ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಾರೀಕರಣಕ್ಕೆ ಲಾಭವೇ ಮುಖ್ಯ

ಮಾಜಿ ಹಣಕಾಸು ಕಾರ್ಯದರ್ಶಿ ಎಸ್‌.ಪಿ. ಶುಕ್ಲಾ ಸಂದರ್ಶನ
Last Updated 23 ಮೇ 2016, 20:17 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌.ಪಿ. ಶುಕ್ಲಾ ಅವರು ನಿವೃತ್ತ ಐಎಎಸ್‌ ಅಧಿಕಾರಿ. ವಿ.ಪಿ. ಸಿಂಗ್‌ ಪ್ರಧಾನಿಯಾಗಿದ್ದಾಗ, ದೇಶದ ಹಣಕಾಸು ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು.

ದೇಶ ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ಕಾಲವನ್ನು ಹತ್ತಿರದಿಂದ ಕಂಡವರು. ಉದಾರೀಕರಣಕ್ಕೆ ತೆರೆದುಕೊಳ್ಳಲು ಕಾರಣ ಏನು ಎಂಬ ಬಗ್ಗೆ ತಮ್ಮದೇ ಆದ ಒಳನೋಟ ಹೊಂದಿದವರು.

ಪುಣೆಯಲ್ಲಿ ನೆಲೆಸಿರುವ ಅವರು ಬೆಂಗಳೂರಿಗೆ ಬಂದಿದ್ದಾಗ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಜಾಗತೀಕರಣಕ್ಕೆ ಮೊದಲು, ಜಾಗತೀಕರಣದ ನಂತರ ದೇಶದ ಅರ್ಥವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆ ಏನು?
1991ಕ್ಕೆ ಮೊದಲಿನ ಕಾಲಘಟ್ಟದ ಬಹುತೇಕ ಸುಧಾರಣಾ ಕ್ರಮಗಳು ಸಂವಿಧಾನದ ಮೂಲ ಆಶಯಕ್ಕೆ ಹತ್ತಿರವಾಗಿದ್ದವು. ಭೂಸುಧಾರಣೆಯಂತಹ ಕ್ರಮಗಳು ದುರ್ಬಲರ ಸಬಲೀಕರಣಕ್ಕೆ ಕಾರಣವಾದವು.

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಸರ್ಕಾರಿ ಸ್ವಾಮ್ಯದ ರಂಗದ ಉದ್ದಿಮೆಗಳ ಮೂಲಕ ದೇಶದಲ್ಲಿ ಕೈಗಾರಿಕೀಕರಣಕ್ಕೆ ನಾಂದಿ ಹಾಡಿದ್ದು ಆ ಕಾಲದ ಸಾಧನೆಗಳು. ಆದರೆ, ಬಡತನ ನಿರ್ಮೂಲನೆ ಯಾವ ವೇಗದಲ್ಲಿ ಆಗಬೇಕು ಎಂದು ನಿರೀಕ್ಷಿಸಿದ್ದೆವೋ, ಅದು ಸಾಧ್ಯವಾಗಲಿಲ್ಲ.

* ಉದಾರೀಕರಣಕ್ಕೆ ದೇಶದ ಬಾಗಿಲು ತೆರೆದುಕೊಂಡಿದ್ದು ಹೇಗೆ?
1984ರ ನಂತರ ರಕ್ಷಣಾ ವೆಚ್ಚಗಳು ಹೆಚ್ಚಾದವು. ಆ ಹೊತ್ತಿನಲ್ಲಿ ರಫ್ತು ಹೆಚ್ಚಾಗಲಿಲ್ಲ. ಕೊಲ್ಲಿ ಯುದ್ಧದ ಕಾರಣ ತೈಲ ಬೆಲೆ ಹೆಚ್ಚಾಯಿತು. ಕೊಲ್ಲಿ ರಾಷ್ಟ್ರಗಳಿಗೆ ನಮ್ಮಿಂದ ಆಗುತ್ತಿದ್ದ ರಫ್ತು ಕುಸಿಯಿತು. ಇವಲ್ಲದೆ, ಇನ್ನೂ ಹಲವು ಕಾರಣಗಳಿಂದ ದೇಶದ ಆರ್ಥಿಕ ಸಂಕಷ್ಟ ಹೆಚ್ಚಿತು. 80ರ ದಶಕದ ಕೊನೆಯ ವೇಳೆಗೆ ದೇಶ ಹೊರಗಿನಿಂದ ಹಣ ತರಬೇಕಾದ ಸ್ಥಿತಿ ಬಂತು.

ಆಗ ದೇಶದ ಎದುರು ಇದ್ದಿದ್ದು ಎರಡೇ ಆಯ್ಕೆಗಳು; ಒಂದೋ, ಕಟ್ಟುನಿಟ್ಟಿನ ಮಿತವ್ಯಯ ಪಾಲಿಸಬೇಕಿತ್ತು. ಅಥವಾ, ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್‌) ಸಾಲ ಪಡೆಯಬೇಕಿತ್ತು. ಮಿತವ್ಯಯದ ಮಾರ್ಗ ತುಳಿಯಲು ಅಂದಿನ ನಾಯಕರಿಗೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ.
ಆಗ ಅವರು ಸುಲಭದ ಮಾರ್ಗ ಅನುಸರಿಸಿದರು. ಐಎಂಎಫ್‌ನಿಂದ ಸಾಲ ತಂದರು. ಭಾರತದವರು ತಮ್ಮ ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸಲಿ, ಸಾಲ ಕೊಡೋಣ ಎಂಬ ಮಾತು ಐಎಂಎಫ್‌ನಿಂದ ಬಂತು. ನಂತರದ ದಿನಗಳಲ್ಲಿ ಅಧಿಕಾರಕ್ಕೆ ಬಂದ ಪಿ.ವಿ. ನರಸಿಂಹ ರಾವ್ ಸರ್ಕಾರ ಮುಕ್ತ ಅರ್ಥ ವ್ಯವಸ್ಥೆಯನ್ನು ಅಪ್ಪಿಕೊಂಡಿತು.

* ಉದಾರೀಕರಣದಿಂದ ಬಹುಜನರಿಗೆ ಒಳಿತೇ ಆಗಿದೆಯಲ್ಲವೇ?
ಉದಾರೀಕರಣವನ್ನು ಟೀಕಿಸಬಾರದು, ಅದರಿಂದ ಜನರಿಗೆ (ವಿಶೇಷವಾಗಿ ಐ.ಟಿ. ವಲಯದಲ್ಲಿ) ಉದ್ಯೋಗ ಸಿಕ್ಕಿದೆ ಎಂಬ ಮಾತು ಇದೆ. ಅಲ್ಲಿ ಒಂದಿಷ್ಟು ಜನರಿಗೆ ಅನುಕೂಲ ಆಗಿದೆ. ಪ್ಲೇಗ್‌ನಂತಹ ಮಹಾರೋಗ ಬಂದರೂ ಇಲಿ ಸಾಯಿಸುವವರಿಗೆ ಒಂದಿಷ್ಟು ಅನುಕೂಲ ಆಗುತ್ತದೆ!

ಉದಾರೀಕರಣದ ಜಗತ್ತು ಜನರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ಮುಖ್ಯವಾಗುವುದು ಲಾಭ ಗಳಿಕೆ ಮಾತ್ರ. ಹೂಡಿದ ಬಂಡವಾಳ ತುಸು ಮಟ್ಟಿಗೆ ತಳವರ್ಗದ ಜನರಿಗೆ ತಲುಪುತ್ತದೆ ಎಂಬುದು ನಿಜ.

ಆದರೆ, ದೇಶದ ಬಹುಸಂಖ್ಯೆಯ ಜನರಿಗೆ ಇದರಿಂದ ಲಾಭ ಆಯಿತೇ, ಬಡತನದ ಪ್ರಮಾಣ ದೊಡ್ಡ ಮಟ್ಟದಲ್ಲಿ ಕಡಿಮೆಯಾಯಿತೇ, ಘನತೆಯ ಬದುಕು ಸಾಗಿಸಲು ಜನರಿಗೆ ಸಾಧ್ಯವಾಯಿತೇ ಎಂಬುದು ನಮ್ಮೆದುರಿರುವ ಪ್ರಶ್ನೆ.

* ಹಾಗಾದರೆ, ಆರ್ಥಿಕ ಉದಾರೀಕರಣವು ದೇಶದ ಕೆಳ ಮಧ್ಯಮ ವರ್ಗ ಮತ್ತು ರೈತ ಕುಟುಂಬಗಳ ಮೇಲೆ ತಂದ ಒತ್ತಡ ಯಾವ ರೀತಿಯದ್ದು?
ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಕೃಷಿಯ ಕೊಡುಗೆ ಉದಾರೀಕರಣದ ನಂತರ ಕಡಿಮೆಯಾಗುತ್ತಿದೆ. ಆದರೆ, ಕೃಷಿಯನ್ನು ನಂಬಿಕೊಂಡರ ಸಂಖ್ಯೆ ತೀರಾ ಕಡಿಮೆ ಆಗಿಲ್ಲ. ಈ ವರ್ಗದ ಜನರ ತಲಾ ಆದಾಯ ಕಡಿಮೆಯಾಗಿದೆ.

ಜಾಗತೀಕರಣದ ನಂತರ ಜಮೀನಿನ ಬೆಲೆ ಹೆಚ್ಚಿತು. ದೊಡ್ಡ ನಗರಗಳ ಸುತ್ತಲಿನ ಪ್ರದೇಶಗಳ ರೈತರು ಜಮೀನು ಮಾರಲು ಆರಂಭಿಸಿದರು. ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಇದು ನೇರ ಪರಿಣಾಮ ಬೀರಿದೆ. ಸಣ್ಣ ರೈತ ವರ್ಷಪೂರ್ತಿ ದುಡಿದೂ, ಕೊನೆಯಲ್ಲಿ ನಷ್ಟ ಅನುಭವಿಸುತ್ತಾನೆ. ಮಾರುಕಟ್ಟೆ ಅಸ್ಥಿರತೆ, ಉತ್ಪಾದನಾ ವೆಚ್ಚದ ಹೆಚ್ಚಳದಿಂದ ದೊಡ್ಡ ರೈತರೂ ನಷ್ಟ ಅನುಭವಿಸಿದರು.

ಇದು ರೈತರ ಆತ್ಮಹತ್ಯೆ ಸರಣಿ ಆರಂಭವಾಗಲು ಕಾರಣವಾಯಿತು. ಬ್ರಿಟಿಷರ ಆಡಳಿತ ಇದ್ದಾಗಲೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ.

* ಡಾ. ಮನಮೋಹನ್ ಸಿಂಗ್‌ ಕಾಲದ ಆರ್ಥಿಕ ನೀತಿಗಳಿಗೂ, ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳಿಗೂ ಇರುವ ವ್ಯತ್ಯಾಸ ಏನು?
ಇಬ್ಬರ ನೀತಿಗಳೂ ಒಂದೇ ಆಗಿವೆ. ಬಿಜೆಪಿಯವರು ತಮ್ಮ ಅಜೆಂಡಾವನ್ನೇ ಕದ್ದಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಹಿಂದೆ, ಕಾಂಗ್ರೆಸ್ ಸರ್ಕಾರ ಅರ್ಥ ವ್ಯವಸ್ಥೆಯನ್ನು ಮುಕ್ತಗೊಳಿಸಿದಾಗ ಬಿಜೆಪಿಯವರು, ‘ನಾವು ಮಾಡಬೇಕೆಂದಿದ್ದನ್ನು ನೀವು ಮಾಡಿದಿರಿ’ ಎಂದು ಹೇಳಿದ್ದರು. ಏನಾದರೊಂದು ಫಲಿತಾಂಶ ಸಿಗುತ್ತದೆ ಎಂಬ ನಂಬಿಕೆಯಿಂದ ನಾವು ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುತ್ತಿದ್ದೇವೆ.

* ಮಧ್ಯಮ ವರ್ಗದ ಜನ ಮೋದಿ ಅವರ ಮತ ಬ್ಯಾಂಕ್‌ ಎಂಬ ವಾದ ಇದೆ. ಮೋದಿಯವರು ಕೈಗೊಳ್ಳುವ ಆರ್ಥಿಕ ನಿರ್ಣಯಗಳು ಈ ವರ್ಗಕ್ಕೆ, ರೈತರಿಗೆ ಯಾವ ಪ್ರಯೋಜನ ತರಲಿವೆ?
ಸರ್ಕಾರ ಬೆಳೆ ವಿಮೆ ಜಾರಿಗೆ ತಂದಿದೆ. ಎರಡು, ಮೂರು ವರ್ಷಗಳಿಂದ ಮಳೆ ಸರಿಯಾಗಿ ಆಗುತ್ತಿಲ್ಲ. ಬಹುಪಾಲು ಬೆಳೆ ಹಾಳಾಗುತ್ತಿದೆ. ಈಗ, ಬೆಳೆ ವಿಮೆ ಮಾಡಿಸಿದವರಲ್ಲಿ ಶೇಕಡ 90ರಷ್ಟು ಜನರ ಬೆಳೆ ನಾಶವಾದರೆ ಪರಿಹಾರ ಮೊತ್ತ ಯಾರಿಗೆ ದಕ್ಕುತ್ತದೆ? ಯಾರಿಗೂ ಇಲ್ಲ. ವಿಮೆ ಕಂಪೆನಿಗಳು ದಿವಾಳಿ
ಯಾಗುತ್ತವೆ. ಬೆಳೆ ವಿಮೆ ರೈತರ ಸಮಸ್ಯೆಗೆ ಉತ್ತರವಲ್ಲ. 1991ರ ನವ ಉದಾರೀಕರಣ ನೀತಿಯನ್ನು ಕೈಬಿಡುವುದೇ ರೈತರ ಸಮಸ್ಯೆಗೆ ಉತ್ತರ.
ರೈತರ ಹೆಸರಲ್ಲಿ ಖಾತೆ ತೆರಯುವುದರಿಂದ, ಹಣವನ್ನು ಖಾತೆಗೆ ವರ್ಗಾವಣೆ ಮಾಡುವುದರಿಂದ ರೈತರ ಸಮಸ್ಯೆ ಬಗೆಹರಿಯದು. ದೊಡ್ಡ ಪ್ರಮಾಣ
ದಲ್ಲಿ ಉದ್ಯೋಗ ಸೃಷ್ಟಿಸುವ ಭರವಸೆ ಬಿಜೆಪಿಯಿಂದ ಬಂದಿತ್ತು. ಹೊಸ ಸರ್ಕಾರ ಬಂದರೆ ಉದ್ಯೋಗ ಸೃಷ್ಟಿಯಾಗಬಹುದು ಎಂದು ಜನ ಭಾವಿಸಿದರು. ಆದರೆ, 2010–11ಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿ ಪ್ರಮಾಣ 2014–15ರಲ್ಲಿ ಒಂಬತ್ತು ಪಟ್ಟು ಕಡಿಮೆಯಾಗಿದೆ. ಜನರಲ್ಲಿ ಭ್ರಮನಿರಸನ ಹೆಚ್ಚುತ್ತಿದೆ.

* ದೇಶದ ಬಹುಸಂಖ್ಯಾತರಾದ ರೈತ, ಕೆಳವರ್ಗ ಮತ್ತು ಮಧ್ಯಮ ವರ್ಗಕ್ಕೆ ಒಳಿತು ಮಾಡುವ ಮಾರ್ಗ ಯಾವುದು?
ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ವರ್ಗಾವಣೆ ಮಾಡುವುದರ ಮೇಲೆ ಹಿಡಿತ ಇರಬೇಕು. ವೈಜ್ಞಾನಿಕವಾದ, ಜನಪರವಾದ ಭೂಬಳಕೆ ನೀತಿ ಬೇಕು. 2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರು, ಹೆಚ್ಚು ಹಿಡುವಳಿ ಹೊಂದಿರುವವರ ಜಮೀನನ್ನು ಸಹಕಾರ ತತ್ವದ ಅಡಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಯುವಕರ ಪಾಲಿಗೆ ಉದ್ಯೋಗ ಎಂಬುದು ಮೂಲಭೂತ ಹಕ್ಕಾಗಬೇಕು.

**********
ಆರ್ಥಿಕ ಉದಾರೀಕರಣದಿಂದ ಐ.ಟಿ ಕ್ಷೇತ್ರದಲ್ಲಿ ಕೆಲವರಿಗೆ ಅನುಕೂಲ ಆಗಿದೆ. ಪ್ಲೇಗ್‌ನಂತಹ ಮಹಾರೋಗ ಬಂದರೂ ಇಲಿ ಸಾಯಿಸುವವರಿಗೆ ಒಂದಿಷ್ಟು ಅನುಕೂಲ ಆಗುತ್ತದೆ!
-
ಎಸ್‌.ಪಿ. ಶುಕ್ಲಾ, ಮಾಜಿ ಹಣಕಾಸು ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT