ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟಕ್ಕೆ ಕರೆದು ದಂಪತಿಯಿಂದ ಬ್ಲಾಕ್‌ಮೇಲ್

ವೈದ್ಯರ ಬೆದರಿಸಿ ₨ 20 ಲಕ್ಷ ವಸೂಲಿ: ಐವರ ಬಂಧನ
Last Updated 27 ನವೆಂಬರ್ 2014, 19:56 IST
ಅಕ್ಷರ ಗಾತ್ರ

ಬೆಂಗಳೂರು:  ಪರಿಚಿತ ವೈದ್ಯರೊಬ್ಬರನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದ ದಂಪತಿ, ನಂತರ ಹಣ ನೀಡದಿದ್ದರೆ ಅತ್ಯಾಚಾರದ ಆರೋಪ ಹೊರಿಸು­ವುದಾಗಿ ಬ್ಲಾಕ್‌ಮೇಲ್ ಮಾಡಿ ಅವರಿಂದ ₨ 20 ಲಕ್ಷ ವಸೂಲಿ ಮಾಡಿದ್ದ ಸಂಗತಿ ಬೆಳಕಿಗೆ ಬಂದಿದೆ. 
ಈ ಸಂಬಂಧ ವಂಚನೆಗೊಳಗಾದ 55 ವರ್ಷದ ವೈದ್ಯ ಹೈಗ್ರೌಂಡ್ಸ್‌ ಠಾಣೆಗೆ ದೂರು ಕೊಟ್ಟಿದ್ದು, ದಂಪತಿ ಸೇರಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಡುಗೊಂಡನಹಳ್ಳಿ ಬಳಿಯ ಯಾಸಿನ್‌ನಗರ ನಿವಾಸಿ ಸುಮಯ್ಯ (20), ಆಕೆಯ ಪತಿ ಅನೀಸ್ ಅಹಮದ್ (23), ಏಜಾಜ್ (22), ದೇವರ­ಜೀವನಹಳ್ಳಿಯ ಸಾದಿಕ್ ಪಾಷಾ (22) ಹಾಗೂ ಟ್ಯಾನರಿ ರಸ್ತೆಯ ಶಫಿವುಲ್ಲಾ (27) ಎಂಬು ವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₨ 14.5 ಲಕ್ಷ ನಗದು, ಕಾರು, ಬೈಕ್‌, ಆಟೊ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶೇಷಾದ್ರಿಪುರ ನಿವಾಸಿಯಾದ ವೈದ್ಯ, ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಶ್ಶಕ್ತಿಯಿಂದ ಬಳಲುತ್ತಿದ್ದ ಸುಮಯ್ಯ, ಕೆಲ ತಿಂಗಳ ಹಿಂದೆ ಚಿಕಿತ್ಸೆಗೆಂದು ಆ ವೈದ್ಯರ ಬಳಿ ಹೋಗಿದ್ದಳು. ನಂತರ ಆಕೆ ನಿರಂತರವಾಗಿ ಅವರ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಪರಸ್ಪರರ ನಡುವೆ ಪರಿಚಯವಾಗಿತ್ತು. ಪೋಷಕರ ವಿರೋಧದ ನಡುವೆಯೇ ಸುಮಯ್ಯ, ರೌಡಿ ತನ್ವೀರ್‌ನ ಸಹಚರ ಅನೀಸ್‌ನನ್ನು ಎರಡು ತಿಂಗಳ ಹಿಂದೆ ಪ್ರೇಮ ವಿವಾಹವಾದಳು. ಆತ, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಪೋಷಕರಿಂದ ದೂರವಾದ ದಂಪತಿ, ನಂತರ ಯಾಸಿನ್‌ನಗರದಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದರು. ಯಾವುದೇ ಆದಾಯ ಇಲ್ಲದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾ­ಗಿತ್ತು. ಈ ಹಂತದಲ್ಲಿ ದಂಪತಿ, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ವೈದ್ಯರಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿಕೊಂಡರು.

ನ.12ರಂದು ಚಿಕಿತ್ಸೆಯ ನೆಪದಲ್ಲಿ ಆಸ್ಪತ್ರೆಗೆ ಹೋಗಿದ್ದ ಸುಮಯ್ಯ, ಆ ವೈದ್ಯರನ್ನು ಊಟಕ್ಕೆಂದು ಮನೆಗೆ ಆಹ್ವಾನಿಸಿದ್ದಳು. ಅವರು ಒಪ್ಪದಿದ್ದಾಗ, ‘ಬಡವರ ಮನೆಗೆ ಬಂದರೆ, ನಿಮ್ಮ ಪ್ರತಿಷ್ಠೆ ಹಾಳಾಗುತ್ತದೆ ಎಂದು ಚಿಂತಿಸುತ್ತಿದ್ದೀರಾ’ ಎಂದಿದ್ದಳು. ತೀವ್ರ ಬಲವಂತದ ನಂತರ ವೈದ್ಯರು ಊಟಕ್ಕೆ ಬರಲು ಸಮ್ಮತಿ ಸೂಚಿಸಿದ್ದರು.

ಅದರಂತೆ ನ.15ರಂದು ವೈದ್ಯರು ಅವರ ಮನೆಗೆ ಹೋಗಿದ್ದರು. ಈ ವೇಳೆಗಾಗಲೇ ಅನೀಸ್, ತನ್ನ ಸ್ನೇಹಿತರಾದ ಉಳಿದ ಆರೋಪಿಗಳನ್ನು ಮನೆಗೆ ಕರೆಸಿಕೊಂಡಿದ್ದ. ವೈದ್ಯರು ಒಳಗೆ ಬರುತ್ತಿದ್ದಂತೆಯೇ ಬಾಗಿಲು ಹಾಕಿಕೊಂಡ ಅನೀಸ್, ಅವರ ಅಂಗಿ ಬಿಚ್ಚಿಸಿ ಪತ್ನಿಯ ಪಕ್ಕದಲ್ಲಿ ಕೂರಿಸಿದ್ದ. ಆಕೆ ಕೂಡ ತನ್ನ ಸೀರೆಯನ್ನು ಹರಿದುಕೊಂಡಳು. ನಂತರ ಮೊಬೈಲ್‌ನಲ್ಲಿ ಇಬ್ಬರ ಛಾಯಾಚಿತ್ರ ತೆಗೆದ ಆತ, ₨ 20 ಲಕ್ಷ ನೀಡದಿದ್ದರೆ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸುವುದಾಗಿ ಬೆದರಿಸಿದ್ದ. ಅಲ್ಲದೆ, ಆ ಛಾಯಾಚಿತ್ರಗಳನ್ನು ಮಾಧ್ಯಮಗಳಿಗೆ ಕೊಟ್ಟು ಗೌರವ ಕಳೆಯುವುದಾಗಿ ಹೇಳಿದ್ದ.

ಇದರಿಂದ ಗಾಬರಿಗೊಂಡ ವೈದ್ಯರು, ಹಣ ನೀಡಲು ಒಪ್ಪಿದ್ದರು. ಆ ದಿನವೇ ₨ 5 ಲಕ್ಷ ಪಡೆದ ಆರೋಪಿಗಳು, ಇನ್ನೆರಡು ದಿನಗಳಲ್ಲಿ ಉಳಿದ ಹಣ ನೀಡುವಂತೆ ಗಡುವು ನೀಡಿದ್ದರು. ಹೀಗಾಗಿ ಉಳಿದ ₨ 15 ಲಕ್ಷವನ್ನು ವೈದ್ಯರು, ನ.17ರಂದು ಅವರಿಗೆ ತಲುಪಿಸಿದ್ದರು.

ಮತ್ತೆ ಕಾಡಿದರು: ₨ 20 ಲಕ್ಷ ಹಣ ಪಡೆದ ನಂತರ ಆರೋಪಿಗಳು, ಛಾಯಾಚಿತ್ರಗಳಿದ್ದ ಮೆಮೊರಿ ಕಾರ್ಡನ್ನು ವೈದ್ಯರ ಎದುರೇ ಮುರಿದು ಹಾಕಿದ್ದರು. ಆದರೆ, ಸುಲಭವಾಗಿ ಲಕ್ಷಾಂತರ ರೂಪಾಯಿ ಹಣ ಸಿಕ್ಕಿದ್ದರಿಂದ ಮತ್ತಷ್ಟು ಆಸೆಗೆ ಬಿದ್ದ ಅವರು, ಪುನಃ  ಕರೆ ಮಾಡಿ ₨ 3 ಲಕ್ಷಕ್ಕೆ ಬೇಡಿಕೆ ಇಟ್ಟರು. ಇದರಿಂದ ದಿಕ್ಕು ತೋಚದಂತಾದ ವೈದ್ಯರು, ನ.20ರಂದು ಹೈಗ್ರೌಂಡ್ಸ್‌ ಠಾಣೆಗೆ ದೂರು ಕೊಟ್ಟಿದ್ದರು.
‘ದೂರು ದಾಖಲಾದ ದಿನವೇ ಸುಮಯ್ಯ ದಂಪತಿ ನಗರ ತೊರೆದಿದ್ದರು. ಬುಧವಾರ ಅವರು ಮನೆಗೆ ಹಿಂದಿರುಗಿದ ಬಗ್ಗೆ ಮಾಹಿತಿ ಬಂತು. ಸಂಜೆ ವೇಳೆಗೆ ಅವರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ದಂಪತಿ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಪತ್ತೆ  ಮಾಡ­ಲಾಯಿತು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಐಷಾರಾಮಿ ಬದುಕು
‘ದರೋಡೆ, ದರೋಡೆ ಯತ್ನ, ಸುಲಿಗೆ, ಸೇರಿದಂತೆ ಅನೀಸ್ ವಿರುದ್ಧ  ದೇವರಜೀವನ­ಹಳ್ಳಿ, ಬೈಯಪ್ಪನಹಳ್ಳಿ, ಹೈಗ್ರೌಂಡ್ಸ್‌ ಹಾಗೂ ಜೆ.ಸಿ.ನಗರ ಠಾಣೆಗಳಲ್ಲಿ ಒಟ್ಟು 10 ಪ್ರಕರಣ­ಗಳು ದಾಖಲಾಗಿವೆ. ವೈದ್ಯರಿಂದ ವಸೂಲಿ ಮಾಡಿದ್ದ ಹಣದಲ್ಲಿ ಬೈಕ್‌ ಖರೀದಿಸಿದ್ದ ಆತ, ₨ 40 ಸಾವಿರ ಖರ್ಚು ಮಾಡಿ ಕಾರನ್ನು ರಿಪೇರಿ ಮಾಡಿಸಿಕೊಂಡಿದ್ದ. ಜತೆಗೆ ಕೃತ್ಯಕ್ಕೆ ನೆರವಾಗಿದ್ದ ಸ್ನೇಹಿತರಿಗೂ ತಲಾ ₨ 1 ಲಕ್ಷ ಕೊಟ್ಟಿದ್ದ. ಪತ್ನಿಗೂ ಲ್ಯಾಪ್‌ಟಾಪ್ ಹಾಗೂ ದುಬಾರಿ ಬೆಲೆಯ ಮೊಬೈಲ್ ಕೊಡಿಸಿದ್ದ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

‘ಪ್ರಿಯಕರನ ಸ್ನೇಹಿತ ಇಷ್ಟವಾದ’
2012ರಲ್ಲಿ ಪಿಯುಸಿ ಮುಗಿಸಿದ್ದ ಸುಮಯ್ಯ, ದೂರ ಶಿಕ್ಷಣದಲ್ಲಿ ಬಿ.ಕಾಂ ಮಾಡುತ್ತಿದ್ದಳು. ಅನೀಸ್‌ನ ಪರಿಚಯ ಹೇಗಾಯಿತು ಎಂದು ಕೇಳಿದರೆ, ‘ಆತ ನನ್ನ ಮೊದಲ ಪ್ರಿಯಕರ ಸಲೀಂನ ಸ್ನೇಹಿತ. ನಮ್ಮ ಪ್ರೀತಿಗೆ ಅನೀಸ್‌ ನೆರವು ನೀಡುತ್ತಿದ್ದ. ಕ್ರಮೇಣ ಆತನ ಮೇಲೆಯೇ ಪ್ರೀತಿ ಆಯಿತು. ಹೀಗಾಗಿ ಸಲೀಂನನ್ನು ತೊರೆದು ಈತನನ್ನು ಮದುವೆಯಾದೆ. ವೈದ್ಯರಿಗೆ ವಂಚಿಸಲು ನಾನೇ ಈ ಉಪಾಯ ಹೇಳಿಕೊಟ್ಟೆ’ ಎಂದು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT