ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತುಂಗದಲ್ಲಿ ಕಬಡ್ಡಿ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಗ್ರಾ ಮೀಣ ಕ್ರೀಡೆ ಕಬಡ್ಡಿ ಇದೀಗ ವೃತ್ತಿಪರತೆಯ ಉತ್ತುಂಗದಲ್ಲಿದೆ. ಕ್ರಿಕೆಟ್‌, ­ಫುಟ್‌ಬಾಲ್‌, ಗಾಲ್ಫ್‌ ಅಬ್ಬರದಲ್ಲಿ ಅಪ್ಪಟ ಭಾರತೀಯ ಕ್ರೀಡೆ ಕಬಡ್ಡಿಗೆ ಈ ಮಟ್ಟಿಗಿನ ಕಾರ್ಪೊರೇಟ್‌ ಮೆರುಗು ಸಿಕ್ಕಿದ್ದು ಅನಿರೀಕ್ಷಿತ. ಇದೀಗ ಮುಕ್ತಾಯಗೊಂಡ ಮೊದಲ ವೃತ್ತಿಪರ ಲೀಗ್‌ನಲ್ಲಿ ಜೈಪುರದ ಪಿಂಕ್‌ ಪ್ಯಾಂಥರ್ಸ್‌ ಗೆದ್ದಿದೆ. ಆದರೆ ಇಲ್ಲಿ ನಿಜವಾಗಿ ಗೆದ್ದಿರುವುದು ಕಬಡ್ಡಿ. 

ದೇಶದ ಬಹುಪಾಲು ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಜನಜನಿತವಾಗಿರುವ ಈ ಕ್ರೀಡೆ, ಈ ಲೀಗ್‌ನಿಂದಾಗಿ ಟಿ.ವಿ. ಮೂಲಕ ಮಹಾನಗರಗಳ ಪ್ರತಿ ಮನೆಗೂ ತಲುಪಿದೆ. ಮಶಾಲ್‌ ಸ್ಪೋರ್ಟ್‌್ಸನವರು ಈ ಲೀಗ್‌ನ ಸಂಘಟನೆಗೆ ಇಳಿದಾಗ ಈ ಮಟ್ಟಿಗಿನ ಯಶಸ್ಸಿನ ನಿರೀಕ್ಷೆ ಅವರಿಗೂ ಇರಲಿಲ್ಲ. ಐಪಿಎಲ್‌ ಮಾದರಿ­ಯಲ್ಲಿಯೇ ಕಬಡ್ಡಿ ಲೀಗ್‌ ಆರಂಭಿಸಲಾಯಿತು. ಎಂಟು ಫ್ರಾಂಚೈಸ್‌ಗಳ ತಂಡಗಳು ಎಂಟು ನಗರಗಳಲ್ಲಿ ಆಡಿದವು. ಒಟ್ಟು 60 ಪಂದ್ಯಗಳು ದೇಶದ ಕೋಟ್ಯಂತರ ಜನರ ಮನಸ್ಸು ಗೆದ್ದವು.

ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಸೇರಿದಂತೆ ಏಷ್ಯಾದ ಹಲವು ದೇಶಗಳ ಆಟಗಾರರು ಲೀಗ್‌ನ ಕೆಲವು ತಂಡ­ಗಳಲ್ಲಿ ಆಡಿದರು. ಪಂದ್ಯದಿಂದ ಪಂದ್ಯಕ್ಕೆ ಲೀಗ್‌ನ ಫಲಿತಾಂಶ ರೋಚಕ ತಿರುವು ಪಡೆಯುತ್ತಾ ಸಾಗಿತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಂಪ್ರ­ದಾ­ಯಿಕವಾಗಿ ನಡೆಯುತ್ತಿರುವ ಕೆಲವು ಟೂರ್ನಿಗಳಲ್ಲಿ  ಆಡುತ್ತಿದ್ದ ಆಟ­ಗಾ­ರರು ಪ್ರಸಕ್ತ ಲೀಗ್‌ನಲ್ಲಿ ಹೊಸ ಅನುಭವ ಪಡೆದರು. ಲೀಗ್‌ನಲ್ಲಿ ಗೆದ್ದ ತಂಡ ಅರ್ಧ ಕೋಟಿ ರೂಪಾಯಿ ಬಹುಮಾನ ಪಡೆಯಿತು. ಇದು ದೇಶದ ಕಬಡ್ಡಿ ಇತಿಹಾಸದಲ್ಲೊಂದು ದಾಖಲೆ.

ಮುಂದಿನ ದಿನಗಳಲ್ಲಿ ಕಬಡ್ಡಿ ಇನ್ನೂ ಎತ್ತರಕ್ಕೆ ಏರುವ ಎಲ್ಲಾ ಸಾಧ್ಯತೆಗಳ ಸ್ಪಷ್ಟ ಸೂಚನೆ ಪ್ರಸಕ್ತ ಲೀಗ್‌ ಸಂದರ್ಭದಲ್ಲಿ ಸಿಕ್ಕಿದೆ. ಅಂತಿಮ ಪಂದ್ಯದ ಸಂದ­ರ್ಭದಲ್ಲಿ ರಿಲಯನ್ಸ್‌, ಮಹೀಂದ್ರ ಉದ್ಯಮ ಸಮೂಹದ ಮಾಲೀಕರೇ  ಕ್ರೀಡಾಂಗ­ಣದಲ್ಲಿ ಹಾಜರಿದ್ದರು. ಲೀಗ್‌ನ ಎಲ್ಲಾ ಪಂದ್ಯಗಳೂ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ನೇರ ಪ್ರಸಾರ ಕಂಡವು. ಪ್ರತಿ ಪಂದ್ಯದ ಪ್ರಸಾ­ರವೂ ಅಪಾರ ಸಂಖ್ಯೆಯ ವೀಕ್ಷಕರನ್ನು ಸೆಳೆದಿತ್ತು.

ಐಪಿಎಲ್‌ ಯಶಸ್ಸಿನ ನಂತರ ಅದೇ ಮಾದರಿಯಲ್ಲಿ ಬ್ಯಾಡ್ಮಿಂಟನ್‌, ಫುಟ್‌ಬಾಲ್‌ ಕ್ರೀಡೆಗಳ­ಲ್ಲಿಯೂ ಲೀಗ್‌ಗಳನ್ನು ಆರಂಭಿಸಲಾಯಿತು. ಅವುಗಳೂ ವ್ಯವಸ್ಥಿತವಾಗಿಯೇ ನಡೆದವು. ಆದರೆ ಆ ಲೀಗ್‌ಗಳಿಗಿಂತ ಕಬಡ್ಡಿ ಲೀಗ್‌ ಹೆಚ್ಚು ಯಶಸ್ಸು ಗಳಿ­ಸಿತು.  ಐಪಿಎಲ್‌ಗೆ ಪೈಪೋಟಿ ನೀಡುವಂತಹ ಜನಪ್ರಿಯತೆ ಕಬಡ್ಡಿ ಲೀಗ್‌ನಲ್ಲಿ ಕಂಡು ಬಂದಿತು ಎಂದರೆ ಅತಿಶಯೋಕ್ತಿ ಎನಿಸದು. 

ಈ ಯಶಸ್ಸು ಬಹು­ರಾಷ್ಟ್ರೀಯ ಕಂಪೆನಿಗಳ  ಗಮನ ಸೆಳೆದಿರುವುದಂತೂ ನಿಜ. ಮುಂದಿನ ದಿನ­ಗಳಲ್ಲಿ ದೇಶಿ ಉದ್ಯಮಪತಿಗಳ ಜತೆಗೆ ಬಹುರಾಷ್ಟ್ರೀಯ  ಕಂಪೆನಿಗಳೂ ಪ್ರಾಯೋ­ಜಕತ್ವ ವಹಿಸಿಕೊಳ್ಳಲು ಪೈಪೋಟಿಗೆ ಇಳಿಯಬಹುದು. ಹಾಗಾ­ದಲ್ಲಿ ಕಬಡ್ಡಿ ಈ ದೇಶದಲ್ಲಿ ಕ್ರಿಕೆಟ್‌ನಷ್ಟೇ ಜನಪ್ರಿಯತೆ ಪಡೆದುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಕಬಡ್ಡಿಯ  ರಾಜ್ಯ ಮತ್ತು ರಾಷ್ಟ್ರೀಯ ಪ್ರಾತಿನಿಧಿಕ ಸಂಸ್ಥೆಗಳು ಹೆಚ್ಚು ವೃತ್ತಿ­ಪರತೆ­ಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ.

ತಮ್ಮ ಗುಂಪುಗಾರಿಕೆ ಪ್ರವೃತ್ತಿಗೆ ಇತಿಶ್ರೀ ಹೇಳಿ ಕಾರ್ಪೊರೇಟ್‌ ಆಡಳಿತಗಾರರ ಜತೆಗೆ ಹೆಜ್ಜೆ ಇಡ­ಬೇಕಿದೆ. ಇದರಿಂದ ಆಟಗಾರರ ಆರ್ಥಿಕ ಸ್ಥಿತಿ ಕೂಡಾ ಉತ್ತಮಗೊಳ್ಳುತ್ತದೆ. ಹೀಗೆ ದೇಶದ ಕಬಡ್ಡಿ ಆಡಳಿತದಲ್ಲಿ ಆರೋಗ್ಯಕರ ವಾತಾವರಣ ಮೂಡಿದರೆ ಈ ಕ್ರೀಡೆಯ ಬೆಳವಣಿಗೆ ಹೊಸ ಎತ್ತರ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT