ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಕ್ಕೆ ದಾರಿ ತೋರಿದ ಫ್ಯಾಕ್ಟರಿ ಸೇಫ್ಟಿ ಶೂ

ನಾನೂ ಉದ್ಯಮಿ
Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸಾಧಿಸುವ ಛಲವಿದ್ದರೆ, ಬದುಕಿನಲ್ಲಿ ಏನನ್ನೇ ಆದರೂ ಸಾಧಿಸಬಹುದು ಎಂಬುದಕ್ಕೆ ಸಾಕಷ್ಟು ಸಾಧಕರ ಉದಾಹರಣೆಗಳು ನಮ್ಮ ಮುಂದಿವೆ. ಇಲ್ಲಿ ಬಂಡವಾಳ, ಅರ್ಹತೆ, ಜಾತಿ, ಅಂತಸ್ತಿಗಿಂತ, ವ್ಯಕ್ತಿಯ ಬದ್ಧತೆ, ಕಠಿಣ ಪರಿಸ್ಥಿತಿ ಯಲ್ಲಿಯೂ ಎದೆಗೊಟ್ಟು ನಿಲ್ಲುವ ಛಾತಿ, ಜವಾಬ್ದಾರಿ ಹೊತ್ತುಕೊಂಡು ತಂಡವನ್ನು ಯಶಸ್ವಿಯಾಗಿ ಮುನ್ನ ಡೆಸುವ ಶಕ್ತಿ, ಬಹುಮುಖ್ಯವಾಗಿ ಅನಿವಾರ್ಯ ಸಂದರ್ಭಗಳಲ್ಲಿ ಕಠಿಣ ಸವಾಲುಗಳನ್ನು ಸಮರ್ಥ ವಾಗಿ ಎದುರಿಸುವುದು, ಏಕಾಂಗಿಯಾಗಿಯಾದರೂ ದುಡಿಯಲು ಸಜ್ಜಾಗಿರುವುದೂ ಮುಖ್ಯವಾಗುತ್ತದೆ. ಇಂತಹ ಪರಿಶ್ರಮಿಗಳ ಸಾಲಿಗೆ ಹುಬ್ಬಳ್ಳಿಯ ಮಂಜುನಾಥ ಯಮನಪ್ಪ ತೇರದಾಳ ಸಹ ಸೇರುತ್ತಾರೆ.

ಎಸ್ಎಸ್‌ಎಲ್‌ಸಿ ಮಾತ್ರ ಕಲಿತಿರುವ ಮಂಜುನಾಥ‌, 2000ದಲ್ಲಿ ತೊಗಲು ಉತ್ಪನ್ನಗಳ ಉದ್ಯಮ ಆರಂಭಿಸಿದ್ದಾರೆ. ₨50 ಸಾವಿರ ಮೂಲ ಬಂಡವಾಳದೊಂದಿಗೆ ತಮ್ಮದೇ ಆದ ಉದ್ಯಮ ಸಂಸ್ಥೆ ಆರಂಭಿಸಿದ ಅವರು ಇಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ವಿಶೇಷವಾಗಿ ಕಾರ್ಖಾನೆ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಅಗತ್ಯವಾಗಿ ಬೇಕಾಗುವ, ಗಟ್ಟಿಯಾದ, ಪಾದಗಳಿಗೆ ಸುರಕ್ಷತೆ ಒದಗಿಸುವ ಶೂಗಳನ್ನು (ಇಂಡಸ್ಟ್ರಿಯಲ್‌ ಸೇಫ್ಟಿ ಶೂ) ತಯಾರಿಸಿಕೊಡುವುದರೊಂದಿಗೆ ಈ ಯುವಕ ತೊಗಲು ಉತ್ಪನ್ನಗಳ ಉದ್ಯಮಕ್ಕೆ ಕಾಲಿರಿಸಿದ್ದಾರೆ.

ಕಾರ್ಖಾನೆಗಳು ಇರುವ ಕಡೆಯೆಲ್ಲಾ ರಕ್ಷಣಾ ಶೂಗಳಿಗೆ ಬೇಡಿಕೆಯಿದೆ. ಜೊತೆಗೆ ತೊಗಲಿನ ಚಪ್ಪಲಿ, ಬೂಟು, ಸೊಂಟದ ಬೆಲ್ಟ್ ಹಾಗೂ ಮದುಮೇಹ  ರೋಗಿಗಳು, ಅಂಗವಿಕಲರು, ಕಾಲಿಗೆ ಗಾಯ, ಆಣಿ (ಕಲ್ಲೊತ್ತು) ಆದವರಿಗೂ  ಈ ಯುವ ಉದ್ಯಮಿ ವಿಶೇಷ ರೀತಿಯಲ್ಲಿ ಪಾದರಕ್ಷೆಗಳನ್ನು ತಯಾರಿಸಿ ಕೊಡುತ್ತಾರೆ.

ತಮ್ಮ ಅಳತೆಯ ಚಪ್ಪಲಿ ಮತ್ತು ಶೂಗಳು ಮಾರು ಕಟ್ಟೆಯಲ್ಲಿ ಸಿಗುತ್ತಿಲ್ಲ ಎನ್ನುವವರೂ ಮಂಜುನಾಥ‌ ಅವರ ಸಂಸ್ಥೆಯನ್ನು ಹುಡುಕಿಕೊಂಡು ಬರುತ್ತಾರೆ. ಪುರುಷರ ಬೂಟು ಮತ್ತು ಚಪ್ಪಲಿಗಳನ್ನು ಮಾತ್ರ ತಯಾರಿಸುವ ಮಂಜುನಾಥ‌ ಅವರಿಗೆ, ಮದುವೆ ಸಮಾರಂಭಕ್ಕೆ ವಿಶೇಷ ವಿನ್ಯಾಸದ ಚಪ್ಪಲಿ ಮತ್ತು ಶೂಗಳನ್ನು ತಯಾರಿಸಿಕೊಡುವಂತೆಯೂ ಬೇಡಿಕೆ ಬರುತ್ತವೆ.

‘ಅದೆಷ್ಟೋ ಮಾರಾಟ ಮಳಿಗೆಗಳವರು ಮಹಿಳೆ ಯರ ಮತ್ತು ಮಕ್ಕಳ ಚಪ್ಪಲಿಗಳನ್ನು ತಯಾರಿಸಿಕೊಡು ವಂತೆ ಕೇಳುತ್ತಲೇ ಇರುತ್ತಾರೆ. ಆದರೆ ಅದೇಕೋ ಆ ಕಡೆಗೆ ಇನ್ನೂ ಗಮನ ಹರಿಸಲಾಗಿಲ್ಲ. ನುರಿತ ಕೆಲಸ ಗಾರರು ಸಿಗುತ್ತಿಲ್ಲ ಎಂಬುದೂ ಒಂದು ಕಾರಣ’ ಎನ್ನುತ್ತಾರೆ ಮಂಜುನಾಥ‌.

30 ಜನಕ್ಕೊಬ್ಬ ಮಂಜುನಾಥ
ಪಿಯುಸಿ ನಪಾಸಾದ ಮಂಜುನಾಥ, ಡಬ್ಬಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಮನೆಯಲ್ಲಿ ದ್ದರು. ಕರ್ನಾಟಕ ಚರ್ಮ ತಂತ್ರಜ್ಞಾನ ಸಂಸ್ಥೆ (ಕೆಐ ಎಲ್‌ಟಿ–ಕಿಲ್ಟ್‌), ಫುಟ್‌ವೇರ್‌ ವಿನ್ಯಾಸ, ಅಭಿವೃದ್ಧಿ ಸಂಸ್ಥೆಯಡಿ  (ಎಫ್‌ಡಿಡಿಐ) ನಿರುದ್ಯೋಗಿ ಬಡ ಯುವಕರಿಗೆ ಉಚಿತವಾಗಿ ತರಬೇತಿ ನೀಡುವ ಕುರಿತು 1999ರಲ್ಲಿ ಪತ್ರಿಕೆಯಲ್ಲಿ ಜಾಹೀರಾತು ನೀಡಿತ್ತು. ಬೆಂಗಳೂರಿನ ಕಾಡುಗೊಂಡನಹಳ್ಳಿಯಲ್ಲಿ ನಡೆದ ಆರು ತಿಂಗಳ ತರಬೇತಿ ಶಿಬಿರದಲ್ಲಿ ಸ್ಟೈಫಂಡ್‌ ಪಡೆದು ತರಬೇತಿ ಪೂರ್ಣಗೊಳಿಸಿದರು ಮಂಜುನಾಥ‌.

ಆಗ 18 ವರ್ಷದ ಚಿಗುರು ಮೀಸೆಯ ಹುಡುಗನಾ ಗಿದ್ದ ಮಂಜು, ಲೆದರ್‌ ಶೂ ತಯಾರಿಸುವುದನ್ನು ಕರಗತ ಮಾಡಿಕೊಂಡರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ 30 ಮಂದಿಯೂ ಇವರೊಂದಿಗೇ ತರಬೇತಿ ಪಡೆದರು. ಆದರೆ ಅವರು ಯಾರೂ ಈಗ ಈ ಕ್ಷೇತ್ರ ದಲ್ಲಿ ತೊಡಗಿಸಿಕೊಂಡಿಲ್ಲ. ತರಬೇತಿ ಪೂರ್ಣಗೊಂಡ ನಂತರ ಹುಬ್ಬಳ್ಳಿಗೆ ಬಂದು ಲಿಡ್ಕರ್‌ ಸಂಸ್ಥೆ ಆಯೋಜಿ ಸಿದ್ದ ತರಬೇತಿ ಶಿಬಿರದಲ್ಲಿ 30 ಮಂದಿಗೆ ಲೆದರ್‌ ಶೂ ತಯಾರಿಸುವುದನ್ನು ಮಂಜುನಾಥ‌ ಅವರೇ ಮುಂದೆ ನಿಂತು ಕಲಿಸಿ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಆಗತಾನೇ ಕಾರ್ಖಾನೆಗಳು ಸ್ಥಾಪನೆ ಯಾಗುತ್ತಿದ್ದವು. ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣಾ ಶೂಗಳ ಅವಶ್ಯಕತೆ ಇತ್ತು. ಇದನ್ನು ಅರಿತ ಮಂಜುನಾಥ‌ ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ‘ರೇಣುಕಾ ಲೆದರ್‌ ವರ್ಕ್ಸ್‌’ ಎಂಬ ಸಂಸ್ಥೆ ಆರಂಭಿ ಸಿದರು. 2000–2008ರವರೆಗೆ ಹುಬ್ಬಳ್ಳಿಯಲ್ಲಿ ಕೈಗಾ ರಿಕಾ ಕ್ಷೇತ್ರ ಹಿನ್ನಡೆ ಅನುಭವಿಸಿದ ಕಾರಣ ಎರಡು ವರ್ಷಗಳ ಕಾಲ ಅನಿವಾರ್ಯವಾಗಿ ಮಂಜುನಾಥ‌ ತಮ್ಮ ಸಂಸ್ಥೆಯನ್ನು ಸ್ಥಗಿತಗೊಳಿಸಿದ್ದರು. ‘ಆನಂತರದಲ್ಲಿ ಮತ್ತೆ ಬೇಡಿಕೆ ಬರಲಾರಂಭಿಸಿತು. ಹಾಗಾಗಿ ನನ್ನ ಪ್ರೀತಿಯ ಲೆದರ್‌ ಉದ್ಯಮ ಮುಂದುವ ರಿಸಿಕೊಂಡು ಹೋಗಲು ಸಾಧ್ಯವಾಗಿದೆ’ ಎನ್ನುತ್ತಾ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಮಂಜು.

4000 ಜೊತೆ ಶೂಗಳಿಗೆ ಜೀವ
ಮಹಾರಾಷ್ಟ್ರ ಮತ್ತು ಗೋವಾ, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದಾದ್ಯಂತ ಹಲವು ಕಾರ್ಖಾನೆಗಳಿಗೆ ರೇಣುಕಾ ಲೆದರ್‌ ವರ್ಕ್ಸ್‌ ವರ್ಷಕ್ಕೆ 4000 ಜೊತೆಗೂ ಹೆಚ್ಚು ಕಾರ್ಮಿಕರ ಪಾದ ರಕ್ಷಣೆಯ ಬೂಟುಗಳನ್ನು ತಯಾರಿಸಿ ಕೊಡುತ್ತದೆ. ಫ್ಯಾನ್ಸಿ ಶೂ ಮತ್ತು ಚಪ್ಪಲಿಗಳು ಸೇರಿದರೆ ಈ ಸಂಸ್ಥೆ ತಯಾರಿ ಸುವ ಪಾದರಕ್ಷೆಗಳ ಸಂಖ್ಯೆಯೇ 10 ಸಾವಿರ ದಾಟುತ್ತದೆ.

₨800ರಿಂದ ₨1000ಕ್ಕೂ ಹೆಚ್ಚು ಬೆಲೆಯ ಗುಣಮಟ್ಟದ ರಕ್ಷಣಾ ಶೂಗಳು ಸಾಕಷ್ಟು ಕಡೆ ಸಿಗುವುದಿಲ್ಲ ಎಂಬುದು ಕಾರ್ಖಾನೆಗಳ ಮಾಲೀಕರ ದೂರು. ವಿವಿಧ ಕಂಪೆನಿಗಳು ಸಾಕಷ್ಟು ಬಾರಿ ಮಧ್ಯವರ್ತಿಗಳ ಮೂಲಕವೂ ರೇಣುಕಾ ಲೆದರ್‌ ವರ್ಕ್ಸ್‌ನ ಶೂಗಳನ್ನು ಖರೀದಿಸುತ್ತವೆ. ಸದ್ಯ ಇಬ್ಬರು ಕೆಲಸಗಾರರು ಮಾತ್ರವೇ ಮಂಜುನಾಥ‌ ಜೊತೆಗೆ ದುಡಿ ಯುತ್ತಿದ್ದಾರೆ. ಅಸ್ಸಾಂ, ಬಿಹಾರದಿಂದ ಬಂದ ಹುಡುಗರು ಎರಡು ಮೂರು–ತಿಂಗಳು ದುಡಿದು ಕಾಲ್ಕಿತ್ತಿದ್ದಾರೆ.

‘ಬೆಳಿಗ್ಗೆ 9 ಗಂಟೆಗೆ ಕೆಲಸ ಆರಂಭಿಸಿದರೆ ರಾತ್ರಿ 8 ಗಂಟೆಯವರೆಗೆ 20 ಜೊತೆ ಶೂಗಳನ್ನು ತಯಾರಿಸುತ್ತೇನೆ. ಕೆಲಸಗಾರರು ಒಂದು ದಿನ ಬಂದರೆ ಮತ್ತೆ ಮೂರು ದಿನಕ್ಕೆ ಕೆಲಸಕ್ಕೆ ಬರುವುದಿಲ್ಲ. ನುರಿತ ಕೆಲಸಗಾರರು ಸಿಗುತ್ತಿಲ್ಲ. ಇದರಿಂದ ಸಾಕಷ್ಟು ಕಂಪೆನಿಗಳಿಗೆ ನಿಗದಿತ ಸಮಯದಲ್ಲಿ ಶೂಗಳನ್ನು ತಯಾರಿಸಿಕೊಡಲಾಗುತ್ತಿಲ್ಲ. ಇದರಿಂದ ದೊಡ್ಡ ಆರ್ಡರ್‌ಗಳು ಕೈ ತಪ್ಪುತ್ತಿವೆ. ಗ್ರಾಹಕರಿಗೆ ಸುಳ್ಳು ಹೇಳಿ ವ್ಯವಹಾರ ಗಿಟ್ಟಿಸುವ ಅನಿವಾರ್ಯತೆ ನನಗಿಲ್ಲ.

ಕೆಲಸದಲ್ಲಿ ಆಸಕ್ತಿ ಇರುವ ನಿರುದ್ಯೋಗಿಗಳು ಮುಂದೆ ಬಂದರೆ ಅವರಿಗೆ ಉದ್ಯೋಗ ಕಲಿಸಿಕೊಡುತ್ತೇನೆ. ಕೆಲಸ ಕಲಿತು ಅವರೂ ಉದ್ಯಮ ಆರಂಭಿಸಬಹುದು. ಗುಣಮಟ್ಟದ ಕೆಲಸಕ್ಕೆ ಎಂದೆಂದಿಗೂ ಬೇಡಿಕೆಯಿದೆ. ಯುವಕರು ಪ್ರತಿಷ್ಠೆ, ಕೀಳರಿಮೆ ಬಿಟ್ಟು ಬೇಡಿಕೆಯಿರುವ ಕೆಲಸಗಳನ್ನು ಮಾಡಬೇಕು’ ಎಂದು ಹೇಳುತ್ತಾರೆ ಮಂಜುನಾಥ.

ಹೆಚ್ಚಿದೆ ಬೇಡಿಕೆ
ಪರಿಚಯಸ್ಥರು, ಅಕ್ಕಪಕ್ಕದವರಿಂದಲೇ ಪ್ರತಿನಿತ್ಯ ಸಾಕಷ್ಟು ಶೂ ಮತ್ತು ಚಪ್ಪಲಿಗಳ ಮಾರಾಟ ಫ್ಯಾಕ್ಟರಿಯಲ್ಲೇ ಆಗುತ್ತದೆ. ವಿದೇಶಗಳಲ್ಲಿ ನೆಲೆಸಿರುವ ಹುಬ್ಬಳ್ಳಿಯ ಹಲವು ಮಂದಿ ಆರ್ಡರ್‌ ನೀಡಿ ಶೂ ಮತ್ತು ಚಪ್ಪಲಿಗಳನ್ನು ರೇಣುಕಾ ಲೆದರ್‌ ವರ್ಕ್ಸ್‌ನಿಂದಲೇ ಕೊಂಡೊಯ್ಯುತ್ತಾರೆ.

‘ಜಗತ್ತಿನ ಯಾವುದೇ ಮೂಲೆಗೆ ಹೋದರು ಊಟ, ಬಟ್ಟೆ, ಚಪ್ಪಲಿ ವ್ಯವಹಾರಕ್ಕೆ ಎಂದಿಗೂ ಬೇಡಿಕೆ ಕಡಿಮೆಯಾಗುವುದಿಲ್ಲ. ಇಂದಿನ ಜನತೆ ಫ್ಯಾಶನ್‌ ಪ್ರಿಯರು. ಜಗತ್ತು ಆಧುನಿಕಗೊಂಡಂತೆ ಮಂದಿಯ ಅಭಿರುಚಿಯೂ ಬದಲಾಗುತ್ತಿದೆ. ಚಪ್ಪಲಿ ಇಲ್ಲದೇ ಓಡಾಡುವ ವ್ಯಕ್ತಿಗಳು ಸಿಗುವುದು ಅಪರೂಪ. ಮಧ್ಯಮ ವರ್ಗಕ್ಕೆ ಸೇರಿದ ವ್ಯಕ್ತಿಯ ಬಳಿ ಕನಿಷ್ಠ ಎರಡು ಜೊತೆ ಚಪ್ಪಲಿಗಳಂತೂ ಇದ್ದೇ ಇರುತ್ತವೆ. ಅದರಲ್ಲೂ ತೊಗಲಿನಿಂದ ಸಿದ್ಧಪಡಿಸಿದ ಚಪ್ಪಲಿ ಅಥವಾ ಶೂ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಈ ಸರಳ ಸೂತ್ರವೇ ನಮ್ಮ ವ್ಯವಹಾರವನ್ನು ಮುಂದುರಿಸಿಕೊಂಡು ಹೋಗುತ್ತಿದೆ’ ಎನ್ನುತ್ತಾರೆ ಮಂಜುನಾಥ‌.

ರೆಗ್ಜೈನ್‌ (ಕೃತಕ ತೊಗಲು) ಬಳಸಿ ತಯಾರಿಸಿದ ಶೂ ಮತ್ತು ಚಪ್ಪಲಿಗಳನ್ನು ಪಕ್ಕಾ ಲೆದರ್‌ ಉತ್ಪನ್ನಗಳು ಎಂದು ಹೇಳುವ ಬಹುರಾಷ್ಟ್ರೀಯ ಕಂಪೆನಿಗಳು ಗ್ರಾಹಕರಿಗೆ ನಯವಾಗಿಯೇ ವಂಚಿಸುತ್ತಿವೆ. ಜನರೂ ಬ್ರ್ಯಾಂಡ್‌ಗಳ ಹಿಂದೆ ಬಿದ್ದಿದ್ದಾರೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಹಲವು ಕಂಪೆನಿಗಳು ಸುಲಿಗೆ ನಡೆಸುತ್ತಿವೆ ಎನ್ನುವುದು ಅವರ ಬೇಸರದ ನುಡಿ.

ಗುರುಗಳಾದ ಅಂಕುಶ್‌ ಮತ್ತು ಇಕ್ಬಾಲ್‌ ಅವರ ಸಲಹೆ ಮೇರೆಗೆ ಶೂ ಮತ್ತು ಚಪ್ಪಲಿಯ ತಯಾರಿಕೆಯನ್ನು ನೋಡಲೆಂದೇ ಉತ್ತರ ಪ್ರದೇಶದ ಆಗ್ರಾಕ್ಕೆ ತೆರಳಿದ್ದ ಮಂಜುನಾಥ‌, ಅಲ್ಲಿನ ಕೆಲಸದ ವೈಖರಿಗೆ ಮಾರು ಹೋಗಿದ್ದಾರೆ. ಸಾಕಷ್ಟು ವಿನ್ಯಾಸಗಳನ್ನು ಕಂಡು ಮನವರಿಕೆ ಮಾಡಿಕೊಂಡು ಬಂದಿರುವ ಅವರು ಅವುಗಳನ್ನು ಇಲ್ಲಿ ಪರಿಚಯಿಸುವ ಉತ್ಸಾಹದಲ್ಲಿದ್ದಾರೆ.

ಆಗ್ರಾದಲ್ಲಿ ಲೆದರ್‌ ಕತ್ತರಿಸಲು, ಅಂಟಿಸಲು, ಶಾಖ ನೀಡಿ ಭದ್ರಪಡಿಸಲು, ಪಾದರಕ್ಷೆಗೆ ತಳಭಾಗದಲ್ಲಿ ಅಟ್ಟೆಯನ್ನು (ಸೋಲ್‌) ಅಳವಡಿಸಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಒಬ್ಬೊಬ್ಬರು ಇರುತ್ತಾರೆ. ಇದರಿಂದ ಸಾಕಷ್ಟು ವಸ್ತುಗಳು ಉಳಿಯುತ್ತವೆ. ನಮ್ಮಲ್ಲಿ ಕೆಲಸಗಾರರೇ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಯಾರಿಕಾ ವೆಚ್ಚ ತಗ್ಗಿಸುವುದು ಎಲ್ಲಿ ಸಾಧ್ಯ? ಎಂಬುದು ಅವರ ಪ್ರಶ್ನೆ.

ಗೋವಾಗೆ ಹೈ ಆ್ಯಂಕಲ್‌ ಶೂ
20 ಇಂಚಿನ ಹೈ ಆ್ಯಂಕಲ್‌ ಶೂ ಅನ್ನು ಇತ್ತೀಚೆಗೆ ಗೋವಾದ ಉದ್ಯಮಿಯೊಬ್ಬರಿಗೆ ಮಂಜುನಾಥ‌ ಮಾಡಿಕೊಟ್ಟಿದ್ದಾರೆ.
‘ಯಾವುದೇ ಶೂ ತಯಾರಿಸಬೇಕಾದರೆ ಡೈ (ತೊಗಲು ಅಟ್ಟೆ ಕತ್ತರಿಸಲು ನಿಗದಿತ ಆಕಾರದ ಅಚ್ಚು) ಇರಬೇಕು. ಇಂತಹ ಡೈ ಸಿದ್ಧಪಡಿಸಿ ಕೊಳ್ಳುವುದಕ್ಕೇ ಸಾಕಷ್ಟು ಸಮಯ ಬೇಕಾಗು ತ್ತದೆ.

ಒಮ್ಮೆ ಡೈ ಸಿದ್ಧವಾದರೆ ನೂರು, ಸಾವಿರ ಸಂಖ್ಯೆಯಲ್ಲಿ ಶೂಗಳನ್ನು ತಯಾರಿಸಬಹುದು. ಹೈ ಆ್ಯಂಕಲ್‌ ಶೂಗಾಗಿ ಐದು ದಿನ ದುಡಿದಿ ರುವೆ. ಅದಕ್ಕಾಗಿಯೇ ಈ ಶೂಗೆ ₨5,000 ಚಾರ್ಜ್‌ ಮಾಡಿದ್ದೇನೆ. ವಿಶೇಷ ವಿನ್ಯಾಸದ ಶೂ ಮತ್ತು ಚಪ್ಪಲಿಗಳಿಗಾಗಿ ಸಾಕಷ್ಟು ಮಂದಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇಂತಹ ಯಾವುದೇ ಹೊಸ ಮತ್ತು ಸವಾಲಿನ ಕೆಲಸ ಮಾಡುವು ದೆಂದರೆ ಖುಷಿ’ ಎನ್ನುವುದು ಮಂಜುನಾಥ‌ ಆತ್ಮವಿಶ್ವಾಸದ ಮಾತು.

ಚೆನ್ನೈ ತೊಗಲು, ಕಾನ್ಪುರ ಡೈ
ಲೆದರ್‌ ಶೂ ಮತ್ತು ಚಪ್ಪಲಿ ತಯಾರಿಕೆಗೆ ಹುಬ್ಬಳ್ಳಿ ಪ್ರಶಸ್ತ ಸ್ಥಳವಲ್ಲ. ತೊಗಲು ಉತ್ಪನ್ನಗಳ ತಯಾರಿಕೆಗೆ ಇಲ್ಲಿ ಕನಿಷ್ಠ ಸೌಕರ್ಯಗಳೂ ಲಭ್ಯವಿಲ್ಲ. ಹದಗೊಳಿಸಿದ ಲೆದರ್‌ಗಾಗಿ ಚೆನ್ನೈಗೇ ಹೋಗಬೇಕು. ಸಿದ್ಧಗೊಂಡ ಶೂ ಮತ್ತು ಚಪ್ಪಲಿಗಳನ್ನು ಪ್ಯಾಕ್‌ ಮಾಡಲು ಬೇಕಾಗುವ ರಟ್ಟಿನ ಡಬ್ಬಿ, ಲೇಸ್‌, ಡೈ, ಮಾಡೆಲ್‌ ಮತ್ತಿತರ ವಸ್ತುಗಳಿಗೆ ಆಗ್ರಾ ಮತ್ತು ಕಾನ್ಪುರದವರೆಗೂ ಹೋಗಿಬರಬೇಕಿದೆ.

ಆಗ್ರಾದಲ್ಲಿ ಒಂಟೆ ಮತ್ತು ಕುದುರೆ ಚರ್ಮವನ್ನು ಪಾದರಕ್ಷೆ ಮತ್ತು ಶೂ ತಯಾರಿಸಲು ಹೆಚ್ಚಾಗಿ ಬಳಸಿದರೆ, ಕುರಿ, ಆಕಳು ಮತ್ತು ಎಮ್ಮೆಯ ತೊಗಲಿನಿಂದ ಹದಗೊಳಿಸದ ಕಚ್ಚಾಪದಾರ್ಥ ಚೆನ್ನೈನಲ್ಲಿ ಸಿಗುತ್ತದೆ. ಒಂದು ಅಡಿ ಲೆದರ್‌ಗೆ ₨70ರಿಂದ ₨150ರವರೆಗೂ ವೆಚ್ಚವಾಗುತ್ತದೆ ಎನ್ನುವ ಈ ಯುವ ಉದ್ಯಮಿ, ಹೆಚ್ಚಾಗಿ ಕಪ್ಪು ಮತ್ತು ಕಂದು ಬಣ್ಣದ ಲೆದರ್‌ ಬಳಸಿಯೇ ಬೂಟು ಮತ್ತು ಚಪ್ಪಲಿಗಳನ್ನು ತಯಾರಿಸುತ್ತಾರೆ.

ಚೆನ್ನೈನಿಂದ ಲೆದರ್‌ ತರಲು ಸಾಕಷ್ಟು ಹಣ ವೆಚ್ಚವಾಗುತ್ತದೆ. ನಮ್ಮಲ್ಲಿಯೇ ಲೆದರ್‌ ಸಿಗುವಂತಾದರೆ ಒಂದಷ್ಟು ಖರ್ಚು ಕಡಿಮೆ ಆಗುತ್ತದೆ, ಹಣವೂ ಉಳಿಯುತ್ತದೆ. ಆಗ ಇಲ್ಲಿಯೇ ಅತ್ಯಾಧುನಿಕ ಷೋರೂಂ ಆರಂಭಿಸಿ ಒಂದಿಷ್ಟು ಮಂದಿಗೆ ಉದ್ಯೋಗವನ್ನೂ ಒದಗಿಸಬಹುದು ಎನ್ನುತ್ತಾರೆ ಮಂಜುನಾಥ‌ (ಮೊ: 9845576332).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT