ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹ, ನಿರೀಕ್ಷೆಗಳಿಲ್ಲದ ಜೀವನ ನಿರರ್ಥಕ

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರ­­­ಗಳಲ್ಲಿ ಕೇವಲ ಶೇಕಡ 54ರಷ್ಟು ಮತದಾನ ಆಗಿದೆ ಎಂದು ಈ ತಿಂಗಳ 17ರ ಸಾಯಂ­ಕಾಲ ಮತದಾನ ಮುಗಿ­ಯು­­ತ್ತಿದ್ದಂತೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು. ಈ ಆಘಾತಕಾರಿ, ನಾಚಿಕೆಗೇಡಿನ ಅಂಕಿಅಂಶ ಹಲವರ ಅಚ್ಚರಿಗೆ ಕಾರಣವಾಯಿತು.

ಕೇವಲ ಅಂಕಿಅಂಶಗಳನ್ನು ನೋಡಿ ಯಾವುದೇ ತೀರ್ಮಾನಕ್ಕೆ ಬರುವುದು ಸಾಧ್ಯ­­ವಿಲ್ಲ. ಸಾಮಾಜಿಕ, ಆರ್ಥಿಕ, ಜಾತಿ­­ವಾರು ವರ್ಗಗಳಲ್ಲಿ ಶೇಕಡ 54­ರಷ್ಟು ಮತದಾನ ಆಗು­ವುದು ಸಾಮಾನ್ಯ. ದಲಿತರು, ಹಿಂದು­ಳಿದ ಸಮು­­ದಾ­ಯಗಳ ಜನ, ತುಳಿತ­ಕ್ಕೆ ಒಳ­ಗಾದವರು, ಕೊಳೆಗೇರಿ  ನಿವಾಸಿ­ಗಳು ದೊಡ್ಡ ಸಂಖ್ಯೆಯಲ್ಲಿ (ಶೇಕಡ  90­ರಷ್ಟು) ಮತದಾನದಲ್ಲಿ ಪಾಲ್ಗೊ­ಳ್ಳುವ ಕಾರಣ, ಸುಶಿಕ್ಷಿತ ಮಧ್ಯಮ ವರ್ಗದ ಜನ, ಅಂತರ್ಜಾಲಕ್ಕೆ ಆತು­ಕೊಂಡಿರುವ ಯುವ ಸಮು­ದಾಯ ಮತದಾನ ಮಾಡ­­ದಿರುವ ಸಾಧ್ಯತೆ ಹೆಚ್ಚು. ಆದರೆ ಈ ಕುರಿತ ನಿಖರ ಮಾಹಿತಿ­ಯನ್ನು ಫಲಿ­ತಾಂಶ ಬಂದ ನಂತರವೇ ಹುಡುಕಬೇಕು.

ಹಗರಣಗಳ ಕಳಂಕ ಮೆತ್ತಿಕೊಂಡಿ­ರುವ, ಕ್ರಿಮಿನಲ್ ಅಪರಾಧ ಎಸಗಿರುವ ಆರೋಪ ಹೊತ್ತಿರುವ ಕೆಟ್ಟ ರಾಜಕಾ
ರ­­ಣಿ­ಯೊಬ್ಬ ಸುಶಿಕ್ಷಿತರು, ಮಧ್ಯಮ ವರ್ಗದವರು ಮತ್ತು ಸಿನಿಕ ಯುವ ಸಮು­ದಾಯಕ್ಕಿಂತ ಹೆಚ್ಚು ಒಳ್ಳೆಯವ ಎಂಬಂತೆ ಕಾಣುತ್ತಿದೆ. ಸಿನಿಕತೆ, ಯಾವು­ದ­ರಲ್ಲೂ ನಂಬಿಕೆ ಇಲ್ಲದಿರುವುದು ಮತ್ತು ಉದಾಸೀನ ಮನೋಭಾವ ನಿಧಾನವಾಗಿ ಕೊಲ್ಲುವ ವಿಷವಿದ್ದಂತೆ.
ಮೆಟ್ರೊ ನಗರಿ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋ­ಗಿ­­ಗಳು ವಾರ ಕಳೆಯಲು ಪಕ್ಕದ ಚಿಕ್ಕ­ಮಗಳೂರು, ಕೊಡಗು ಜಿಲ್ಲೆಗಳಿಗೆ ತೆರಳಿ­ದರು. ಅವರು ಅಲ್ಲಿ ಕೈಯಲ್ಲಿ ಒಂದು ಪೆಗ್ ವಿಸ್ಕಿ ಹಿಡಿದುಕೊಂಡು ನಮ್ಮಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿರ­ಬಹುದು, ನಮ್ಮ ಮೂಲ ಸೌಕರ್ಯ ವ್ಯವಸ್ಥೆಯ ಕುಂದು ಕೊರತೆಯ ಬಗ್ಗೆ ದೂರಿಕೊಂಡಿರ ಬಹುದು, ರಾಜಕಾರಣಿ­ಗಳನ್ನು ದೂಷಿಸಿರಬಹುದು, ಝಗ­ಮಗಿ­ಸುವ ದುಬೈ, ಸಿಂಗಪುರ, ಸುಂದರ ಸ್ವಿಟ್ಜ­ರ್ಲೆಂಡ್ ಬಗ್ಗೆ ಕನಸು ಕಂಡಿರಬಹುದು.

ಬೆಂಗಳೂರು ನಗರದಲ್ಲಿ ಆಗಿರುವ ಅತಿ ಕಡಿಮೆ ಪ್ರಮಾಣದ ಮತದಾನ ಚುನಾವಣಾ ವಿಶ್ಲೇಷಕರಲ್ಲಿ ಆಶ್ಚರ್ಯ ಮೂಡಿಸಿದೆ. ದೆಹಲಿ ವಿಧಾನಸಭೆಗೆ ನಡೆದ ಚುನಾವಣೆ ವೇಳೆ ಆಮ್‌ ಆದ್ಮಿ ಪಕ್ಷ  ಬೆಂಗಳೂರಿಗರಿಂದ ಎರಡನೆಯ ಅತಿ ಹೆಚ್ಚಿನ ಪ್ರಮಾಣದ ದೇಣಿಗೆ ಪಡೆ­ದು­ಕೊಂಡಿತ್ತು ಎಂಬುದನ್ನು ನೆನಪಿ­ಡ­ಬೇಕು. ಈ ಬಾರಿಯ ಲೋಕಸಭಾ ಚುನಾ­ವಣೆಯಲ್ಲಿ ಎಲ್ಲ ಪಕ್ಷಗಳು ಬೆಂಗ­ಳೂ­ರಿನಲ್ಲಿ ತಕ್ಕಮಟ್ಟಿಗೆ ಒಳ್ಳೆಯ ಅಭ್ಯರ್ಥಿ­ಗಳನ್ನೇ ಕಣಕ್ಕೆ ಇಳಿಸಿದ್ದವು. ಅವರಲ್ಲಿ ಇನ್ಫೊಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ಅವರೂ ಇದ್ದರು. ಅಣ್ಣಾ ಹಜಾರೆ ಅವರು ಜನ ಲೋಕಪಾಲ ಮಸೂದೆಗೆ ಒತ್ತಾಯಿಸಿ ಸತ್ಯಾಗ್ರಹ ನಡೆಸಿದ ಸಂದ­ರ್ಭ­­ದಲ್ಲಿ ದೆಹಲಿ ನಂತರ ಅತಿ­ಹೆಚ್ಚಿನ ಜನಸ್ಪಂದನ ದೊರೆತಿದ್ದು ಬೆಂಗ­ಳೂ­ರಿ­ನಲ್ಲಿ. ಇದನ್ನೆಲ್ಲ ಗಮನಿಸಿ ಕಾಂಗ್ರೆಸ್ ಪಕ್ಷ ನಂದನ್ ನಿಲೇಕಣಿ ಅವ­ರಂಥ ಶುದ್ಧ­ಹ­ಸ್ತದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು.

ಹೆಸರಾಂತ ಸಾಮಾಜಿಕ ಕಾರ್ಯ­ಕರ್ತ­ ರಮೇಶ್ ರಾಮನಾಥನ್ ನೇತೃ­ತ್ವದ ಸರ್ಕಾರೇತರ ಸಂಸ್ಥೆ ‘ಜಾಗೋ ರೇ’ ಹೆಸರಿನಲ್ಲಿ ಚುನಾವಣೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಕಾರ್ಯ­ಕ್ರಮ ರೂಪಿಸಿತು. ಈ ಕಾರ್ಯಕ್ರಮ ಕಳೆದ ಬಾರಿಯ ಲೋಕಸಭಾ ಚುನಾವ­ಣೆಗೂ ಮುನ್ನವೇ ಆರಂಭವಾಗಿತ್ತು. ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ಟಿ.ವಿ. ಮೋಹನದಾಸ್ ಪೈ ಅವರಂಥ ವೃತ್ತಿಪರರ ಜೊತೆಗೂಡಿ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ–ಪ್ಯಾಕ್) ರಚಿಸಿಕೊಂಡು, ಚುನಾವಣೆಗಳಲ್ಲಿ ಜನರ ಸಹಭಾಗಿತ್ವ ಹೆಚ್ಚಿಸಲು ಶ್ರಮಿಸಿದರು.

ಆದರೆ ಈ ಪ್ರಯತ್ನಗಳು ನಿರೀಕ್ಷಿತ ಫಲ ನೀಡಲಿಲ್ಲ. ಸುಶಿಕ್ಷಿತ ಯುವ ಮತ­ದಾರರು ಮತ್ತು ಮಧ್ಯಮ ವರ್ಗದ ಜನ ಹಗಲು ಕನಸು ಕಾಣುವವರಂತೆ ವರ್ತಿಸಿ­ದರು. ದೂರದ ಪ್ರದೇಶಗಳಲ್ಲಿ ರಾತ್ರಿ ವೇಳೆ ಒಂದು ಕ್ಯಾಂಪ್ ಫೈರ್ ಸುತ್ತ ಕುಳಿತು ಹರಟೆ ಹೊಡೆಯುವ ಆಕ­ರ್ಷಣೆ, ‘ಬಾಟಲಿ’ಯ ಸೆಳೆತವನ್ನು ತಪ್ಪಿಸಿಕೊಳ್ಳಲು ಅವರಿಂದ ಆಗಲಿಲ್ಲ.

ಬೆಂಗಳೂರು ಗ್ರಾಮಾಂತರ ಲೋಕ­ಸಭಾ ಕ್ಷೇತ್ರದಲ್ಲಿ ಶೇ 72ರಷ್ಟು ಮತ­ದಾನ ಆಯಿತು. ಮತಗಟ್ಟೆ ತಲು­ಪಲು 3ರಿಂದ 4 ಕಿ.ಮೀ. ದಾರಿಯನ್ನು ಗುಡ್ಡ ಬೆಟ್ಟಗಳ ನಡುವೆ ಕ್ರಮಿಸಬೇಕಾದ ಅನಿ­ವಾರ್ಯ ಇರುವ ಚಿಕ್ಕಮಗಳೂ­ರಿ­ನಲ್ಲಿ ಶೇ 70ರಷ್ಟು ಮತದಾನ ಆಯಿತು. ರಾಜ್ಯದ ಗ್ರಾಮಾಂತರ ಪ್ರದೇ­ಶ­­ಗಳಲ್ಲಿ ಶೇಕಡ 68ರಷ್ಟು ಮತ­ದಾನ ಆಗಿದೆ. ನಮ್ಮ ಹಳ್ಳಿಗಳ ರೈತರು, ಆದಿ­ವಾ­­ಸಿಗಳು, ಕುಶಲಕರ್ಮಿಗಳು, ಕೂಲಿ ಕಾರ್ಮಿ­ಕರು ನಗರದ ಬೆಚ್ಚನೆಯ ಗೂಡಿ­ನಲ್ಲಿ ವಾಸಿಸುವ ನಮ್ಮಂಥವ­ರಿ­ಗಿಂತ ಹೆಚ್ಚಿನ ನಾಗರಿಕ ಪ್ರಜ್ಞೆ ಉಳ್ಳ­ವರು. ನಾವು ಪಡೆದ ಶಿಕ್ಷಣದಿಂದ ಏನು ಕಲಿತೆವು?

ಆಮ್ ಆದ್ಮಿ ಪಕ್ಷದ ಅಲೆ ನಮ್ಮ ನಿರಾ­­ಶಾ­ವಾದಿ ಐ.ಟಿ ಮತ್ತು ಸಾಮಾ­ಜಿಕ ಜಾಲ ತಾಣಗಳಲ್ಲಿ ಕಾಲಕಳೆಯುವ ಯುವಕರಲ್ಲಿ ಹೊಸ ಭರವಸೆ ಮೂಡಿ­ಸು­ತ್ತದೆ ಎಂದು ಎಲ್ಲರೂ ಅಂದು­ಕೊಂಡಿ­ದ್ದರು. ಇದರ ಆಧಾರದಲ್ಲಿ ಪ್ರತಿ­ಯೊಂದು ಪಕ್ಷವೂ ತನ್ನದೇ ಆದ ಚುನಾ­ವಣಾ ಲೆಕ್ಕಾಚಾರ ನಡೆಸಿತ್ತು. ಚುನಾ­ವ­ಣೆ­ಯಲ್ಲಿ ಹೆಚ್ಚಿನ ಮತದಾನ ನಡೆದು, ದೊಡ್ಡ ಪ್ರಮಾಣದ ಮತಗಳು ತನ್ನ ಕಿಸೆಗೆ ಬೀಳುತ್ತವೆ ಎಂದು ಎಎಪಿ ಅಂದಾ­ಜಿ­ಸಿ­ತ್ತು. ನರೇಂದ್ರ ಮೋದಿ ಅವರ ಚರಿಷ್ಮಾ, ಅವರ ಪರವಾದ ಅಲೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಮತದಾನ ಆಗು­ವಂತೆ ಮಾಡುತ್ತದೆ, ಆ ಮತಗಳೆಲ್ಲ ತನಗೇ ಬರುತ್ತವೆ ಎಂದು ಬಿಜೆಪಿ ಲೆಕ್ಕ­ಹಾಕಿತ್ತು. ರಾಹುಲ್ ಗಾಂಧಿ ಅವರ ‘ಯುವ ಹವಾ’ ತನಗೆ ಮತ ತಂದು­ಕೊಡು­­ತ್ತದೆ ಎಂದು ಕಾಂಗ್ರೆಸ್ ನಿರೀಕ್ಷೆ ಮಾಡಿತ್ತು. ಆದರೆ ಈ ಎಲ್ಲ ನಿರೀಕ್ಷೆಗಳು ತಲೆ ಕೆಳಗಾಗಿವೆ, ತಿರುಕ ಕಂಡ ಕನಸಿ­ನಂತೆ ಆಗಿದೆ.

ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದ ಎಎಪಿ, ಜವಾಬ್ದಾರಿಯಿಂದ ನುಣುಚಿ­ಕೊಂಡಿತು ಎಂಬ ಭಾವ ಸುಶಿಕ್ಷಿತ ಮತ­ದಾರರಲ್ಲಿ ಮೂಡಿ, ಅಪನಂಬಿಕೆ, ಸಿನಿ­ಕತೆ ಬೆಳೆಯಲು ಕಾರಣವಾಯಿತು, ಹಾಗಾಗಿ ಮತದಾನದ ಪ್ರಮಾಣ ಕಡಿಮೆ ಆಯಿತು ಎಂಬುದು ಒಂದು ವಿಶ್ಲೇಷಣೆ. ರಾಜ್ಯದಲ್ಲಿ ಮೋದಿ ಅಲೆ ಇದ್ದರೂ, ಬಿ.ಎಸ್. ಯಡಿಯೂರಪ್ಪ ಮತ್ತು ಬಳ್ಳಾರಿಯ ಬಿ. ಶ್ರೀರಾಮುಲು (ಇವರ ಆಪ್ತ, ಮಾಜಿ ಸಚಿವರೊಬ್ಬರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇನ್ನೂ ಜೈಲಲ್ಲಿದ್ದಾರೆ) ಅವರನ್ನು ಬಿಜೆಪಿಗೆ ಪುನಃ ಸೇರಿಸಿ­ಕೊಂಡಿದ್ದು, ಶುದ್ಧ ಹಸ್ತರಾದರೂ ಉದ್ಯಮ ವಿರೋಧಿ ನೀತಿ ಅನುಸರಿಸು­ತ್ತಿ­ರುವ ಸಿದ್ದರಾಮಯ್ಯ ಅವರ ನಡೆಗಳು ಜನರಲ್ಲಿ ‘ಯಾರಿಗೆ ಮತ ನೀಡಿದರೂ ಒಂದೇ’ ಎಂಬ ಭಾವನೆ ಮೂಡಲು ಕಾರಣವಾದವು. ಹಾಗಾಗಿ ಮತ ಚಲಾ­ಯಿ­ಸು­­ವುದ­ಕ್ಕಿಂತ ಸುತ್ತಾಟ ನಡೆಸಿ ಬರು­ವುದೇ ಸಮಯ ಕಳೆಯುವ ಉತ್ತಮ ಮಾರ್ಗ ಎಂದು ಜನ ಅಂದುಕೊಂಡರು.

ನಾನು ಈಗ ಆಡುವ ಮಾತು ಉಪ­ದೇಶದಂತೆ ಕಾಣಬಹುದು. ಆದರೆ, ನಮ್ಮ ದೇಶದಲ್ಲಿ ಎಷ್ಟೇ ದೋಷಗಳಿರಲಿ ನಮ್ಮ ಭವಿತವ್ಯ ಹೇಗಿರಬೇಕು ಎಂಬು­ದನ್ನು ನಿರ್ಧರಿಸುವ ಕ್ರಿಯೆಯಲ್ಲಿ ನಾವು ಪಾಳ್ಗೊಳ್ಳದಿದ್ದರೆ ನಮ್ಮ ಭವಿಷ್ಯ ಎಂದಿಗೂ ಉಜ್ವಲ ಆಗಲಾರದು. ಮತ ಚಲಾಯಿಸುವುದು ಈ ನಿಟ್ಟಿನಲ್ಲಿ ನಾವು ಇಡಬೇಕಾದ ಮೊದಲ ಹೆಜ್ಜೆ.

ತಾವು ಸಿದ್ಧಪಡಿಸುವ ತಂತ್ರಾಂಶಗಳಿಗೆ ಕೋಡ್‌ಗಳನ್ನು ಬರೆಯುವ ಜೊತೆಗೆ ಭವಿಷ್ಯವನ್ನೂ ತಾವೇ ಬರೆದು­ಕೊಳ್ಳ­ಬೇಕು ಎಂಬುದು ಐ.ಟಿ. ಉದ್ಯೋಗಿ­ಗಳಿಗೆ ತಿಳಿದಿರಬೇಕು. ಯಾರೂ ದುಬೈ, ಸಿಂಗಪುರ, ಜರ್ಮನಿಯಿಂದ ಬಂದು ನಮ್ಮ ವ್ಯವಸ್ಥೆಯನ್ನು ಶುಚಿಗೊಳಿಸು­ವು­ದಿಲ್ಲ. ನಮ್ಮ ವ್ಯವಸ್ಥೆಗೆ ನಾವೇ ವಾರಸು­ದಾರರು, ಜವಾಬ್ದಾರರು. ಉತ್ಸಾಹ, ನಿರೀಕ್ಷೆಗಳಿಲ್ಲದ ಜೀವನ ನಿರರ್ಥಕ. ಕ್ರಿಯೆಯಲ್ಲಿ ನಮ್ಮ ಸಮಯ ಸವೆಸ­ಬೇಕೇ ವಿನಾ ನಿರಾಸೆಯಲ್ಲಿ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT