ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಅಧಿಕಾರಿಗಳ ಸೊಸೈಟಿಗೆ ಸಗಟು ಜಮೀನು

ಮಧ್ಯಮ ವರ್ಗದವರಿಗೆ ಇಲ್ಲ ನಿವೇಶನ * ಅಧಿಕಾರಿಗಳಿಗೆ ವಿಶೇಷ ಭಾಗ್ಯ
Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಸಿಕ ₹ 1 ಲಕ್ಷದಷ್ಟು ವೇತನ ಪಡೆಯುವ ಐಎಎಸ್‌ ಶ್ರೇಣಿಯ ಅಧಿಕಾರಿಗಳ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಯಾವುದೇ ದರ ನಿಗದಿ ಮಾಡದೇ 25–30 ಎಕರೆಯಷ್ಟು ಜಮೀನನ್ನು ಸಾರಾಸಗಟಾಗಿ ಗುತ್ತಿಗೆ ನೀಡಿರುವ ಪ್ರಕರಣ ವಿವಾದಕ್ಕೆ ಈಡಾಗಿದೆ.

ಸೂರು ಇಲ್ಲದ ಬಡವರು, ರೈತರು ಸರ್ಕಾರಿ ಜಮೀನಿನಲ್ಲಿ ಮನೆ–ಗುಡಿಸಲು ಕಟ್ಟಿಕೊಂಡರೆ ದಯೆ ತೋರದೆ ಸರ್ಕಾರ ಜೆಸಿಬಿ ತಂದು ಕೆಡವಿ ಹಾಕುತ್ತದೆ. ಆದರೆ, ಸರ್ಕಾರಿ ನೌಕರರಲ್ಲಿಯೆ ಅತಿ ಹೆಚ್ಚು ವೇತನ ಪಡೆಯುವ ಐಎಎಸ್‌ ಶ್ರೇಣಿಯ ಅಧಿಕಾರಿಗಳಿಗೆ ಬಡಾವಣೆ ನಿರ್ಮಿಸಲು ಎಕರೆಗಟ್ಟಲೆ ಜಮೀನು ನೀಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಈವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಐಎಎಸ್‌ ಅಧಿಕಾರಿಗಳ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬಡಾವಣೆ ನಿರ್ಮಿಸಲು ಜಮೀನು ನೀಡುತ್ತಲೆ ಬಂದಿವೆ.

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು ಸೇರಿ ರಚಿಸಿಕೊಂಡಿರುವ ‘ದಿ ಮೆಟ್ರೊಪಾಲಿಟನ್‌  ಕೋ–ಆಪರೇಟಿವ್‌ ಹೌಸಿಂಗ್‌ ಸೊಸೈಟಿ ಲಿಮಿಟೆಡ್‌’ಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 25–30 ಎಕರೆ ಜಮೀನನ್ನು ನೀಡಿ ನಗರಾಭಿವೃದ್ಧಿ ಇಲಾಖೆ 2015ರ ಸೆಪ್ಟೆಂಬರ್‌ 1ರಂದು ಆದೇಶ ಹೊರಡಿಸಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಅರ್ಜಿ ಆಹ್ವಾನಿಸಿದಾಗ, 31 ಸಾವಿರ ಅರ್ಜಿಗಳು ಬಂದಿದ್ದವು.  ಈ ಪೈಕಿ 5 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡಲು ಬಿಡಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.

ವಿಧಾನಸೌಧದ ನೆಲಮಹಡಿಯ ಕೊಠಡಿ ಸಂಖ್ಯೆ 22–ಬಿಯಲ್ಲಿ ಕಚೇರಿ ಹೊಂದಿರುವ ಮೆಟ್ರೊ ಪಾಲಿಟನ್‌ ಹೌಸಿಂಗ್‌ ಸೊಸೈಟಿ ಲಿಮಿಟೆಡ್‌ 2013ರ ಅಕ್ಟೋಬರ್ 21ರಂದು ಬಿಡಿಎ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ, ಬಡಾವಣೆ ನಿರ್ಮಿಸಲು ಜಮೀನನ್ನು ಸಗಟು ಹಂಚಿಕೆ ಮಾಡುವಂತೆ ಕೋರಿತ್ತು.

  ಈ ಮನವಿಯಲ್ಲಿ, ‘ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸೇರಿದ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಸೀಗೇಹಳ್ಳಿ ಗ್ರಾಮದ ಸರ್ವೆ ನಂ. 1ರಿಂದ 33ರವರೆಗಿನ ಜಮೀನಿನಲ್ಲಿ 25 ಎಕರೆಯಿಂದ 30 ಎಕರೆ ಜಮೀನು ಸಗಟು ಹಂಚಿಕೆ ಮಾಡುವಂತೆ ಕೋರಿತ್ತು.

ಮನವಿ ಬಂದ ಕೇವಲ 11 ತಿಂಗಳಲ್ಲಿ, ಅಂದರೆ 2014ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಸಭೆ, 25ರಿಂದ 30 ಎಕರೆ ಜಮೀನು ಸಗಟು ಹಂಚಿಕೆ ಮಾಡಲು ತೀರ್ಮಾನ ತೆಗೆದುಕೊಂಡಿತ್ತು. 2015ರ ಸೆಪ್ಟೆಂಬರ್‌ 1ರಂದು ಆದೇಶ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆ, ಸಗಟು ಹಂಚಿಕೆ ಮಾಡಲು ಅನುಮೋದನೆ ನೀಡಿದೆ.

ಬಿಡಿಎ ನಿಯಮಗಳ ಪ್ರಕಾರ ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ದರ ನಿಗದಿ ಮಾಡದೇ, ಸಗಟು ರೂಪದಲ್ಲಿ ಹಂಚಲು ಅವಕಾಶವಿಲ್ಲ. ಹಾಗಿದ್ದರೂ 25–30 ಎಕರೆ ಜಮೀನು ನೀಡಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹಾಗಂತ, ಇದೇ ಮೊದಲ ಬಾರಿಗೆ ಸಾರಾಸಗಟಾಗಿ ಜಮೀನನ್ನು ಐಎಎಸ್‌ ಅಧಿಕಾರಿಗಳ ಸಹಕಾರ ಸಂಘಕ್ಕೆ ಕೊಟ್ಟಿಲ್ಲ. ಬಿಟಿಎಂ ಬಡಾವಣೆ, ಅರ್ಕಾವತಿ ಬಡಾವಣೆಯಲ್ಲಿ ಜಮೀನು ನೀಡಲಾಗಿತ್ತು. ಈಗ ಬಹುಕೋಟಿ ಬೆಲೆ ಬಾಳುವ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಎರಡು ಪ್ರತ್ಯೇಕ ಬಡಾವಣೆಗಳ ನಿರ್ಮಾಣಕ್ಕೆ  ಜಮೀನು ನೀಡಲಾಗಿತ್ತು.

ಅರ್ಕಾವತಿ ಬಡಾವಣೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇನ್ನೂ ನಿವೇಶನ ಹಂಚಿಕೆ ಮಾಡಿಲ್ಲ. ಆದರೆ, ಅದೇ ಬಡಾವಣೆಯಲ್ಲಿ 24.19 ಎಕರೆ ಭೂಮಿ ದರ ನಿಗದಿ ಮಾಡದೆ ಮೆಟ್ರೋಪಾಲಿಟನ್‌ ಹೌಸಿಂಗ್‌ ಸೊಸೈಟಿಗೆ ನೀಡಿದೆ.

ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಮುನ್ನ ನಿವೇಶನ ಬೇಡಿಕೆ ಅಂದಾಜಿಸಲು 12 ವರ್ಷಗಳ ಹಿಂದೆ ಅರ್ಜಿ ಆಹ್ವಾನಿಸಿದಾಗ, 80 ಸಾವಿರ ಅರ್ಜಿಗಳು ಬಂದಿದ್ದವು. 20 ಸಾವಿರ ನಿವೇಶನ ಹಂಚಿಕೆ ಮಾಡಲು  ಬಿಡಿಎ ಉದ್ದೇಶಿಸಿತ್ತು. ಸದ್ಯಕ್ಕೆ 8,800 ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿದೆ. ಉಳಿದವರಿಗೆ ನಿವೇಶನ ಸಿಕ್ಕಿಲ್ಲ.

ಸಾಮರ್ಥ್ಯದಿಂದ ಪಡೆದಿದ್ದೇವೆ–ಋತ್ವಿಕ್‌ ಪಾಂಡೆ
‘ನಮಗೆ ಸಾಮರ್ಥ್ಯ ಇದೆ, ಸಗಟು ಹಂಚಿಕೆ ಪಡೆದಿದ್ದೇವೆ. ಸದಸ್ಯರಲ್ಲದೇ ಇರುವವರಿಗೆ ಮಾಹಿತಿ ಕೊಡುವುದಿಲ್ಲ’ ಎಂದು ದಿ ಮೆಟ್ರೊಪಾಲಿಟನ್‌ ಹೌಸಿಂಗ್‌ ಸೊಸೈಟಿ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಋತ್ವಿಕ್‌ ಪಾಂಡೆ ಸಮರ್ಥಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ಸರ್ಕಾರದಿಂದ ಎಷ್ಟು ಭೂಮಿ ಹಂಚಿಕೆಯಾಗಿದೆ? ಎಷ್ಟು ನಿವೇಶನಗಳು? ಎಂದು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ‘ನೀವು ಸದಸ್ಯರಲ್ಲದೇ ಇರುವುದರಿಂದ ಯಾವುದೇ ಮಾಹಿತಿ ಕೊಡುವ ಅಗತ್ಯ ಇಲ್ಲ’ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.

ಸರ್ಕಾರದಿಂದ ಸಗಟು ಜಮೀನು ಪಡೆದು, ವಿಧಾನಸೌಧದ ನೆಲಮಹಡಿಯಲ್ಲಿ ಕಚೇರಿ ಹೊಂದಿದ್ದೀರಿ, ಬಿಡಿಎ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ನಿಮಗೆ ಕೊಟ್ಟಿಲ್ಲವೇ? ಎಂಬ ಪ್ರಶ್ನೆಗೆ, ‘ನಮ್ಮ ಸಾಮರ್ಥ್ಯದಿಂದ ಪಡೆದಿದ್ದೇವೆ. ನಿಮಗೆ ಉತ್ತರ ನೀಡಬೇಕಿಲ್ಲ’ ಎಂದು ಕರೆ ಕಡಿತ ಗೊಳಿಸಿದರು.

*
‘ಬಡವರಿಗೆ, ಮಧ್ಯಮ ವರ್ಗದವರಿಗೆ ನಿವೇಶನ ಹಂಚಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಅತಿ ಜರೂರಾಗಿ ಜಮೀನು ಮಾಡಿರುವುದರ ಹಿಂದಿನ ಹುನ್ನಾರ ಏನು?’
-ಜಗದೀಶ ಶೆಟ್ಟರ್, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT