ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲ್ಲಾಳರ `ಎ ಕಿಸಮ್‌ವಾರ್ ಗ್ಲಾಸರಿ'

ಹಳತು ಹೊನ್ನು
Last Updated 23 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಉಲ್ಲಾಳ ನರಸಿಂಗ ರಾವ್ ಅವರ `ಎ ಕಿಸಮ್‌ವಾರ್ ಗ್ಲಾಸರಿ ಆಫ್ ಕ್ಯಾನರೀಸ್ ವರ್ಡ್ಸ ವಿತ್ ಎಕ್ಸ್‌ಪ್ಲನೇಟರಿ ಮೀನಿಂಗ್' ಒಂದು ಅಪರೂಪದ ದ್ವಿಭಾಷಿಕ ನಿಘಂಟು. 1891ರಲ್ಲಿ ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಅಂಡ್ ಟ್ರ್ಯಾಕ್ಟ್ ಡಿಪಾಸಿಟರಿಯಲ್ಲಿ ಇದು ಮುದ್ರಣಗೊಂಡಿದೆ.

ಈ ಪುಸ್ತಕದ ಅಂದಿನ ಬೆಲೆ 3 ರೂಪಾಯಿ. ಇದೊಂದು ಕನ್ನಡ-ಇಂಗ್ಲಿಷ್ ದ್ವಿಭಾಷಿಕ ನಿಘಂಟು. ಮೈಸೂರು ವಿಶ್ವವಿದ್ಯಾನಿಲಯದ `ಕನ್ನಡ ಗ್ರಂಥಸೂಚಿ-ಸಂಪುಟ 2'ರಲ್ಲಿ ಈ ನಿಘಂಟನ್ನು ಕುರಿತು ಇಂಗ್ಲಿಷ್-ಕನ್ನಡ ನಿಘಂಟುಗಳ ಅಡಿಯಲ್ಲಿ ತಪ್ಪಾಗಿ ಪಟ್ಟೀಕರಿಸಲಾಗಿದೆ ಮತ್ತು ಇವರ ಇನ್ನೊಂದು ಅಪರೂಪದ ಕೃತಿಯ ಹೆಸರಿನ ನಮೂದು ಇಲ್ಲ. ಮಂಗಳೂರು ಪ್ರಾಂತ್ಯದವರಾದ ಇವರ ಮತ್ತೊಂದು ಕೃತಿ- 1912ರಲ್ಲಿ ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಅಂಡ್ ಟ್ರ್ಯಾಕ್ಟ್ ಡಿಪಾಸಿಟರಿಯಲ್ಲಿ ಪ್ರಕಟವಾದ 88 ಪುಟಗಳ `ಎ ಹ್ಯಾಂಡ್ ಬುಕ್ ಆಫ್ ಕ್ಯಾನರೀಸ್ ಪ್ರಾವರ್ಬ್ಸ್ ವಿತ್ ಇಂಗ್ಲಿಷ್ ಈಕ್ವವಲೆಂಟ್ಸ್' ಎಂಬ ಅತ್ಯಂತ ವಿಶಿಷ್ಟ ಮತ್ತು ಉಪಯುಕ್ತ ಪುಸ್ತಕ.

1894ರಲ್ಲಿ ರೆ ಎಫ್. ಕಿಟ್ಟೆಲ್ ಪ್ರಕಟಿಸಿದ ಕನ್ನಡ-ಇಂಗ್ಲಿಷ್ ಕೋಶದಲ್ಲಿ ಕಿಟ್ಟೆಲ್ ಬರೆದ ಪ್ರಿಫೇಸಿನಲ್ಲಿ ಎಲ್ಲಿಯೂ ತಮ್ಮ ಕೃತಿಗೆ ಮೂರು  ವರ್ಷಗಳ ಹಿಂದಷ್ಟೇ ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಅಂಡ್ ಟ್ರ್ಯಾಕ್ ಡೆಪಾಸಿಟರಿಯಲ್ಲೇ ಪ್ರಕಟವಾಗಿದ್ದ ಈ ಕಿಸಮ್‌ವಾರ್ ಗ್ಲಾಸರಿಯನ್ನಾಗಲೀ ಗ್ರಂಥಕರ್ತ ಉಲ್ಲಾಳ ನರಸಿಂಗ ರಾವ್ ಅವರನ್ನಾಗಲೀ ಪ್ರಸ್ತಾಪಿಸಿಲ್ಲ. ಅದರಲ್ಲಿಯೂ 1821ರಲ್ಲಿ ಪ್ರಕಟವಾಗಿರುವ ಎ.ಡಿ. ಕ್ಯಾಂಪ್‌ಬೆಲ್ ಅವರ‘A Dictionary of the Teloogoo Language’ಮತ್ತು 1834ರಲ್ಲಿ ಪ್ರಕಟವಾದ ರೆ ಜೆ.ಪಿ.ರಾಟ್ಲರ್ ಅವರ‘A Dictionary of the Tamil and English Languages’ ಮುಂತಾದುವುಗಳನ್ನು ಪ್ರಸ್ತಾಪಿಸಿ ಉಲ್ಲಾಳರ ಹೆಸರನ್ನು ಪ್ರಸ್ತಾಪಿಸದಿರುವುದು ಅಚ್ಚರಿಯೇ ಸರಿ. ನಿಘಂಟುಗಳನ್ನು ಕುರಿತ ಚರ್ಚೆಗಳ ಸಂದರ್ಭದಲ್ಲಿ ಹೆಸರಿಸಲೇಬೇಕಾದ ಆದರೆ ಕನ್ನಡದಲ್ಲಿ ಅತ್ಯಂತ ಅವಜ್ಞೆಗೆ ಒಳಪಟ್ಟ ಒಂದು ಮಹತ್ವದ ನಿಘಂಟು ಇದು ಎಂದು ಹೇಳದೆ ವಿಧಿಯಿಲ್ಲ.

ಕಿಸಮ್‌ವಾರ್ ಅಥವಾ ಕಿಸಮುವಾರು ಎಂಬ ಶಬ್ದ ಈಗ ಬಳಕೆಯಿಂದ ತಪ್ಪಿಹೋಗಿದೆ. ಈ ಶಬ್ದದ ಮೂಲ `ಕಿಸಮು'. ಹಾಗೆಂದರೆ ಬಗೆ, ಪ್ರಕಾರ, ಭೇದ ಎಂದರ್ಥ. ಈ ಶಬ್ದದ ಮೂಲ `ಕಿಸ್ಮ್' ಎಂಬ ಅರೇಬಿಕ್ ಶಬ್ದ. `ಕಿಸಮ್‌ವಾರ್' ಎಂದರೆ `ಪ್ರಕಾರಗಳನ್ನು ಅನುಸರಿಸಿ ಮಾಡಿದ ವಿಂಗಡಣೆ' ಎಂದರ್ಥ.

ಇಂಗ್ಲಿಷ್ ಭಾಷೆಯಲ್ಲಿ ಗ್ಲಾಸರಿ ಎಂದರೆ ಒಂದು ನಿರ್ದಿಷ್ಟ ಆಯ್ದ ಕ್ಷೇತ್ರದ ಶಬ್ದಗಳ ಹಾಗೂ ಪಾರಿಭಾಷಿಕ ಪದಗಳ ಕ್ರಮವಾದ ಪಟ್ಟಿ ಎಂದರ್ಥ. ಕನ್ನಡ ಆಕರ ಭಾಷೆಯಾಗಿ ಇಂಗ್ಲಿಷ್ ಗುರಿಭಾಷೆಯಾಗಿರುವ ವಿವಿಧ ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಳಸಬಹುದಾದ ಒಂದು ನಿರ್ದಿಷ್ಟ ಬಳಕೆದಾರರ ದ್ವಿಭಾಷಿಕ ವಿಶಿಷ್ಟ ನಿಘಂಟು ಇದು. ಸಸ್ಯಶಾಸ್ತ್ರ, ನ್ಯಾಯಾಂಗ, ವ್ಯವಸಾಯ ವಿಜ್ಞಾನ, ಲೋಹ ಶಾಸ್ತ್ರ, ಸಂಗೀತ, ಜ್ಯೋತಿಷ್ಯ, ಜಲಶಾಸ್ತ್ರ, ಖಗೋಳ ವಿಜ್ಞಾನ, ವಾಸ್ತುಶಿಲ್ಪ ವಿಜ್ಞಾನ, ಸೈನ್ಯ ವಿಚಾರ ಪರಿಭಾಷೆ ಮುಂತಾದ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಪದೇ ಪದೇ ಬಳಸಲಾಗುವ ದೈನಂದಿನ ಕನ್ನಡ ಶಬ್ದಗಳಿಗೆ ಈ ನಿಘಂಟಿನೊಳಗೆ ಇಂಗ್ಲಿಷ್ ಭಾಷೆಯಲ್ಲಿ ಅರ್ಥಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಸ್ವರೂಪದ ದೃಷ್ಟಿಯಿಂದ ಈ ನಿಘಂಟಿನ ನಾಮನಿರ್ದೇಶನವಾದ ಕಿಸಮ್‌ವಾರ್ ಗ್ಲಾಸರಿ ಎನ್ನುವ ಹೆಸರು ಅನ್ವರ್ಥಕವಾಗಿದೆ.

ಈ ಕೃತಿಯು ಪ್ರಿಫೇಸ್, ಕಂಟೆಂಟ್ಸ್, ಕೀ ಟು ಟ್ರಾನ್ಸಿಟ್ಲರೇಷನ್, ಅಬ್ರಿವಿಯೇಷನ್ಸ್, ಅಡಿಷನ್ಸ್ ಅಂಡ್ ಕರೆಕ್ಷನ್ಸ್, ನಿಘಂಟು, ಸಪ್ಲಿಮೆಂಟಲ್ ಲಿಸ್ಟ್ ಆಫ್ ವರ್ಡ್ಸ್ ಹಾಗೂ 44 ಪುಟಗಳ ಇಂಡೆಕ್ಸ್ - ಇಷ್ಟು ಅಂಶಗಳನ್ನು ಒಳಗೊಂಡಿದೆ. ಪ್ರಸ್ತಾವನೆಯಲ್ಲಿ ನರಸಿಂಗ ರಾವ್ ಅವರು ““An arbitrary but convenient plan of grouping together technical and other words under different heads has been adopted; and this arrangement will I hope , be found suitable for purposes of ready reference by persons interested in a particular subject, by translators  of official documents  and the several Administrations. Official terms have been explained, and the use of words localized; information scattered in various works, inaccessible to many owing to their value or rarity, brought together and concentrated to effect a saving of time and labor” ಎಂದು ಈ ಕೃತಿಯ ಹಿನ್ನೆಲೆಯನ್ನು ಪ್ರಸ್ತಾಪಿಸುತ್ತಾರೆ.

ಈ ಕೃತಿಯ ಮುದ್ರಣ ಪ್ರತಿಯ ತಯಾರಿಕೆಯಲ್ಲಿ ತಮಗೆ ನೆರವು ನೀಡಿದ ಮಂಗಳೂರಿನಲ್ಲಿ ಹೋಮಿಯೋಪಥಿ ಶಾಸ್ತ್ರಪಾರಂಗತರಾಗಿದ್ದ ಹಾಗೂ ನಿಘಂಟು ರಚನೆಯಲ್ಲಿ ಕಿಟ್ಟೆಲ್‌ರಿಗೆ ವಿಶೇಷ ನೆರವು ನೀಡಿದ್ದ ಮತ್ತು ಬಹು ಮುಖ್ಯವಾಗಿ ವ್ಯಾಯಾಮ ದೀಪಿಕೆ (1896 ), ಗೃಹೋಪಯೋಗದ ಹೋಮಿಯೋಪಥಿ (1920), ರೋಗಚಿಕಿತ್ಸೆ (ಸುಮಾರು 1900) ಎನ್ನುವ ಮೂರು ಪುಸ್ತಕಗಳನ್ನು ರಚಿಸಿದ್ದ ಭಾರದ್ವಾಜ ಶಿವರಾವ್ ಅವರನ್ನು ಹಾಗೂ ಯು. ರಘುನಾಥಯ್ಯ ಇವರುಗಳನ್ನು ಪ್ರಸ್ತಾವನೆಯಲ್ಲಿ ಸ್ಮರಿಸಿಕೊಂಡಿದ್ದಾರೆ. ಶಬ್ದಗಳನ್ನು ಒಟ್ಟು 27 ಶಿಸ್ತುಗಳನ್ನಾಗಿ ವಿಂಗಡಿಸಿ ಸುಮಾರು 5000 ದೇಶ್ಯ, ಅನ್ಯದೇಶ್ಯ ಶಬ್ದಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಅರ್ಥವನ್ನು ನೀಡಲಾಗಿದೆ.

ಲೆಕ್ಕ ಮತ್ತು ಪುಸ್ತಕ ನಿರ್ವಹಣೆ, ಆಪ್ತತೆ ಮತ್ತು ಸಂಬಂಧಗಳು, ವ್ಯವಸಾಯ ಮತ್ತು ಗ್ರಾಮೀಣ, ಶರೀರರಚನೆ ಹಾಗೂ ಅಂಗಾಂಗ ಶಾಸ್ತ್ರ, ವಾಸ್ತುಶಿಲ್ಪ- ಬಡಗಿ- ಶಿಲ್ಪ ಹಾಗೂ ಜೋಡಣೆ ಶಾಸ್ತ್ರ, ಜ್ಯೋತಿಷ್ಯ ಹಾಗೂ ಖಗೋಳ ವಿಜ್ಞಾನ, ಸಸ್ಯ ವಿಜ್ಞಾನ, ಸಿವಿಲ್ ಹಾಗೂ ಕಾನೂನು, ವರ್ಣ ಮತ್ತು ಎರಕ, ವಾಣಿಜ್ಯ, ಅಪರಾಧ ಮತ್ತು ಪೊಲೀಸು, ವಿಭಾಗೀಯ ಮತ್ತು ಕಚೇರೀಯ, ಗೃಹ ಮತ್ತು ಆವರಣ. ಯಾನ ಮತ್ತು ಉಪಕರಣಗಳು, ಭೂಮಿತಿ, ಕಾಗದಪತ್ರಗಳು, ವೈದ್ಯಕೀಯ ಮತ್ತು ಪಶುವೈದ್ಯಕೀಯ, ಲೋಹಗಳು, ಸೈನ್ಯ, ಗಣಿಗಾರಿಕೆ, ಪೂರಕ ವಿಚಾರಗಳು, ಸಂಗೀತ, ಜಲ ಮತ್ತು ನೆಲಗಳ ಪ್ರಾಕೃತಿಕ ಹಾಗೂ ಕೃತಕ ವಿಭಜನೆಗಳು, ಅಮೂಲ್ಯ ಶಿಲೆಗಳು, ಕಂದಾಯ, ನೌಕಾಸಂಗತಿಗಳು, ಅಳತೆ ಹಾಗೂ ತೂಕ - ಇವೇ ಮುಂತಾದ ವಿಭಾಗಗಳ್ಲ್ಲಲಿ ಪ್ರಕಾರಗಳನ್ನು ಅನುಸರಿಸಿ ವಿಂಗಡಣೆ ಮಾಡಿ ಆಯಾ ಶೀರ್ಷಿಕೆಗಳ ಅಡಿಯಲ್ಲಿ ಸೇರ್ಪಡೆ ಶಬ್ದಗಳನ್ನು ನೀಡಲಾಗಿದೆ. ತಮಗೆ ಬೇಕಾದ ಕ್ಷೇತ್ರಗಳಲ್ಲಿ ಬಳಕೆದಾರರು ಶಬ್ದಗಳನ್ನು ಹುಡುಕಲು ಇದರಿಂದ ಅನುಕೂಲವಾಗಿದೆ.

ಮೊದಲು ಕನ್ನಡ ಲಿಪಿಯಲ್ಲಿ ಒಂದು ಸೇರ್ಪಡೆ ಶಬ್ದ, ನಂತರ ಅಂತರರಾಷ್ಟ್ರೀಯ ಧ್ವನಿಲಿಪಿಯಲ್ಲಿ ಆ ಶಬ್ದದ ಇಂಗ್ಲಿಷ್ ರೂಪ, ಆನಂತರ ಆವರಣ ಚಿಹ್ನೆಗಳೊಳಗೆ ಸಂಕೇತಾಕ್ಷರಗಳಲ್ಲಿ ಆ ಶಬ್ದ ಬಳಕೆಯಲ್ಲಿರುವ ಪ್ರದೇಶ, ಇಂಗ್ಲಿಷ್ ಭಾಷೆಯಲ್ಲಿ ಆ ಶಬ್ದಕ್ಕೆ ಅರ್ಥ, ನಂತರ ಸೇರ್ಪಡೆ ಶಬ್ದದ ಆದಿಪ್ರತ್ಯಯದೊಂದಿಗಿನ ಅಥವಾ ಅಂತ್ಯಪ್ರತ್ಯಯದೊಂದಿಗಿನ ರೂಪಗಳು ಹಾಗೂ ಅವುಗಳ ಅರ್ಥ-ಈ ಕ್ರಮವನ್ನು ಸೇರ್ಪಡೆ ಶಬ್ದಾರ್ಥಕ್ಕೆ ಕೊಡುವ ಕ್ರಮವನ್ನು ಉಲ್ಲಾಳ ನರಸಿಂಗ ರಾವ್ ಅವರು ಅನುಸರಿಸಿದ್ದಾರೆ.

ಉಲ್ಲಾಳ ನರಸಿಂಗರಾವ್ ಅವರು ಇಂಗ್ಲಿಷ್ ಭಾಷೆಯಲ್ಲಿಯೂ ವಿದ್ವಾಂಸರಾದ್ದರಿಂದ ಅವರು ನೀಡುವ ಅರ್ಥಗಳು ನಿಖರವಾಗಿಯೂ ನಿರ್ದಿಷ್ಟವಾಗಿಯೂ ಕರಾರುವಾಕ್ಕಾಗಿಯೂ ಅತ್ಯಂತ ಸೂಕ್ತವಾಗಿಯೂ ಇರುತ್ತವೆ ಎಂಬುದಕ್ಕೆ ಬಿಡುಮಾನ್ಯಳು ಎನ್ನುವ ಶಬ್ದಕ್ಕೆ ಅವರು ನೀಡಿರುವ ಅರ್ಥವನ್ನು ಗಮನಿಸಬಹುದು:

ಬಿಡುಮಾನ್ಯಳು bidumanyalu. A wife divorced by her husband according to the Aliyasanthana law. Bhutalapandya defines ಬಿಡುಮಾನ್ಯಳು as a woman who (1) has become pregnant through a person socially lower than herself, (2) after puberty, has eloped with a person of an inferior caste,        (3) has eloped with a person of an inferior caste after a divorce from her husband (South Canara)..

ಎಲ್ಲ ಸಾಮಾಜಿಕ ಕ್ಷೇತ್ರಗಳ ಅದರಲ್ಲಿಯೂ ಮುಖ್ಯವಾಗಿ ವಾಣಿಜ್ಯ, ಕೋರ್ಟು ಕಚೇರಿ ವ್ಯವಹಾರಗಳು, ಭೂಜಲ ಸಂಬಂಧೀ ವಿಚಾರಗಳಿಗೆ ಸಂಬಂಧ ಪಟ್ಟ ಶಬ್ದಗಳನ್ನು ಕುರಿತು ಶಿಕ್ಷಣಪ್ರಸಾರ ವ್ಯಾಪಕವಾಗುತ್ತಿದ್ದ ಕಾಲಘಟ್ಟದಲ್ಲಿ ರಚನೆಗೊಂಡ, `ಎ ಕಿಸಮ್‌ವಾರ್ ಗ್ಲಾಸರಿ ಆಫ್ ಕ್ಯಾನರೀಸ್ ವರ್ಡ್ಸ್' ಶಬ್ದಕೋಶ ವಿಶಿಷ್ಟವೂ ವಿರಳವೂ ಅಪರೂಪವೂ ಆದ ಬಹೂಪಯೋಗಿ ನಿಘಂಟು ಎನ್ನುವ ಕೀರ್ತಿಗೆ ಭಾಜನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT