ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆ ಆದರೂ ಮಳಿಗೆ ಹಂಚಿಕೆ ವಿಳಂಬ

Last Updated 15 ಸೆಪ್ಟೆಂಬರ್ 2014, 8:51 IST
ಅಕ್ಷರ ಗಾತ್ರ

ಬೀದರ್: ಹಲವು ತಿಂಗಳಿಂದ ನನೆಗುದಿಗೆ ಬಿದ್ದಿದ್ದ, ಗಣೇಶನ ಹಬ್ಬದ ದಿನ ಉದ್ಘಾಟನೆ­ಗೊಂಡ ನಗರದ ಹಳ್ಳದಕೇರಿಯಲ್ಲಿರುವ ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ಈಗ ಮಳಿಗೆ ಹಂಚಿಕೆ ಪ್ರಕ್ರಿಯೆ ನನೆಗುದಿಯಲ್ಲಿದೆ. ಪ್ರಾಂಗಣ ಉದ್ಘಾಟನೆಗೊಂಡರೂ ಇನ್ನೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯೇ ಆರಂಭವಾಗಿಲ್ಲ.

ಪ್ರಸ್ತುತ ನಗರದ ಕೇಂದ್ರ ಭಾಗದಲ್ಲಿರುವ ತರಕಾರಿ ಮತ್ತು ಹಣ್ಣು ಸಗಟು ವ್ಯಾಪಾರ ಚಟುವಟಿಕೆಗಳನ್ನು ಹೈದರಾಬಾದ್ ರಸ್ತೆಯ ಈ ನೂತನ ಮಳಿಗೆಗಳ ಸಂಕೀರ್ಣಕ್ಕೆ ಸ್ಥಳಾಂತರ ಮಾಡುವುದರಿಂದ ಆ ಭಾಗದ ಅಭಿವೃದ್ಧಿಗೂ ಒತ್ತು ಸಿಗಲಿದೆ ಎಂಬುದು ಈಗಿನ ನಿರೀಕ್ಷೆ.
ಆದರೆ, ಈಗ ಇದರ ಜೊತೆಗೆ ಅದ್ದೂರಿಯಾಗಿ ಉದ್ಘಾಟನೆಯಾದ ಬಳಿಕ ನಂತರದ ಪ್ರಕ್ರಿಯೆಗಳು ಜರುಗಲಿವೆ ತ್ವರಿತಗತಿಯಲ್ಲಿ ಎಂಬ ನಿರೀಕ್ಷೆಯು ಹುಸಿಯಾಗಿದೆ. ಖಾಲಿ ಮಳಿಗೆಗಳು, ಕಾವಲು ರಹಿತವಾಗಿ ಅನಾಥವಾಗಿರುವ ಸಂಕೀರ್ಣ, ಆವರಣದಲ್ಲಿ ಅಭಿವೃದ್ಧಿ ಕಾಣಬೇಕಾಗಿರುವ ರಸ್ತೆಗಳ ಕಾಮಗಾರಿ.

ಮಳಿಗೆಗಳ ಆವರಣಕ್ಕೆ ಈಗ ಹೋದರೆ ಕಾಣಸಿಗುವ ಚಿತ್ರಣ ಇದು. ಈ ಕುರಿತು, ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ ಅಧ್ಯಕ್ಷ  ವೀರೇಂದ್ರ ಪಾಟೀಲ್ ಗುನ್ನಳ್ಳಿ ಅವರನ್ನು ಸಂಪರ್ಕಿಸಿದರೆ, ‘ಎಪಿಎಂಸಿ ಹಿರಿಯ ಅಧಿಕಾರಿಗಳ ಅಲಭ್ಯತೆಯಿಂದ ವಿಳಂಬವಾಗಿದೆ’ ಎನ್ನುತ್ತಾರೆ.

‘ಮಳಿಗೆ ಹಂಚಿಕೆಗಾಗಿ ಇನ್ನು ಅರ್ಜಿಯನ್ನು ಆಹ್ವಾನಿಸಿಲ್ಲ. ಈ ಪ್ರಕ್ರಿಯೆ ಆರಂಭಿಸಲು ಅನುಮೋದನೆ ಪಡೆಯಬೇಕಿದ್ದು, ಅದನ್ನು ಸಿದ್ಧಪಡಿಸಲಾಗಿದೆ. ಒಂದೆರಡು ದಿನದಲ್ಲಿ ಕಳುಹಿಸಲಿದ್ದು, ಸಮ್ಮತಿ ದೊರೆತ ಕೂಡಲೇ ಟೆಂಡರ್‌ ಆಹ್ವಾನಿಸಲಾಗುವುದು’ ಎನ್ನುತ್ತಾರೆ.
ಮೊದಲಿನ ಯೋಜನೆಯಂತೆ ಉದ್ಘಾಟನೆ ಜೊತೆಗೆ ಈ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶವಿತ್ತು. ಆದರೆ, ನಿರ್ದೇಶಕರ ಅಲಭ್ಯತೆ, ರಜೆ ಇತ್ಯಾದಿ ಕಾರಣಗಳಿಂದ ಆಗಿಲ್ಲ. ಬಹುತೇಕ ಇನ್ನು ಒಂದು ತಿಂಗಳಲ್ಲಿ ಮಳಿಗೆ ಹಂಚಿಕೆ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಪ್ರತಿಕ್ರಿಯಿಸಿದರು.

ಈಗಾಗಲೇ ಪ್ರಕಟಿಸಿರುವಂತೆ ಇಲ್ಲಿ ಒಟ್ಟು 38 ಮಳಿಗೆಗಳಿದ್ದು, ಈ ಪೈಕಿ ಹಾಪ್‌ಕಾಮ್ಸ್‌ಗೆ ನೀಡುವ ಒಂದು ಮಳಿಗೆ ಸೇರಿದಂತೆ 8 ಮಳಿಗೆಗಳು ಹಣ್ಣುಗಳ ಮಾರಾಟ ಮತ್ತು ಉಳಿದ 30 ಮಳಿಗೆಗಳು ತರಕಾರಿಗಳ ಮಾರಾಟಕ್ಕೆ ನಿಗದಿ ಪಡಿಸಲಾಗಿದೆ.
ಅಲ್ಲದೆ, ಈ ಆವರಣದಲ್ಲಿ ವಾಹನಗಳ ನಿಲುಗಡೆ ಸ್ಥಳ, ಆಡಳಿತ ಮಂಡಳಿ ಕಚೇರಿ, ಸಿಮೆಂಟ್ ಕಾಂಕ್ರಿಟ್‌ ರಸ್ತೆ, ಕ್ಯಾಂಟಿನ್ ಮತ್ತಿತರ ಸೌಕರ್ಯಗಳನ್ನು ಒದಗಿಸಲಾಗಿದೆ. ಸುಮಾರು ರೂ. 4 ಕೋಟಿ ವೆಚ್ಚದಲ್ಲಿ ಎಂಪಿಎಂಸಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣವಾಗಿದ್ದು, ರಸ್ತೆ ಅಭಿವೃದ್ಧಿ ಸೇರಿ ಕೆಲಕೆಲಸಗಳುಬಾಕಿ ಉಳಿದಿವೆ.

ಹಾಲಿ ವಹಿವಾಟಿನಲ್ಲಿ ತೊಡಗಿರುವ ಹಿರಿಯ ವ್ಯಾಪಾರಿಗಳಿಗೆ ಆದ್ಯತೆ ನೀಡಲಾಗುವುದು. ಆದರೆ, ನಿಯಮಾನುಸಾರ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ಆಗಲಿದೆ. ಕೆಲ ವ್ಯಾಪಾರಿಗಳು ಈಗಾಗಲೇ ತಮ್ಮನ್ನು ಸಂಪರ್ಕಿಸಿದ್ದು, ವಹಿವಾಟು ಸ್ಥಳಾಂತರಿಸಲು ಉತ್ಸುಕತೆ ತೋರಿದ್ದಾರೆ ಎಂದರು.

ಶೀಥಲಿಕರಣ ಸೌಲಭ್ಯ, ಬಾಕಿ ಉಳಿದಿರುವ ಕಾಮಗಾರಿ ನಡೆಸುವ ಜೊತೆಗೆ, ಈಗ ಆಗಿರುವ ನಿರ್ಮಾಣದ ಸುಸ್ಥಿತಿ ಉಳಿಸಿಕೊಳ್ಳಲು ಆದಷ್ಟು ಶೀಘ್ರ ಮಳಿಗೆ ಹಂಚಿಕೆ ಪ್ರಕ್ರಿಯೆ, ಸ್ಥಳಾಂತರಕ್ಕೆ ಒತ್ತು ನೀಡಬೇಕಾಗಿದೆ. ಇಲ್ಲವಾದಲ್ಲಿ, ವಿನಿಯೋಗಿಸಿದ ಮೊತ್ತ ಪೋಲಾಗುವ ಸಾಧ್ಯತೆಯೂ ಇದೆ. ಈಗಾಗಲೇ ಮಳಿಗೆಗಳಿಗೆ ಅಳವಡಿಸಿರುವ ವಿದ್ಯುತ್ ಮೀಟರ್‌ಗಳ ಬಾಗಿಲು ತೆರೆದು ಕೊಂಡಂತೆ ಇದ್ದು, ಪಾರದರ್ಶಕ ಕವರ್‌ಗಳು ಕಳೆದು ಬೀಳುವಂತಿವೆ. ಕಾವಲುಗಾರರು ಇಲ್ಲದ ಕಾರಣ ಯಾರೂ ಪ್ರವೇಶಿಸಬಹುದು ಎಂಬ ಸ್ಥಿತಿ ಇದೆ. ಎಪಿಎಂಸಿ ಆಡಳಿತ ಮಂಡಳಿ ಈ ಅಂಶಗಳನ್ನು ಗಮನಿಸಬೇಕಾಗಿದೆ.

‘ಶೀಘ್ರವೇ ಹಂಚಿಕೆ ಪ್ರಕ್ರಿಯೆಗೆ ಚಾಲನೆ’
‘ಮಳಿಗೆ ಹಂಚಿಕೆಗೆ ಇನ್ನು ಟೆಂಡರ್‌ ಪ್ರಕ್ರಿಯೆ ಆರಂಭಿಸಿಲ್ಲ. ಇದಕ್ಕಾಗಿ ಎಂಪಿಎಂಸಿ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯಬೇಕಿದ್ದು, ಪ್ರಸ್ತಾಪ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಬಹುಶಃ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣವಾಗಬಹುದು’
–ವೀರೇಂದ್ರ ಪಾಟೀಲ್ ಗುನ್ನಳ್ಳಿ,
ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT