ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರು ಬಿಗಿ ಹಿಡಿದು ಕುಂತ ಊರು

Last Updated 30 ಜುಲೈ 2016, 0:00 IST
ಅಕ್ಷರ ಗಾತ್ರ

ನವಲಗುಂದ: ನಿತ್ಯ ನೂರಾರು ಜನರು ಓಡಾಡುವ ಬೀದಿಗಳೆಲ್ಲ ಖಾಲಿ ಖಾಲಿ; ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಆಂಬುಲೆನ್ಸ್‌ ಮತ್ತು ಮಾಧ್ಯಮ ಪ್ರತಿನಿಧಿಗಳ ವಾಹನಗಳ ಓಡಾಟವಷ್ಟೆ. ಬಾಗಿಲು ಹಾಕಿಕೊಂಡು ಮನೆಗಳಲ್ಲಿ ಕುಳಿತರವರಿಗೆ ಕೇಳಿಸುವುದು ಪೊಲೀಸ್ ವಾಹನಗಳ ಸೈರನ್‌ ಮಾತ್ರ...

ಮಹಾದಾಯಿ ನ್ಯಾಯಮಂಡಳಿಯು ರಾಜ್ಯದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ನಂತರ ತೀವ್ರ ಪ್ರತಿಭಟನೆಗೆ ಸಾಕ್ಷಿಯಾದ ನವಲಗುಂದ ಪಟ್ಟಣದ ಚಿತ್ರಣ ಇದು. ಸರ್ಕಾರಿ ಕಚೇರಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳ ನಂತರ ಗುರುವಾರದಿಂದಲೇ ಶನಿವಾರ ರಾತ್ರಿ 10 ರವರೆಗೆ ಪಟ್ಟಣದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಆದರೆ ಖಾಕಿ ಕೋಟೆಯಲ್ಲಿ ಬಂಧಿಯಾಗಿರುವ ಜನರು ಅಕ್ಷರಶಃ ಕರ್ಫ್ಯೂ ವಿಧಿಸಿದ ಪರಿಸ್ಥಿತಿ ಎದುರಿಸುತ್ತಿದ್ದಾರೆ. 

‘ನನ್ನ ಮಗ ಊಟ ಮಾಡಿ, ಕಾಲ್ಮಡಿಗಾಗಿ (ಮೂತ್ರವಿಸರ್ಜನೆ) ಹೊರಗೆ ಹೋಗಿದ್ದ. ಅಷ್ಟರಲ್ಲಿ ಖಾಕಿಯವರು ಬಂದು ಎತ್ತಿಕೊಂಡು ಹೋದರು. ಬಿಟ್ಟುಬಿಡಿ ಎಂದು ಅಂಗಲಾಚಿದರೂ ಕೇಳಿಸಿಕೊಳ್ಳುವ ಮನಸ್ಸು ಮಾಡಲಿಲ್ಲ’ ಎಂದು ದೇಸಾಯಿಪೇಟೆ ಓಣಿಯ ಅಶೋಕ ಹಂಚಿನಾಳ ಹೇಳಿದರೆ, ‘ಸರ್ಕಾರಿ ಆಸ್ತಿಗೆ ಬೆಂಕಿ ಹಚ್ಚಿ, ಪೊಲೀಸರನ್ನು ಅವಾಚ್ಯ ಪದಗಳಿಂದ ಬೈದವರನ್ನು ಸುಮ್ಮನೆ ಬಿಡಲಾಗುತ್ತದೆಯೇ’ ಎಂದು ನೀಲಮ್ಮನ ಕೆರೆಯ ಬಳಿ ಠಿಕಾಣಿ ಹೂಡಿರುವ ಪೊಲೀಸರು ಪ್ರಶ್ನಿಸಿದರು.

ಹೆದ್ದಾರಿ ಖಾಲಿ: ನವಲಗುಂದ ಮಾರ್ಗದಲ್ಲಿ ಬಸ್‌ ಸಂಚಾರವನ್ನೇ ರದ್ದು ಮಾಡಿದ್ದರಿಂದ ಹುಬ್ಬಳ್ಳಿ ಹೊರವಲಯದಿಂದ ನವಲಗುಂದದವರೆಗೂ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218 ಶುಕ್ರವಾರ ಖಾಲಿಯಾಗಿತ್ತು.

ಊರಲ್ಲಿ ಅನಿವಾರ್ಯವಾಗಿ  ಯಾರಾದರೂ ಮನೆಯಿಂದ ಹೊರಬಂದರೆ ಪೊಲೀಸರಿಗೆ ಗುರುತು ಚೀಟಿ ತೋರಿಸಿ, ಕಾರಣ ಹೇಳಿಯೇ ಮುಂದೆ ಸಾಗಬೇಕಿತ್ತು. ಇಲ್ಲಿಂದ ಮೂರು ಕಿ.ಮೀ ದೂರದ ಯಮನೂರಿನಲ್ಲೂ ಇದೇ ಪರಿಸ್ಥಿತಿ ಇತ್ತು.

ಮುಖ್ಯಾಂಶಗಳು
* ಪೊಲೀಸ್‌ ಪಥಸಂಚಲನ

* ಪಟ್ಟಣದಲ್ಲಿ ಕರ್ಫ್ಯೂ ಹೇರಿರುವ ಸ್ಥಿತಿ ನಿರ್ಮಾಣ
* ಮನೆ ಮನೆಯಲ್ಲೂ ‘ನಿಗೂಢ’ ಮೌನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT