ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನದೊಳಗೆಲ್ಲೆಲ್ಲೂ ಸಂಗೀತವೇ...

Last Updated 5 ಜುಲೈ 2015, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಮನ ಸೆಳೆಯುವ ಹಸಿರುಟ್ಟ ವನರಾಶಿ, ಇಬ್ಬನಿಯ ತುಂತುರು ಹನಿ ಸೋಂಕಿದ ತಂಗಾಳಿ ಸ್ಪರ್ಶ, ಸ್ವಚ್ಛಂದವಾಗಿ ವಿಹರಿಸುವ ಬಾನಾಡಿಗಳ ಕಲರವ, ಪ್ರಕೃತಿಯ ಈ ಸೌಂದರ್ಯಕ್ಕೆ ಹಿಮ್ಮೇಳವಾಗಿ ದೂರದಿಂದ ಅಲೆ ಅಲೆಯಾಗಿ ಕೇಳಿ ಬರುತ್ತಿದ್ದ ಸುಮಧುರ ಸಂಗೀತ ನಿನಾದ.

ಭಾನುವಾರ ಬೆಳಗಿನ ಹೊತ್ತು ನಗರದ ಕಬ್ಬನ್‌ ಉದ್ಯಾನದೊಳಗೆ ವಾರಾಂತ್ಯದ ವಿಹಾರಕ್ಕಾಗಿ ಬಂದವರು ಆಸ್ವಾದಿಸಿದ ಅನುಭವವಿದು. ರಜೆಯ ಮಜಕ್ಕಾಗಿ ಆಗಮಿಸಿದವರೆಲ್ಲ ದೂರದಿಂದ ಕೇಳಿಬರುತ್ತಿದ್ದ ಸಂಗೀತದ ಜಾಡು ಹಿಡಿದು ಬಂದು ಉದ್ಯಾನದೊಳಗಿನ ಬ್ಯಾಂಡ್‌ ಸ್ಟ್ಯಾಂಡ್‌ ಸುತ್ತ ನೆರೆದಿದ್ದರು. ಅಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿದ್ದ  ‘ಉದಯರಾಗ’ ಕಾರ್ಯಕ್ರಮದಲ್ಲಿ ಗಾಮನಹಳ್ಳಿ ಸ್ವಾಮಿ ಮತ್ತು ತಂಡದವರು ಪ್ರಸ್ತುತಪಡಿಸಿದ ಜನಪದ ಗೀತೆಗಳಿಗೆ ಕಿವಿಯಾದರು.
ವಾರಾಂತ್ಯದಲ್ಲಿ ಉದ್ಯಾನಕ್ಕೆ ಅಧಿಕ ಜನರನ್ನು ಸೆಳೆಯುವ ಉದ್ದೇಶದಿಂದ ಇಲಾಖೆ ಇತ್ತೀಚೆಗೆ ಉದ್ಯಾನದೊಳಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.

ಇಲಾಖೆಯು ಈ ಭಾನುವಾರ ಆಯೋಜಿಸಿದ್ದ ಅರವಿಂದ ಭಾರ್ಗವ ಮತ್ತು ತಂಡದವರ ಮ್ಯಾಂಡೊಲಿನ್‌ ವಾದನ ಉದ್ಯಾನದೊಳಗಿದ್ದ ಎಲ್ಲರನ್ನೂ ಕೆಲ ಹೊತ್ತು ಮಂತ್ರಮುಗ್ಧರನ್ನಾಗಿಸಿತು. ಅದರ ಬೆನ್ನಲ್ಲೇ, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಬ್ಯಾಂಡ್‌ ತಂಡದವರು   ವೈವಿಧ್ಯಮಯ ಗೀತೆಗಳನ್ನು ನುಡಿಸುವ ಮೂಲಕ ವಾಯು ವಿಹಾರಿಗಳಿಗೆ ರಸದೌತಣ ಉಣಬಡಿಸಿದರು.

ರಾಷ್ಟ್ರಗೀತೆ, ವಂದೇ ಮಾತರಂ, ಏ ಮೇರೆ ವತನ್‌ ಕೆ ಲೋಗೋ, ಅನಿಸುತಿದೆ ಯಾಕೋ ಇಂದು, ಈ ಬಂಧನ, ಕರುನಾಡ ತಾಯಿ.. ಹೀಗೆ ಬ್ಯಾಂಡ್‌ ತಂಡ  ಪ್ರಸ್ತುತಪಡಿಸಿತು. ಶಸ್ತ್ರಾಸ್ತ್ರ ಪ್ರದರ್ಶನ: ಬ್ಯಾಂಡ್‌ ಗೋಷ್ಠಿಯ ಪಕ್ಕದಲ್ಲಿಯೇ ಬಿಎಸ್‌ಎಫ್‌ ಆಯೋಜಿಸಿದ್ದ ಪ್ರದರ್ಶನದಲ್ಲಿ ವಿವಿಧ ಬಗೆಯ ಶಸ್ತ್ರಾಸ್ತ್ರಗಳು ಮತ್ತು ಅವುಗಳ ಬಳಕೆಯ ವಿಧಾನದ ಕುರಿತ ಯೋಧರಿಂದ ಪಡೆದರು.

ಇನ್ನು ಕೆಲವರಿಗೆ ಶಸ್ತ್ರಾಸ್ತ್ರ ಮತ್ತು ಯೋಧರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳುವ ಖುಷಿ.
ಸಮೀಪದಲ್ಲಿಯೇ ನಗರ ಭೂಸಾರಿಗೆ ನಿರ್ದೇಶನಾಲಯದ ವತಿಯಿಂದ ಸಾರ್ವಜನಿಕರಿಗೆ ಸವಾರಿ ಮಾಡಲು ಉಚಿತಸೈಕಲ್‌ ವ್ಯವಸ್ಥೆ ಮಾಡಲಾಗಿತ್ತು. ವಾಹನ ಸಂಚಾರ ನಿಷೇಧವಾಗಿದ್ದ ಕಾರಣ ಉದ್ಯಾನದ ರಸ್ತೆಗಳ ತುಂಬೆಲ್ಲ ತರಹೆವಾರಿ ಸೈಕಲ್‌ಗಳ ಓಡಾಟ, ಚಿಣ್ಣರ ಮೋಜಿನಾಟಗಳು ಕಂಡುಬಂದವು.

ಉದ್ಯಾನದ ಆವರಣದ ಒಂದೆಡೆ ತಿಂಡಿ–ತಿನಿಸು, ಹಣ್ಣು, ತರಕಾರಿ, ಪಾನೀಯಗಳು, ಆಲಂಕಾರಿಕ ಗಿಡಗಳು, ಪುಸ್ತಕ ಹೀಗೆ ಹೊಸದೊಂದು ಮಾರುಕಟ್ಟೆಯೂ ಇತ್ತು. ಇನ್ನೊಂದೆಡೆ, ರಸ್ತೆಬದಿಯಲ್ಲಿ ಕಲಾಕೃತಿಗಳ ಪ್ರದರ್ಶನ, ಇದಕ್ಕೆ ಹೊಂದಿಕೊಂಡಂತೆ ಪುರುಷರ ಹಿತರಕ್ಷಣೆ ಕುರಿತು ಕೆಲಸ ಮಾಡುವ ‘ಸೇವ್‌ ಇಂಡಿಯಾ ಫ್ಯಾಮಿಲಿ – ಕರ್ನಾಟಕ’ ಸಂಘಟನೆ ಕಾರ್ಯಕರ್ತರು ಜಾಗೃತಿ ಮೂಡಿಸುವ ಬ್ಯಾನರ್‌ಗಳನ್ನು ಹಿಡಿದು ನಿಂತು ಗಮನ ಸೆಳೆಯುತ್ತಿದ್ದರು.

ಜನರು ‘ಸೆಲ್ಫಿ’ ಫೋಟೊ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಬೆಳಗ್ಗಿನಿಂದ ಬಗೆ ಬಗೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಉದ್ಯಾನದೊಳಗೆ ಸಂಜೆ ‘ಸಂಧ್ಯಾರಾಗ’ದ ಕಾರ್ಯಕ್ರಮದಲ್ಲಿ ಸಬ್ಬನಹಳ್ಳಿ ರಾಜು ಮತ್ತು ತಂಡದವರು ಹಾಡಿದ ಜನಪದ, ಭಾವಗೀತೆಗಳು ರಸವತ್ತಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT