುಃಖದಿಂದ ಹೇಳುತ್ತಾರೆ.

ನ್ಯಾಯಾಲಯದ ಆದೇಶಕ್ಕೂ ಇಲ್ಲಿ ಬೆಲೆಯೇ ಇಲ್ಲ. ಕುಡಚಿ ಸರ್ವೆ ನಂಬರ್ 352ರಲ್ಲಿ 2010ರಲ್ಲಿ ಸರ್ಕಾರಿ ಉರ್ದು ಪ್ರೌಢಶಾಲೆ ಮಾತ್ರ ಇತ್ತು. ಯಾವುದೇ ಕಾರಣಕ್ಕೂ ಈ ದಾಖಲೆಯನ್ನು ಬದಲಾಯಿಸಬಾರದು ಎಂದು ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ 2014ರ ಆರ್.ಟಿ.ಸಿ.ಯಲ್ಲಿ ಇದೇ ಸರ್ವೆ ನಂಬರಿನಲ್ಲಿ ಇಬ್ಬರಿಗೆ ತಲಾ 9.38 ಎಕರೆ ಭೂಮಿ ನೀಡಿ ಖಾತೆ ಮಾಡಿಕೊಡಲಾಗಿದೆ. ಅದೇ ರೀತಿ ಸರ್ವೆ ನಂ. 400ರಲ್ಲಿಯೂ 5.8 ಎಕರೆ ಭೂಮಿಯನ್ನು ನೀಡಲಾಗಿದೆ. ಅಲ್ಲಿ ಈಗ ಒಂದು ಎಕರೆ ಭೂಮಿಗೆ ಸರಾಸರಿ ₨ 25 ಲಕ್ಷ ಬೆಲೆ ಇದೆ. ಈ ಸಮಸ್ಯೆ ಬಗೆಹರಿಸುವುದು ಹೇಗೆ? ಇದು ಬಗೆಹರಿಯದೆ ರೈತರಿಗೆ ನೆಮ್ಮದಿ ಸಿಗುವುದು ಹೇಗೆ?

ಉತ್ತರ ಕರ್ನಾಟಕದ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಮೂಲಭೂತ ಸಮಸ್ಯೆಗಳಿಲ್ಲ ಎನ್ನುವುದೆಲ್ಲಾ ಮಾಮೂಲು. ಇದಕ್ಕೆಲ್ಲಾ ಔಷಧಿ ಕೊಡಬಹುದು. ಆದರೆ ಇಲ್ಲಿನ ಜನ ಗುಳೇ ಹೋಗುವುದನ್ನು ತಪ್ಪಿಸಲು ಸೂಕ್ತ ಚಿಕಿತ್ಸೆ ಕೊಡೋರು ಯಾರು?

ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಬಂದ ನಂತರ ₨ 17 ಸಾವಿರ ಕೋಟಿ ವೆಚ್ಚವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಈಗಲೂ ಉತ್ತರ ಕರ್ನಾಟಕದ ಜನರು ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮುಂತಾದ ಕಡೆ ವಲಸೆ ಹೋಗುವುದು ತಪ್ಪಿಲ್ಲ. ಗೋವಾ ಬೀಚ್‌ಗಳಿಂದ ಕನ್ನಡಿಗರನ್ನು ಹೊರ ಹಾಕಿದರೂ ಅವರು ಮತ್ತೆ ಮತ್ತೆ ಅಲ್ಲಿಗೇ ಹೋಗುತ್ತಿದ್ದಾರೆ. ನಮ್ಮಲ್ಲಿ ಅನ್ನಭಾಗ್ಯ ಇದೆ. ಉದ್ಯೋಗ ಗ್ಯಾರಂಟಿ ಇದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಬೇಕಾದಷ್ಟು ಯೋಜನೆಗಳಿವೆ. ಸಾಲ ಮನ್ನಾದಂತಹ ಸೌಭಾಗ್ಯವಿದೆ. ಆದರೂ ಯಾಕೆ ನಮ್ಮ ಜನ ಗುಳೇ ಹೋಗುವುದನ್ನು ಬಿಟ್ಟಿಲ್ಲ. ಈ ಬಗ್ಗೆ ವೈಜ್ಞಾನಿಕವಾದ ಸಮೀಕ್ಷೆಯೊಂದು ನಡೆಯಬೇಕಾಗಿತ್ತಲ್ಲವೇ? ಅಂತಹ ಅಧ್ಯಯನ ನಡೆಸಲು ಯಾವುದೇ ಸರ್ಕಾರ ಇನ್ನೂ ಮುಂದಾಗಿಯೇ ಇಲ್ಲ.

ಇಲ್ಲಿ ವಿಧಾನ ಮಂಡಲದಲ್ಲಿ ಸದಸ್ಯರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಓತಪ್ರೋತವಾಗಿ ಭಾಷಣ ಬಿಗಿಯುತ್ತಿದ್ದಾಗಲೇ ಅಲ್ಲಿ ಇನ್ನಷ್ಟು ಕುಟುಂಬಗಳು ಗುಳೇ ಹೋಗಲು ಸಿದ್ಧತೆ ನಡೆಸಿದ್ದವು.

ಉತ್ತರ ಕರ್ನಾಟಕದ ಸಮಸ್ಯೆ ಬಿಟ್ಟರೆ ಈ ಬಾರಿ ವಿಧಾನ ಮಂಡಲದಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದ ವಿಷಯಗಳೆಂದರೆ, ಡಾ. ಕಸ್ತೂರಿ ರಂಗನ್ ವರದಿ ಹಾಗೂ ಅಕ್ರಮ ಮರಳುಗಾರಿಕೆ.

ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚೆ ನಡೆಸಿದ ಬಹುತೇಕ ಸದಸ್ಯರು ಪರಿಸರವಾದಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ‘ಕಾಡು ಪ್ರಾಣಿಗಳು, ಜೀವ ಜಂತುಗಳು, ಅಣುಗಳು ಉಳಿಯಬೇಕು ಎಂದು ಪರಿಸರವಾದಿಗಳು ವಾದಿಸುತ್ತಾರೆ. ಅವರ ಬಗ್ಗೆ ಇರುವ ಪ್ರೀತಿ ಆ ಪ್ರದೇಶದಲ್ಲಿ ಇರುವ ಜನರ ಬಗ್ಗೆ ಯಾಕೆ ಇಲ್ಲ?’ ಎಂದು ಪ್ರಶ್ನಿಸಿದರು.

ಅರಣ್ಯ ಪ್ರದೇಶಗಳಲ್ಲಿ ಇರುವ ಜನರ ಬಗ್ಗೆ ಎಷ್ಟು ಕಾಳಜಿ ಇರಬೇಕೋ ಅಷ್ಟೇ ಕಾಳಜಿ ವನ್ಯಜೀವಿಗಳ ಬಗ್ಗೆಯೂ ಇರಬೇಕು ಎಂಬ ಬಗ್ಗೆ ಇವರಿಗೆ ತಿಳಿವಳಿಕೆ ಹೇಳುವುದು ಹೇಗೆ? ಪೂರ್ಣಚಂದ್ರ ತೇಜಸ್ವಿ ಅವರು ಹೇಳಿದ ಹಾಗೆ ಹುಲಿ, ಸಿಂಹ, ಕರಡಿ, ಆನೆಗಳಿಗೂ ಮತ ದಾನದ ಹಕ್ಕು ಇದ್ದಿದ್ದರೆ ರಾಜಕಾರಣಿಗಳು ಇವುಗಳನ್ನು ಉಳಿಸಲು ಪ್ರಯತ್ನ ಪಡುತ್ತಿದ್ದರೋ ಏನೋ?

ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ನಡೆದ ಚರ್ಚೆ ಮಾತ್ರ ದಿಕ್ಕು ತಪ್ಪಿ ಬೇರೆ ಕಡೆ ಸಾಗಿತು. ಸುಪ್ರೀಂಕೋರ್ಟ್ ಬಗ್ಗೆ ಟೀಕೆ ಮಾಡುವ ಮಟ್ಟಕ್ಕೂ ಬೆಳೆಯಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರ ನಡೆಸಲು ಸಾಧ್ಯವಿಲ್ಲ. ಎಲ್ಲದಕ್ಕೂ ನ್ಯಾಯಾಲಯಗಳು ಆದೇಶ ನೀಡುವುದಾದರೆ ಅವರನ್ನೇ ಇಲ್ಲಿಗೆ ಕರೆಸಿ ಆಡಳಿತ ನಡೆಸಲು ಹೇಳಿ’ ಎಂದು ದೂರಿದರು. ಇದಕ್ಕೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರೂ ದನಿಗೂಡಿಸಿದರು. ಆದರೆ ಇದು ಸರ್ವಥಾ ಉತ್ತಮ ಬೆಳವಣಿಗೆಯಲ್ಲ. ವಿಧಾನ ಮಂಡಲದಲ್ಲಿ ಸುಪ್ರೀಂಕೋರ್ಟ್ ಬಗ್ಗೆ ಮಾತನಾಡುವ ಸ್ವಾತಂತ್ರ್ಯ ಸದಸ್ಯರಿಗೆ ಇದೆ ನಿಜ. ಆದರೆ ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯದ ಬಗ್ಗೆ ಹೀಗೆ ಮಾತನಾಡಿದರೆ ಅದು ಸಮಾಜಕ್ಕೆ ಕೆಟ್ಟ ಸಂದೇಶವನ್ನೇ ರವಾನಿಸುತ್ತದೆ. ವಿಧಾನ ಮಂಡಲ ಮತ್ತು ಸಂಸತ್ತು ಪ್ರಜಾಪ್ರಭುತ್ವದಲ್ಲಿ ಸಾರ್ವಭೌಮ ಎನ್ನುವುದನ್ನು ಒಪ್ಪಬಹುದಾದರೂ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಕಟು ಟೀಕೆ ಒಳ್ಳೆಯ ಫಲವನ್ನಂತೂ ತರುವುದಿಲ್ಲ. ಕಾರ್ಯಾಂಗ ಮತ್ತು ಶಾಸಕಾಂಗ ವಿಫಲವಾದರೆ ನ್ಯಾಯಾಂಗ ಮಧ್ಯಪ್ರವೇಶ ಮಾಡುವುದು ಅನಿವಾರ್ಯ.

ಚಳಿಗಾಲದ ಅಧಿವೇಶನ 10 ದಿನಗಳಲ್ಲಿ ಒಟ್ಟಾರೆ 57 ಗಂಟೆ ನಡೆಯಿತು. ಧರಣಿ, ಸಭಾತ್ಯಾಗ, ಆಕ್ರೋಶ, ಚರ್ಚೆ, ವಿಚರ್ಚೆ, ರಾಜಕಾರಣ ಎಲ್ಲವೂ ನಡೆಯಿತು. ಆದರೆ ಅಲ್ಲಿ ನೊಂದವರ ನೋವಿಗೆ ಧ್ವನಿ ಇರಲಿಲ್ಲ. ನೋವನ್ನು ಕೇಳುವ ಕಿವಿ, ನೋಡುವ ಕಣ್ಣು ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT