ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿದರ್ಧವ ನೀವು ನುಡಿಯಬೇಕು!

Last Updated 28 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವು ಬರೆದ ಪದ್ಯಗಳಲ್ಲ; ಬದುಕಿದ ಪದ್ಯಗಳು. ಹಾಗಾಗಿ ಇದು ನಾನು ಮತ್ತು ಕವಿ ಇಬ್ಬರೇ ಓದಿಕೊಳ್ಳಬೇಕಾದ ಪುಸ್ತಕ. ಇದನ್ನು ಓದುವಾಗ ನಿಮಗೂ ಹಾಗೇ ಅನ್ನಿಸುತ್ತೆ ಎಂಬುದು ನನಗೆ ಖಾತ್ರಿಯಾಗಿ ಗೊತ್ತು. ಸಾಮಾನ್ಯವಾಗಿ ಕವಿಗಳು ಒಂದು ಸಂಗತಿಗೆ ಓದುಗರನ್ನು ಗೋಗರೆಯುತ್ತಾರೆ. ತಮ್ಮನ್ನು ಕೇಳಿಸಿಕೊಳ್ಳುವ ತನಕ ಬಿಡೋಲ್ಲ.

ಆದರೆ ಕೆಲವು ಕವಿಗಳಿರುತ್ತಾರೆ, ಮಿರ್ಜಾಗಾಲಿಬ್ ತರದವರು, ಅಲ್ಲಮನ ತರದವರು. ನೂರಾರು ಅನಾಮಿಕ ತತ್ವಪದಕಾರರ ತರದವರು- ಅವರು ಹಾಗೆ ಯಾರೂ ತಮ್ಮನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಬಯಸುವುದೂ ಇಲ್ಲ, ಹಾಗೆ ಮಾಡಲು ಕೇಳುವುದೂ ಇಲ್ಲ. ಆ ಕವನವೋ, ದ್ವಿಪದಿಯೋ, ವಚನವೋ, ತತ್ವವೋ ಉಳಿದರೆ ಉಳಿಸಿಕೊಂಡವರದಾಗಿ ಉಳಿಯಲಿ ಹಾಗೇ ಉಳಿಯುತ್ತಾ ಹೋಗಲಿ ಅಥವಾ ವಿಸರ್ಜನೆಗೊಳ್ಳಲಿ, ನನಗೆ ಅದರ ಗೊಡವೆ ಇಲ್ಲ ಎಂಬುದು ಅವರ ದೊಡ್ಡತನ.

ಅಂತಹ ದೊಡ್ಡಸ್ತಿಕೆ ಬಗೆಗೆ ನಾನು ಮಾತನಾಡುತ್ತಿಲ್ಲ. ಆದರೂ ಒಂದು ಕೋರಿಕೆ: ಈ ಮಾತನ್ನು ಇಲ್ಲೇ ಈಗಲೇ ಮರೆತುಬಿಡಿ, ನಂತರ ಈ ಪುಸ್ತಕ ಓದಿ. ಹೀಗೆ ಕೋರಿಕೊಂಡರೂ ಕೋರಿಕೊಳ್ಳದಿದ್ದರೂ ಕನ್ನಡದ ಶ್ರಾವಕ ಪ್ರತಿಭೆ ಘನವಾದದ್ದು. ಅದು ಇಡಿಯಾಗಿ ಅನೇಕ ಮಹಾಕಾವ್ಯಗಳನ್ನು ಅನೇಕ ರಾತ್ರಿಗಳು ಕೂತು ಕೇಳಬಲ್ಲದು, ಸಾವಿರಾರು ತತ್ವಪದಗಳನ್ನು ನೆನಪಿನಲ್ಲಿಟ್ಟು ಕಾಪಾಡಬಲ್ಲುದು, ಸಾವಿರಾರು ವಚನಗಳನ್ನು ನಡೆದು ನುಡಿಯಬಲ್ಲದು.

ಅಲ್ಲಮನಂತಹ ವೈಶ್ವಿಕ ಪ್ರತಿಭೆಗಳೊಡನೆ ಸಂವಾದಿಸಬಲ್ಲದು, ಯಾವ ಯೂನಿವರ್ಸಿಟಿ ಪ್ರಿಸ್ಕ್ರೈಬ್ ಮಾಡದಿದ್ದರೂ ಚಿದಾನಂದಾವಧೂತ ಕವಿಯ ‘ದೇವಿ ಮಹಾತ್ಮೆ’ಯ ಹತ್ತಾರು ಸಾವಿರ ಪ್ರತಿಗಳನ್ನು ಬೀದಿ ಬದಿಯಲ್ಲಿ ಕೊಂಡು ಪಾರಾಯಣ ಮಾಡಬಲ್ಲದು. ಇಂತಹ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ ಕಾವ್ಯ ಸೂಕ್ಷ್ಮವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಕಾವ್ಯಕ್ಕೆ ಕೇಳುಗರು ಕಮ್ಮಿ ಎಂಬ ಕೊರಗು ಆಧುನಿಕ ಕನ್ನಡದ ಸಂದರ್ಭಕ್ಕೆ ಅನ್ವಯವಾಗುವ ಮಾತು. ಇದು ಕುವೆಂಪು ಬೇಂದ್ರೆಯವರಿಂದ ಹಿಡಿದು ಯಾರೇ ಈ ಹೊತ್ತಿನ ಕವಿಯವರೆಗೂ ಸತ್ಯ. ಹೊಸಗನ್ನಡದ ಮಟ್ಟುಗಳು –ಅವು ಹಾಡಿನವಾಗಿರಲಿ, ಮುಕ್ತಛಂದವಾಗಿರಲಿ– ಸಾಮಾನ್ಯನವರೆಗೆ ಹೋಗಿ ಮುಟ್ಟಿವೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಕಾವ್ಯ ಕಟ್ಟುವ ಕೌಶಲದ ಬಗೆಗೆ ಅದೆಷ್ಟೇ ಸಂಭ್ರಮದಿಂದ ನವ್ಯರ ಬಗೆಗೆ ಮಾತನಾಡಿದರೂ ಇಡಿಯಾಗಿ ಹೊಸಗನ್ನಡದ ಕಾವ್ಯವೇ ಕನ್ನಡದ ಮನಸ್ಸು ಮುಟ್ಟಿ ಮಾತನಾಡಿಸಿದ ಸಾಹಿತ್ಯಪ್ರಕಾರವೇ? ಎನ್ನುವುದು ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆ.

ಕಾವ್ಯಪ್ರೀತಿ ಇರುವವರು ಅಂದುಕೊಂಡಿರುವ ನಾವೇ ಅದೆಷ್ಟು ಕವನಸಂಕಲನಗಳನ್ನು ಇಡಿಯಾಗಿ ಇಷ್ಟಪಟ್ಟು ಓದಿದ್ದೇವೆ? ಎಂದು  ಕೇಳಿಕೊಂಡರೆ ಉತ್ತರ ತುಂಬಾ ನಿರಾಶಾದಾಯಕವೆನ್ನಿಸುತ್ತದೆ. ಕವನ ಸಂಕಲನಗಳ ಮಾರಾಟ ಮಾತ್ರ ಕಡಿಮೆಯಲ್ಲ; ಹೊಸಗನ್ನಡದ ಕವನ ಪ್ರಕಾರ ಕನ್ನಡದ ಜನಮನಸ್ಸನ್ನು ಮುಟ್ಟಿಲ್ಲವೆನ್ನುವುದು ವಾಸ್ತವ.

ಬಸೂ ಅವರ ಈ ದ್ವಿಪದಿಗಳನ್ನು ಓದುವಾಗ ಅದೆಲ್ಲೆಲ್ಲಿಂದಲೋ ಸಂಬಂಧ ಕಟ್ಟಿಕೊಂಡು ಬಂದ ಕೆಲವು ಸಂಗತಿಗಳಿವೆ. ಮೊದಲಿಗೆ, ಈ ದ್ವಿಪದಿಗಳು ಬಸೂ ಇನ್ನೂ ಬರೆಯುತ್ತಲೇ ಇರುವ ಗಜಲ್‌ಗಳಿಂದ ಕಳಚಿಕೊಂಡು ಬಂದ ಷೇರ್‌ಗಳಂತೆ ಕಾಣಿಸುತ್ತವೆ. ಅದಷ್ಟೇ ಅಲ್ಲ. ಇದಕ್ಕೆ ಇನ್ನೊಂದು ಆಯಾಮವೂ ಇದೆ. ಗಜಲ್ ಎಂದರೆ ನಲ್ಲೆಯೊಡನೆ ಮಾತುಕತೆ ಎಂಬರ್ಥ ಇದೆ. ಅದು ಕೇವಲ ಮಾತುಕತೆಯಲ್ಲ; ಇಡಿಯಾಗಿ ತನ್ನನ್ನು ಪ್ರೀತಿಸುವ ಜೀವಕ್ಕೆ ಒಪ್ಪಿಸಿಕೊಳ್ಳುವುದು.

ಗಮನಿಸಬೇಕು: ಇದು ದೈವಕ್ಕೆ ತನ್ನನ್ನು ಒಪ್ಪಿಸಿಕೊಳ್ಳುವ ತನ್ನನ್ನೇ ಇಲ್ಲವಾಗಿಸಿಕೊಳ್ಳುವ ಭಕ್ತಿಯಲ್ಲ, ಭಕ್ತಿಗೆ  ಯಜಮಾನ ಗುಣವಿದೆ. ಭಕ್ತ ಯಾವ ರೀತಿಯ ಸಂಬಂಧ ಸ್ಥಾಪಿಸಿಕೊಳ್ಳಲು ಬಯಸಿದರೂ ಸರಿಯೇ, ಅಲ್ಲಿ ದೈವದ್ದೇ ಯಜಮಾನಿಕೆ. ಅದಕ್ಕಿಂತ ದೊಡ್ಡದಾದ ಪ್ರೇಮ ಮತ್ತು ವಿಷಾದ ಗಜಲ್‌ನ ಜೀವದ್ರವ್ಯ.

ಈ ಒಪ್ಪಿಸಿಕೊಳ್ಳುವ ಪ್ರಕ್ರಿಯೆ ಅನೇಕ ನಿರಸನಗಳನ್ನು ಒಮ್ಮೆಲೇ ಸಾಧಿಸಿಬಿಡುತ್ತದೆ. ಗಂಡು, ದೈವ, ಇತ್ಯಾದಿ ಕೇಂದ್ರಗಳೆಲ್ಲ ಕಳಚಿಬೀಳುತ್ತವೆ. ಅದಕ್ಕೇ ಗಜಲ್ ಎದುರಾದರೆ ಧಾರ್ಮಿಕತೆ, ಪುರುಷಾಧಿಕಾರ, ಇತ್ಯಾದಿ ಅಧಿಕಾರ ಕೇಂದ್ರಗಳು ಆತಂಕ ಪಡುತ್ತವೆ. ಅಂತಹ ನಮ್ಮಷ್ಟಕ್ಕೆ ನಾವೇ ಓದಿಕೊಳ್ಳಬೇಕಾದ ಕೆಲವು ದ್ವಿಪದಿಗಳು:

ನನ್ನಂತೆ ನಿನಗೂ ಲೋಕವೆಲ್ಲ ಸುಂದರವಾಗಿ ಕಂಡರೆ
ಹೆಚ್ಚೇನಿಲ್ಲ ನನಗಿರುವ ಕುರುಡುತನ ನಿನಗೂ ಇದೆ

ಏನು ಮಾಡಲಿ ನನ್ನ ಅಂಗಳವೇ ಅಷ್ಟು ಕಿರಿದು
ನೀ ಬರುವುದಾದರೆ ನನ್ನ ಹೆಜ್ಜೆಗಳ ಮೇಲೆಯೇ ಕಾಲೂರಿಕೊಂಡು ಬರಬೇಕು

ನೀ ನಡೆದು ಬಂದ ಈ ಧೂಳು ದಾರಿಯಲ್ಲಿ ಹೆಜ್ಜೆ ಗುರುತುಗಳಿರಲಿಲ್ಲ
ನನ್ನೆಡೆಗೆ ಹೆಜ್ಜೆ ಮೂಡದ ಹಾಗೆ ನಡೆದು ಬರಲು ನಿನಗಷ್ಟೇ ಸಾಧ್ಯ

ಬರಿ ಬರಿ ಎನುವ ನಿನ ಸೊಲ್ಲು ಕೇಳಿಸಿಕೊಂಡಾಗಿದೆ ಜೀವವೇ
ಒಮ್ಮೆ ಎದೆಗೊರಗು; ಮಣ್ಣಿಗೆ ಬೀಜ ಬೀಳದೆ ಹೋದರೆ ಮೊಳಕೆ ಏಳದು

ಎಲ್ಲವೂ ನಿರಸನಗೊಂಡಿದ್ದರೆ ಮತ್ತೇ ಹೇಳಿಕೊಳ್ಳುವುದಕ್ಕೂ ಏನೂ ಉಳಿಯುತ್ತಿರಲಿಲ್ಲ. ಆದರೆ ಹಾಗಾಗಲಿಲ್ಲ, ಅವೆಲ್ಲ ಕವನಗಳಾಗಿವೆ ಎಂದರೆ, ಅಲ್ಲಿನ ಅರಕೆಯನ್ನೆ ಮತ್ತೆ ಅವು ಇಲ್ಲಿ ಮುಂದುವರಿಸಿವೆ ಎಂದೇ ಅರ್ಥ. ಉಳಿದ ಒಂದೆಳೆ ದಾರವನ್ನೇ ತಾಯ ಸೆರಗೆಂದುಕೊಳ್ಳುವುದೇ ಕಾವ್ಯವಲ್ಲವೆ?

ಈ ಸಾಲುಗಳನು ಯಾರಾದರೂ ಬರೆಯಬಹುದೆಂಬ ಮಾತಿಗೆ ಎದುರಾಡಲಾರೆ
ನನ್ನದೆಂಬ ಬದುಕೊಂದಿದ್ದರೆ ನನ್ನಲೂ ಈ ಸಾಲುಗಳು ಹುಟ್ಟುತ್ತಿರಲಿಲ್ಲ

ಈ ಸಾಲುಗಳನ್ನು ಓದಿದ ಮೇಲೆ ಈ ಸಂಕಲನ ಬರದೆ ಇರುವಂತಿದ್ದರೆ ಎಷ್ಟು ಚೆನ್ನಿತ್ತು ಎನ್ನಿಸಿತು. ಇಲ್ಲಿನ ದ್ವಿಪದಿಗಳಲ್ಲಿ ಕತ್ತಲು-ಬೆಳಕುಗಳ ಜುಗಲ್‌ಬಂದಿ ನಡೆದೇ ಇದೆ. ಸುತ್ತ ಅಗಾಧವಾದ ಕತ್ತಲಿದೆ ಎಂದು ಹೌಹಾರಿಲ್ಲ. ಕಾಲಿಟ್ಟಲ್ಲೆಲ್ಲ ಕಲ್ಲುಮುಳ್ಳುಗಳಿವೆಯೆಂದು ನಿಂತಲ್ಲೇ ನಿಂತಿಲ್ಲ. ಕೈಯಲ್ಲೊಂದು ದೀವಿಗೆ್ರ ಕಾಲಿಗೊಂದು ಜೊತೆ ಚಪ್ಪಲಿ ಮೆಟ್ಟಿದರೆ ತೀರಿತು ಎಂಬ  ಸಮಾಧಾನವಿದೆ.  ದ್ವಿಪದಿ ಕನ್ನಡದ ಜಾಯಮಾನಕ್ಕೆ ಹೆಚ್ಚು ಪರಿಚಿತ ಪ್ರಕಾರವಲ್ಲ. ಇದು ಕಾವ್ಯದ ಒಂದು ಮಟ್ಟು.

ವಿಶೇಷವಾಗಿ ಗಜಲ್‌ನ ಷೇರ್‌ಗಳ ಲಯ ಮತ್ತು ಕಟ್ಟುಗಳ ಮಾದರಿಗಳು ನಮಗೆ ತಕ್ಷಣ ಎದುರಿಗೆ ಬರುತ್ತವೆ. ಕನ್ನಡದಲ್ಲಿ ಇಂತಹ ದ್ವಿಪದಿಗಳನ್ನು ವಿಶೇಷವಾಗಿ ಉತ್ತರ ಕರ್ನಾಟಕದ ಗಜಲ್ ಲಯ ಮತ್ತು ಸತ್ವವನ್ನು ಹಿಡಿಯಬಲ್ಲವರು ಪ್ರಯೋಗಿಸಿದ್ದಾರೆ. ಇಲ್ಲಿ ಶಾಂತರಸರನ್ನು ನೆನೆಯಲೇಬೇಕು.   ಈ ದ್ವಿಪದಿಗಳಲ್ಲಿ ಇರುವ ಇಕ್ಕಟ್ಟು ಇಲ್ಲಿನ ವಿಶೇಷ.

ಅದೇನೆಂದರೆ ಮೊದಲನೆಯ ಪಾದದಲ್ಲಿ ಕವಿ ನಮ್ಮನ್ನು ಆಹ್ವಾನಿಸಿ ಎರಡನೆಯ ಪಾದದಲ್ಲಿ  ಅವನು ನಿರ್ಗಮಿಸಿಬಿಡುತ್ತಾನೆ. ಈ ಆಹ್ವಾನ ಮತ್ತು ತಕ್ಷಣದ ನಿರ್ಗಮನ ನಮ್ಮನ್ನು ಆತಂಕಿತರನ್ನಾಗಿಸುತ್ತೆ. ಮತ್ತು ಕವನ ನಮ್ಮಲ್ಲಿ ಮುಂದುವರಿಯುತ್ತದೆಯಾದ್ದರಿಂದ, ಆ ಕವನದ ಮುಂದಿನ ನಿರ್ವಹಣೆಯ ಜವಾಬ್ದಾರಿ ನಮಗೆ ವರ್ಗಾವಣೆಯಾಗುತ್ತದೆ, 

ನೀನು ಹಚ್ಚಿದ್ದು ಒಂದೇ ಮೋಂಬತ್ತಿ
ಈ ರಾತ್ರಿಗಳೆಯಲು ಬೇಕಿದ್ದ ಬೆಳಕೂ ಅಷ್ಟೆ

ಆ ದೊಡ್ಡ ಮನೆಯ ಹಜಾರದಲಿ ಪುಟ್ಟ ಅಕ್ವೇರಿಯಂ
ತನ್ನ ಬದುಕಿನ ರೂಪಕಗಳೇ ಕಣ್ಣೆದುರಿಗಿದ್ದಾಗ ಮನುಷ್ಯರಿಗೆ ಸಮಾಧಾನ.

ಗೆಳೆಯಾ ಹಣತೆ ಹಚ್ಚಿಡು
ಕತ್ತಲಾಗಿದೆಯೆಂದು ಗೊತ್ತಾಗಲಿ

ಬೆಳೆವ ದಾರಿಯಲಿ ನನ್ನ ಎಲ್ಲ ಹಿತನುಡಿಗೆ ಮಗಳು ಕಿವಿಗೊಟ್ಟಳು
ಮಾತಿಗಿಂತ ಅವಳ ಎದುರಿಗಿತ್ತು ತುಳಿವ ಕಾಲಿಗೂ ಅನ್ನ ನೀಡುವ ನೆಲ

ಬೆಳಕಲ್ಲ ಕತ್ತಲು
ಹಣತೆ ಹಚ್ಚುವುದ ಕಲಿಸಿತು...

ಯಾರೂ ವ್ಯಾಖ್ಯಾನ ಮಾಡಬಾರದ ದ್ವಿಪದಿಯೊಂದಿಗೆ ಈ ಬರಹವನ್ನು ಮುಗಿಸುತ್ತೇನೆ.

ಎಷ್ಟೆಲ್ಲ ಅವಸರಿಸಿದರೂ ಮನೆಗೆ ಮರಳುವಷ್ಟರಲ್ಲಿ ಕತ್ತಲಾಯಿತು
ದೀಪವಿಲ್ಲದ ಕೋಣೆ ಗೋಡೆಗಾನಿ ಮಗಳು ಒರಗಿದ್ದಳು ಮೌನವೇ ಮಲಗಿದ ಹಾಗೆ.
-ಎಸ್. ನಟರಾಜ ಬೂದಾಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT