ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ಮೇಲೆ ಸಿಟ್ಟು ವಿಮಾನ ಅಪಹರಣ ಬೆದರಿಕೆ

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸೆರೆ
Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ಆಂತರಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಿಗೇ ಹೆಚ್ಚು ಅಂಕ ನೀಡುತ್ತಿದ್ದಾರೆ ಎಂಬ ಗ್ರಹಿಕೆಯಿಂದ ಉಪನ್ಯಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಲೇಜಿನ ಲ್ಯಾಬ್‌ನಿಂದ ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ   ಬೆದರಿಕೆಯ ಇ–ಮೇಲ್ ಕಳುಹಿಸಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಇಲ್ಲಿನ ಜೆ.ಸಿ.ನಗರದ ರಾಘವೇಂದ್ರ (26) ಹಾಗೂ ಉಲ್ಲಾಳದ ಹೊಯ್ಸಳ (25) ಎಂಬುವರನ್ನು ಬಂಧಿಸಲಾಗಿದೆ. ಇವರಿಬ್ಬರೂ ಅಂಜನಾನಗರದ ‘ಈಸ್ಟ್‌–ವೆಸ್ಟ್’ ಕಾಲೇಜಿನಲ್ಲಿ ಎಂ.ಟೆಕ್ ದ್ವಿತೀಯ ಸೆಮಿಸ್ಟರ್ ಓದುತ್ತಿದ್ದಾರೆ.

ವಿಮಾನ ಅಪಹರಿಸುವುದಾಗಿ ಹಾಗೂ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಆರೋಪಿಗಳು ವಿಮಾನ ನಿಲ್ದಾಣಕ್ಕೆ ಎರಡು ಸಲ ಇ–ಮೇಲ್ ಮಾಡಿದ್ದರು.

‘ಎಂ.ಟೆಕ್ ಮೊದಲ ಸೆಮಿಸ್ಟರ್‌ನಲ್ಲಿ ರಾಘವೇಂದ್ರ ಮೂರು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ. ರ್‌್ಯಾಂಕ್ ವಿದ್ಯಾರ್ಥಿಯಾಗಿರುವ ಹೊಯ್ಸಳನಿಗೂ ಕಡಿಮೆ ಅಂಕಗಳು ಬಂದಿದ್ದವು. ಯೋಜನಾ ವರದಿ ಹಾಗೂ ಆಂತರಿಕ ಪರೀಕ್ಷೆಗಳಲ್ಲಿ ಸರಿಯಾಗಿ ಅಂಕ ನೀಡದ ಕಾರಣಕ್ಕೆ ಈ ರೀತಿ ಫಲಿತಾಂಶ ಬಂದಿದೆ ಎಂದು ಅವರಿಬ್ಬರೂ ಉಪನ್ಯಾಸಕರಾದ ಪ್ರಸನ್ನರಾಜ್, ಧನರಾಜ್ ಹಾಗೂ ಚಂದನ್‌ರಾಜ್ ಮೇಲೆ ಕೋಪಗೊಂಡಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದರು.

ಪ್ರತೀಕಾರಕ್ಕೆ ನಾನಾ ಸಂಚು: ‘ಮೂವರು ಉಪನ್ಯಾಸಕರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಆರೋಪಿಗಳು, ತಮ್ಮ ಮಹಿಳಾ ಸಹಪಾಠಿಯೊಬ್ಬರ ಹೆಸರಿನಲ್ಲಿ ಮೇಲ್‌ ಐಡಿ ರಚಿಸಿಕೊಂಡರು. ನಂತರ, ಪ್ರಸನ್ನರಾಜ್, ಧನರಾಜ್, ಚಂದನ್‌ರಾಜ್ ಅವರು ಆಂತರಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ನೀಡಲು ವಿದ್ಯಾರ್ಥಿಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಆ ಮೇಲ್ ವಿಳಾಸದಿಂದಲೇ ಪ್ರಾಂಶುಪಾಲರಿಗೆ ಮಾರ್ಚ್‌ 2 ಮತ್ತು ಮಾರ್ಚ್ 3ರಂದು ಸಂದೇಶ ಕಳುಹಿಸಿದ್ದರು’ ಎಂಬುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

‘ಆಗ ಪ್ರಾಂಶುಪಾಲರು ಮೇಲ್‌ ಐಡಿಯ ಹೆಸರಿನ ವಿದ್ಯಾರ್ಥಿನಿಯನ್ನು  ಕರೆಸಿ ವಿಚಾರಿಸಿದ್ದರು. ಆದರೆ, ಅದು ನನ್ನ ಮೇಲ್ ಅಲ್ಲ, ಅಂಥ ಯಾವುದೇ ಸಂದೇಶವನ್ನೂ ನಾನು ಕಳುಹಿಸಿಲ್ಲ ಎಂದು ವಿದ್ಯಾರ್ಥಿನಿ ಹೇಳಿದ್ದರಿಂದ ಆ ವಿಷಯವನ್ನು ಅಲ್ಲಿಗೇ  ಬಿಟ್ಟಿದ್ದರು’.

‘ಉಪನ್ಯಾಸಕರನ್ನು ಕರೆಸಿ ವಿಚಾರಣೆ ನಡೆಸುತ್ತಾರೆ ಎಂದು ಭಾವಿಸಿದ್ದ ಆರೋಪಿಗಳಿಗೆ, ಪ್ರಾಂಶುಪಾಲರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ಬೇಸರವಾಗಿತ್ತು. ಆಗ ಅವರನ್ನು ಗಂಭೀರ ಪ್ರಕರಣದಲ್ಲಿ ಸಿಕ್ಕಿಸಬೇಕು ಎಂದು ವಿದ್ಯಾರ್ಥಿಗಳು ಆಲೋಚಿಸಿದ್ದರು’.

ನೆನಪಾದ ಗೋಕುಲ್: ‘ಹಿಂದೆ ಕೆಐಎಎಲ್ ನಿಲ್ದಾಣಕ್ಕೆ ಬೆದರಿಕೆ ಸಂದೇಶ ಕಳುಹಿಸಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಖಾಸಗಿ ಕಂಪೆನಿ ಉದ್ಯೋಗಿ ಗೋಕುಲ್‌ ಮಚೇರಿಯ ಪ್ರಕರಣವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದ ವಿದ್ಯಾರ್ಥಿಗಳು, ಅಂಥ ಪ್ರಕರಣದಲ್ಲೇ ಉಪನ್ಯಾಸಕರು ಪೊಲೀಸ್ ವಿಚಾರಣೆ ಎದುರಿಸುವಂತೆ ಮಾಡಬೇಕು ಎಂದು ನಿರ್ಧರಿಸಿಕೊಂಡರು. ಬಳಿಕ ಮತ್ತೆ ಅದೇ ವಿದ್ಯಾರ್ಥಿನಿಯ ಹೆಸರಿನಲ್ಲಿ ಮತ್ತೊಂದು ಇ–ಮೇಲ್ ಐಡಿ ಸೃಷ್ಟಿಸಿಕೊಂಡರು’.

‘ಮಾರ್ಚ್ 22ರ ಬೆಳಿಗ್ಗೆ 10.40ಕ್ಕೆ ಕಾಲೇಜಿನ ಲ್ಯಾಬ್‌ನಿಂದ ಕೆಐಎಎಲ್‌ಗೆ ಮೊದಲ ಮೇಲ್ ಕಳುಹಿಸಿದ್ದ ರಾಘವೇಂದ್ರ ಮತ್ತು ಹೊಯ್ಸಳ, ಮೂವರು ಉಪನ್ಯಾಸಕರ ಭಾವಚಿತ್ರಗಳು ಹಾಗೂ ಬೆದರಿಕೆ ಪತ್ರದ ಪ್ರತಿಯನ್ನು ಅಟ್ಯಾಚ್ ಮಾಡಿದ್ದರು. ನಾವು ದಾವೂದ್ ಇಬ್ರಾಹಿಂನ ಸಹಚರರು. ಈ ಚಿತ್ರದಲ್ಲಿರುವ ವ್ಯಕ್ತಿಗಳಿಗೆ ₹1 ಕೋಟಿ  ತಲುಪಿಸಿ. ಇಲ್ಲದಿದ್ದರೆ ಮುಂದಿನ ವಾರ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುತ್ತೇವೆ ಎಂದು ಆ ಪತ್ರದಲ್ಲಿ ಬರೆದಿದ್ದರು’.

‘ಸೈಬರ್ ಪೊಲೀಸರ ನೆರವು ಪಡೆದು ಆ ಪ್ರಕರಣದ ತನಿಖೆ ನಡೆಸಿದಾಗ, ಈಸ್ಟ್ ವೆಸ್ಟ್ ಕಾಲೇಜಿನಿಂದಲೇ ಮೇಲ್ ಬಂದಿದೆ ಎಂಬ ಸಂಗತಿ ಮೂರು ದಿನಗಳ ಬಳಿಕ ಗೊತ್ತಾಯಿತು. ನಂತರ ಕಾಲೇಜಿಗೆ ತೆರಳಿ ಪ್ರಾಂಶುಪಾಲರು, ಉಪನ್ಯಾಸಕರನ್ನು ವಿಚಾರಣೆ ನಡೆಸಲಾಗಿತ್ತು. ಆದರೆ, ಪರೀಕ್ಷಾ ಸಮಯವಾದ ಕಾರಣ ವಿದ್ಯಾರ್ಥಿಗಳನ್ನು ತನಿಖೆಗೆ ಒಳಪಡಿಸಿ ರಲಿಲ್ಲ’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೊಂದು ಮೇಲ್: ಪೊಲೀಸರು ಕಾಲೇಜಿಗೆ ಬಂದು ಹೋಗಿರುವ ವಿಷಯ ತಿಳಿಯದ ವಿದ್ಯಾರ್ಥಿಗಳು, ಮೇ 6ರ ಬೆಳಿಗ್ಗೆ 9.29ಕ್ಕೆ  ಪುನಃ ಅದೇ ಮೇಲ್‌ ವಿಳಾಸದಿಂದ ಬೆದರಿಕೆ ಪತ್ರ ಹಾಗೂ ಉಪನ್ಯಾಸಕರ ಭಾವಚಿತ್ರಗಳನ್ನು ಕಳುಹಿಸಿದ್ದರು.

2ನೇ ಪತ್ರದಲ್ಲಿ, ‘ಕಾರಣಾಂತರ ಗಳಿಂದ ಆ ದಿನ ಬಾಂಬ್ ಸ್ಫೋಟಿಸಲು ಆಗಲಿಲ್ಲ. ಈ ಬಾರಿ ವಿಮಾನಗಳನ್ನು ಹೈಜಾಕ್ ಮಾಡುತ್ತೇವೆ. ತಾಕತ್ತಿದ್ದರೆ ತಡೆಯಿರಿ’ ಎಂದು ಬರೆಯಲಾಗಿತ್ತು. ಆ ಒಂದು ಪತ್ರದಿಂದಾಗಿ ಮೇ 6ರಂದು ಸುಮಾರು ಮೂರು ತಾಸು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು.

ಸಾಮ್ಯತೆ ನೀಡಿದ ಸುಳಿವು: ಎರಡೂ ಪತ್ರಗಳಲ್ಲಿಯೂ ಉಪನ್ಯಾಸಕರ ಫೋಟೊಗಳನ್ನು ಹಾಕಿದ್ದರಿಂದ ವಿದ್ಯಾರ್ಥಿಗಳೇ ಈ ರೀತಿ ಮಾಡುತ್ತಿರಬಹುದು ಎಂಬ ಶಂಕೆ ಪೊಲೀಸರಿಗೆ ಇತ್ತು. ಹಿಂದೆ ಇದೇ ಉಪನ್ಯಾಸಕರ ವಿರುದ್ಧ ತಮ್ಮ ಮೇಲ್‌ಗೂ ಎರಡು ಪತ್ರಗಳು ಬಂದಿದ್ದಾಗಿ ಪ್ರಾಂಶುಪಾಲರು ಹೇಳಿದಾಗ ಆ ಅನುಮಾನ ಖಚಿತವಾಯಿತು.

‘ಯಾವ ಕಂಪ್ಯೂಟರ್‌ನಿಂದ ಮೇಲ್‌ಗಳು ರವಾನೆಯಾಗಿವೆ ಎಂಬ ಬಗ್ಗೆ ಸೈಬರ್ ಪೊಲೀಸರು ಮಾಹಿತಿ ನೀಡಿದರು. ಲ್ಯಾಬ್‌ನಲ್ಲಿದ್ದ ಆ ಕಂಪ್ಯೂಟರನ್ನು ರಾಘವೇಂದ್ರ ಹೆಚ್ಚಾಗಿ ಬಳಸುತ್ತಿದ್ದ. ಹೀಗಾಗಿ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಮೇಲ್ ರಹಸ್ಯ ಬಯಲಾಯಿತು. ನಂತರ ಹೊಯ್ಸಳನನ್ನೂ ಬಂಧಿಸಲಾಯಿತು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ವಿದ್ಯಾರ್ಥಿನಿ ಹೆಸರಲ್ಲೇಕೆ ಐಡಿ?
‘ವಿದ್ಯಾರ್ಥಿನಿಯೊಬ್ಬರು ಪ್ರಸನ್ನರಾಜ್ ಅವರ ಮಾರ್ಗದರ್ಶನದಲ್ಲಿ ಯೋಜನಾ ವರದಿ ಸಿದ್ಧಪಡಿಸುತ್ತಿದ್ದರು. ಹೀಗಾಗಿ ಅವರ ಹೆಸರಿನಲ್ಲಿ ಮೇಲ್ ಹೋದರೆ ಪೊಲೀಸರು ವಿದ್ಯಾರ್ಥಿನಿಯನ್ನು ಮಾತ್ರವಲ್ಲದೆ, ಪ್ರಸನ್ನರಾಜ್ ಅವರನ್ನೂ ವಿಚಾರಣೆ ನಡೆಸುತ್ತಾರೆ ಎಂಬ ದುರಾಲೋಚನೆಯಿಂದ ಆಕೆ ಹೆಸರಿನಲ್ಲಿ ಮೇಲ್ ಸೃಷ್ಟಿಸಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಅನ್ಯಾಯ ಮಾಡುತ್ತಿದ್ದರು’
‘ಪದವಿ ಶಿಕ್ಷಣವನ್ನು ರ್‌್ಯಾಂಕ್‌ನಲ್ಲಿ ಪಾಸ್‌ ಆಗಿದ್ದೆ. ಆದರೆ, ಎಂ.ಟೆಕ್‌ ಮೊದಲ ಸೆಮಿಸ್ಟರ್‌ನಲ್ಲಿ ಕಡಿಮೆ ಅಂಕಗಳು ಬಂದವು. ವಿದ್ಯಾರ್ಥಿನಿಯರಿಗೆ ಮಾತ್ರ ಹೆಚ್ಚು ಅಂಕ ನೀಡುತ್ತಿದ್ದ ಉಪನ್ಯಾಸಕರು, ನಾವು ಎಷ್ಟೇ ಶ್ರಮ ವಹಿಸಿ ಯೋಜನಾ ವರದಿ ಸಿದ್ಧಪಡಿಸಿದರೂ ಅಂಕ ನೀಡುತ್ತಿರಲಿಲ್ಲ. ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಹೀಗೆ ಮಾಡಿದೆವು’ ಎಂದು ಹೊಯ್ಸಳ ಹೇಳಿದ್ದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT