ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ (ಸೌಮ್)

Last Updated 3 ಜುಲೈ 2015, 7:37 IST
ಅಕ್ಷರ ಗಾತ್ರ

ಬಹುತೇಕ ಎಲ್ಲ ಧರ್ಮಗಳಲ್ಲೂ ಉಪವಾಸ, ಒಂದು ವ್ರತ ಆಚಾರಣೆಯ ಭಾಗ. ಸಾಮಾನ್ಯವಾಗಿ ತಿಂದುಂಡು ಸುಖಿಸುವ ದೇಹಕ್ಕೆ ಹಸಿವಿನ ಅನುಭವವಾಗಬೇಕೆಂಬ ತಾತ್ವಿಕ ಉದ್ದೇಶವೂ ಇದರ ಹಿಂದೆ ಇದೆ. ಸೂಫಿಗಳಿಗೆ ಇದು ಒಂದು ವ್ರತವೂ, ದೇಹದ ಬೇಡಿಕೆಗಳು ವಿಪರೀತವಾದಾಗ ನಿಗ್ರಹಿಸುವ ಹಾಗೂ ದಂಡಿಸುವ ಸಾಧನವೂ ಆಗುತ್ತದೆ. 

ಉಪವಾಸವೆಂದರೆ ಹಸಿವಿನ ಅನುಭವ ಮಾತ್ರವಲ್ಲ, ಜೊತೆಗೆ ಆಧ್ಯಾತ್ಮಿಕ ಉದ್ದೇಶಗಳೂ ಸೇರಿವೆ. ಹಸಿವಿನಲ್ಲಿ ಭಕ್ತಿಯ ಏಕಾಗ್ರತೆ ಗಟ್ಟಿಯಾಗುತ್ತದೆ. ದೇಹದ ಪ್ರತಿಯೊಂದು ಅಂಗಾಂಗಗಳಿಗೆ ನೈತಿಕ ನಿಗ್ರಹವನ್ನು ಮೂಡಿಸುತ್ತದೆ. ಕಣ್ಣು ಕೆಟ್ಟದ್ದನ್ನು ನೋಡದಂತೆ ತಡೆದುಕೊಳ್ಳುವುದು, ಕೈಗಳು ಕೆಟ್ಟದ್ದನ್ನು ಸ್ಪರ್ಶಿಸದಂತೆ ನಿಗ್ರಹಿಸುವುದು, ಬಾಯಿ ಕೆಟ್ಟ ಮಾತುಗಳನ್ನು ಆಡದಂತೆ, ಕಿವಿ ಕೆಟ್ಟದ್ದನ್ನು ಕೇಳದಂತೆ ನಿಗ್ರಹಿಸುವುದು ಉಪವಾಸದ ಭಾಗವೇ ಆಗಿರುತ್ತದೆ. ಮಾಡಿದ ಪಾಪಗಳಿಗೆ ಪಶ್ಚಾತ್ತಾಪಪಟ್ಟುಕೊಂಡು, ಉಪವಾಸದ ನಂತರವೂ ಈ ಪಾಪಕೃತ್ಯಗಳಿಂದ ದೂರವಿರುವ  ದೃಢನಿಶ್ಚಯವನ್ನು ಮಾಡಿಕೊಳ್ಳುವುದು ಉಪವಾಸದ ಮುಖ್ಯ ಭಾಗವಾಗಿದೆ. 

ಉಪವಾಸವಿದ್ದುಕೊಂಡೂ  ಎಂದಿನ ಕೆಟ್ಟಕೆಲಸಗಳಲ್ಲಿ ವ್ಯಸ್ತನಾದರೆ ಉಪವಾಸದ ಉದ್ದೇಶ ಸಫಲವಾಗದು. ರಮಜಾನ್ ತಿಂಗಳ ಮೂವತ್ತು ದಿನಗಳ ಉಪವಾಸ ಮುಸ್ಲಿಮನೆನಿಸಿಕೊಳ್ಳಬೇಕಾದರೆ ಪಾಲಿಸಬೇಕಾದ ಐದು ಕರ್ತವ್ಯಗಳಲ್ಲಿ ಒಂದು. ‘ರಮಜ್’ ಎಂಬ  ಸುಡುವ ತಾಪ ಎಂಬ ಅರ್ಥದ ಅರಬಿ ಶಬ್ದದ ಮೂಲದಿಂದ ರಮಜಾನ್ ಹುಟ್ಟಿಕೊಂಡಿದೆ ಎನ್ನಲಾಗುತ್ತದೆ. 

ಈ ತಿಂಗಳಲ್ಲಿ ಉಪವಾಸ, ದಾನ ಧರ್ಮ ಮಾಡುವುದರಿಂದ ಅರಿಶಡ್ವರ್ಗಗಳೇ ಮುಂತಾದ ಆಂತರ್ಯದ ಕಲ್ಮಶಗಳನ್ನು ತೊಡೆದು ಹಾಕಿ, ಮಾಡಿದ ಪಾಪಗಳನ್ನು ಸುಡುವ ಮೂಲಕ ಪಶ್ಚಾತ್ತಾಪ ಪಟ್ಟುಕೊಂಡು ಪರಿಶುದ್ಧಗೊಳಿಸಲಾಗುತ್ತದೆ. ಉಳ್ಳವರು ಹಸಿವಿನ ಅನುಭವ ಪಡೆಯುವುದು, ತಮ್ಮಲ್ಲಿರುವ ಸಂಪತ್ತಿನ ನಿರ್ದಿಷ್ಟ ಭಾಗವನ್ನು ದಾನ ಮಾಡುವ ಮೂಲಕ ಅಲ್ಲಾಹನನ್ನು ಸಂಪ್ರೀತಿಗೊಳಿಸಿದರೆ, ಬಡವರು ಅಲ್ಲಾಹನನ್ನು ಸಂಪ್ರೀತಿಗೊಳಿಸುವುದು ಪ್ರಾರ್ಥನೆ, ಸನ್ನಡತೆ, ಹಸಿವು ತಾಳ್ಮೆ ಮುಂತಾದವುಗಳ ಮೂಲಕ ಎನ್ನಲಾಗುತ್ತದೆ.

ಪೈಗಂಬರರು ರಮಜಾನ್ ತಿಂಗಳಲ್ಲಿ ಮಾತ್ರವಲ್ಲ, ವರ್ಷದ ಅನೇಕ ತಿಂಗಳು, ದಿನಗಳಲ್ಲಿ ಉಪವಾಸವನ್ನು ಆಚರಿಸುತ್ತಿದ್ದರು. ಮಾತ್ರವಲ್ಲ ಅನೇಕ ಸಾರಿ ಹಸಿವನ್ನು ತಾಳಿಕೊಂಡಿರಬೇಕಾಗುವಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದರು. ಒಂದು ದಿನ ಮಗಳು ಫಾತಿಮಾ ತನ್ನ ತಂದೆಗಾಗಿ ತಾನು ಮಾಡಿದ  ರೊಟ್ಟಿಯ ತುಂಡನ್ನು ಪ್ರೀತಿಯಿಂದ ನೀಡಿದಳು. ಪೈಗಂಬರರು ಈ ರೊಟ್ಟಿಯನ್ನು ತಿಂದು ‘ಮೂರು ದಿನಗಳ ಬಳಿಕ ಇಂದು ರೊಟ್ಟಿಚೂರೊಂದು ನನ್ನ ಬಾಯಿಗೆ ಸಿಕ್ಕಿದೆ’ ಎನ್ನುತ್ತಾರೆ. ಆದುದರಿಂದ ಹಸಿವನ್ನು ಸಹಿಸಿಕೊಳ್ಳುವುದು ಸೂಫಿಗಳ ಲಕ್ಷಣಗಳಲ್ಲಿ ಒಂದೆನಿಸಿದೆ. ಇದು ಸೂಫಿ ಆಧ್ಯಾತ್ಮ ಪರಿಶ್ರಮದ ಮೂಲ ಪಾಠ. ಮೌಲಾನಾ ಜಲಾಲುದ್ದೀನ್ ರೂಮಿಯವರ ಪದ್ಯ ‘ಉಪವಾಸದ ತಾಯಿ’ ಕೊನೆಗೊಳ್ಳುವುದು ಹೀಗೆ:
ಯಾಕಿಷ್ಟು ಮೋಹ ತಿಂಡಿಯ ಮೇಲೆ?
ಬೇಯುತಿದೆ ವಿಶ್ವ ಹೊಸದಾಗಿ ಮತ್ತೊಮ್ಮೆ
ತೆಗೆ ಅಧ್ಯಾತ್ಮದ ಗೋದಿಹಿಟ್ಟು,
ಕಾಯುತಿರು ಉಪವಾಸದ ಬೆಳೆಗಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT