ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದ ವೇಳೆ ಮೊಬೈಲ್‌ ಬಳಸುತ್ತೀರಾ?

Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

ನೀವು ವಾಟ್‌್ಸ್‌ಆ್ಯಪ್‌ನಲ್ಲಿ ಒಂದು ತಮಾಷೆಯ ವಿಡಿಯೊ ನೋಡಿರಬಹುದು. ಊಟಕ್ಕೆ ಕುಳಿತಾಗ ಎಲ್ಲರೂ ಗಂಭೀರವಾಗಿ ತಿನ್ನುತ್ತಿರುತ್ತಾರೆ. ಟೇಬಲ್‌ನಿಂದ ವಸ್ತುವೊಂದು ಕೆಳಕ್ಕೆ ಬಿದ್ದು ಅದನ್ನು ಎತ್ತಿಕೊಳ್ಳಲು ಮನೆ ಯಜಮಾನ ಬಗ್ಗಿದಾಗ ಉಳಿದವರೆಲ್ಲರೂ ಮೊಬೈಲ್‌ ತೆಗೆದು ಪಟಪಟನೇ ಸಂದೇಶ ಕಳುಹಿಸುತ್ತಾರೆ. ಆತ ಮೇಲೆದ್ದ ತಕ್ಷಣ ಏನೂ ಗೊತ್ತಿಲ್ಲದವರಂತೆ ಅದೇ ಗಾಂಭೀರ್ಯದೊಂದಿಗೆ ತಿನ್ನಲು ಶುರುಮಾಡಿರುತ್ತಾರೆ.

ಎರಡು ಮೂರು ಬಾರಿ ಇದು ಪುನರಾವರ್ತನೆಯಾಗುತ್ತದೆ. ಕೊನೆಗೆ ವಿಡಿಯೊ ನೇರವಾಗಿ ಮನೆಯೊಡೆಯನನ್ನೇ ಫೋಕಸ್‌ ಮಾಡುತ್ತದೆ. ಅದರಲ್ಲಿ ಕಾಣುವುದು, ಆತ ಬೇಕಂತಲೇ ಕೈಯಿಂದ ವಸ್ತುವನ್ನು ಕೆಳಗೆ ಬೀಳಿಸುತ್ತಾನೆ. ಅದನ್ನು ಎತ್ತುವ ನೆಪದಲ್ಲಿ ಯಾರಿಗೂ ಕಾಣಿಸದಂತೆ ಮೊಬೈಲ್‌ ತೆಗೆದು ಮೆಸೇಜು ಕಳುಹಿಸುತ್ತಿರುತ್ತಾನೆ.

ಈ ವಿಡಿಯೊ ಕುರಿತು ಇಲ್ಲಿ ಪ್ರಸ್ತಾಪಿಸಿರುವುದಕ್ಕೆ ಕಾರಣವಿದೆ. ಊಟ ಮಾಡುವಾಗ ಮೊಬೈಲ್‌ ಬಳಸಬಾರದು ಎಂದು ಮನೆಯಲ್ಲಿ ಕೆಲವರು ಕಟ್ಟುನಿಟ್ಟಿನ ಅಪ್ಪಣೆ ಹೊರಡಿಸಿರುತ್ತಾರೆ. ದೊಡ್ಡವರೇನೋ ಮೊಬೈಲ್‌ ಬಳಸುವುದು ಕಡಿಮೆ. ಆದರೆ ಮೊಬೈಲ್‌ನಲ್ಲೇ ಮುಳುಗಿರುವವರಿಗೆ ಅದನ್ನು ಬಿಟ್ಟಿರಲು ಆಗುತ್ತದೆಯೇ? ಎಲ್ಲಾ ಸಮಯದಲ್ಲಿಯೂ ನಮ್ಮ ಜತೆ ಇರಲೇಬೇಕು ಎನ್ನುವ ಮಟ್ಟಿಗೆ ಮೊಬೈಲ್ ನಮ್ಮ ಸಂಗಾತಿಯಾಗಿದೆ.

ಮನೆಯವರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತಾಗ ಮೊಬೈಲ್‌ ಬಳಕೆ ಸರಿಯಲ್ಲ ಎನ್ನುವುದು ಹೆಚ್ಚಿನವರ ಅಭಿಮತ. ಎಲ್ಲಿ, ಯಾವ ಸಮಯದಲ್ಲಿ ಮೊಬೈಲ್‌ ಬಳಕೆ ಸರಿಯಲ್ಲ ಎನ್ನುವುದರ ಕುರಿತು ಪ್ಯೂ ಸಂಶೋಧನಾ ಕೇಂದ್ರ ನಡೆಸಿದ ಸಮೀಕ್ಷೆಯಲ್ಲಿ ಶೇ 88ರಷ್ಟು ಮಂದಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೇ 94ರಷ್ಟು ಜನ ಮೀಟಿಂಗ್‌ ವೇಳೆ ಮೊಬೈಲ್‌ ಬಳಕೆ ಆಕ್ಷೇಪಾರ್ಹ ಎಂದಿದ್ದಾರೆ. ಇನ್ನು ಸಿನಿಮಾ ನೋಡುವಾಗ ಮೊಬೈಲ್‌ ಬಳಸುವುದು ಕಿರಿಕಿರಿ ಉಂಟು ಮಾಡುತ್ತದೆ ಎಂದು ಶೇ 95ರಷ್ಟು ಮಂದಿ ಹೇಳಿದರೆ, ಶೇ 96ರಷ್ಟು ಜನರು ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಮೊಬೈಲ್‌ ಬಳಕೆ ಬಿಲ್‌ಕುಲ್‌ ಬೇಡವೇ ಬೇಡ ಎಂದಿದ್ದಾರೆ.

ಎಲ್ಲರೊಂದಿಗೆ ಮುಕ್ತವಾಗಿ ಬೆರೆತಿದ್ದಾಗ ಮೊಬೈಲ್‌, ನಮ್ಮನ್ನು ಸಮಾಜದಿಂದ ದೂರವಿಡುವ ಕೆಲಸ ಮಾಡುತ್ತದೆ ಎಂದು ಶೇ 82ರಷ್ಟು ಮೊಬೈಲ್ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಂದು ಮೊಬೈಲ್‌ ಬಳಸುವುದನ್ನು ನಿಲ್ಲಿಸಲೇನೂ ಅವರು ಮನಸ್ಸು ಮಾಡಿಲ್ಲ! ಶೇ 89ರಷ್ಟು ಮಂದಿ ಸಮಾಜದೊಟ್ಟಿಗಿದ್ದಾಗ ಇ–ಮೇಲ್‌ ಓದಲು, ಫೋಟೊ ತೆಗೆಯಲು ಅಥವಾ ಸಂದೇಶ ರವಾನಿಸುವ ಸಲುವಾಗಿ ಮೊಬೈಲ್‌ ಬಳಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಶೇ 77ರಷ್ಟು ಮಂದಿಯ ಪ್ರಕಾರ ರಸ್ತೆಯಲ್ಲಿ ನಡೆದುಹೋಗುವಾಗ ಮೊಬೈಲ್‌ ಬಳಸುವುದು ‘ಸಾಮಾನ್ಯವಾಗಿ’ ಒಪ್ಪಿತವಂತೆ.

ಸಮಾಜದೊಟ್ಟಿಗೆ ಬೆರೆತಾಗ ಮೊಬೈಲ್‌ ಹೆಚ್ಚು ಬಳಸುವುದರಲ್ಲಿ ಮಹಿಳೆಯರಿಗಿಂತ ಪುರುಷರೇ ಮುಂದೆ. ಇಂಥ ಸಂದರ್ಭಗಳಲ್ಲಿ ಮೊಬೈಲ್  ಹೆಚ್ಚಾಗಿ ಬಳಸುವವರು ಸ್ಮಾರ್ಟ್‌ಫೋನ್ ಬಳಕೆದಾರರು. ವಯಸ್ಕರಿಗಿಂತ ಕಿರಿಯ ವಯಸ್ಸಿನವರು ಗುಂಪಿನೊಳಗೆ ಇದ್ದಾಗ ಮೊಬೈಲ್‌ ಬಳಸುವುದರ ಕುರಿತು ಹೆಚ್ಚು ಚಿಂತಿಸುತ್ತಾರೆ. ಇದು ಸಹಜ. ಆದರೆ 18ರಿಂದ 29 ವರ್ಷದೊಳಗಿನ ವಯಸ್ಕರಲ್ಲಿ ಶೇ 16ರಷ್ಟು ಮಂದಿ ಮಾತ್ರ ಕುಟುಂಬದೊಂದಿಗೆ ಊಟಕ್ಕೆ ಕುಳಿತಾಗ ಮೊಬೈಲ್‌ ಬಳಸುವುದು ಪರವಾಗಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT