ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನದಲ್ಲಿ ಚಿಲಿಪಿಲಿ

Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ ಎಂಬ ಗಾಂಧೀಜಿ ನುಡಿ ಮುತ್ತುಗಳು ಕಲಾಕೃತಿ ರೂಪದಲ್ಲಿ ಅನಾವರಣಗೊಂಡಿದೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ‘ಉತ್ಸವ ರಾಕ್ ಗಾರ್ಡನ್’ನಲ್ಲಿ.
ಈಗಾಗಲೇ ವೈವಿಧ್ಯಮಯ ಕಲಾಕೃತಿಗಳಿಂದ ಜಗತ್ಪ್ರಸಿದ್ಧಿ ಪಡೆಯುತ್ತಿರುವ ಉತ್ಸವ ಗಾರ್ಡನ್‌ಗೆ ಹೊಸ ಸೇರ್ಪಡೆ ಈ ಕಾರಂಜಿ ಗ್ಯಾಲರಿ. ಗ್ಯಾಲರಿಯಲ್ಲಿನ ಮುಖ್ಯ ಆಕರ್ಷಣೆ ಪುಟ್ಟ ಪುಟ್ಟ ಮಕ್ಕಳು.

ಮಕ್ಕಳು ತುಂಟಾಟದಲ್ಲಿ ತೊಡಗಿರುವ ಹಲವು ಬಗೆಯ ಕಲಾಕೃತಿಗಳು ನೋಡುಗರ ಚಿತ್ತ ಸೆಳೆಯುತ್ತವೆ. ಇವೆಲ್ಲವನ್ನೂ ನೋಡಿದರೆ ಮಹಾಭಾರತದಲ್ಲಿನ ಬೆಣ್ಣೆ ಕಳ್ಳ ಶ್ರೀಕೃಷ್ಣ ತುಂಟ ಪೋರನಾಗಿದ್ದಾಗ ಆಡಿದ ಆಟಗಳು ಕಣ್ಮುಂದೆ ಹಾದು ಹೋಗುತ್ತವೆ.

ಹೀಗಿದೆ ಕಾರಂಜಿ ಗ್ಯಾಲರಿ...
ವೃತ್ತಾಕಾರದ ಕಾರಂಜಿಯು ಐದು ಹಂತಗಳನ್ನು (ಮೆಟ್ಟಿಲು) ಹೊಂದಿದ್ದು, 25 ಅಡಿ ಎತ್ತರವಿದೆ. ಮೊದಲಿನ ವೃತ್ತದಲ್ಲಿ ಏಳು ಮಕ್ಕಳು ಅಂಬೆಗಾಲಿನಲ್ಲಿ ಸಾಗಿದ್ದಾರೆ. ಎರಡರಲ್ಲಿ ಹನ್ನೆರಡು ಚಿಣ್ಣರು  ನಿಂತಿದ್ದಾರೆ. ಮೂರರಲ್ಲಿ ಬಣ್ಣದ ಆಟಗಳ ಗೊಂಬೆಗಳಿವೆ. ನಾಲ್ಕರಲ್ಲಿ ಗಾಂಧಿ ನುಡಿ ಮುತ್ತುಗಳ ಪುಟಾಣಿಗಳಿದ್ದಾರೆ. ಐದರಲ್ಲಿ ಆರು ಶಿಲ್ಪಗಳಿವೆ. ಕಾರಂಜಿ ತುದಿಯಲ್ಲಿರುವ ಮರದಲ್ಲಿ ಹದಿನಾರು ಪಕ್ಷಿಗಳ ಶಿಲ್ಪಗಳಿವೆ. ಒಟ್ಟು 37 ಶಿಲ್ಪಗಳನ್ನು ಕಾರಂಜಿ ಒಳಗೊಂಡಿದೆ.

ಕೆಳ ವೃತ್ತದಲ್ಲಿ ಮುದ್ದು ಕಂದಮ್ಮಗಳು ಖುಷಿಯಿಂದ ನೀರಾಟದಲ್ಲಿ ತೊಡಗಿವೆ. ಮಗುವೊಂದು ಬೆತ್ತಲೆ ಅಂಗಾತ ಮಲಗಿದ್ದರೆ, ಮತ್ತೊಂದು ಮಗು ಕೈಗಳಿಂದ ಎರಡು ಕಾಲುಗಳನ್ನು ಹಿಡಿದುಕೊಂಡು ಆಟವಾಡುತ್ತಿದೆ. ಇನ್ನೊಂದು ಮಗು ಅಂಬೆಗಾಲಿಡುತ್ತ ಮುಂದೆ ಹೋಗಲು ಪ್ರಯತ್ನಿಸುತ್ತಿದೆ. ಸರಿಯಾಗಿ ನಿಲ್ಲಲು ಬಾರದ ಮಗುವೊಂದು ಉಳಿದ ಮಕ್ಕಳ ಆಟ ನೋಡಿ ನಗುತ್ತಾ ನಿಂತಿದೆ.

ತನಗೆ ಆಟಕ್ಕಿಂತ ನಿದ್ರೆಯೇ ಹೆಚ್ಚು ಪ್ರೀತಿ ಎಂಬಂತೆ ಮಗುವೊಂದು ತಲೆ ಕೆಳಗೆ ಕೈಗಳನ್ನಿಟ್ಟುಕೊಂಡು ತಂಪಾದ ನೀರಿನಲ್ಲಿ ಹಾಯಾಗಿ ನಿದ್ರಿಸುತ್ತಿದ್ದರೆ, ಮತ್ತೊಂದು ಮಗು ಬೋರಲಾಗಿ ಮಲಗಿದೆ. ಕೆಲ ಪುಟಾಣಿಗಳು ಅಂಬೆಗಾಲಿಡುತ್ತಾ ವೃತ್ತವನ್ನು ಸುತ್ತು ಹೊಡೆಯುತ್ತ ಹೊರಗಿನ ಜಗತ್ತನ್ನು ನೋಡುತ್ತ ಆಟದಲ್ಲಿ ತೊಡಗಿವೆ. ನಮ್ಮನ್ನು ನೀರಾಟಕ್ಕೆ ಸೇರಿಸಿಕೊಳ್ಳಿ ಎಂದು ಕೆಲ ಪುಟಾಣಿಗಳು ಎರಡು ಕೈ ಎತ್ತಿ ಅಂಗಲಾಚುತ್ತಿವೆ. ಇವರನ್ನು ವೃತ್ತದ ನಾಲ್ಕು ಮೂಲೆಗಳಲ್ಲಿ ಈಜುಡುಗೆಯಲ್ಲಿ ನಿಂತಿರುವ ಪೋರಿಯರು ವೀಕ್ಷಿಸುತ್ತಿದ್ದಾರೆ.

ಗೋವರ್ಧನ ಪರ್ವತ
ಎರಡನೇ ವೃತ್ತದಲ್ಲಿ ಶ್ರೀ ಕೃಷ್ಣ ಕಿರು ಬೆರಳಿನಲ್ಲಿ ಗೋವರ್ಧನ ಪರ್ವತ ಎತ್ತಿದಂತೆ ಭಾಸವಾಗುವ ಪೋರರ ಕಲಾಕೃತಿಗಳಿವೆ. ಕೆಲ ಬಾಲಕರು ತಮ್ಮ ಹೆಗಲ ಮೇಲೆ ತಮ್ಮನನ್ನೋ, ಸ್ನೇಹಿತನನ್ನೋ ಎತ್ತಿಕೊಂಡು ಸಂಭ್ರಮಿಸುತ್ತಿದ್ದಾರೆ.
ಮೂರನೇ ಹಂತದ ವೃತ್ತದಲ್ಲಿ ಬಾಲಕರು ಮರದ ನೆರಳಿನಲ್ಲಿ ನಿಂತು ಆಗಸವನ್ನು ವೀಕ್ಷಿಸುತ್ತಿದ್ದಾರೆ. ಚಿಣ್ಣರ ಗಲಾಟೆ ಮಧ್ಯೆಯೂ ಪಕ್ಷಿಗಳು ಮರದಲ್ಲಿ ಗೂಡುಗಳನ್ನು ಕಟ್ಟಿಕೊಂಡು ಮರಿಗಳನ್ನಿಟ್ಟು ಅವುಗಳೊಂದಿಗೆ ಚಿಲಿ ಪಿಲಿ ಸಂಭಾಷಣೆಯಲ್ಲಿ ತೊಡಗಿರುವಂತೆ ಭಾಸವಾಗುತ್ತದೆ. ಗಾರ್ಡನ್ ಪ್ರವೇಶಿಸುತ್ತಿದ್ದಂತೆ ಡಾ.ರಾಜ್‌ಕುಮಾರ್ ವೃತ್ತ ದೊರೆಯುತ್ತದೆ. ಇದನ್ನು ದಾಟಿ ಮುಂದೆ ಬಂದ ತಕ್ಷಣ ಕಾಣುವುದೇ ಸುಂದರ ಕಾರಂಜಿ ಗ್ಯಾಲರಿ. ಇಲ್ಲಿರುವ ಪುಟ್ಟ ಮಕ್ಕಳ ಶಿಲ್ಪಗಳನ್ನು ನೋಡಿ ಹಿರಿಯರು ತಮ್ಮ ಚಿಕ್ಕಂದಿನ ದಿನಗಳನ್ನು ಅರೆಕ್ಷಣವಾದರೂ ನೆನಪಿಸಿಕೊಳ್ಳುತ್ತಾರೆ.

ನೈಸರ್ಗಿಕ ಸಂಪತ್ತೇ ಸರ್ವಸ್ವ
ನೈಸರ್ಗಿಕ ಸಂಪತ್ತಿಲ್ಲದಿದ್ದರೆ ಜಗತ್ತಿಲ್ಲ ಎಂಬ ಸಂದೇಶವನ್ನು ಕಾರಂಜಿ ಗ್ಯಾಲರಿ ನೀಡುತ್ತದೆ. ಹಸಿರಿದ್ದಲ್ಲಿ ಪ್ರಾಣಿ, ಪಕ್ಷಿಗಳು ಧಾವಿಸುತ್ತವೆ. ಮರ ಬೀಸುವ ಗಾಳಿಯು ಆಗಸವನ್ನು ತಂಪುಗೊಳಿಸುತ್ತದೆ. ತಂಪಿನ ವಾತಾವರಣಕ್ಕೆ ವರುಣನು ಮರುಳಾಗುತ್ತಾನೆ ಎಂಬ ಸಂದೇಶವನ್ನು ಕಾರಂಜಿಯೊಂದಿಗೆ ಬೆಳೆದ ಮರವು ಸೂಚಿಸುತ್ತದೆ. ನೀರಿಲ್ಲದೆ ಜೀವ ಜಂತುಗಳು ಬದುಕಲು ಹಾಗೂ ಚಿಣ್ಣರು ನೀರಾಟ ಆಡಲು ಸಾಧ್ಯವಿಲ್ಲ ಎಂಬುದನ್ನು ಬಿಂಬಿಸುತ್ತದೆ ಕಾರಂಜಿ. 

ಹೀಗೆ ಬನ್ನಿ
ಉತ್ಸವ ರಾಕ್ ಗಾರ್ಡನ್‌ಗೆ ಬೆಂಗಳೂರಿನಿಂದ ಹೋಗುವವರು ಹಾವೇರಿ ಮಾರ್ಗವಾಗಿ, ಮೈಸೂರಿನಿಂದ ಬರುವವರು ಹಾಸನ -ಹರಿಹರ ಮಾರ್ಗವಾಗಿ ಹಾಗೂ ಮಹಾರಾಷ್ಟ್ರದಿಂದ ಬರುವವರು ಹುಬ್ಬಳ್ಳಿ ಮಾರ್ಗವಾಗಿ ಬರಬಹುದು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಮಾನಾಂತರ ರಸ್ತೆಯಲ್ಲಿ ಗಾರ್ಡನ್ ಇದೆ. ಸಂಪರ್ಕಕ್ಕೆ –9980125263.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT