ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚಾರದ ಕೊರತೆ; ರೋಗಿಗಳ ವಲಸೆ

Last Updated 18 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ದಾವಣಗೆರೆಯಿಂದ ಚಿಕಿತ್ಸೆಗಾಗಿ ಹೊರ ಜಿಲ್ಲೆಗಳಿಗೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇಲ್ಲಿಂದ ಉಡುಪಿ, ಶಿವಮೊಗ್ಗ ಕಡೆಗೆ ಹೊರಡುವ ಪ್ರತಿಯೊಂದು ಬಸ್‌ ತುಂಬಿ ತುಳುಕಾಡುತ್ತದೆ. ಸೀಟು ಭರ್ತಿ ಯಾದರೂ ಜನ ನಿಂತುಕೊಂಡೇ ಪ್ರಯಾಣಿ­ಸುತ್ತಾರೆ. ಅಲ್ಲಿ ಬಡವ, ಬಲ್ಲಿದ ಎಂಬ ಭೇದ ಇಲ್ಲ. ಅವರೆಲ್ಲರೂ ಹೀಗೆ ಗುಳೇ ಹೋಗುವುದು ಆಸ್ಪತ್ರೆಗಳಿಗೆ.

ದಾವಣಗೆರೆ ನಗರವೊಂದರಿಂದಲೇ ನಿತ್ಯ ಉಡುಪಿಯ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಸುಮಾರು 400. ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಅಂದಾಜು 400. ಇನ್ನು ಸ್ವಂತ ವಾಹನದಲ್ಲಿ ಪ್ರಯಾಣಿಸುವವರೂ ಇದ್ದಾರೆ. ಒಟ್ಟಾರೆ ಅಂದಾಜು ಒಂದು ಸಾವಿರ ಜನ ಅಲ್ಲಿಗೆ ಚಿಕಿತ್ಸೆಗೆ ಧಾವಿಸುತ್ತಾರೆ.

ದಾವಣಗೆರೆ ನಗರದಿಂದ ಉಡುಪಿಗೆ ನಿತ್ಯ ಎಂಟು ಬಸ್‌ಗಳು ಪ್ರಯಾಣ ಬೆಳೆಸುತ್ತವೆ. ಅದರಲ್ಲಿ ಐದು ಖಾಸಗಿ, ಮೂರು ಸರ್ಕಾರಿ ಬಸ್‌ಗಳು. ಇವುಗಳ ಜತೆಗೆ ಜಗಳೂರು, ಹರಿಹರ, ಹರಪನಹಳ್ಳಿ ತಾಲ್ಲೂಕುಗಳಿಂದಲೂ ಬಸ್‌ಗಳು ಹೊರಡುತ್ತವೆ. ಇವುಗಳಲ್ಲಿ ಚಿಕಿತ್ಸೆ ಸಲುವಾಗಿ ಪಯಣಿಸುವವರೇ ಹೆಚ್ಚು. ಇನ್ನು ಶಿವಮೊಗ್ಗ ಜಿಲ್ಲೆಗೆ ಚಿಕಿತ್ಸೆಗೆ ತೆರಳುವ ಪ್ರಯಾಣಿಕರಿಗೆ  ಲೆಕ್ಕವೇ ಇಲ್ಲ.

ದಾವಣಗೆರೆ ರಾಜ್ಯದ ಭೂಪಟದಲ್ಲಿ ಮಧ್ಯ­ಭಾಗ­ದಲ್ಲಿದೆ. ಸಂಪರ್ಕ ಸಂಚಾರ ಸುವ್ಯವಸ್ಥಿತ­ವಾಗಿದೆ. ವಾಣಿಜ್ಯ–ವಿದ್ಯಾಸಂಗಮದ ಈ ಊರಲ್ಲಿ ಎರಡು ವೈದ್ಯಕೀಯ, ಒಂದು ದಂತ­ವೈದ್ಯ­ಕೀಯ ಕಾಲೇಜುಗಳಿವೆ. ಜಿಲ್ಲೆಯಲ್ಲಿ ಸರ್ಕಾರಿ– ಖಾಸಗಿ ಸೇರಿ 200ಕ್ಕೂ ಹೆಚ್ಚು ಆಸ್ಪತ್ರೆಗಳಿವೆ. ಚಿಗಟೇರಿ ಜಿಲ್ಲಾ ಆಸ್ಪತ್ರೆ ರಾಜ್ಯ­ದಲ್ಲೇ ಎರಡನೇ ಅತಿ ದೊಡ್ಡ ಆಸ್ಪತ್ರೆಯಾಗಿದೆ. ಈ ಎಲ್ಲಾ ಆಸ್ಪತ್ರೆಗಳಲ್ಲಿಯೂ ತಜ್ಞವೈದ್ಯರಿ­ದ್ದಾರೆ; ಅತ್ಯಾಧುನಿಕ ಉಪಕರಣಗಳಿವೆ.

ಇಷ್ಟೆಲ್ಲಾ ವೈದ್ಯಕೀಯ ಸೌಲಭ್ಯಗಳಿದ್ದೂ, ಜನ ವೈದ್ಯಕೀಯ ಚಿಕಿತ್ಸೆಗಾಗಿ ಹೊರ ಜಿಲ್ಲೆಗಳಿಗೆ ಹೋಗುವುದೇಕೆ? ಸಣ್ಣ–ಪುಟ್ಟ ಕಾಯಿಲೆಗಳಿಗೆಲ್ಲ ರೋಗಿಗಳು ಸಾಮೂಹಿಕವಾಗಿ ಗುಳೇ ಹೋಗು­ವುದೇಕೆ? ಇವು ಉತ್ತರ ಸಿಗದ ಪ್ರಶ್ನೆಗಳೇನೂ ಅಲ್ಲ.
ಹೆಜ್ಜೆ, ಹೆಜ್ಜೆಗೂ ಹಣ ಕೀಳುವ ಆಸ್ಪತ್ರೆ ಸಿಬ್ಬಂದಿ, ಮುಖ ನೋಡದೆ ಬಿಲ್ಲು ಬರೆಯುವ ವೈದ್ಯರು, ಸಕಾಲಕ್ಕೆ ಸಿಗದ ವೈದ್ಯಕೀಯ ಉಪ ಚಾರ ಇಂತಹ ಕಾರಣಗಳಿಂದಾಗಿ ಬೇಸತ್ತ ರೋಗಿ­ಗಳು  ಹೊರ ಜಿಲ್ಲೆಗಳ ಹಾದಿ ಹಿಡಿದಿರುವುದು ಮೇಲ್ನೋಟಕ್ಕೇ ತಿಳಿಯುತ್ತದೆ.

ಸರ್ಕಾರಿ ವೈದ್ಯರು ಕರ್ತವ್ಯದ ವೇಳೆ ಬೇರೆಡೆ ಕೆಲಸಕ್ಕೆ ಹೋಗಬಾರದು. ಒಂದು ವೇಳೆ ರಜಾ ಅವಧಿಯಲ್ಲಿ ಬೇರೆ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯ ಇದ್ದರೂ, ವೈದ್ಯಾಧಿಕಾರಿಗಳ ಅನು ಮತಿ ಕಡ್ಡಾಯ. ಈ ನಿಯಮ ಇದ್ದರೂ, ದಾವ­ಣಗೆರೆಯಲ್ಲಿ ಪಾಲನೆಯಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಬಹು­ಪಾಲು ವೈದ್ಯರು ಖಾಸಗಿ ಚಿಕಿತ್ಸಾಲಯಗಳನ್ನು  ಹೊಂದಿ­ದ್ದಾರೆ.  ತಾವು ಕೆಲಸ ಮಾಡಬೇಕಾದ ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಚಿಕಿತ್ಸಾಲ­ಯಗಳಲ್ಲಿ ಪತ್ತೆಯಾಗುವ ಈ ವೈದ್ಯರು ಅಲ್ಲಿಗೆ ಬರುವ ರೋಗಿಗಳನ್ನು ಮುಖ ಎತ್ತಿ ಕೂಡ ನೋಡದೇ ಉಪಚರಿಸುವ ಪರಿ ಗಾಬರಿ ಹುಟ್ಟಿಸುತ್ತದೆ.

ದಾವಣಗೆರೆಯ ಖಾಸಗಿ ಆಸ್ಪತ್ರೆಗಳು ಒಂದಲ್ಲ ಒಂದು ರೀತಿಯಲ್ಲಿ ರಾಜಕಾರಣಿಗಳ ಹಿಡಿತದಲ್ಲಿರುವುದರಿಂದ ಮಠ ಹಾಗೂ ಜಾತಿ ಅಂಶಗಳು ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿ ನೇಮಕಾತಿಯಲ್ಲಿ ಪ್ರಭಾವ ಬೀರುತ್ತವೆ. ಹಾಗಾಗಿ, ಗುಣಮಟ್ಟದ ಚಿಕಿತ್ಸೆಯನ್ನು ಇಲ್ಲಿಯ ಜನರು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದು ಕೆಲವು ಪ್ರಜ್ಞಾವಂತರ ಅಭಿಪ್ರಾಯ.
ರಾಜ್ಯದ ಕೆಲವೇ ದೊಡ್ಡ  ಆಸ್ಪತ್ರೆಗಳನ್ನು ಬಿಟ್ಟರೆ  ಒಂದು ಸಾವಿರ ಹಾಸಿಗೆ ಹೊಂದಿರುವುದು ಇಲ್ಲಿಯ ಚಿಗಟೇರಿ ಜಿಲ್ಲಾ ಆಸ್ಪತ್ರೆ. ಈ ಆಸ್ಪತ್ರೆಯಲ್ಲಿ ಜಿಲ್ಲೆಯ ಎರಡು  ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳೇ ಈಗ ವೈದ್ಯರು. ಒಂದು ಕೈಯಲ್ಲಿ ಮೊಬೈಲ್‌, ಇನ್ನೊಂದು ಕೈಯಲ್ಲಿ ಸ್ಟೆಥಾಸ್ಕೋಪ್‌ ಹಿಡಿದು ಬರುವ ಈ ತರಬೇತಿ ವೈದ್ಯರು, ರೋಗಿಗಳನ್ನು ಉಪಚರಿಸುವ ಪರಿ ದೇವರಿಗೇ ಪ್ರೀತಿ. ಸಣ್ಣ ನೆಗಡಿ, ಕೆಮ್ಮಿಗೂ ಸಾವಿರಾರು ರೂಪಾಯಿ ಬಿಲ್. ಅವರು ಬರೆದು ಕೊಡುವ ಔಷಧಗಳು ಆಸ್ಪತ್ರೆಯಲ್ಲಿ ಸಿಗುವುದಕ್ಕೆ ಸಾಧ್ಯವೇ ಇಲ್ಲ!

‘ಕಾಯಿಲೆ ತೋರಿಸಲು ಬಂದರೆ ವೈದ್ಯರು ಸಕಾಲಕ್ಕೆ ಸಿಗುವುದಿಲ್ಲ; ಸಿಕ್ಕರೂ ಮುಖ ಕೊಟ್ಟು ಮಾತನಾಡುವುದಿಲ್ಲ.  ಅವರು ಬರೆದು ಕೊಡುವ ಔಷಧಗಳನ್ನು ನಾವು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಜತೆಗೆ ಹಣಕ್ಕಾಗಿ ಆಸ್ಪತ್ರೆ ಸಿಬ್ಬಂದಿ ಪೀಡಿಸುವುದು ಬೇರೆ. ಇಷ್ಟಕ್ಕೂ ಕಾಯಿಲೆ ವಾಸಿಯಾಗುತ್ತದೆಂಬ ಖಾತ್ರಿ ಇಲ್ಲ. ಇದು ಕೇವಲ ಸರ್ಕಾರಿ ಆಸ್ಪತ್ರೆಯ ಸಮಸ್ಯೆ ಅಲ್ಲ; ಖಾಸಗಿ ಆಸ್ಪತ್ರೆಯಲ್ಲೂ ಇದೇ ಹಣೆಬರಹ. ಹಾಗಾಗಿ, ಯಾವ ವಿಶ್ವಾಸ ಇಟ್ಟುಕೊಂಡು ಆಸ್ಪತ್ರೆಗೆ ಬರಬೇಕು; ಏಕೆ ಇಲ್ಲಿನ ವೈದ್ಯರಿಗೆ ತೋರಿಸಬೇಕು’ ಎಂಬ ಜಗಳೂರಿನ ಮೈಲಾರಪ್ಪ ಅವರ ಪ್ರಶ್ನೆಗಳಲ್ಲಿ ಅರ್ಥವಿದೆ.

‘ಉಡುಪಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಅಲೆದಾಡಿಸುವ ಸಮಸ್ಯೆ ಎದುರಾಗುವುದಿಲ್ಲ. ವೈದ್ಯರು ಸಿಕ್ಕೇ ಸಿಗುತ್ತಾರೆ. ಎಷ್ಟೇ ಒತ್ತಡದಲ್ಲಿದ್ದರೂ ರೋಗಿಗಳ ಕಷ್ಟ–ಸುಖಗಳನ್ನು ಆಲಿಸುತ್ತಾರೆ; ಆತ್ಮೀಯವಾಗಿ ಉಪಚರಿಸುತ್ತಾರೆ. ಅಷ್ಟಕ್ಕೇ ರೋಗಿಯ ಕಾಯಿಲೆ ಅರ್ಧ ವಾಸಿಯಾಗಿಬಿಟ್ಟಿರುತ್ತದೆ. ನಿಮಗೆ ಇಂತಹ ಕಾಯಿಲೆ ಇದೆ. ಇದಕ್ಕೆ ಇಂತಹ ಚಿಕಿತ್ಸೆ ಅಗತ್ಯ ಇದೆ. ಇಷ್ಟು ಖರ್ಚಾಗುತ್ತದೆ. ಇಷ್ಟು ದಿವಸದ ಒಳಗೆ ನೀವು ಚಿಕಿತ್ಸೆ ಮಾಡಿಸಿ­ಕೊಳ್ಳ­ಬೇಕು. ಈ ರೀತಿಯ ಸಣ್ಣ–ಪುಟ್ಟ ವಿವರಗಳನ್ನೂ ರೋಗಿಗೆ ತಿಳಿಸಿ, ಮನದಟ್ಟು ಮಾಡಿಸುತ್ತಾರೆ’ ಎನ್ನುವುದು ಅನೇಕ ರೋಗಿಗಳ ಅನುಭವ.

ದಾವಣಗೆರೆ ಜಿಲ್ಲೆಯ 577 ಗ್ರಾಮಗಳಲ್ಲಿ ಪ್ಲೋರೈಡ್‌ಯುಕ್ತ ನೀರಿದೆ. ಆಸ್ತಮಾ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಡೆಂಗೆ, ಎಚ್‌1ಎನ್‌1ಗೆ ಬಲಿಯಾಗುವವರ ಸಂಖ್ಯೆ ಇಲ್ಲಿಯೇ ಹೆಚ್ಚು. ಇಲ್ಲಿಯ ಜನರ ಬದಲಾದ ಜೀವನಶೈಲಿಯಿಂದ ರಕ್ತದೊತ್ತಡ, ಮಧುಮೇಹ, ಹೃದಯಾಘಾತ ಪ್ರಕರಣಗಳು ಅಧಿಕವಾಗಿವೆ. ಈ ಎಲ್ಲಾ ರೋಗಗಳ ಜತೆ ಸಣ್ಣಪುಟ್ಟ ಚಳಿ–ಜ್ವರಕ್ಕೂ ಇಲ್ಲಿಯ ಜನ ಆಸ್ಪತ್ರೆ ಹುಡುಕಿಕೊಂಡು ಹೊರ ಜಿಲ್ಲೆಗಳಿಗೆ ವಲಸೆ ಹೋಗುತ್ತಾರೆಂದರೆ ಪರಿಸ್ಥಿತಿ ಹೇಗಿರಬಹುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT