ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉ.ಪ್ರ. ರಾಜ್ಯಪಾಲ ಜೋಷಿ ರಾಜೀನಾಮೆ, ಇತರರಿಗೆ ಒತ್ತಡ?

Last Updated 17 ಜೂನ್ 2014, 12:56 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ನೇಮಕಗೊಂಡಿದ್ದ ಕೆಲವು ರಾಜ್ಯಪಾಲರ ಮೇಲೆ ರಾಜೀನಾಮೆ ನೀಡುವಂತೆ ಕೇಂದ್ರದಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಜ್ಯಪಾಲ ಬಿ.ಎಲ್. ಜೋಷಿ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಜೋಷಿ ಅವರ ರಾಜೀನಾಮೆ ತಲುಪಿರುವುದಾಗಿ ಗೃಹ ಸಚಿವಾಲಯ ಮೂಲಗಳು ಪಿಟಿಐಗೆ ತಿಳಿಸಿವೆ.

ಜೋಷಿ ಅವರ ಅಧಿಕಾರಾವಧಿ ಕೆಲವು ತಿಂಗಳುಗಳ ಹಿಂದೆ ಮುಗಿದಿತ್ತು. ಬಳಿಕ ಅವರು ಇನ್ನೊಂದು ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

ಅದರೆ ಮಹಾರಾಷ್ಟ್ರದ ರಾಜ್ಯಪಾಲ ಕೆ. ಶಂಕರನಾರಾಯಣನ್ ಸೇರಿದಂತೆ ಕನಿಷ್ಠ ಐವರು ರಾಜ್ಯಪಾಲರಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರು ಸರ್ಕಾರ ಬದಲಾವಣೆಯ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ಸೂಚಿಸಿದ ಬಳಿಕ ಮಂಗಳವಾರ ಜೋಷಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಅಧಿಕೃತವಾಗಿ ಏನನ್ನೂ ಪ್ರಕಟಿಸಿಲ್ಲವಾದರೂ ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್ ಮತ್ತು ಗುಜರಾತಿನ ರಾಜ್ಯಪಾಲರಾದ ಕಮ್ಲಾ ಬೇನಿವಾಲ್ ಅವರ ಮೇಲೂ ರಾಜೀನಾಮೆಗೆ ಒತ್ತಡ ಇದೆ ಎಂದು ಹೇಳಲಾಗಿದೆ.

ತಾವೇನಾದರೂ ಅವರ ಸ್ಥಾನದಲ್ಲಿ ಇದ್ದಿದ್ದರೆ ರಾಜೀನಾಮೆ ನೀಡುತ್ತಿದ್ದುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಪರೋಕ್ಷವಾಗಿ ಟೀಕಿಸಿದ್ದಾರೆಂದು ವರದಿಗಳು ಹೇಳಿವೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಕೇರಳದ ರಾಜ್ಯಪಾಲರಾಗಿರುವ ಶೀಲಾ ದೀಕ್ಷಿತ್ ಅವರು  ಪತ್ರಿಕಾ ವರದಿಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಮಧ್ಯೆ ರಾಜಸ್ತಾನದ ರಾಜ್ಯಪಾಲರಾದ ಮಾರ್ಗರೆಟ್ ಆಳ್ವ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಇದೊಂದು ಸೌಜನ್ಯದ ಭೇಟಿ ಮಾತ್ರ ಎಂದು ಬಣ್ಣಿಸಲಾಗಿದೆ. ಅವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನೂ ಭೇಟಿ ಮಾಡಲಿದ್ದಾರೆಂದು ಹೇಳಲಾಗಿದೆ. ಆಗಸ್ಟ್ ತಿಂಗಳಲ್ಲಿ ತಮ್ಮ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿರುವ ಆಳ್ವ ಅವರ ಮೇಲೆ ಈವರೆಗೂ ಯಾವುದೇ ಒತ್ತಡಗಳು ಬಂದಿಲ್ಲ ಎನ್ನಲಾಗಿದೆ.

ಬೇನಿವಾಲ್ ಅವರಂತೆಯೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಜೊತೆಗೆ ಘರ್ಷಿಸಿಕೊಂಡಿದ್ದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಮಂಗಳವಾರ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ್ದರು. ತಮ್ಮ ಅವಧಿ ಮುಕ್ತಾಯದ ಹಂತಕ್ಕೆ ಬರುತ್ತಿರುವುದರಿಂದ ತಾವು ರಾಷ್ಟ್ರಪತಿ ಅವರನ್ನು ಸೌಜನ್ಯದಿಂದ ಭೇಟಿ ಮಾಡಿದ್ದಾರೆ ಭಾರಧ್ವಾಜ್ ಹೇಳಿದರು.

ರಾಷ್ಟ್ರಪತಿಯವನ್ನು ಭೇಟಿ ಮಾಡಿದ ಅಸ್ಸಾಂ ರಾಜ್ಯಪಾಲ ಜೆ.ಬಿ. ಪಟ್ನಾಯಕ್ ಅವರು ತಾವು ರಾಜೀನಾಮೆ ನೀಡಿಲ್ಲ ಎಂದು ವರದಿಗಾರರಿಗೆ ತಿಳಿಸಿದರು.

'ವದಂತಿಗಳು ಇದ್ದರೆ ಅದಕ್ಕೆ ನಾನೇನೂ ಮಾಡಲಾರೆ' ಎಂದು ಅವರು ನುಡಿದರು.

ಗೆಳೆಯನಾದ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಅರ್ಥವಲ್ಲ' ಎಂದೂ ಒಡಿಶಾದ ಮುಖ್ಯಮಂತ್ರಿಯೂ ಆಗಿದ್ದ ಪಟ್ನಾಯಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT