ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುಕಿಗೆ ಅಳುಕಬೇಡಿ ಆಸ್ಟಿಯೊಪಥಿ ಇದೆಯಲ್ಲ!

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ರಾತ್ರಿ ಮಲಗಿದ್ದ. ಆದರೆ ಬೆಳಿಗ್ಗೆ ಎದ್ದಾಗ ಏನಾಯಿತೊ ಗೊತ್ತಿಲ್ಲ ಕತ್ತು ಉಳುಕಿದಂತಾಗಿದೆ ಆಕಡೆ ಈಕಡೆ ತಿರುಗಿಸಲು ಆಗುತ್ತಿಲ್ಲ. ವಿಪರೀತ ನೋವು ಏನಪ್ಪಾ ಮಾಡಲಿ! ಅಷ್ಟೊತ್ತಿಗಾಗಲೆ ಪಕ್ಕದ ಮನೆಯ ಸುಮಾರು 50ರ ಮನುಷ್ಯ ಕೂಗುತ್ತಾನೆ, ‘ಏ ತಮ್ಮ ಬಾ ಇಲ್ಲಿ ಎಲ್ಲಿ ತೋರಿಸು ಏನಾಗಿದೆ ಎಲ್ಲಾ ವಿವರಿಸಿದ ನಂತರ ಬಾ ಇಲ್ಲಿ’ ಎಂದು ಈ ಕುರ್ಚಿ ಮೇಲೆ ಕುಳಿತುಕೊಳ್ಳಲು ಹೇಳುತ್ತಾನೆ.

ಇವನಿಗೊ ಭಯ ‘ಈಗಲೆ ನೋವು ತಿನ್ನುತ್ತಿದ್ದೇನೆ’ ಇನ್ನೆನು ಕಾದಿದೆ ಎಂದು ಗೊಣಗುತ್ತಾ ‘ಬಿಡಿ ಅಂಕಲ್ ನಾನು ಡಾಕ್ಟರ್ ಹತ್ತಿರ ಹೋಗುವೆ ಮತ್ತೆನಾದರು ಆದರೆ’ ಎಂದ. ಆದರೂ ಬಿಡದ ಆ ಮನುಷ್ಯ ‘ಇಷ್ಟು ಚಿಕ್ಕದಕ್ಕೆಲ್ಲಾ ಡಾಕ್ಟರ್ ಯಾಕೆ, ಇಂಜೆಕ್ಷನ್ ಮಾತ್ರೆ? 5 ನಿಮಿಷ ಇಲ್ಲಿ ಕುಳಿತುಕೊ ನಾನೆಲ್ಲಾ ಸರಿ ಮಾಡುವೆ’ ಎನ್ನುತ್ತಾನೆ.

ಸರಿ ಎಂದು ಕುರ್ಚಿಯ ಮೇಲೆ ಕುಳಿತ. ಒಂದು ಕ್ಷಣ ಕತ್ತನ್ನು ಬಲವಾಗಿ ಹಿಡಿದು ಆಕಡೆ ಈಕಡೆ ಸರ್ರನೆ ಹೊರಳಿಸಿದ ಲಟ್ ಎಂಬ ಶಬ್ದ ಕೇಳಿಸಿತು ಅಮ್ಮಾ... ಎಂದು ಕೂಗಿದ ಕ್ಷಣ ಮಾತ್ರದಲ್ಲಿ ಕತ್ತು ನೋವು ಮಾಯ. ಈ ತರಹದ ಘಟನೆಗಳನ್ನು ನಾವು ನಮ್ಮ ಹಿರಿಯರಿಂದ ಕೇಳಿದ್ದೆವೆ ಹಾಗು ಎಲ್ಲಕಡೆ ಕಾಣುತ್ತಿದ್ದೆವೆ. ಹೇರ್‌ಕಟ್ ಮಾಡಿಸಿದ ನಂತರ ಕ್ಷೌರಿಕ ತಲೆಯನ್ನು ಕುಟ್ಟಿ ಕತ್ತಿಗೆ ಮಸಾಜ್ ಮಾಡಿ ಲಟಿಗೆ ತಗೆಯುವುದನ್ನು ನೋಡಿದ್ದೇವೆ. 

ಈ ತರಹದ ವಿಧಾನಗಳನ್ನು ಕೇವಲ ಕತ್ತಿಗೆ ಮತ್ರವಲ್ಲ ದೇಹದ ಎಲ್ಲಾ ಅಂಗಗಳಿಗೂ ಬಳಸುವುದುಂಟು. ಸೊಂಟ ನೋವು, ಕಾಲು ಉಳುಕು, ಮಂಡಿ ಉಳುಕು ಇತ್ಯಾದಿ ಇತ್ಯಾದಿ.. ಶತ ಶತಮಾನಗಳಿಂದ ಒಬ್ಬರಿಂದ ಒಬ್ಬರಿಗೆ ಬಳುವಳಿಯಾಗಿ ಬಂದಿರುವಂತಹ ಪಾರಂಪರಿಕ ವೈದ್ಯಕೀಯ ವಿಧಾನಗಳು ಇಂದಿಗು ನಮ್ಮ ನಿಮ್ಮ ನಡುವೆ ಪ್ರಚಲಿತದಲ್ಲಿವೆ.

ಕಳೆದ 20ನೆಯ ಶತಮಾನದ ಮಧ್ಯ ಬಾಗದಲ್ಲಿ ವೈದ್ಯಕೀಯ ವಿಜ್ಞಾನ ಅಷ್ಟಾಗಿ ಮುಂದುವರೆಯದಿದ್ದ ಕಾಲವದು. ಈ ತರಹದ ಚಿಕಿತ್ಸಾ ಪದ್ಧತಿಗಳು ಜಗತ್ತಿನಾದ್ಯಂತ ಸಾಕಷ್ಟು ಪ್ರಚಲಿತದಲ್ಲಿದ್ದವು. ಈ ಪದ್ಧತಿಗಳ ಮೂಲ ಯಾರಿಗೂ ತಿಳಿಯದು. ವೈದ್ಯಕೀಯ ವಿಜ್ಞಾನ ಮುಂದುವರಿದಂತೆ ಕಾಲಕಾಲಕ್ಕೆ ಚಿಕಿತ್ಸಾ ಪದ್ಧತಿಗಳು ಬದಲಾಗಿ ಪಾರಂಪರಿಕ ಪದ್ಧತಿಗಳಿಗೆ ವೈಜ್ಞಾನಿಕ ವಿಶ್ಲೇಷಣೆ ಹಾಗೂ ಆಧುನಿಕತೆಯ ಟಚ್ ನೀಡಲಾಯ್ತು. ಇವುಗಳಲ್ಲಿ ಒಂದು ಆಸ್ಟಿಯೊಪಥಿ.

ಈ ಆಸ್ಟಿಯೊಪಥಿ (osteopathy) ಚಿಕಿತ್ಸೆಯು ಹುಟ್ಟಿದ್ದು ಅಮೆರಿಕಾದಲ್ಲಿ. 1900 ರಿಂದ 1960ರ ದಶಕದವರೆಗೆ ಸಾಕಷ್ಟು ಪ್ರಚಲಿತವಾಗಿತ್ತು. ಆ ಸಮಯದಲ್ಲಿ ಈಗಿನಂತೆ ಯಾವುದೇ ಅತ್ಯಾಧುನಿಕ ಉಪಕರಣಗಳ ಲಭ್ಯ ಇರಲಿಲ್ಲ. ಜನರು ಸರ್ಜರಿ ಹಾಗೂ ಆಪರೇಷನ್ ಎಂದರೆ ಹೆದರುತ್ತಿದ್ದರು. ಹಾಗಾಗಿ ಪಾರಂಪರಿಕ ಚಿಕಿತ್ಸೆಗಳ ಕಡೆಗೆ ಒಲವು ಜಾಸ್ತಿ ಇತ್ತು. 90ರ ದಶಕದಿಂದೀಚೆಗೆ ಅತ್ಯಾಧುನಿಕ ಎಕ್ಸರೆ, ಎಮ್‌‌ಐ ನಂತಹ ಉಪಕರಣಗಳ ಆವಿಷ್ಕಾರದಿಂದ ಈ ಆಸ್ಟಿಯೋಪಥಿ ಮತ್ತೆ ಬೆಳಕಿಗೆ ಬರತೊಡಗಿತು. ಇದರ ಬಗ್ಗೆ ಸಾಕಷ್ಟು ಅಧ್ಯಯನಗಳು ನೆಡೆದಿವೆ, ಈಗಲೂ ನೆಡೆಯುತ್ತಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದಕ್ಕಾಗಿ ಕಾಲೇಜುಗಳು/ ಕೋರ್ಸ್‌ಗಳು ಸಹಾ ಹುಟ್ಟಿಕೊಂಡಿವೆ.

ಆಸ್ಟಿಯೋಪಥಿ ಎಂದರೇನು
ಕಾರಣಾಂತರಗಳಿಂದಾಗುವ ಮನುಷ್ಯನ ದೇಹದ ಮೂಳೆಗಳು, ಮಾಂಸಖಂಡಗಳ ಹಾಗೂ ಅಂಗಾಂಗಗಳ ಅಸಮತೋಲನಗಳನ್ನು ಯಾವುದೆ ಉಪಕರಣಗಳನ್ನು ಬಳಸದೆ ಕೇವಲ ಮಸಾಜ್ ಹಾಗೂ ಮೂಳೆಗಳ ಚಲನೆಯಿಂದ ಸಮತೋಲನ ಸರಿಮಾಡುವ ಚಿಕಿತ್ಸೆ ಎಂದರ್ಥ. ಇದಕ್ಕೆ ಬಳಸುವ ಉಪಕರಣಗಳೇ ಕೈಗಳು.

ಆಸ್ಟಿಯೋಪಥಿ ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ
ಇದಕ್ಕೆ ವಯಸ್ಸಿನ ಮಿತಿಯಿಲ್ಲ, ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಕೊಡಬಹುದು. ಮೂಳೆ ಮುರಿದಿದ್ದರೆ, ತೆರೆದ ಗಾಯ, ತೀವ್ರತೆರನಾದ ರೋಗಗಳು, ಟ್ಯೂಮರ್ ಗಡ್ಡೆಗಳು, ಹೆಚ್ಚು ಅಂಗ ಊನತೆ, ಮೃದುವಾದ ಮೂಳೆಗಳು, ಇನ್ನಿತರ ಕಾರಣಗಳಿದ್ದರೆ ಚಿಕಿತ್ಸೆಗೆ ಅರ್ಹರಲ್ಲ

ಆಸ್ಟಿಯೋಪಥಿಯನ್ನು ಯಾವ ಯಾವ ಚಿಕಿತ್ಸೆಗಳಿಗೆ ಬಳಸಬಹುದು
ಕತ್ತು ನೋವು, ಸೊಂಟ ನೋವು, ಮಂಡಿ ಸಮಸ್ಯೆ (ಅರ್ಥರೈಟಿಸ್), ಭುಜದ ಸಮಸ್ಯೆ, ವಿವಿಧ ರೀತಿಯ ಮೂಳೆಗಳು ಹಾಗೂ ಮಾಂಸಖಂಡಗಳ ಉಳುಕು ಹಾಗು ದೀರ್ಘಾವಧಿಯ ಪಾರ್ಶ್ವವಾಯು ಪೀಡಿತರ ಅಂಗಾಂಗ ಊನತೆಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು.

ಚಿಕಿತ್ಸಾವಿಧಾನ                                                 
ಇದಕ್ಕೆಂದೆ ಪರಿಣಿತಿ ಪಡೆದ ವೈದ್ಯರಿರುತ್ತಾರೆ, ಒಮ್ಮೆ ರೋಗಿಯು ವೈದ್ಯರ ಬಳಿಗೆ ಬಂದಾಗ ವೈದ್ಯರು ರೋಗಿಯನ್ನು ಸೂಕ್ತವಾಗಿ ಪರೀಕ್ಷೆ ಮಾಡಿ ಚಿಕಿತ್ಸೆಗೆ ಅರ್ಹರೆ ಇಲ್ಲವೆ ಎಂದು ಗುರುತಿಸುತ್ತಾರೆ. ಉದಾಹರಣೆಗೆ ಕತ್ತು ನೋವಿನ ಸಮಸ್ಯೆಯ ವ್ಯಕ್ತಿ ಚಿಕಿತ್ಸೆಗೆ ಬಂದಾಗ ಮೊದಲು ಆತನ ಸಮಸ್ಯೆಗಳನ್ನು ವಿವಿಧ ರೀತಿಯ ಪರೀಕ್ಷೆಗಳಿಂದ ನೋವಿನ ಪ್ರಮಾಣವನ್ನು ಅರಿತು ಚಿಕಿತ್ಸೆಗೆ ಅರ್ಹನಾದರೆ ಮುಂದೆ ಚಿಕಿತ್ಸಾ ಕ್ರಮವನ್ನು ತಿಳಿಯ ಪಡಿಸಲಾಗುತ್ತದೆ.

ತೊಂದರೆಯ ಷರತ್ತುಗಳಿಗೆ ಅನುಗುಣವಾಗಿ ಚಿಕಿತ್ಸಾ ಸಮಯವನ್ನು ನಿಗದಿ ಪಡಿಸಲಾಗುತ್ತದೆ. ಚಿಕಿತ್ಸೆಯ ಅವಧಿ 5 ದಿವಸದಿಂದ 15 ದಿವಸದವರೆಗೂ ತೆಗೆದುಕೊಳ್ಳಬಹುದು. ಪ್ರತಿದಿವಸ ಸುಮಾರು 45ರಿಂದ 60 ನಿಮಿಷಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಗೆ ಬಳಸುವುದು ಕೇವಲ ಟವೆಲ್, ರೋಗಿಯು ಅಲ್ಲಾಡದಂತೆ ಬೆಲ್ಟ್‌ ಹಾಗೂ ಕೈಗಳು ಅಗತ್ಯ ಬಿದ್ದರೆ ಸಹಾಯಕರನ್ನು ಬಳಸಿಕೊಳ್ಳಲಾಗುವುದು.

ಚಿಕಿತ್ಸೆಯಿಂದ ಮೂಳೆ, ಮಾಂಸ ಖಂಡಗಳಿಗಾಗುವ ಉಪಯೋಗ ಹಾಗೂ ಸಮಸ್ಯೆ ಪರಿಹಾರ ಹೇಗೆ?
ಆಸ್ಟಿಯೋಪಥಿ ಚಿಕಿತ್ಸೆಯಿಂದ ರೋಗಿಯ ಮೂಳೆ ಹಾಗೂ ಮಾಂಸ ಖಂಡಗಳು ಹಗುರವಾಗಿ ಚರ್ಮಗಳು ಸಡಿಲಗೊಳ್ಳುವವು. ಇದರಿಂದ ನರಗಳ ಹಾಗೂ ಮೂಳೆಗಳ ಮೇಲಿನ ಅನಗತ್ಯ ಒತ್ತಡ ನೋವು ಕಡಿಮೆಯಾಗಿ ಮಾಂಸಖಂಡಗಳು ತಮ್ಮ ಮೊದಲಿನ ಹಗುರ ಸ್ಥಿತಿಗೆ ತಲುಪುವವು. ತೊಂದರೆ ನೂರಕ್ಕೆ ನೂರರಷ್ಟು ಕಡಿಮೆಯಾಗದಿದ್ದರು ಮುಂದೆ ಯಾವುದೇ ಕಾರಣಕ್ಕೂ ಹೆಚ್ಚಾಗದಂತೆ ತಡೆಯಬಹುದು. ಶೇಕಡಾ 75ರಿಂದ 85ರಷ್ಟು ತೊಂದರೆ ಕಡಿಮೆಯಾಗುವುದು ಗ್ಯಾರಂಟಿ. ಇದೇ ರೀತಿ ಮೂರ್ನಾಲ್ಕು ಹಂತದಲ್ಲಿ ಮಾಡಿದರೆ ರೋಗಿಯ ಸಮಸ್ಯೆಗೆ ಪರಿಹಾರ ಕೊಡಬಹುದು.

ಚಿಕಿತ್ಸೆಯಿಂದಾಗುವ ಉಪಯೋಗ
ಆಸ್ಟಿಯೋಪಥಿ ಚಿಕಿತ್ಸೆಯಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ತೊಂದರೆ ಗುಣವಾಗುವುದಲ್ಲದೆ ಭವಿಷ್ಯದಲ್ಲಿ ಭರಿಸಬಹುದಾದ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡಬಹುದು. ಕೆಲವೊಂದು ಸಂದರ್ಭಗಳಲ್ಲಿ ವೈದ್ಯರು ಸರ್ಜರಿಗೆ ಸಲಹೆ ಮಾಡಿರುತ್ತಾರೆ ಅಂತವುಗಳನ್ನು ಸಹಾ ತಡೆಯಬಹುದು ಈ ಚಿಕಿತ್ಸಾ ವಿಧಾನದ ಮೂಲಕ. ಒಟ್ಟಿನಲ್ಲಿ ಆಸ್ಟಿಯೋಪಥಿ ವೈದ್ಯಕೀಯ ಲೋಕದಲ್ಲಿ ಸಂಚಲನ ಮೂಡಿಸಿರುವುದಂತು ನಿಜ.

(ಲೇಖಕ ಪಾರ್ಶ್ವವಾಯು ಪುನಃಶ್ಚೇತನ ತಜ್ಞ, ಆಸ್ಟಿಯೋಪಥಿ ತಜ್ಞ)

ಮಾಹಿತಿಗೆ:
8710964433

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT