ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದಲ್ಲಿ ಸಮಾನತೆ

ನಿಮಗಿದು ತಿಳಿದಿರಲಿ
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ರಾಜ್ಯದ ಅಧೀನದಲ್ಲಿರುವ ಯಾವುದೇ ಹುದ್ದೆಗೆ ಸಂಬಂಧಿಸಿದಂತೆ ಉದ್ಯೋಗ ಮತ್ತು ನೇಮಕಾತಿ ವಿಷಯದಲ್ಲಿ ಎಲ್ಲ ನಾಗರಿಕರಿಗೂ ಸಮಾನ ಅವಕಾಶವಿರತಕ್ಕದ್ದು. ಯಾರೇ ವ್ಯಕ್ತಿಯ ಜಾತಿ, ಮತ, ಧರ್ಮ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ವ್ಯಕ್ತಿಯನ್ನು ಒಂದು ಹುದ್ದೆಗೆ ಆಯ್ಕೆ ಮಾಡುವಂತೆಯೂ ಇಲ್ಲ ಅಥವಾ ತಿರಸ್ಕರಿಸುವಂತೆಯೂ ಇಲ್ಲ. ಎಂದರೆ ಆಯ್ಕೆ ಮಾಡುವಾಗ ಅಥವಾ ತಿರಸ್ಕರಿಸುವಾಗ ಈ ಅಂಶಗಳು ಪರಿಗಣನೆಗೆ ಬರಬಾರದು.

ಆದರೆ ಹಿಂದುಳಿದವರು ಎಂಬ ಕಾರಣದ ಮೇಲೆ ಕೆಲವು ಜಾತಿಗಳಿಗೆ ಮಾಡುವ ಮತ್ತು ಮಹಿಳೆಯರು ಎಂಬ ಕಾರಣಕ್ಕೆ ಅವರಿಗೆ ಮಾಡುವ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿದೆ. ತಾರತಮ್ಯ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ ಎಂದ ಮಾತ್ರಕ್ಕೆ ಅವರಿಗೆ ಅನನುಕೂಲವಾಗುವ ಹಾಗೆ ತಾರತಮ್ಯ ಮಾಡಿ ಕಾನೂನು ರಚಿಸುವುದು ಸಂವಿಧಾನದ ಆಶಯಕ್ಕೆ ವಿರೋಧವಾದುದಾಗುತ್ತದೆ. ಆ ಕಾರಣಕ್ಕೆ ಅಂಥ ಯಾವುದೇ ಉಪಬಂಧ ಸಂವಿಧಾನದ ಉಲ್ಲಂಘನೆಯಾಗುತ್ತದೆ. 

ಸಂವಿಧಾನದಲ್ಲಿ ಸ್ತ್ರೀ ಪರುಷರಿಗೆ ಸಮಾನತೆಯನ್ನು ನೀಡಿದ್ದರೂ ನಮ್ಮ ಅನೇಕ ಕಾನೂನುಗಳಲ್ಲಿ ಸ್ತ್ರೀ ಪುರುಷರ ನಡುವಿನ ತಾರತಮ್ಯ ಉಳಿದುಕೊಂಡೇ ಬಂದಿದೆ.

ಉದ್ಯೋಗದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ಅನೇಕ ರಂಗಗಳಲ್ಲಿ ನಿರಾಕರಿಸಲಾಗಿದೆ. ಇಂಥ ನಿರಾಕರಣೆಗೆ ಪುಷ್ಠಿ ಕೊಡುವುದು ಸಂವಿಧಾನದ ಅಡಿಯಲ್ಲಿ ರಚನೆಯಾದ ಕಾನೂನು! ಇದನ್ನು ಪ್ರಶ್ನಿಸಿ ಉದ್ಯೋಗದಲ್ಲಿ ಸಮಾನತೆಯನ್ನು ಕಲ್ಪಿಸಿಕೊಡುವ ಪ್ರಯತ್ನಗಳಲ್ಲಿ ಗಮನ ಸೆಳೆಯುವ ಪ್ರಕರಣವೆಂದರೆ ಏರ್ ಇಂಡಿಯಾ-ವಿ-ನರ್ಗೀಸ್ ಮಿರ್ಜಾ ಪ್ರಕರಣ.

ಏರ್ ಇಂಡಿಯಾ ತನ್ನ ಮಹಿಳಾ ಉದ್ಯೋಗಿಗಳಿಗೆ ಏರ್ ಇಂಡಿಯಾ ನಿಗಮ ಅಧಿನಿಯಮ,1953ರ ಅಡಿಯಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಿತು- ಗಗನಸಖಿಯರು ಕೆಲಸಕ್ಕೆ ಸೇರಿದ ನಾಲ್ಕು ವರ್ಷಗಳು ಮದುವೆಯಾಗಬಾರದು, ಗರ್ಭಿಣಿಯರಾಗಬಾರದು, ಆದರೆ ಕೆಲಸದಿಂದ ತೆಗೆದು ಹಾಕಲು ಹಕ್ಕಿರುತ್ತದೆ, ಅವರು ತಮ್ಮ 35ನೇ ವರ್ಷದಲ್ಲಿ ನಿವೃತ್ತಿ ಹೊಂದಬೇಕು (ಪುರುಷರಿಗೆ ನಿವೃತ್ತಿ ವಯಸ್ಸು 58) ಈ ಷರತ್ತುಗಳೆಲ್ಲವೂ ತನಗಿರುವ ಸಮಾನತೆಯ ಹಕ್ಕುಗಳ ಉಲ್ಲಂಘನೆಯೆಂದು ಆರೋಪಿಸಿ ಆ ನಿಗಮದ ಉದ್ಯೋಗಿ-ಗಗನಸಖಿ ನರ್ಗೀಸ್ ಮಿರ್ಜಾ ಎಂಬಾಕೆ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ಈ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ, ಈ ಷರತ್ತುಗಳೆಲ್ಲವೂ ಲಿಂಗದ ಆಧಾರದ ಮೇಲೆ ಮಾತ್ರವೇ ವಿಧಿಸಲಾಗಿದೆ, ಅವು ಸ್ತ್ರೀ ಪುರುಷರಲ್ಲಿ ತಾರತಮ್ಯವೆಸಗುವಂಥವು ಆಗಿವೆ. ಆದ್ದರಿಂದ ಅವು ಅಸಂವೈಧಾನಿಕ ಎಂದು ತೀರ್ಪು ನೀಡಿ ಅವನ್ನು ರದ್ದುಗೊಳಿಸಿತು. ಮಹಿಳೆ ಮದುವೆಯಾದ ಕೂಡಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲಳಾಗುತ್ತಾಳೆ ಎಂಬ ವಿಮಾನಯಾನದ ವ್ಯವಸ್ಥಾಪಕರ ವಾದವನ್ನು ನ್ಯಾಯಾಲಯ ಸಾರಾಸಗಟಾಗಿ ತಳ್ಳಿಹಾಕಿತು.

ಅಲ್ಲದೆ ಇಂಥದೊಂದು ನಿಯಮ ಸ್ತ್ರೀತ್ವಕ್ಕೇ ಮಾಡಿದ ಅಪಮಾನ ಮತ್ತು ಮಹಿಳೆಗೆ ಸಹಜವಾಗಿ ದತ್ತವಾಗಿರುವ ತಾಯ್ತನದ ಹಕ್ಕಿನ ಕ್ರೂರ ಕೊಲೆ ಅಷ್ಟೇ ಅಲ್ಲ ಅದು ಅನಾಗರಿಕವಾದದ್ದು ಎಂದೂ, ಇದು ಸಂವಿಧಾನದ ಸಮಾನತೆಯ ಉಪಬಂಧದ ಉಲ್ಲಂಘನೆ ಎಂದೂ ಅಭಿಪ್ರಾಯಪಟ್ಟಿತು. ಈ ಪ್ರಕರಣದ ತೀರ್ಪು ಬಂದದ್ದು 1981ರಲ್ಲಿ, ಸಂವಿಧಾನ ಜಾರಿಗೊಂಡ 31 ವರ್ಷಗಳ ನಂತರ. ಅಲ್ಲಿಯವರೆಗೂ ಆ ಕಾನೂನಿನಲ್ಲಿಯ ಆ ಅಸಮಾನತೆ ಉಳಿದುಕೊಂಡೇ ಬಂದಿತ್ತು. ಪ್ರಶ್ನಿಸದ್ದಿದ್ದರೆ ಅದು ಹಾಗೆಯೇ ಮುಂದುವರಿಯುತ್ತಲೂ ಇತ್ತು. ಈ ಪ್ರಕರಣ ಮಹಿಳಾ ಹಕ್ಕುಗಳ ಹೋರಾಟದಲ್ಲಿ ಪ್ರಮುಖವಾದ ಮೈಲುಗಲ್ಲು.

ಭೂ ಸೇನೆ ಮತ್ತು ವಾಯು ಪಡೆಯಲ್ಲಿ ಪುರುಷರಂತೆ ಮಹಿಳಾ ಅಧಿಕಾರಿಗಳಿಗೂ ಸೇವಾವಧಿ 20 ವರ್ಷಗಳು. ಆದರೆ ನೌಕಾ ಪಡೆಯಲ್ಲಿನ ಮಹಿಳಾ ಸಿಬ್ಬಂದಿಯ ಸೇವಾವಧಿ ಮಾತ್ರ 14 ವರ್ಷಕ್ಕೆ ಸೀಮಿತಗೊಳಿಸಲಾಗಿತ್ತು. ಇದೇ ಕಾರಣಕ್ಕೆ ಅವರು ಪಿಂಚಣಿ ಸೌಲಭ್ಯದಿಂದಲೂ ವಂಚಿತರಾಗಿದ್ದರು. ಈ ತಾರತಮ್ಯ ನೀತಿಯನ್ನು ಅಲ್ಲಿನ ಮಹಿಳಾ ಸಿಬ್ಬಂದಿ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಲಯ ‘ಲಿಂಗ ತಾರತಮ್ಯ ಮತ್ತು ಸೇವಾ ಪಕ್ಷಪಾತದ ನೆಲೆಯಲ್ಲಿ ಮಹಿಳೆಯರ ಪ್ರಗತಿಯನ್ನು ತಡೆಯಲಾಗದು’ ಎಂದು ಅಭಿಪ್ರಾಯಪಟ್ಟು ಮಹಿಳಾ ಸಿಬ್ಬಂದಿಯ ಪರವಾಗಿ (ಇದೇ ಸೆಪ್ಟೆಂಬರ್ ತಿಂಗಳಲ್ಲಿ) ತೀರ್ಪು ನೀಡಿದೆ. ನಮ್ಮ ಹಕ್ಕುಗಳನ್ನು ಹೋರಾಡಿಯೇ ಪಡೆಯಬೇಕು, ನಮ್ಮ ಹಕ್ಕುಗಳಿಗಾಗಿ ನಾವೇ ಹೋರಾಡಬೇಕು.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT