ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರು ನಿಂತೀತು ಹುಷಾರ್‌

ಅಕ್ಷರ ಗಾತ್ರ

ಎಲ್ಲ ರೀತಿಯ ಮಾಲಿನ್ಯ­ಗಳೂ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿ ದುಷ್ಪರಿಣಾಮ ಬೀರುತ್ತವೆ. ಆದರೆ ವಾಯು­ಮಾಲಿನ್ಯದ ಪರಿಣಾಮ ಮಾತ್ರ ನೇರವಾಗಿ ಆಗುವುದು ನಮ್ಮ ಶ್ವಾಸಕೋಶದ ಮೇಲೆ. ಶ್ವಾಸಕೋಶ ಇಡೀ ದೇಹ ವ್ಯವಸ್ಥೆಯ ‘ಉಸಿರು’ ನಿಂತಿರುವ ಅಂಗ. ಮಲಿನಗೊಂಡ ಗಾಳಿಯಿಂದ ದೇಹದೊಳಗೆ ಪ್ರವೇಶಿಸುವ ಪ್ರತಿ ರಾಸಾಯನಿಕ ಅಂಶವೂ ಸೇರಿಕೊಳ್ಳುವುದು ಶ್ವಾಸಕೋಶದಲ್ಲಿಯೇ.

ದೇಶದ ನಗರವಾಸಿಗಳಲ್ಲಿ ಉಸಿರಾಟದ ಸಮಸ್ಯೆ, ಅದರಲ್ಲಿಯೂ ಆಸ್ತಮಾದ ತೊಂದರೆ ಸಾಮಾನ್ಯ. ಅದಕ್ಕೆ ಸರಳ ಕಾರಣ ವಾಹನಗಳ ಹೊಗೆ. ವಾಹನದಟ್ಟಣೆ ತೀವ್ರವಾದಷ್ಟೂ ಉಸಿರಾಟ ಸಂಬಂಧಿ ಆರೋಗ್ಯದ ಸಮಸ್ಯೆಗಳು ಹೆಚ್ಚು.
ಅಲರ್ಜಿ, ಶ್ವಾಸನಾಳಗಳ ಒಳಪೊರೆಯ ಉರಿ­ಯೂತ (ಬ್ರಾಂಕೈಟಿಸ್‌), ದೀರ್ಘಕಾಲೀನ ಶ್ವಾಸಕೋಶ ಪ್ರತಿಬಂಧಕ ಕಾಯಿಲೆ (ಸಿಒಪಿಡಿ), ಉಸಿರಾಟದ ಸೋಂಕುಗಳು ತೀವ್ರವಾಗಿ ಕಾಣಿಸಿಕೊಳ್ಳುತ್ತವೆ. ಕೆಮ್ಮು, ಕಫದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳೂ ಉಸಿರಾಟದ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲವು.

ಹೀಗೆ ಒಳಬರುವ ಮಾಲಿನ್ಯದ ಕಣಗಳು ಶ್ವಾಸಕೋಶದಲ್ಲಿಯೇ ತುಂಬಿಕೊಳ್ಳತೊಡಗುತ್ತವೆ. ಇದರಿಂದ ಹಂತಹಂತವಾಗಿ ಶ್ವಾಸಕೋಶ ದುರ್ಬಲ­ವಾಗುತ್ತಾ ಹೋಗುತ್ತದೆ. ಮುಂದೆ ಇದು ಕ್ಯಾನ್ಸರ್‌ಗೂ ಎಡೆಮಾಡಿಕೊಡುತ್ತದೆ. ದೃಷ್ಟಿ, ಶ್ರವಣ ಸಮಸ್ಯೆಗಳಿಗೂ ವಾಯುಮಾಲಿನ್ಯ ಕಾರಣವಾಗಬಲ್ಲದು. ಹೀಗೆ ವಾಯುಮಾಲಿನ್ಯ ಹೆಚ್ಚಾದಂತೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ನಾವು ಅದರಿಂದ ತಪ್ಪಿಸಿಕೊಳ್ಳಲು ಅವಕಾಶವೂ ಇಲ್ಲ.

ನಗರಗಳು ಬೆಳೆದಂತೆ ಸಂಚಾರ ದಟ್ಟಣೆಯೂ ಹೆಚ್ಚು. ಸಂಚಾರ ದಟ್ಟಣೆಯಾದಂಥ ನಗರಗಳಲ್ಲಿ ಆಸ್ತಮಾ, ಬ್ರಾಂಕೈಟಿಸ್‌ ಕೂಡ ಹೆಚ್ಚು. ಈ ವಿಚಾರದಲ್ಲಿ ಇಡೀ ಭಾರತದಲ್ಲಿ ಬೆಂಗಳೂರು ನಾಲ್ಕನೇ ಸ್ಥಾನ ಪಡೆದಿದೆ. ಮಹಾನಗರಗಳ ಜನರದು ಒತ್ತಡದ ಬದುಕು. ಅಸಮರ್ಪಕ ಜೀವನಶೈಲಿಯೇ ಅನೇಕ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಅದರ ಜತೆಗೆ ಪರಿಸರ ಮಾಲಿನ್ಯವೂ ಸೇರಿಕೊಳ್ಳುತ್ತದೆ. ಹೀಗಾಗಿ ಎರಡು ರೀತಿಯ ಆಕ್ರಮಣಗಳಿಗೆ ಇಲ್ಲಿನ ಜನ ತುತ್ತಾಗುತ್ತಾರೆ.

ಹಳೆ ವಾಹನಗಳಿಂದ ಹೊರಬರುವ ಹೊಗೆ ಹೆಚ್ಚು. ಅದಕ್ಕೆಂದೇ ದೆಹಲಿಯಲ್ಲಿ ಇತ್ತೀಚೆಗೆ ಹಳೆಯ ಬಸ್‌ಗಳನ್ನೆಲ್ಲ ಓಡಾಟದಿಂದ ಮುಕ್ತಗೊಳಿಸಿದ್ದಾರೆ. ಕೈಗಾರಿಕೆಗಳು, ವಾಹನಗಳು ವಾಯುಮಾಲಿನ್ಯದ ಮುಖ್ಯ ಸೃಷ್ಟಿಕರ್ತೃಗಳಾದರೆ, ನಾವು ದಿನಬಳಕೆಗೆ ಉಪಯೋಗಿಸುವ ರೆಫ್ರಿಜಿರೇಟರ್‌, ಕೂಲರ್‌ಗಳು, ಸ್ಪ್ರೇಯರ್‌ಗಳೂ ಇದಕ್ಕೆ ‘ಕೊಡುಗೆ’ ಸಲ್ಲಿಸುತ್ತವೆ. ಇದರಿಂದ ಹಾನಿಗೊಳಗಾಗುವುದು ಓಝೋನ್ ಪದರ.

ಗಾಳಿ ಅಶುದ್ಧಗೊಳ್ಳಲು ಧೂಮಪಾನಿಗಳೂ ಕಾರಣ. ಪರೋಕ್ಷ ಧೂಮಪಾನದಿಂದ (ಧೂಮಪಾನಿ­ಗಳು ಬಿಟ್ಟ ಹೊಗೆ ಸೇವಿಸುವುದು) ಕಾಯಿಲೆಗೊಳ­ಗಾಗುವ ಜನರ ಸಂಖ್ಯೆ ಅಧಿಕ. ಹೆಚ್ಚಿನ ವಾಯುಮಾಲಿನ್ಯ ಉಂಟಾಗುವುದು ಡೀಸೆಲ್ ವಾಹನಗಳಿಂದ. ಪೆಟ್ರೋಲ್‌ ವಾಹನಗಳಲ್ಲಿದ್ದ ಸೀಸದ ಅಂಶವನ್ನು ಕಡಿಮೆಗೊಳಿಸಲಾಗಿದೆಯಷ್ಟೇ, ಆದರೆ ಅವುಗಳಲ್ಲಿನ ಇತರ ವಿಷಕಾರಿ ಅಂಶಗಳ ಪ್ರಮಾಣವೇನೂ ಕಡಿಮೆಯಾಗಿಲ್ಲ. ಇದನ್ನೂ ಮೀರಿಸುವುದು ಡೀಸೆಲ್‌ನಿಂದ ಉಂಟಾಗುವ ಮಾಲಿನ್ಯ.

ಪುಣೆಯಲ್ಲಿ ಹೊಗೆ ಸೇವನೆಯಿಂದ ಪೊಲೀಸರಲ್ಲಿ ಉಂಟಾದ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲಾಗಿದೆ. ಹೃದಯತಜ್ಞ ಡಾ. ಸಂದೀಪ್‌ ಸಾಳ್ವಿ ಅವರು ನಡೆಸಿದ ಅಧ್ಯಯನದಲ್ಲಿ ಡೀಸೆಲ್‌ ಹೊಗೆಯ ಅಪಾಯಗಳನ್ನು ವಿಶ್ಲೇಷಿಸಿದ್ದಾರೆ.
ವಾಯುಮಾಲಿನ್ಯದಿಂದ ವಯಸ್ಕರು ಮತ್ತು ಮಕ್ಕಳಲ್ಲಿ ಆರೋಗ್ಯದ ಪರಿಣಾಮಗಳು ತೀವ್ರ. ಈ ಬಗ್ಗೆ ಬೆಂಗಳೂರಿನಲ್ಲಿಯೇ ಅಧ್ಯಯನವೊಂದು ನಡೆದಿದೆ.

ವಾಹನದಟ್ಟಣೆಯ ಪ್ರದೇಶಕ್ಕೆ ಹತ್ತಿರವಿರುವ ಶಾಲೆಗಳಲ್ಲಿನ ಮಕ್ಕಳಲ್ಲಿ ಆಸ್ತಮಾದ ಸಮಸ್ಯೆ ಹೆಚ್ಚು ಕಂಡುಬಂದಿದ್ದರೆ, ವಾಹನ ದಟ್ಟಣೆ ಕಡಿಮೆ ಇರುವ ಪ್ರದೇಶಗಳಲ್ಲಿನ ಮಕ್ಕಳಲ್ಲಿ ಈ ಸಮಸ್ಯೆ ಕಡಿಮೆ ಇರುವುದು ತಿಳಿದುಬಂದಿದೆ. ವಾಹನಗಳು ಉಗುಳುವ ಹೊಗೆಯ ಪ್ರಮಾಣಕ್ಕೆ ನಿಯಂತ್ರಣ ಹೇರಿದರೂ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯ ನಿಯಂತ್ರಣ ಸುಲಭವಲ್ಲ. ಇದಕ್ಕೆ ಎಲ್ಲರೂ ಹೊಣೆಗಾರರೇ. ವಾಯುಮಾಲಿನ್ಯ ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯ.

ಮಹಾ ಮಾಲಿನ್ಯ
ದೇಶದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿರುವ ಮೊದಲ ಏಳು ಮಹಾನಗರಗಳು: 1. ನವದೆಹಲಿ 2. ಮುಂಬೈ 3. ಕೋಲ್ಕತ್ತ 4. ಚೆನ್ನೈ 5. ಬೆಂಗಳೂರು 6. ಹೈದರಾಬಾದ್‌ 7. ಅಹಮದಾಬಾದ್‌

ಏನೆಲ್ಲ ಆಗುತ್ತಿದೆ?
* ವಾಯುಮಾಲಿನ್ಯದಿಂದಾಗಿ ದೇಶದ 66 ಕೋಟಿ ಜನ ತೀವ್ರ ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದಾರೆ.
* ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಆಯುಷ್ಯ 3.2 ವರ್ಷದಷ್ಟು ಕಡಿಮೆಯಾಗಲಿದೆ.
* ಆರೋಗ್ಯ ಸಮಸ್ಯೆಗಳಿಂದ ವೈದ್ಯಕೀಯ ವೆಚ್ಚ ಏರುತ್ತಿದೆ
* ಉತ್ಪಾದನೆ ಕುಂಠಿತಗೊಳ್ಳುತ್ತಿದೆ
* ಜಗತ್ತಿನಲ್ಲಿ ತೀವ್ರ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಸಾವಿಗೀಡಾಗುವವರಲ್ಲಿ ಭಾರತೀಯರೇ ಹೆಚ್ಚು
* ತೀವ್ರವಾಗಿ ಮಲಿನಗೊಂಡಿರುವ ಜಗತ್ತಿನ 20 ನಗರಗಳಲ್ಲಿ 13 ಭಾರತದಲ್ಲೇ ಇವೆ.
* ಹಿಂದೆ ಧೂಮಪಾನಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ತೀವ್ರ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ವಾಯುಮಾಲಿನ್ಯದಿಂದಾಗಿ ಈಗ ನಗರದ ಅನೇಕರಲ್ಲಿ ಕಂಡುಬರುತ್ತಿದೆ.

(ಲೇಖಕರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಶ್ವಾಸಕೋಶ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT