ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ: ಬೆಳಕಾದ ‘ಜ್ಞಾನ ದೇಗುಲ’

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನ 2 ದಿನಗಳ ಶೈಕ್ಷಣಿಕ ಮೇಳಕ್ಕೆ ಸಂಭ್ರಮದ ಚಾಲನೆ, ಮಾಹಿತಿ ಪಡೆದ ನೂರಾರು ವಿದ್ಯಾರ್ಥಿಗಳು
Last Updated 23 ಮೇ 2015, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ನೀವು ಕೇವಲ ಉದ್ಯೋಗ ಆಕಾಂಕ್ಷಿಗಳಾಗಬೇಡಿ. ಸಿಕ್ಕಿರುವ ಕೆಲಸಕ್ಕೆ ತೃಪ್ತಿ ಪಡಬೇಡಿ. ಉದ್ಯೋಗದ ಸೃಷ್ಟಿಕರ್ತರಾಗಿ’
– ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್‌ ಆಂಡ್‌ ಸೆಮಿಕಂಡಕ್ಟರ್‌ ಅಸೋಸಿಯೇಷನ್‌ (ಐಇಎಸ್‌ಎ) ಅಧ್ಯಕ್ಷ ಎಂ.ಎನ್‌. ವಿದ್ಯಾಶಂಕರ್‌ ಅವರು ಭಾರಿ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತು ಇದು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’  ಪತ್ರಿಕೆಗಳು ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳದಲ್ಲಿ ಭಾಗಿಯಾಗಿದ್ದ ನೂರಾರು ವಿದ್ಯಾರ್ಥಿಗಳು ಭವಿಷ್ಯದ ಶೈಕ್ಷಣಿಕ ಆಯ್ಕೆಗೆ ಮಾಹಿತಿ ಪಡೆದರು.

‘ತಂತ್ರಜ್ಞಾನದ ದಾಪುಗಾಲಿನಿಂದ ಎಲ್ಲ ಕ್ಷೇತ್ರಗಳಲ್ಲಿ ಅಸಂಖ್ಯ ಅವಕಾಶಗಳು ಸೃಷ್ಟಿಯಾಗಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು, ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ವಿದ್ಯಾಶಂಕರ್‌ ಸಲಹೆ ನೀಡಿದರು.

‘ಡಿಜಿಟಲ್‌ ಯುಗದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ತಂತ್ರಜ್ಞಾನದ ಮೂಲಕ ಪರಿಹರಿಸಬಹುದು. ಇಂಟರ್‌ನೆಟ್‌ ಆಫ್‌ ತಿಂಗ್ಸ್‌ (ಸಾಧನಗಳ ನಡುವೆ ಸಂಪರ್ಕ) ಎಂಬ ಪರಿಕಲ್ಪನೆ ಕ್ಷಿಪ್ರವಾಗಿ ಬೆಳೆಯುತ್ತಿದೆ. ಅಮೆರಿಕದಂತಹ ರಾಷ್ಟ್ರಗಳಲ್ಲಿ ಈಗಾಗಲೇ ಇದು ಅಸ್ತಿತ್ವದಲ್ಲಿದೆ. ಮುಂದಿನ 5ರಿಂದ 10 ವರ್ಷಗಳ ಅವಧಿಯಲ್ಲಿ ಇದು ಭಾರತಕ್ಕೂ ಕಾಲಿಡಲಿದೆ’ ಎಂದು ವಿವರಿಸಿದರು.

‘ಮುಂದಿನ ಐದು ವರ್ಷಗಳಲ್ಲಿ ಗೀಸರ್‌, ವಾಷಿಂಗ್‌ ಮೆಶೀನ್‌, ರೆಫ್ರಿಜರೇಟರ್‌ ಸೇರಿದಂತೆ ನಾವು ಬಳಸುವ ಎಲ್ಲ ಎಲೆಕ್ಟ್ರಾನಿಕ್ಸ್‌ ವಸ್ತುಗಳು ಕೂಡ ಐಪಿ ವಿಳಾಸ ಹೊಂದಲಿವೆ. ಇದರಿಂದ ಅವುಗಳ ಪರಿಣಾಮಕಾರಿ ಬಳಕೆ ಸಾಧ್ಯವಾಗಲಿದೆ’ ಎಂದರು.

‘ಎಲೆಕ್ಟ್ರಾನಿಕ್ಸ್‌ ಕ್ಷೇತ್ರ ಊಹೆಗೂ ನಿಲುಕದ ರೀತಿಯಲ್ಲಿ ಬೆಳೆಯುತ್ತಿದೆ. 750 ಕೋಟಿ ಜನಸಂಖ್ಯೆ ಹೊಂದಿರುವ ಈ ಜಗತ್ತಿನಲ್ಲಿ ಈಗ 1,300ರಿಂದ 1,400 ಕೋಟಿ ‌ಸಾಧನಗಳನ್ನು ಬಳಸಲಾಗುತ್ತಿದೆ. ಇನ್ನು ಐದು ವರ್ಷಗಳಲ್ಲಿ ಈ ಸಂಖ್ಯೆ 5 ಸಾವಿರದಿಂದ 6 ಸಾವಿರ ಕೋಟಿಗೆ ಏರಲಿದೆ’ ಎಂದು ಪ್ರತಿಪಾದಿಸಿದರು.

‘ಭಾರತದಲ್ಲೇ ತಯಾರಿಸಿ’ ಯೋಜನೆಯನ್ನು ಪ್ರಸ್ತಾಪಿಸಿದ ಅವರು, 21ನೇ ಶತಮಾನ ಭಾರತದ್ದಾಗಬೇಕಾದರೆ, ದೇಶದ ತಯಾರಿಕಾ ಕ್ಷೇತ್ರ ಪ್ರಗತಿ ಹೊಂದಬೇಕು.  ‘ಭಾರತದಲ್ಲೇ ತಯಾರಿಸಿ’ ಪರಿಕಲ್ಪನೆ ಇದಕ್ಕೆ  ಅವಕಾಶ ಕಲ್ಪಿಸಿದೆ’ ಎಂದರು.

ನಿಮ್ಮ ಬಗ್ಗೆ ಮೊದಲು ಅರಿಯಿರಿ:  ಮ್ಯಾನೇಜ್‌ಮೆಂಟ್‌ ಶಿಕ್ಷಣದ ಕುರಿತಾಗಿ ಮಾತನಾಡಿದ ಬೆಂಗಳೂರಿನ ಐಐಎಂ ಪ್ರಾಧ್ಯಾಪಕ ಪ್ರೊ. ಎಸ್‌. ರಘುನಾಥ್‌, ‘ನಮ್ಮ ಬಗ್ಗೆಯೇ ನಮಗೆ ಗೊತ್ತಿಲ್ಲ. ಇನ್ನೊಬ್ಬರ ಬಗ್ಗೆಯೇ ನಾವು ಹೆಚ್ಚು ಮಾತನಾಡುತ್ತೇವೆ. ಮೊದಲು ನಿಮ್ಮ ಬಗ್ಗೆ ಅರಿಯಿರಿ’ ಎಂದು ಸಲಹೆ ನೀಡಿದರು.

‘ಮ್ಯಾನೇಜ್‌ಮೆಂಟ್‌ ಶಿಕ್ಷಣವನ್ನು ಆಯ್ಕೆ ಮಾಡುವ ಮುನ್ನ ಮೂರು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ ನಿಮ್ಮ ಸಾಮರ್ಥ್ಯದ ಬಗ್ಗೆ ಸ್ಪಷ್ಟತೆ ಇರಲಿ. ಎರಡನೆಯದಾಗಿ  ನಿಮ್ಮ ಆಸಕ್ತಿಯನ್ನು ಕೆರಳಿಸುವ ವಿಚಾರಗಳು ಯಾವುದು ಎಂಬುದು. ಮೂರನೆಯದಾಗಿ,  ಏನು ಮಾಡಿದರೆ ನಿಮ್ಮ ಜೀವನದ ಉದ್ದೇಶ ಈಡೇರುತ್ತದೆ? ಎಂಬುದನ್ನು ನೀವು ಮೊದಲೇ ನಿರ್ಧರಿಸಬೇಕು’ ಎಂದರು.

ಮ್ಯಾನೇಜ್‌ಮೆಂಟ್‌ ಶಿಕ್ಷಣ ಬಯಸುವ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಸಾಮರ್ಥ್ಯ ಇರುವುದು ಅತ್ಯಂತ ಮುಖ್ಯ. ಯಾಕೆಂದರೆ, ಮ್ಯಾನೇಜ್‌ಮೆಂಟ್‌ ಶಿಕ್ಷಣ ದಿಂದ ಜ್ಞಾನ, ಅವಕಾಶ, ಉದ್ಯೋಗ ಎಲ್ಲವೂ ಸಿಗುತ್ತದೆ. ಆದರೆ, ನಾಯಕತ್ವ ವಹಿಸುವ ಸಾಮರ್ಥ್ಯವನ್ನು ನೀಡುವುದಿಲ್ಲ’ ಎಂದರು.

ಸಮಸ್ಯೆ ಅಥವಾ ಸವಾಲುಗಳನ್ನು ಹೇಗೆ ಸಮರ್ಥವಾಗಿ ಪರಿಹರಿಸಬಹುದು ಎಂಬುದನ್ನು ಮ್ಯಾನೇಜ್‌ಮೆಂಟ್‌ ಶಿಕ್ಷಣ ಹೇಳುತ್ತದೆ ಎಂಬುದನ್ನು ವಿವರಿಸಿದರು.

ಮೂರು ‘ಸಿ’ ಮುಖ್ಯ: ಕಾಮೆಡ್‌–ಕೆ ಸೀಟು ಹಂಚಿಕೆ ಪ್ರಕ್ರಿಯೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಮಾತನಾಡಿದ ಎಂ.ಎಸ್‌. ರಾಮಯ್ಯ  ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ಪ್ರಾಧ್ಯಾಪಕ ಮತ್ತು ಕಾಮೆಡ್‌–ಕೆಯ ಪ್ರತಿನಿಧಿಯಾಗಿರುವ ಡಾ. ಎನ್‌. ಕಿಶೋರ್‌ ಆಳ್ವ, ‘ವೈದ್ಯರಾಗಲು ಬಯಸುವವರು ಮೂರು ‘ಸಿ’ ಗಳನ್ನು (ಕಂಪ್ಯಾಷನ್‌, ಕಮಿಟ್‌ಮೆಂಟ್‌ ಮತ್ತು ಕಾಂಪಿಟೆನ್ಸಿ) ಹೊಂದಿರಬೇಕು’ ಎಂದರು.

‘ರೋಗಿಗಳೊಂದಿಗೆ ಸಹಾನುಭೂತಿಯಿಂದ ವರ್ತಿಸದವನು ಉತ್ತಮ ವೈದ್ಯನಾಗಲು ಸಾಧ್ಯವಿಲ್ಲ. ವೈದ್ಯರ ಧೈರ್ಯದ ಮಾತುಗಳಿಗೆ ರೋಗಿಗಳನ್ನು ಗುಣಪಡಿಸುವ ಸಾಮರ್ಥ್ಯವಿರುತ್ತದೆ’ ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೋಡಲ್‌ ಅಧಿಕಾರಿ ಜಿಯಾಉಲ್ಲಾ ಖಾನ್‌ ಅವರು ಸಿಇಟಿ ಕೌನ್ಸೆಲಿಂಗ್‌, ಪ್ರವೇಶ ಪ್ರಕ್ರಿಯೆಯ ಬಗ್ಗೆ ವಿವರಿಸಿದರು.

ಪ್ಯಾರಾ ಮೆಡಿಕಲ್‌ಗೆ ಬೇಡಿಕೆ: ‘ವೈದ್ಯಕೀಯ ಸೀಟು ಸಿಗದವರು ಹತಾಶರಾಗಬೇಕಿಲ್ಲ. ಪ್ಯಾರಾ ಮೆಡಿಕಲ್ ಕ್ಷೇತ್ರದಲ್ಲಿ ಅಸಂಖ್ಯ ಅವಕಾಶಗಳಿವೆ. 1000 ಹಾಸಿಗೆಗಳ ಆಸ್ಪತ್ರೆಗೆ 200 ವೈದ್ಯರು ಮಾತ್ರ ಸಾಕು. ಆದರೆ, 2000 ಕ್ಕೂ ಹೆಚ್ಚು ಇತರೆ ಸಿಬ್ಬಂದಿ ಬೇಕು. ವಿದೇಶಗಳಲ್ಲೂ ಕೂಡ ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ ಬೇಡಿಕೆ ಇದೆ’ ಎಂದು ವಿವರಿಸಿದರು.

ಇಂದು ಏನೇನು...?: ಬೆಳಿಗ್ಗೆ 11: ಇಂಟೆಲ್‌ ಏಷ್ಯಾ ಪೆಸಿಫಿಕ್‌ ಮತ್ತು ಜಪಾನ್‌ ವಲಯದ ಇಂಟಲ್ ಸಾಫ್ಟ್‌ವೇರ್‌ ಆಂಡ್‌ ಸರ್ವಿಸಸ್‌ ಗ್ರೂಪ್‌ ನಿರ್ದೇಶಕ ನರೇಂದ್ರ ಭಂಡಾರಿ ಅವರಿಂದ ‘ಸ್ಕಿಲ್ಸ್ ಡಿಜಿಟಲ್‌ ಫ್ಯೂಚರ್‌’ ಎಂಬ ವಿಷಯದ ಮೇಲೆ ಉಪನ್ಯಾಸ. ಬೆಳಿಗ್ಗೆ 11.30: ಸಿಇಟಿ  ಕೌನ್ಸಲಿಂಗ್‌ ಪ್ರಕ್ರಿಯೆಯ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಪ್ರತಿನಿಧಿಯಿಂದ ವಿವರಣೆ
ಸ್ಥಳ: ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನ, ಬೆಂಗಳೂರು

90 ಸಂಸ್ಥೆಗಳು ಭಾಗಿ
ಎರಡು ದಿನಗಳ ‘ಜ್ಞಾನದೇಗುಲ’ ಶೈಕ್ಷಣಿಕ ಮೇಳದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ  ಜಿಲ್ಲೆಗಳ 90ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಿವೆ.

ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌, ಕೃಷಿ, ನರ್ಸಿಂಗ್‌,  ಬ್ಯುಸಿನೆಸ್‌, ಮ್ಯಾನೇಜ್‌ಮೆಂಟ್‌, ಆತಿಥ್ಯ, ಮಾರ್ಕೆಟಿಂಗ್‌, ಕಾನೂನು,  ಆನಿಮೇಷನ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳು ತಮ್ಮ ಮಳಿಗೆಗಳನ್ನು ತೆರೆದಿವೆ. ಇವುಗಳ ಜೊತೆಗೆ,  ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ‌ಸೇರಿದಂತೆ ವಿವಿಧ ಬ್ಯಾಂಕುಗಳು ಕೂಡ ಮೇಳದಲ್ಲಿ ಭಾಗವಹಿಸಿವೆ.

ಅಂಕಿ ಅಂಶಗಳು
2 ದಿನಗಳ ಮೇಳ
90 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿ
1,000 ಮೇಳದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT