ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ಬಾಡಿಗೆಗೆ ಇದೆ!

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇರುವ ಒಂದಿಷ್ಟು ಜಾಗದಲ್ಲೇ ತರಕಾರಿ, ಹೂ ಬೆಳೆದು ತಮ್ಮ ಮನೆಗೂ ಬಳಸಿ ಪಕ್ಕದ ಮನೆಗೂ ಹಂಚುತ್ತಿದ್ದ ಚಿತ್ರಣ ಕೆಲವೇ ವರ್ಷಗಳ ಹಿಂದೆ ನಗರದಲ್ಲಿ ಕಂಡುಬರುತ್ತಿತ್ತು. ಮನೆಯ ಅಂಗಳದಲ್ಲಿ ಒಂದಿಷ್ಟು ಜಾಗವಿದ್ದರೆ ಸಾಕು, ತಮ್ಮಿಷ್ಟದ ಹೂ ಗಿಡ, ಬಳ್ಳಿಗಳನ್ನು ಬೆಳೆಸಿ ಪ್ರೀತಿಯಿಂದ ಪೋಷಿಸಿ ಖುಷಿ ಪಡುತ್ತಿದ್ದುದು ಜನರ ಹವ್ಯಾಸ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಗಿಡ ಬೆಳೆಸುವ ಕೈಗಳು ಇಲ್ಲವಾಗಿವೆ ಅಥವಾ ಚೆಂದದೊಂದು ಪುಟ್ಟ ಉದ್ಯಾನ ಮಾಡುವ ವ್ಯವಧಾನವನ್ನೂ ಆಧುನಿಕತೆ ಕಸಿದುಕೊಂಡಿದೆ.

ಕೆಲಸ, ಓಡಾಟ, ಜಂಜಾಟಗಳ ನಡುವೆ ಸಮಯವೇ ಇಲ್ಲದ ಜನರು ಮನೆ ಮುಂದೆ ಗಿಡ ಬೆಳೆಸುವ ರೂಢಿಯನ್ನೂ ಮರೆತುಹೋಗಿದ್ದಾರೆ. ಜೊತೆಗೆ ಇಟ್ಟಿಗೆಯಂಥ ಮನೆಗಳಲ್ಲಿ ಗಿಡ ಬೆಳೆಸುವುದಾದರೂ ಎಲ್ಲಿ?

ಹಾಗೆಂದ ಮಾತ್ರಕ್ಕೆ ಜನರಲ್ಲಿ ಪರಿಸರದ ಬಗ್ಗೆ ಆಸಕ್ತಿ ಇಲ್ಲ ಎನ್ನುವಂತಿಲ್ಲ. ಈ ಕುರಿತು ಮನಸ್ಸಿದ್ದರೂ ನಿರ್ವಹಿಸಲು ಅಗತ್ಯ ಸಮಯ ಇರುವುದಿಲ್ಲ. ಆದ್ದರಿಂದ ಈ ಆಸಕ್ತಿ, ಸಮಯದ ಅಭಾವವನ್ನು ಗಮನದಲ್ಲಿಟ್ಟುಕೊಂಡು ತಲೆಎತ್ತಿವೆ ಕೃತಕ ಉದ್ಯಾನಗಳನ್ನು ತಯಾರಿಸಿಕೊಡುವ ಸಂಸ್ಥೆಗಳು.

ಬೇಕೆಂದಾಗ ಗಿಡಗಳನ್ನು ಸಿದ್ಧಪಡಿಸಿ ಕೊಡಬಲ್ಲ ಈ ಸಂಸ್ಥೆಗಳು ಜನರ ಆದ್ಯತೆ, ಅವರ ಬಜೆಟ್, ಸ್ಥಳಾವಕಾಶ, ವಾತಾವರಣ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಪುಟ್ಟ ಉದ್ಯಾನ ಅಥವಾ ಟೆರೇಸ್ ಉದ್ಯಾನ ಸೃಷ್ಟಿಸಿಕೊಡುತ್ತವೆ. ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಗಿಡಗಳನ್ನು ಬೆಳೆಸುವ ಅನಿವಾರ್ಯವನ್ನು ಅರ್ಥೈಸಿಕೊಂಡಿರುವ ಜನರು ಕೃತಕ ಉದ್ಯಾನಗಳತ್ತ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಗಿಡಗಳನ್ನು ಬೆಳೆಸುವುದೂ ವ್ಯಾಪಾರವಾಗಿ ಮಾರ್ಪಟ್ಟಿದೆ.

ದೂರ ವಾಕಿಂಗ್‌ಗೆ ಹೋಗಲು ಇಚ್ಛಿಸದವರು ತಮ್ಮ ಮನೆಯ ಮೇಲೆಯೇ ಪುಟ್ಟ ಉದ್ಯಾನದಲ್ಲಿ ಅಡ್ಡಾಡುವ ಮನಸ್ಸು ಮಾಡಿ ಈ ಟೆರೇಸ್ ಗಾರ್ಡನ್‌ಗಳಿಗೆ ಬೇಡಿಕೆ ಇಡುತ್ತಿರುವುದೂ ಉಂಟು. ಮನೆಗಳಿಗೆ ಸಿದ್ಧ ಉದ್ಯಾನ ಮಾಡಿಕೊಡುವುದು ಒಂದೆಡೆಯಾದರೆ, ಸಮಾರಂಭಗಳಿಗೆ ಅಲಂಕಾರಿಕ ಗಿಡಗಳಿಂದ ವಿನ್ಯಾಸಗೊಳಿಸುವ ಕೆಲಸ ಇನ್ನೊಂದು ಕಡೆ.

ಕೆಲವು ವರ್ಷಗಳಿಂದೀಚೆ ಮದುವೆ, ಸಮಾರಂಭಗಳಿಗೆ ಅಲಂಕಾರಿಕ ಗಿಡಗಳಿಂದ ವಿನ್ಯಾಸಗೊಳಿಸುವ ಉದ್ಯಮ ಹುಟ್ಟಿಕೊಂಡಿತು. ಈಗ ಅದು ಪರಿಷ್ಕೃತಗೊಂಡಿದೆ. ಕೇವಲ ಗಿಡಗಳನ್ನು ಇಡುವ ಬದಲು ಇಡೀ ಆವರಣವನ್ನು ಉದ್ಯಾನವನ್ನಾಗಿ ಮಾರ್ಪಡಿಸುವ ಕೆಲಸವಾಗಿ ಅದು ಬದಲಾಗಿದೆ. ಬೇಕೆಂದ ತಕ್ಷಣ ಬರಿದಾಗಿದ್ದ ಕಾಂಪೌಂಡ್‌ನಲ್ಲಿ ಬಗೆಬಗೆ ಗಿಡಗಳು ತುಂಬಿ ರಂಗುರಂಗಾಗಿ ನಳನಳಿಸುವಂತೆ ಮಾಡುವ ವಿನ್ಯಾಸಿತ ಉದ್ಯಾನದ ಉದ್ದಿಮೆ ಇದು.

ಜಾಗದ ವಿಸ್ತೀರ್ಣ, ವಾತಾವರಣ, ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳವನ್ನು ವಿನ್ಯಾಸಗೊಳಿಸಲಾಗುತ್ತದೆ ಹಾಗೂ ಹಣ ನಿಗದಿ ಮಾಡಲಾಗುತ್ತದೆ. ಮನೆಯ ಕಾರ್ಯಕ್ರಮ, ಕಾರ್ಪೊರೇಟ್ ಸಂಸ್ಥೆಗಳ ಸಮಾರಂಭ ಹೀಗೆ ಬೇರೆ ಬೇರೆ ಅವಶ್ಯಕತೆಗಳನ್ನು ವಿನ್ಯಾಸ ಅವಲಂಬಿಸಿರುತ್ತದೆ. ಬಗೆಬಗೆಯ ಅಲಂಕಾರಿಕ ಸಸ್ಯಗಳು ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಹೆಚ್ಚು  ಆಮದಾಗುತ್ತಿರುವುದೂ ಇದೇ ಕಾರಣಕ್ಕೆ.

ಋತುಮಾನಕ್ಕೆ ತಕ್ಕ ಉದ್ಯಾನ
ಬದಲಾಗುವ ಸೀಸನ್‌ಗಳಿಗೆ ತಕ್ಕಂತೆ ಉದ್ಯಾನಗಳೂ ಬದಲಾಗುತ್ತವೆ. ಆಯಾ ವಾತಾವರಣಕ್ಕೆ ತಕ್ಕಂತೆ ಪುಟ್ಟ ಉದ್ಯಾನಗಳ ಗಿಡಗಳಲ್ಲೂ ಬದಲಾವಣೆ ಮಾಡಿಕೊಳ್ಳಬಹುದು. ಕೆಲವು ಗಿಡಗಳು ದೀರ್ಘಕಾಲ ಹಸಿರಾಗಿ ಉಳಿಯಬಲ್ಲವು. ಮತ್ತೆ ಕೆಲವು ಋತುಮಾನಕ್ಕೆ ಹೊಂದುವಂಥವು. ಉದ್ಯಾನ ಸೃಷ್ಟಿಸುವುದು ಮಾತ್ರವಲ್ಲ, ಅವುಗಳನ್ನು ನಿರ್ವಹಿಸುವುದರ ಬಗ್ಗೆಯೂ ಟಿಪ್ಸ್‌ ನೀಡಲಾಗುತ್ತದೆ.

ಮಣ್ಣು ಪರೀಕ್ಷಿಸಿ, ಬೀಜ ನೆಟ್ಟು, ದಿನವೂ ನೀರು ಹಾಕಿ, ಗಿಡ ಚಿಗುರುವುದನ್ನು ಪ್ರೀತಿಯಿಂದ ಕಾಯುವ ತಾಳ್ಮೆ ಇಲ್ಲದೆ ಸಿದ್ಧವಾಗುವ ಈ ಕೃತಕ ಉದ್ಯಾನಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವುದು ಆಧುನಿಕತೆಗೆ ಹಿಡಿದ ಕನ್ನಡಿ. ಅದೂ ಅಲ್ಲದೆ, ಇಂದು ಎಲ್ಲವೂ ಕ್ಷಣಮಾತ್ರದಲ್ಲಿ ಆಗಬೇಕು ಎನ್ನುವವರಿಗೆ ಈ ಟೆರೇಸ್‌ ಗಾರ್ಡನ್‌ ಉಪಯುಕ್ತವೆನ್ನಬಹುದೇನೋ! 

ಗಾರ್ಡನ್ ಟ್ರೆಂಡ್
ಜನರು ತುಂಬಾ ಬ್ಯುಸಿ ಇರುತ್ತಾರೆ. ಅವರಿಗೆ ಮನೆಯೊಂದಿಗೆ ಗಾರ್ಡನ್ ಮಾಡಿಕೊಳ್ಳುವುದಕ್ಕೆ ಸಮಯ ಇರುವುದಿಲ್ಲ. ಹಾಗಾಗಿ ಕೃತಕ ಗಾರ್ಡನ್‌ಗಳ ಮೊರೆಹೋಗುವುದು ಸಹಜ. ಅಂಥ ಸಂದರ್ಭದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉದ್ಯಾನವನ್ನು ರೂಪಿಸಿಕೊಡುತ್ತೇವೆ. ಇಕ್ಕಟ್ಟಾದ ಮನೆಗಳಿದ್ದರೂ ಕೆಲವರಿಗೆ ಗಿಡಗಳನ್ನು ಬೆಳೆಸುವ ಆಸೆಯಿರುತ್ತದೆ. ಅಂಥವರು ನಮ್ಮಲ್ಲಿ ಬೇಡಿಕೆ ಇಡುತ್ತಾರೆ. ಸಂಜೆ ಟೆರೇಸ್‌ ಮೇಲೆ ಅಥವಾ ಬಾಲ್ಕನಿಯಲ್ಲಿ ಓಡಾಡುತ್ತಾ ಒಂದು ಮಟ್ಟಿಗೆ ರಿಲ್ಯಾಕ್ಸ್‌ ಆಗುತ್ತಾರೆ. ಕೆಲವು ಉದ್ಯಾನಗಳನ್ನು ಒಮ್ಮೆ ರೂಪಿಸಿದರೆ ಆಯಿತು. ಇನ್ನು ಕೆಲವು ಕಾಲಕ್ಕೆ ತಕ್ಕಂತೆ ಮಾರ್ಪಾಡಾಗುತ್ತವೆ.

ಟೆರೇಸ್ ಗಾರ್ಡನ್ ಪರಿಕಲ್ಪನೆ ನಗರದಲ್ಲಿ ಐದು ವರ್ಷಗಳಿಂದೀಚೆಗೆ ಹೆಚ್ಚಾಗಿದೆ. ಕೆಲವರು ‘ಲಾನ್’ ಮಾತ್ರ ಇಷ್ಟ ಪಟ್ಟರೆ, ಇನ್ನು ಕೆಲವರು ಸುಂದರ ಹೂಗಿಡಗಳಿಗೆ ಬೇಡಿಕೆ ಇಡುತ್ತಾರೆ. ನಮ್ಮ ಬಳಿ ಟೆರೇಸ್‌ಗೆಂದೇ 3,500 ಬಗೆಯ ಗಿಡಗಳಿವೆ.
– ಕಿರಣ್ ಕುಮಾರ್, ಗ್ರೀನ್ ಇಂಪಲ್ಸ್‌

ಉಳ್ಳವರಿಗೆ ಸುಲಭ
ಟೆರೇಸ್ ಗಾರ್ಡನ್ ತುಂಬಾ ದುಬಾರಿ. ಆರೇಳು ವರ್ಷಗಳಿಂದ ಈ ಗಾರ್ಡನ್ ಪರಿಕಲ್ಪನೆ ರೂಢಿಗೆ ಬಂದಿರುವುದು. ನಗರ ಬೆಳೆಯುತ್ತಿದ್ದಂತೆ ವಾಸಿಸುವ ಜಾಗ ಇಕ್ಕಟ್ಟಾಗುತ್ತಿದೆ. ಇಂಥ ಸಮಯದಲ್ಲಿ ಚಿಕ್ಕ ಜಾಗದಲ್ಲೇ ವ್ಯವಸ್ಥಿತ ಉದ್ಯಾನ ನಿರ್ಮಾಣ ಒಳ್ಳೆ ಆಲೋಚನೆ. ಫ್ಲಾಟ್‌ಗಳಲ್ಲಿ ವಾಸ ಮಾಡುವವರು ಟೆರೇಸ್‌ ಗಾರ್ಡನ್‌ಗೆ ಹೆಚ್ಚು ಬೇಡಿಕೆ ಇಡುತ್ತಾರೆ. ದಿನಕ್ಕೆ 20ರಿಂದ 30 ಆರ್ಡರ್‌ಗಳು ಬರುತ್ತವೆ. ಟೆರೇಸ್‌ಗೆಂದು ವಿಶೇಷ ಗಿಡಗಳೇ ಇರುತ್ತವೆ. ಬೇರು ಉದ್ದವಿಲ್ಲದ ಸುಂದರ ಗಿಡಗಳನ್ನು ಟೆರೇಸ್‌ಗೆ ಬಳಸಲಾಗುತ್ತದೆ. ಸೀಸನಲ್ ಗಿಡಗಳಿಗೆ ತುಂಬಾ ಬೇಡಿಕೆ. 10 ಅಡಿಯ ಜಾಗಕ್ಕೂ ವಿನ್ಯಾಸ ಮಾಡಬಹುದು. 

1 ಅಡಿಗೆ ₨200ರಂತೆ ಹಣ ನಿಗದಿ ಮಾಡಲಾಗುತ್ತದೆ. 60 ರಿಂದ 70 ಶೇಕಡ ಗ್ರಾಹಕರು ತಾವೇ ಗಿಡಗಳ ಆಯ್ಕೆ ಮಾಡುತ್ತಾರೆ. ಈಗೀಗ ಟೆರೇಸ್‌ ಗಾರ್ಡನ್‌ ವಿನ್ಯಾಸವನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳುವವರು ಹೆಚ್ಚಿದ್ದಾರೆ.
– ಎಂ. ಶ್ರೀನಿವಾಸ್,  ಶ್ರೀ ರಂಗನಾಥ ಗ್ರೀನ್ ಗಾರ್ಡನ್ ನರ್ಸರಿ, ನಂದಿನಿ ಲೇಔಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT