ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ನೇಮಕ: ಹೊರ ರಾಜ್ಯದ ಎಂ.ಫಿಲ್ ಹಾವಳಿ

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ 2009ರಲ್ಲಿ ನಡೆಸಿದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ವಿವಿಧ ವಿಷಯಗಳ ಉಪನ್ಯಾಸಕರ ನೇಮಕಾತಿಯಲ್ಲಿಯೂ ಸಾಕಷ್ಟು ಅಕ್ರಮಗಳು ನಡೆದಿವೆ ಎಂಬ ದೂರು ವ್ಯಾಪಕವಾಗಿದೆ.

2,550 ಉಪನ್ಯಾಸಕರ ಹುದ್ದೆಗೆ ಕೆಪಿಎಸ್‌ಸಿ ನೇಮಕಾತಿ ನಡೆಸಿತು. ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಯು.ಜಿ.ಸಿ. ರೂಪಿಸಿದ ಮಾರ್ಗಸೂಚಿ  ಉಲ್ಲಂಘಿಸಲಾಗಿದೆ ಹಾಗೂ ಕೆಪಿಎಸ್‌ಸಿ ನಿಯಮಾವಳಿಯನ್ನೂ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇತ್ತೀಚೆಗೆ ಈ ಬಗ್ಗೆ ತೀರ್ಪು ನೀಡಿದ ಹೈಕೋರ್ಟ್ ಕೆಲವು ವಿಷಯಗಳ ಅತಿಥಿ ಉಪನ್ಯಾಸಕರಿಗೆ ನೇಮಕಾತಿ ಸಂದರ್ಭದಲ್ಲಿ ನೀಡಿದ ಕೃಪಾಂಕ ರದ್ದು ಮಾಡುವಂತೆ ಆದೇಶಿಸಿ ನೇಮಕಾತಿ ಪಟ್ಟಿಯನ್ನು ಪುನರ್ ಸಿದ್ಧಪಡಿಸುವಂತೆ ಸೂಚಿಸಿದೆ.

ಕೆಪಿಎಸ್‌ಸಿ ನಿಯಮಾವಳಿ ಪ್ರಕಾರವೇ ಯಾವುದೇ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರಿಗೆ ಅವರು ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಒಂದರಂತೆ ಕೃಪಾಂಕ ನೀಡಬೇಕು. ಅಲ್ಲದೆ ಅವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಅಥವಾ ಎಂ.ಫಿಲ್ ಪಡೆದುಕೊಂಡಿದ್ದರೆ ಅದಕ್ಕೂ ಕೃಪಾಂಕ ನೀಡಬೇಕು. ಅತಿಥಿ ಉಪನ್ಯಾಸಕರಿಗೆ ಕೃಪಾಂಕ ನೀಡಬೇಕು ಎಂಬ ನಿಯಮವೇ ಇರಲಿಲ್ಲ. ಆದರೂ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರಿಗೆ ಕೃಪಾಂಕ ನೀಡಿ ನೇಮಕಾತಿ ಮಾಡಿಕೊಳ್ಳಲಾಗಿತ್ತು.

ಪಿಎಚ್‌ಡಿ ಪಡೆದವರನ್ನು ಕೈಬಿಟ್ಟು ಎಂಫಿಲ್ ಪಡೆದವರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ. 2,550 ಉಪನ್ಯಾಸಕರ ಹುದ್ದೆ ಪೈಕಿ 1,516 ಹುದ್ದೆಗಳಿಗೆ ಎಂಫಿಲ್ ಪಡೆದವರನ್ನೇ ಆಯ್ಕೆ ಮಾಡಲಾಗಿದೆ. ಇದರಲ್ಲಿಯೂ ಬಹುತೇಕ ಮಂದಿ ಹೊರ ರಾಜ್ಯದ ವಿಶ್ವವಿದ್ಯಾಲಯದಿಂದ ಎಂಫಿಲ್ ಪಡೆದವರಾಗಿದ್ದಾರೆ. ತಮಿಳುನಾಡಿನ ಕರೈಕುಡಿ ಅಳಗಪ್ಪ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದ 417 ಹಾಗೂ ಸೇಲಂನ ವಿನಾಯಕ ಮಿಷನ್ ವಿಶ್ವವಿದ್ಯಾಲಯದಿಂದ ಎಂಫಿಲ್ ಪಡೆದ 161 ಅಭ್ಯರ್ಥಿಗಳಿಗೆ ಕೆಲಸ ಸಿಕ್ಕಿದೆ. ಇದಲ್ಲದೆ ಹೊರ ರಾಜ್ಯದ ಇತರ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದವರಿಗೂ ಕೆಲಸ ಸಿಕ್ಕಿದೆ.

ಎಂ.ಫಿಲ್ ಪದವಿ ಹೊಂದಿರುವ ಅಭ್ಯರ್ಥಿಗಳು, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ಉತ್ತೀರ್ಣರಾಗಿರಬೇಕು ಎಂಬ ನಿಬಂಧನೆ ಇಲ್ಲ ಎಂದು ಕೆಪಿಎಸ್‌ಸಿ ಅಧಿಸೂಚನೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಅಳಗಪ್ಪ, ಪೆರಿಯಾರ್, ಭಾರತಿದಾಸನ್, ವಿನಾಯಕ ಮಿಷನ್, ಮಧುರೈ ಕಾಮರಾಜ್ ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯಗಳಿಂದ ದೂರಶಿಕ್ಷಣದ ಮೂಲಕ ಎಂ.ಫಿಲ್ ಪದವಿ ಪಡೆದ ಅಭ್ಯರ್ಥಿಗಳೂ ಉಪನ್ಯಾಸಕರ ಹುದ್ದೆಗೆ ಅರ್ಜಿ ಹಾಕಿದ್ದರು.

ಈ ಕುರಿತು ಕೂಡ ಹೈಕೋರ್ಟ್ ಆದೇಶ ನೀಡಿ `ಯಾವುದೇ ಮಾನದಂಡಗಳಿಗೆ ಬದ್ಧವಾಗದ ವಿಶ್ವವಿದ್ಯಾಲಗಳಿಂದ ಎಂ.ಫಿಲ್ ಪದವಿ ಪಡೆದ ಅಭ್ಯರ್ಥಿಗಳು ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಗತ್ಯವಿಲ್ಲ ಎಂಬ ರಿಯಾಯಿತಿ ನೀಡುವುದನ್ನು ಮುಂದುವರಿಸಬೇಕೇ ಬೇಡವೇ ಎಂಬ ಕುರಿತು ಯುಜಿಸಿ ಮತ್ತು ರಾಜ್ಯ ಸರ್ಕಾರ ಪರಿಶೀಲನೆ ನಡೆಸಬೇಕು' ಎಂದು ಹೇಳಿದೆ.

ಎಂಫಿಲ್ ಪದವಿ ಆಧಾರದಲ್ಲಿ ಉಪನ್ಯಾಸಕರಾಗಿ ಆಯ್ಕೆಯಾದವರಲ್ಲಿ ಹೊರ ರಾಜ್ಯದ ವಿಶ್ವವಿದ್ಯಾಲಯಗಳಿಂದ ಎಂಫಿಲ್ ಪಡೆದವರೇ ಹೆಚ್ಚಿದ್ದಾರೆ. ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ 80 ಅಭ್ಯರ್ಥಿಗಳು ಆಯ್ಕೆಯಾದರೆ ಹೊರ ರಾಜ್ಯದ ವಿಶ್ವವಿದ್ಯಾಲಯಗಳಿಂದ ದೂರ ಶಿಕ್ಷಣದ ಮೂಲಕ ಎಂಫಿಲ್ ಪದವಿ ಪಡೆದ 311 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದ ಒಬ್ಬರೂ ಆಯ್ಕೆಯಾಗಿಲ್ಲ. ಎಲ್ಲ 5 ಮಂದಿಯೂ ಹೊರ ರಾಜ್ಯದ ವಿಶ್ವವಿದ್ಯಾಲಯಗಳ ಪದವೀಧರರೇ ಆಗಿದ್ದಾರೆ. ಕಂಪ್ಯೂಟರ್ ವಿಜ್ಞಾನದಲ್ಲಿ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ 7 ಮಂದಿ ಆಯ್ಕೆಯಾದರೆ ಹೊರ ರಾಜ್ಯದಿಂದ ಎಂಫಿಲ್ ಪದವಿ ಪಡೆದ 113 ಮಂದಿ ಆಯ್ಕೆಯಾಗಿದ್ದಾರೆ.

ರಸಾಯನ ಶಾಸ್ತ್ರ, ಇತಿಹಾಸ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಮಾತ್ರ ಕರ್ನಾಟಕದ ವಿಶ್ವವಿದ್ಯಾಲಯಗಳ ಅಭ್ಯರ್ಥಿಗಳು ತುಸು ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಪಡೆದುಕೊಂಡಿದ್ದಾರೆ. ಉಳಿದಂತೆ ಎಲ್ಲ ವಿಷಯಗಳಲ್ಲಿಯೂ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ದೂರ ಶಿಕ್ಷಣ ಮೂಲಕ ಪದವಿ ಪಡೆದವರು ಆಯ್ಕೆಯಾಗಿದ್ದಾರೆ.

ಕೃಪಾಂಕವಲ್ಲದೆ ಇನ್ನೂ ಹಲವಾರು ಅಕ್ರಮಗಳು ಇಲ್ಲಿ ನಡೆದಿರುವುದು ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿಯುತ್ತದೆ. ಶಾಲಾ ದಾಖಲಾತಿಯಲ್ಲಿ `ಹಿಂದೂ ಬೋವಿ' ಎಂದು ಇದ್ದವರೂ ಕೂಡ ನೇಮಕಾತಿ ಸಂದರ್ಭದಲ್ಲಿ `ಹಿಂದೂ ಗಂಗಾಮತ' ಎಂದು ಪ್ರಮಾಣ ಪತ್ರವನ್ನು ಪಡೆದುಕೊಂಡು ಆಯ್ಕೆಯಾಗಿದ್ದಾರೆ. ಅದೇ ರೀತಿ `ಹಿಂದೂ ನಾಯಕ' ಎಂದು ಶೈಕ್ಷಣಿಕ ದಾಖಲಾತಿಯಲ್ಲಿದ್ದರೂ ಕೆಪಿಎಸ್‌ಸಿ ಸಂದರ್ಶನದ ವೇಳೆಗೆ `ಗಂಗಾಮತ' ಎಂದು ಬದಲಾಯಿಸಿಕೊಂಡು ಬಂದವರಿಗೂ ಕೆಪಿಎಸ್‌ಸಿ ಕೆಲಸ ನೀಡಿದೆ.

ಶಾಲಾ ದಾಖಲಾತಿಯಲ್ಲಿ `ಮುಸ್ಲಿಂ' ಎಂದು ಇದ್ದವರು ಸಂದರ್ಶನದ ಹೊತ್ತಿನಲ್ಲಿ `ದರ್ವೇಸು' ಎಂಬ ಪ್ರಮಾಣ ಪತ್ರ ಪಡೆದುಕೊಂಡು ಪ್ರವರ್ಗ-1ರ ಆಧಾರದಲ್ಲಿ ಆಯ್ಕೆಯಾಗಿದ್ದಾರೆ. ಶಾಲಾ ದಾಖಲಾತಿಯಲ್ಲಿ `ತೆಲುಗರು' ಎಂಬ ಜಾತಿ ಇದ್ದವರು ಸಂದರ್ಶನಕ್ಕೆ ಬರುವ ವೇಳೆಗೆ `ತೆಲುಗು ಗೌಡ' ಎಂಬ ಪ್ರಮಾಣ ಪತ್ರವನ್ನು ಸಲ್ಲಿಸಿ ಆಯ್ಕೆಯಾಗಿದ್ದಾರೆ. ಈ ಎಲ್ಲ ಪ್ರಮಾಣ ಪತ್ರಗಳನ್ನು ಆಯಾ ತಹಶೀಲ್ದಾರರೇ ನೀಡಿದ್ದಾರೆ.

ಕೆಪಿಎಸ್‌ಸಿ ನಡೆಸುವ ನೇಮಕಾತಿಯಲ್ಲಿ ಮೀಸಲಾತಿ ಬದಲಾವಣೆಯಾಗುವುದು ಮಾಮೂಲು. ಇದಲ್ಲದೆ ಯಾವುದೇ ಮೀಸಲಾತಿ ಆಧಾರದಲ್ಲಿಯೂ ನೌಕರಿ ಪಡೆಯಬಹುದು ಎನ್ನುವುದನ್ನೂ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ತೋರಿಸಿಕೊಟ್ಟಿದೆ. ಇದಲ್ಲದೆ ಪಿಎಚ್‌ಡಿ ಪದವಿ ಪಡೆದವರನ್ನು ಬಿಟ್ಟು ಎಂಫಿಲ್ ಪಡೆದವರಿಗೆ ಆದ್ಯತೆ ನೀಡಿದ ಹಾಗೂ ಕಡಿಮೆ ಅಂಕ ಪಡೆದವರಿಗೆ ಉದ್ಯೋಗ ನೀಡಿ ಹೆಚ್ಚು ಅಂಕ ಪಡೆದವರನ್ನು ಕೈಬಿಟ್ಟ ಉದಾಹರಣೆಗಳೂ ಇವೆ.




ಪಿಎಚ್.ಡಿ ಕಂಡಕ್ಟರ್!

ಬೆಂಗಳೂರು: ವಿಜಾಪುರ ಜಿಲ್ಲೆ ಸಿಂದಗಿ ಬಸ್ ಡಿಪೋದಲ್ಲಿ ಕಂಡಕ್ಟರ್ ಆಗಿರುವ ಡಾ.ಅಂಬಣ್ಣ ಮ.ಢವಳಾರ ಅವರು ಕಾಲೇಜು ಉಪನ್ಯಾಸಕರಾಗುವ ಕನಸು ಹೊತ್ತಿದ್ದರು. ಕೆಪಿಎಸ್‌ಸಿ ನಿಯಮಾವಳಿ ಪ್ರಕಾರ ಪಿಎಚ್.ಡಿ ಮಾಡಿದವರಿಗೆ ಕೃಪಾಂಕ ಸಿಗುತ್ತದೆ ಎಂಬ ಉತ್ಸಾಹದಲ್ಲಿಯೇ ಅವರು ಸಂದರ್ಶನಕ್ಕೂ ಹಾಜರಾಗಿದ್ದರು. ಉಪನ್ಯಾಸಕರ ನೇಮಕಾತಿಗೆ ಕೆಪಿಎಸ್‌ಸಿ ಪರೀಕ್ಷೆ ನಡೆಸಲಿಲ್ಲ.

ನೇರವಾಗಿ ಸಂದರ್ಶನ ನಡೆಸಿ ಆಯ್ಕೆ ಮಾಡಿತು. ಕಂಡಕ್ಟರ್ ಆಗಿದ್ದುಕೊಂಡೇ ಡಾಕ್ಟರೇಟ್ ಮಾಡಿದ ಅಂಬಣ್ಣ ಅವರಿಗೆ ಉಪನ್ಯಾಸಕರ ಕೆಲಸ ಸಿಗಲಿಲ್ಲ. ಅಚ್ಚರಿ ಎಂದರೆ ಅವರಿಗಿಂತ ಕಡಿಮೆ ಅಂಕ ಪಡೆದ ನಾಲ್ಕು ಮಂದಿ ಉಪನ್ಯಾಸಕರಾಗಿ ನೇಮಕಗೊಂಡರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಅಲ್ಲಿಯೇ ಎಂ.ಫಿಲ್ ಪದವಿಯನ್ನೂ ಮುಗಿಸಿದರು. ನಂತರ ಹಿಟ್ನಳ್ಳಿಯ ಜಗದಾಂಬಾ ಪ್ರಥಮದರ್ಜೆ  ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕ ರಾಗಿ ಸೇವೆ ಸಲ್ಲಿಸಿದರು.  ಎರಡು ವರ್ಷ ಉಪನ್ಯಾಸಕರಾಗಿದ್ದ ಅವರು  ನಂತರ ಈಶಾನ್ಯ ಕರ್ನಾಟಕ ಸಾರಿಗೆ ನಿಗಮದಲ್ಲಿ ಕಂಡಕ್ಟರ್ ಆದರು. ಆದರೂ ಅವರಿಗೆ ಉಪನ್ಯಾಸಕರಾಗುವ ಹುಚ್ಚು ಬಿಟ್ಟಿರಲಿಲ್ಲ. ಅದಕ್ಕೇ  ಅವರು ಕಂಡಕ್ಟರ್ ಆಗಿದ್ದುಕೊಂಡೇ ಡಾಕ್ಟರೇಟ್ ಪಡೆದರು.

ಅರೆಕಾಲಿಕ ಉಪನ್ಯಾಸಕ ಸೇವೆಯ ಕೃಪಾಂಕ, ಪಿಎಚ್‌ಡಿ ಕೃಪಾಂಕ, ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳಿಂದ ಕೆಲಸ ಗ್ಯಾರಂಟಿ ಎಂದುಕೊಂಡಿದ್ದರೂ ಅವರಿಗೆ ಕೆಲಸ ಸಿಗಲಿಲ್ಲ. ಅದರಿಂದ ಬೇಸತ್ತು ಅವರು ತಮ್ಮ ಎಲ್ಲ ಪದವಿ ಪ್ರಮಾಣ ಪತ್ರಗಳನ್ನು ರಾಜ್ಯಪಾಲರಿಗೆ ನೀಡಿ ನ್ಯಾಯ ಒದಗಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ಇನ್ನೂ ನ್ಯಾಯ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT