ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬರ್‍ ಸೇವೆಗೆ ಉಘೇ ಬೇಕಿಲ್ಲ

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಪೊಲೀಸ್‌ಗೆ ಜ್ವರ, ಉಬರ್‌ಗೆ ಬರೆ!’ ಎಂಬ ಲೇಖನದಲ್ಲಿ ಕ್ಯಾಪ್ಟನ್‍ ಗೋಪಿನಾಥರು (ಪ್ರ.ವಾ., ಡಿ.17) ನೆಟ್‍ ಆಧರಿತ ಉಬರ್‍ ಟ್ಯಾಕ್ಸಿ ಸೇವೆ­ಯನ್ನು ಶ್ಲಾಘಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ‘ಆಲ್ಟರ್‍ನೆಟ್‍’ ಹೆಸರಿನ ಅಮೆರಿಕನ್ ಜಾಲಪತ್ರಿಕೆ­ಯಲ್ಲಿ ‘ಉಬರ್‍ ಸೇವೆಯ ಏಳು ಕುಕೃತ್ಯಗಳು’ ಎಂಬ ಲೇಖನ ಬಂದಿದೆ.

1) ಹಬ್ಬದ ದಿನಗಳಲ್ಲಿ ಅದು ಬಾಡಿಗೆ ದರ­ವನ್ನು ಸಿಕ್ಕಾಪಟ್ಟೆ ಹೆಚ್ಚಿಸುತ್ತದೆ;  ಚಂಡ­ಮಾರುತ­ದಂಥ ಸಂಕಟ ಸಮಯದಲ್ಲಿ ಅದರ ಸುಲಿಗೆ ತಾರಕ­ಕ್ಕೇರುತ್ತದೆ.

2) ತನಗೆ ಟ್ಯಾಕ್ಸಿ ಬೇಕೆಂದು ಸುಳ್ಳೇ ಸುಳ್ಳೇ ಪ್ರತಿಸ್ಪರ್ಧಿ  ಟ್ಯಾಕ್ಸಿ ಕಂಪೆನಿಗಳಿಗೆ  ಸಂದೇಶ ಕಳಿಸಿ ಆಮೇಲೆ  ಕರೆಯನ್ನು ಕ್ಯಾನ್ಸಲ್ ಮಾಡಿ ಭಾರೀ ನಷ್ಟ ಉಂಟು ಮಾಡುತ್ತಿದೆ.

3) ಪ್ರತಿ­ಸ್ಪರ್ಧಿ   ಕಂಪೆನಿಗಳ ಮೇಲೆ ಯಾರೂ ಹಣ ಹೂಡ­ದಂತೆ ಕುತಂತ್ರ ಮಾಡುತ್ತದೆ.

4) ತನ್ನ ಚಾಲಕಿಯರು ಎಷ್ಟು ಸೆಕ್ಸಿ ಆಗಿದ್ದಾರೆಂದು ಫ್ರಾನ್ಸ್ ದೇಶದಲ್ಲಿ ಪ್ರಚುರ­ಪಡಿಸುತ್ತದೆ; ಅದನ್ನು ಬಯಲಿಗೆಳೆದು ಛೀಮಾರಿ ಹಾಕಿದ ಪತ್ರಕರ್ತೆಗೆ ‘ನಿಮ್ಮದೆಲ್ಲವನ್ನೂ ಬಯಲಿಗೆಳೆ­ಯುತ್ತೇವೆ’ ಎಂದು ಹೆದರಿಸುತ್ತದೆ.

5) ತನ್ನ ಚಾಲಕ ಏನೇ ಮಾಡಿ­ದರೂ ಅದು ತನ್ನ ತಪ್ಪಲ್ಲವೆಂದು ನುಣು­­ಚಿ­ಕೊಳ್ಳು­ತ್ತದೆ.

6) ಪ್ರಯಾ­ಣಿ­ಕರ ಸುರಕ್ಷೆಯ ತನ್ನೆಲ್ಲ ಹೊಣೆ­ಯಿಂದ ನುಣುಚಿ­ಕೊಳ್ಳುತ್ತದೆ.

7) ಅಂಗ­ವಿಕ­ಲರಿಗೆ  ಪ್ರಯಾಣದ ಅವಕಾಶವನ್ನು ನಿರಾಕರಿಸುವ ಚಾಲಕರ ತಪ್ಪನ್ನು ನೋಡಿಯೂ ನೋಡ­ದಂತಿರುತ್ತದೆ.

ಈ ಮೇಲಿನ ಎಲ್ಲ ಆರೋಪಗಳಿಗೂ  ಸೂಕ್ತ ಸಾಕ್ಷ್ಯಗಳನ್ನು ನೀಡಿದ ಲೇಖಕ ಕ್ಲಿಫ್‍ ವೀದರ್ಸ್‌ಗೆ  ದಿಲ್ಲಿಯಲ್ಲಿ ನಡೆದ ಘಟನೆಯ ಅರಿವೂ ಇದ್ದಂತಿಲ್ಲ. ಕಾರ್ಪೊರೇಟ್‍ ವ್ಯವಸ್ಥೆಯಲ್ಲಿ ಮೊದಮೊದಲಿಗೆ ಎಲ್ಲ ಕಂಪೆನಿಗಳೂ ಸುಶೀಲ, ಸುವ್ಯವಸ್ಥಿತ ನಡವ­ಳಿಕೆ­ಗಳನ್ನೇ ತೋರಿಸಿ ಗಿರಾಕಿಗಳನ್ನು ಸೆಳೆಯುತ್ತವೆ. ಅವುಗಳ ಕರಾಳ ಮುಖಗಳು ಬಯಲಿಗೆ ಬರುವ­ಷ್ಟರಲ್ಲಿ ನಮಗೆ ಬೇರೆ ದಾರಿಗಳೇ ಉಳಿದಿರು­ವು­ದಿಲ್ಲ. ಉಬರ್‌ಗೆ ಆರಂಭದಲ್ಲೇ ಚುರುಕು ಮುಟ್ಟಿ­ಸಿದ ನಮ್ಮ ಸರ್ಕಾರದ ನಡೆ ತಪ್ಪಾಗಿರಲಿಕ್ಕಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT