ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಾರಹಳ್ಳಿಗೆ ಕಸವೋ ಕಸ, ಜನರ ಬದುಕು ನರಕ

Last Updated 24 ಅಕ್ಟೋಬರ್ 2014, 7:24 IST
ಅಕ್ಷರ ಗಾತ್ರ

ತುಮಕೂರು: ನಗರಪಾಲಿಕೆಯ ವಾಹನಗಳು ಉಪ್ಪಾ­ರ­ಹಳ್ಳಿಗೆ ಕಸ ತಂದು ಸುರಿಯುತ್ತಿ­ರುವು­ದ­ರಿಂದ ವಾರ್ಡ್‌ ಸಂಖ್ಯೆ ೨೪ರಲ್ಲಿ ಗಬ್ಬು ನಾತ ಆವ­ರಿಸಿದೆ. ಸೇಕ್ರೆಡ್ ಹಾರ್ಟ್ ಕಾಲೇಜು ಹಿಂಭಾಗ ಹೊಸ­ದಾಗಿ ನಿರ್ಮಿಸಿರುವ ಬಡವಾಣೆಯ ‘ಸಿ.ಎ’ ನಿವೇಶನ ನಗರ ಪಾಲಿಕೆ ಪಾಲಿಗೆ ತ್ಯಾಜ್ಯ ವಿಲೇವಾರಿ ಸ್ಥಳವಾಗಿದೆ.

ಇಲ್ಲಿ ಪ್ರತಿದಿನ ಹತ್ತಾರು ಆಟೊ ಟಿಪ್ಪರ್‌ಗಳು ಕಸ ತಂದು ಸುರಿಯುತ್ತವೆ. ಯಾ­ದವನಗರ, ಮರಳೂರು ದಿಣ್ಣೆ, ಅಮರಜ್ಯೋತಿ ನಗರ, ಸರಸ್ವತಿಪುರಂ, ಸಪ್ತಗಿರಿ ಬಡಾವಣೆ, ಗೆದ್ದಲಹಳ್ಳಿ ಮುಖ್ಯರಸ್ತೆ, 80 ಅಡಿ ರಸ್ತೆ ಬದಿಯಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಕಳೆದ 6 ತಿಂಗಳ ಹಿಂದೆ 2 ಕಾಂಕ್ರಿಟ್ ಕಸದ ತೊಟ್ಟಿ­ಗಳನ್ನು ಪಾಲಿಕೆ ಸಿಬ್ಬಂದಿ ತಂದಿಟ್ಟಿದ್ದರು. ಈ ತೊಟ್ಟಿಗಳಿಗೆ ಆಟೊ ಟಿಪ್ಪರ್‌ಗಳು ಕಸ ತಂದು ಸುರಿಯುತ್ತಿದ್ದವು. ವಾರಕ್ಕೊಮ್ಮೆ ಲಾರಿ ಮೂಲಕ ಕಸ ಸಾಗಿಸಲಾಗು­ತಿತ್ತು. ಆದರೆ ಕಳೆದ ೨ ತಿಂಗಳಿಂದ ಆಟೊ ಟಿಪ್ಪರ್‌­ಗಳು ಕಸವನ್ನು ರಸ್ತೆ ಬದಿ, ಚರಂಡಿಯಲ್ಲಿ ಸುರಿ­ಯುತ್ತಿವೆ. ಹಂದಿ, ನಾಯಿಗಳು ಬೀಡು ಬಿಟ್ಟಿವೆ. ವಾಹನ ಸವಾರರು, ಶಾಲಾ ಮಕ್ಕಳು ಮೂಗು ಮುಚ್ಚಿ­ಕೊಂಡು, ಹಂದಿ, ನಾಯಿಗಳಿಗೆ ಹೆದರಿ ಸಂಚ­ರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಕೆಟ್ಟ ವಾಸನೆಯಿಂದಾಗಿ ಯಾದವನಗರ, ಮರ­ಳೂರು ದಿಣ್ಣೆ, ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಹಾಗೂ ಉಪ್ಪಾರಹಳ್ಳಿ ಬಡಾವಣೆಯ ಮಕ್ಕಳು ಶಾಲಾ– ಕಾಲೇಜಿಗೆ ಹೋಗಲು ಬಳಸು ಹಾದಿ ಹಿಡಿದಿದ್ದಾರೆ. ಈ ಪ್ರದೇಶದಲ್ಲಿ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾ­ಗಿದೆ. ಸಾಂಕ್ರಾಮಿಕ ರೋಗಗಳು ಕಾಣಿಸಿ­ಕೊಳ್ಳುವ ಭೀತಿ ಎದುರಾಗಿದೆ ಎಂದು ಜನತೆ ದೂರುತ್ತಾರೆ.

ಹಬ್ಬಗಳಲ್ಲಿ ತರಲಾಗುವ ಪ್ರಾಣಿ ತ್ಯಾಜ್ಯವನ್ನೂ ಇಲ್ಲಿಗೇ ತಂದು ಹಾಕಲಾಗಿತ್ತು. ಮಾಂಸ ಕೊಳೆತ ವಾಸನೆ, ಮಳೆ ಬಂದಾಗ ರಸ್ತೆಯ ಮೇಲೆಲ್ಲಾ ಹರಿ­ಯುವ ಮಾಂಸದ ತುಣುಕುಗಳು ಜನರಲ್ಲಿ ಅಸಹ್ಯ ಹುಟ್ಟಿ­ಸಿದೆ. ಮಾಂಸದ ತ್ಯಾಜ್ಯ ತಿಂದು ಕೊಬ್ಬಿರುವ ನಾಯಿಗಳು ಮನುಷ್ಯರನ್ನು ಅಟ್ಟಿಸಿಕೊಂಡು ಬರುತ್ತಿವೆ.  ಮಹಾನಗರಪಾಲಿಕೆ ಅಧಿಕಾರಿಗಳು ಈ ಪ್ರದೇಶ­ದಲ್ಲಿರುವ ೪ ಬಿನ್‌ಗಳನ್ನು ತಕ್ಷಣ ಸ್ಥಳಾಂತರಿಸಬೇಕು. ರಸ್ತೆ, ಚರಂಡಿ ಸ್ವಚ್ಛಗೊಳಿಸ­ಬೇಕು. ಮುಂದಿನ ದಿನಗಳಲ್ಲಿ ಇಲ್ಲಿಗೆ ಕಸ ತಂದು ಹಾಕಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದೂರಿನಿಂದಲೂ ಪ್ರಯೋಜನವಿಲ್ಲ
ಉಪ್ಪಾರಹಳ್ಳಿ ಜನರು ಕಸದ ಸಮಸ್ಯೆ ಕುರಿತು ನಗರಪಾಲಿಕೆ ವೆಬ್‌ಸೈಟ್‌ನಲ್ಲಿ 10 ದಿನದ ಹಿಂದೆಯೇ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆಯ ನಿಯಂ­ತ್ರಣ ಕೊಠಡಿ ಸಂಖ್ಯೆ (18004255888 ಮತ್ತು 0816-2271200/ 2272200) ಕರೆ ಮಾಡಿದರೆ ಯಾರೊಬ್ಬರೂ ಕರೆ ಸ್ವೀಕರಿಸಲಿಲ್ಲ. ಪಾಲಿಕೆ ವೆಬ್‌ಸೈಟ್‌ನಲ್ಲಿ ನಮೂದಾಗಿರುವ ಉಪ್ಪಾ­ರಹಳ್ಳಿ ವಾರ್ಡ್‌ಗೆ ಸಂಬಂಧಿಸಿದ ಆರೋಗ್ಯ ನಿರೀಕ್ಷಕರ ದೂರವಾಣಿ ಸಂಖ್ಯೆಗೆ ಜೀವವೇ ಇಲ್ಲ.

–ಬಿ.ವಿ.ಪ್ರಕಾಶ್, ನಾಗರಿಕರು, ಉಪ್ಪಾರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT