ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟಿಯ ‘ದೇವರಕ್ಷಕ’ ಪಾಕ್ಯನಾದನ್ ಆಂಟನಿ

ಮುಸಾಫಿರ್‌
Last Updated 4 ಜೂನ್ 2016, 19:30 IST
ಅಕ್ಷರ ಗಾತ್ರ

‘ಐರಾವತ’ದಲ್ಲಿ ಬಲಬದಿಯ ಕಿಟಿಕಿಗೆ ಅಂಟಿಕೊಂಡಿದ್ದ 16ನೇ ನಂಬರ್‌ನ ಸೀಟ್‌ನಲ್ಲಿ ಕೂತು ಆಗ ತಾನೇ ಕಣ್ಮುಚ್ಚಿದ್ದೆ. ಊಟಿಯಿಂದ ಸಂಜೆ ಆರು ಗಂಟೆ ಎರಡು ನಿಮಿಷಕ್ಕೆ ಬೆಂಗಳೂರಿಗೆ ಹೊರಟಿದ್ದ ಬಸ್, ಮುಸ್ಸಂಜೆಯ ಕತ್ತಲು, ಹನಿ ಮಳೆಯ ನಡುವೆ ಪೈಕಾರದ ತಿರುವಿನಲ್ಲಿ ವೇಗವಾಗಿ ಕೆಳಗಿಳಿಯುತ್ತಿತ್ತು.

‘ಜೆಎಸ್ಎಸ್ ಇಂಟರ್‌ನ್ಯಾಷನಲ್ ಶಾಲೆ’ಯಲ್ಲಿ ಓದುತ್ತಿದ್ದ ಮಗಳು ಹಬ್ಬಕ್ಕೆ ಮನೆಗೆ ಬಂದಿದ್ದಳು. ಅವಳು ಮನೆಗೆ ಬಂದ ಪ್ರತಿಯೊಂದು ಸಂದರ್ಭದಲ್ಲೂ ಕಾರಲ್ಲಿಯೇ ಹೋಗಿ ಊಟಿಗೆ ವಾಪಸು ಬಿಟ್ಟುಬರುತ್ತಿದ್ದೆ. ಈ ಬಾರಿ ಏಕೋ ಕಾರಿನಲ್ಲಿ ಹೋಗಿ ಮಗಳನ್ನು ಬಿಟ್ಟು, ಒಬ್ಬಂಟಿಯಾಗಿ ಮರಳಲು ಮನಸ್ಸಾಗಲಿಲ್ಲ. ಅದಕ್ಕೆ ‘ಐರಾವತ’ದ ಮೊರೆ ಹೋಗಿದ್ದೆವು.

ಭಾನುವಾರ, ಆಗಸ್ಟ್ 31, 2014. ಗೌರಿ–ಗಣೇಶ ಹಬ್ಬದ ಸಂಭ್ರಮ ಮುಗಿದ ಮರುದಿನ. ಬೆಳಿಗ್ಗೆ ಆರು ಗಂಟೆಗೆ ಬೆಂಗಳೂರಿನ ಶಾಂತಿನಗರದ ಬಸ್ ಸ್ಟ್ಯಾಂಡ್‌ನಿಂದ ಹೊರಟಿದ್ದ ‘ಐರಾವತ’ ಮಧ್ಯಾಹ್ನ ಮೂರು ಗಂಟೆಗೆ ಊಟಿ ತಲುಪಿತ್ತು.

ಬಸ್ ನಿಲ್ದಾಣದಿಂದ ನೇರವಾಗಿ ಶಾಲೆಗೆ ಹೋಗಿ ಅವಳನ್ನು ಬಿಟ್ಟು, ಮರಳಿ ಅಲ್ಲಿಗೇ ಬಂದು ಬೇರೊಂದು ‘ಐರಾವತ’ ಹತ್ತಿದ್ದೆ. ದಿನದುದ್ದಕ್ಕೂ ಹನಿ ಹನಿ ಮಳೆ. ಮೇಲಾಗಸದಲ್ಲಿ ದಟ್ಟ ಮೋಡ. ಕೆಟ್ಟ ಗಾಳಿ. ಆ ನಡುವೆ ದಣಿದಿದ್ದ ದೇಹ ನಿದ್ರೆಗೆ ಜಾರುವ ತವಕದಲ್ಲಿತ್ತು. ಇನ್ನೇನು ನಿದ್ರೆ ಆವರಿಸಿತು...!

‘ದಢ್...’
‘ಅಯ್ಯಯ್ಯೋ... ಅಯ್ಯಯ್ಯೋ...’
‘ಓಹ್ ಮೈ ಗಾಡ್! ಓ ಮೈ ಗಾಡ್!’
‘ರಕ್ತ... ರಕ್ತ... ರಕ್ತ...’

ಕಣ್ಣು ತೆರೆಯುವಷ್ಟರಲ್ಲಿ ಅಲ್ಲೋಲಕಲ್ಲೋಲ. ಮೈ–ಮುಖದ ಮೇಲೆಲ್ಲಾ ಗಾಜಿನ ಚೂರುಗಳು. ನಮ್ಮ ಬಸ್‌ನ ಬಲಬದಿಗೆ ಲಾರಿಯೊಂದು ತಿರುವಿನಲ್ಲಿ ಬಂದು ಡಿಕ್ಕಿ ಹೊಡೆದಿತ್ತು. ಬಸ್ ಡ್ರೈವರ್ ಸಾವರಿಸಿಕೊಂಡು ಬ್ರೇಕ್ ಹಾಕಿ ಪಲ್ಟಿಯಾಗುವುದನ್ನು ತಪ್ಪಿಸಿದ್ದ.

ನಾನು ಕೂತಿದ್ದ ಕಿಟಿಕಿಯ ಹಿಂಭಾಗಕ್ಕೆ ಮುತ್ತಿಕ್ಕಿದ್ದ ಲಾರಿ, ಬಸ್‌ನ ಬಲಬದಿಯನ್ನು ಛಿದ್ರ ಮಾಡಿ ಮುಂದೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿತ್ತು.

ಸಾವರಿಸಿಕೊಂಡು ಎದ್ದು ನಿಲ್ಲುವಷ್ಟರಲ್ಲಿ ಬಸ್ ಒಳಗೆ ಬೊಬ್ಬೆ. ನಮ್ಮ ಸೀಟಿನ ಹಿಂದೆ ಕೂತಿದ್ದ ಎರಡು ಸೀಟುಗಳಲ್ಲಿದ್ದ ಇಬ್ಬರು ಯುವತಿಯರ ತಲೆ ಒಡೆದು ರಕ್ತ ಚಿಮ್ಮುತ್ತಿತ್ತು.

ಅವರ ಹಿಂದೆ ಕೂತಿದ್ದ ಅವರದೇ ಕುಟುಂಬದ ಮತ್ತಿಬ್ಬರು ಹಿರಿಯರು ಗಾಯಗೊಂಡಿದ್ದರು. ನನ್ನ ಸೀಟಿನ ಮುಂದಿದ್ದ ದಂಪತಿಗಳ ತಲೆ ಎದುರಿನ ಸೀಟಿಗೆ ಹೊಡೆದು ಚೀರುತ್ತಿದ್ದರು.

‘ಬಸ್‌ನ ಡೀಸಲ್ ಟ್ಯಾಂಕ್‌ಗೆ ಲಾರಿ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ. ಬೆಂಕಿ ಹತ್ತಿಕೊಳ್ಳಬಹುದು. ಎಲ್ಲರೂ ಬೇಗ ಬಸ್ಸಿನಿಂದ ಕೆಳಗಿಳಿದು ದೂರ ಓಡಿ’ ಎಂದು ಬುದ್ಧಿವಂತ ಪ್ರಯಾಣಿಕನೊಬ್ಬ ಕೂಗು ಹಾಕಿ ಹೊರಗೆ ಹಾರಿದ್ದ! ಪರಿಸ್ಥಿತಿ ಕೈ ಮೀರಿ, ಪ್ರತಿಯೊಬ್ಬರೂ ಮುಂಬದಿಯಲ್ಲಿದ್ದ ಒಂದೇ ಬಾಗಿಲಿನಿಂದ ಹೊರಹಾರುವ ಯತ್ನಕ್ಕೆ ಕೈ ಹಾಕಿದ್ದರು.

‘ಸಾವಧಾನವಾಗಿ ಇಳಿಯಿರಿ, ಅಂತಹ ಅನಾಹುತ ಏನೂ ಆಗಿಲ್ಲ’ ಎಂದು ಎಷ್ಟು ಕೂಗಿ ಹೇಳಿದರೂ, ಯಾರೂ ಕೇಳುವವರಿರಲಿಲ್ಲ. ಐದಾರು ನಿಮಿಷದಲ್ಲಿ ಮೂವತ್ತಕ್ಕಿಂತ ಹೆಚ್ಚು ಜನ ಕೆಳಗಿಳಿದು ಓಡಿಹೋಗಿದ್ದರು. ಹಿಂದಿನ ಸೀಟ್‌ನಲ್ಲಿದ್ದ ನಾಲ್ವರು ಯುವಕರು ಮತ್ತು ನಾನು ಮಾತ್ರ ಒಳಗೆ! ಇನ್ನೇನು ಬಾಗಿಲತ್ತ ಧಾವಿಸಬೇಕು ಎಂದು ಹೊರಟಿದ್ದವ, ‘ಯಾರೋ ಕೆಳಗೆ ಬಿದ್ದಿದ್ದಾರೆ’ ಎಂಬ ಮಾತು ಕೇಳಿ ಹಿಂತಿರುಗಿದೆ.

ಮೂರು ಸಾಲುಗಳ ಹಿಂದೆ ಕಟ್ಟುಮಸ್ತಾದ ಯುವಕನೊಬ್ಬ ಸೀಟುಗಳ ನಡುವೆ ಬಿದ್ದು ನರಳುತ್ತಿದ್ದ. ನಾವು ಐವರು ಆತನ ಬಳಿ ಹೋಗಿ ಮೇಲೆತ್ತುವ ಯತ್ನ ಮಾಡುವಷ್ಟರಲ್ಲಿ– ಅವನ ಎದೆ, ಕಿವಿ, ಬಾಯಿಂದ ರಕ್ತ ಉಕ್ಕಿ ಬರಲಾರಂಭಿಸಿತು. ‘25 ನಂಬರ್’ ಸೀಟಿನಲ್ಲಿ ಕಿಟಕಿಗೆ ಅಂಟಿಕೊಂಡು ಕೂತಿದ್ದ ಆ ಯುವಕನ ಎದೆಗೆ ಕಿಟಕಿಯ ಫ್ರೇಮ್ ಚುಚ್ಚಿತ್ತು. ತಲೆಗೆ ಗಂಭೀರ ಗಾಯವಾಗಿತ್ತು.

ಮೂವರು ಯುವಕರು ಕೆಳಗಿಳಿದುಹೋದರು. ಪಕ್ಕದಲ್ಲಿಯೇ ಒಡೆದ ಕಿಟಿಕಿಯ ಮೂಲಕ ಗಾಯಗೊಂಡ ಯುವಕನನ್ನು ಕೆಳಗಿಳಿಸುವಷ್ಟರಲ್ಲಿ 15 ನಿಮಿಷ ಹಾಳಾಗಿಹೋಗಿತ್ತು. ಸುರಿವ ಮಳೆಯ ನಡುವೆ, ರಸ್ತೆಯ ಮೇಲೆ, ರಕ್ತ ಚಿಮ್ಮುತ್ತಿದ್ದ ಆ ಯುವಕನ ದೇಹ ಹಾಕಿಕೊಂಡು ನಿಂತಿದ್ದ ನಮ್ಮ ಬಳಿ,

‘ಮುಂದೇನು?’ ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ಅಷ್ಟರೊಳಗೆ ಸುಧಾರಿಸಿಕೊಂಡಿದ್ದ ಡ್ರೈವರ್ ನಮ್ಮ ಬಳಿ ಬಂದು ‘ಮುಂದೆ ಹೋದರೆ ಮೈಸೂರಿಗೆ ಹೋಗಬೇಕು. ತುಂಬಾ ಸಮಯ ಬೇಕಾಗುತ್ತದೆ. ತಕ್ಷಣ ಇವರನ್ನು ಊಟಿಗೆ ಕರೆದುಕೊಂಡು ಹೋಗಿ’ ಎಂಬ ಸಲಹೆ ಮಾಡಿದರು.

ಕರೆದುಕೊಂಡು ಹೋಗುವುದು ಹೇಗೆ!? ಅತ್ತಿಂದ ಇತ್ತ. ಇತ್ತಿಂದ ಅತ್ತ ಹೋಗುತ್ತಿದ್ದ ಸುಮಾರು ನೂರು ವಾಹನಗಳನ್ನು ನಿಲ್ಲಿಸಿ ಕಾಡಿ ಬೇಡಿಕೊಂಡರೂ ಯಾವ ‘ಪ್ರಜ್ಞಾವಂತ’ರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಊಟಿಯಿಂದ ವೈನಾಡಿಗೆ ಹೊರಟಿದ್ದ,

ಸ್ವಲ್ಪ ತೀರ್ಥ ಸೇವಿಸಿದ್ದ ಮೂವರು ‘ಅರೆ ಪ್ರಜ್ಞಾವಂತ’ ಯುವಕರು, ತಮ್ಮ ಕಾರನ್ನು ಊಟಿ ಕಡೆ ಹಿಂತಿರುಗಿಸಿ ಜೀವ ಉಳಿಸಿಕೊಳ್ಳಲು ಸೆಣಸುತ್ತಿದ್ದ ಆ ಯುವಕನ ದೇಹವನ್ನು ಹಿಂದಿನ ಸೀಟಿನ ಮೇಲೆ ಹಾಕಿಕೊಂಡರು.

ಒಬ್ಬ ಯುವಕ ಡ್ರೈವರ್ ಸೀಟ್‌ನಲ್ಲಿ ಕೂತು ಕಾರ್ ಸ್ಟಾರ್ಟ್‌ ಮಾಡಿದ. ಇನ್ನಿಬ್ಬರು ಮುಂದಿನ ಸೀಟ್‌ನಲ್ಲಿ ಕೂತು ನಮ್ಮ ಬಳಿ, ‘ಯಾರಾದರೂ ಒಬ್ಬರು ನಮ್ಮ ಜೊತೆ ಬನ್ನಿ’ ಎಂದರು. ಹಿಂತಿರುಗಿ ನೋಡಿದರೆ ಜೊತೆಯಲ್ಲಿದ್ದ ಐವರೂ ಹಿಂದಡಿ ಇಟ್ಟಾಗಿತ್ತು. ಕಾರಿನ ಹಿಂಬದಿಯ ಸೀಟ್‌ನಲ್ಲಿ ಕೂತು ಆ ಯುವಕನ ತಲೆಯನ್ನು ತೊಡೆಯ ಮೇಲೆ ಹಾಕಿಕೊಂಡು ‘ಹೊರಡಿ’ ಎಂದೆ.

20 ಕಿಲೋಮೀಟರ್, 45 ನಿಮಿಷದ ಪ್ರಯಾಣದುದ್ದಕ್ಕೂ ನಾವ್ಯಾರೂ ಒಂದೇ ಒಂದು ಮಾತನಾಡಲಿಲ್ಲ. ಸುರಿವ ಮಳೆಯ ನಡುವೆ ಹುಚ್ಚು ಹಿಡಿದ ಕುದುರೆಯಂತೆ ಓಡುತ್ತಿದ್ದ ಕಾರಿನೊಳಗೆ ಒಂದು ಜೀವದ ಹೋರಾಟ. ಕ್ಷಣ ಕ್ಷಣಕ್ಕೂ ಉಸಿರು ಕ್ಷೀಣಿಸುತ್ತಿದ್ದರೂ,

ರಕ್ತ ಉಕ್ಕಿ ಹರಿಯುತ್ತಿದ್ದರೂ ಆ ಯುವಕ ಬದುಕಿಗಾಗಿ ತಹತಹಿಸುತ್ತಿದ್ದ. ಒಂದು ಕೈಯಲ್ಲಿ ಆ ಜೀವದ ತಲೆ, ಮತ್ತೊಂದು ಕೈಯಲ್ಲಿ ದೇಹ ಹಿಡಿದು ಗಟ್ಟಿಯಾಗಿ ಕೂತಿದ್ದೆ. ನಾನವನ ತೊಡೆಯ ಮೇಲೋ? ಅವನು ನನ್ನ ತೊಡೆಯ ಮೇಲೋ?! ಸಾವಿನ ಸ್ಪರ್ಶ!

ಊಟಿಯ ಸರ್ಕಾರಿ ಆಸ್ಪತ್ರೆಯ ಮುಂದೆ ಕಾರು ನಿಲ್ಲಿಸಿ, ಆ ಯುವಕರು ಒಳಗೆ ನುಗ್ಗಿ ಸ್ಟ್ರೆಚರ್ ತಂದರು. ಆಸ್ಪತ್ರೆಯ ಸಿಬ್ಬಂದಿ, ಡಾಕ್ಟರ್ ಕೂಡ ತಕ್ಷಣ ಹೊರಬಂದರು. ಯುವಕನನ್ನು ಪ್ರಥಮ ಚಿಕಿತ್ಸೆಗಾಗಿ ಒಳಗೆ ಕರೆದುಕೊಂಡು ಹೋದ ಡಾಕ್ಟರ್ ನಮ್ಮನ್ನು ಹೊರಹೋಗುವಂತೆ ಹೇಳಿದರು.

ಸುಮಾರು ಎರಡು ಗಂಟೆಗಳಷ್ಟು ಕಾಲ ಉಸಿರನ್ನೂ ಮರೆತಿದ್ದವ ಹೊರಬಂದು ಸುರಿವ ಮಳೆಗೆ ಮೈಯೊಡ್ಡಿದೆ. ಜೀನ್ಸ್‌ಗೆ ಅಂಟಿಕೊಂಡಿದ್ದ ರಕ್ತ, ಮಳೆಯ ಹನಿಗಳ ರಭಸಕ್ಕೆ ಸಿಕ್ಕಿ ತೊಟ್ಟಿಕ್ಕುತ್ತಿತ್ತು. ಆಘಾತ–ಅನಾಥ ಭಾವನೆಯ ನಡುವೆ ನೆನಪಿಗೆ ಬಂದದ್ದು, ಆನಂದ್ ಉರುಫ್ ಪಾಕ್ಯನಾದನ್ ಆಂಟನಿ!

ಊಟಿಗೆ ಮಗಳನ್ನು ನೋಡಲು ಬಂದಾಗಲೆಲ್ಲ ನಾವು ಉಳಿದುಕೊಳ್ಳುತ್ತಿದ್ದ ಗೆಸ್ಟ್ ಹೌಸ್‌ನ ಕೇರ್ ಟೇಕರ್, ಕುಕ್, ಆಟೋ ಡ್ರೈವರ್, ಗೈಡ್ ಮತ್ತು ಸರ್ವಸ್ವ. ಅಪ್ಪಟ ಕನ್ನಡ ಮಾತನಾಡುವ ಆನಂದ್‌ಗೆ ಕರೆ ಮಾಡಿ ಕೂಡಲೇ ಆಸ್ಪತ್ರೆಗೆ ಬರಲು ಹೇಳಿದೆ. ಉಜಿರೆಯಲ್ಲಿದ್ದ ಪತ್ನಿಗೆ ಕರೆ ಮಾಡಿ, ಘಟನೆಯ ವಿವರ ನೀಡಿ, ‘ನನಗೇನೂ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದೆ.

ಹತ್ತೇ ನಿಮಿಷದಲ್ಲಿ ಆನಂದ್ ಆಟೋ ಪ್ರತ್ಯಕ್ಷವಾಯಿತು. ನಮ್ಮೆಲ್ಲರ ಮುಂದಿದ್ದ ಪ್ರಶ್ನೆ, ಒಳಗೆ ಬದುಕು ಸಾವಿನ ನಡುವೆ ಹೋರಾಡುತ್ತಿರುವ ಯುವಕ ಯಾರು? ಅವನ ಗುರುತು ಹಚ್ಚುವುದು ಹೇಗೆ? ಮನೆಯವರಿಗೆ ತಿಳಿಸುವುದು ಹೇಗೆ?

ಆನಂದ್ ನನ್ನನ್ನು ಕರೆದುಕೊಂಡು ಊಟಿ ಬಸ್‌ ಸ್ಟ್ಯಾಂಡ್‌ನಲ್ಲಿದ್ದ ಕೆಎಸ್ಆರ್‌ಟಿಸಿ ಕೌಂಟರ್‌ಗೆ ಓಡಿದ. ಅಲ್ಲಿದ್ದ ಟ್ರಾಫಿಕ್ ಕಂಟ್ರೋಲರ್ ಪ್ರಕಾಶ್ ಗೌಡ ಅವರಿಗೆ ಅಪಘಾತ ಆದದ್ದು ಮತ್ತು ಒಬ್ಬ ಗಂಭೀರ ಗಾಯಾಳುವನ್ನು ಊಟಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವಿಷಯ ಅದಾಗಲೇ ಗೊತ್ತಾಗಿತ್ತು.

‘ಬಸ್ ನಂಬರ್ 4668’ರ ಟ್ರಿಪ್ ಶೀಟ್ ತೆಗೆಸಿ, 25ನೇ ನಂಬರ್ ಸೀಟ್‌ನಲ್ಲಿ ಕೂತ ಪ್ರಯಾಣಿಕರ ಹೆಸರು ಹುಡುಕಿದಾಗ ಗಾಯಾಳುವಿನ ಹೆಸರು ಅರುಣ್ ಮೋಹನ್ ಎಂದು ಗೊತ್ತಾಯಿತು. ಎದುರಿದ್ದ ಮೊಬೈಲ್‌ಗೆ ಕರೆ ಮಾಡಿದಾಗ ಫೋನ್ ರಿಸೀವ್ ಮಾಡಿದರು!

‘ಯಾರು ನೀವು’ ಎಂಬ ಪ್ರಶ್ನೆಗೆ ಆ ಕಡೆಯಿಂದ, ‘ಸರ್, ನಾವು ನಿಮ್ಮ ಜೊತೆಯಲ್ಲಿ ಆಸ್ಪತ್ರೆಗೆ ಗಾಯಾಳುವನ್ನು ಕರೆದುಕೊಂಡು ಬಂದೆವಲ್ಲ ಅವರು. ಈ ಫೋನ್ ಅವರ ಬಳಿಯೇ ಇತ್ತು. ಕರೆ ಬಂದಾಗ ಸ್ವೀಕರಿಸಿದೆವು’ ಎಂದರು.

‘ಹಾಗಿದ್ದರೆ, ಆ ಮೊಬೈಲ್‌ನಲ್ಲಿ ಅರುಣ್ ಮಾಡಿದ ಕೊನೆಯ ನಂಬರ್‌ಗೆ ಫೋನ್ ಮಾಡಿ’ ಎಂದರೆ, ‘ಸಾಧ್ಯವಿಲ್ಲ. ಇದು ಸ್ಮಾರ್ಟ್‌ ಫೋನ್. ಲಾಕ್ ಮಾಡಿದ್ದಾರೆ. ಹೊರಗಿನಿಂದ ಬಂದ ಕರೆ ಸ್ವೀಕರಿಸಬಹುದು. ಆದರೆ, ಯಾವುದೇ ನಂಬರ್‌ಗೆ ಫೋನ್ ಮಾಡಲು ಸಾಧ್ಯವಿಲ್ಲ’ ಎಂಬ ಉತ್ತರ ಬಂತು.

ಆಸ್ಪತ್ರೆಗೆ ಹಿಂತಿರುಗಿದ ತಕ್ಷಣ ಅರುಣ್ ಜೇಬಲ್ಲಿ ಸಿಕ್ಕಿದ್ದ ವ್ಯಾಲೆಟ್ ತೆಗೆದುಕೊಂಡ ಆನಂದ್ ಅದರಲ್ಲಿದ್ದ ಒಂದೊಂದೇ ಚೀಟಿಯನ್ನು ಪರೀಕ್ಷಿಸಿದರು. ಅದರಲ್ಲೊಂದು ಮೊಬೈಲ್ ಖರೀದಿ ಮಾಡಿದ ರಸೀತಿ. ಮೇಲೊಂದು ಫೋನ್ ನಂಬರ್. ಆ ನಂಬರ್‌ಗೆ ಕರೆ ಮಾಡಿದರು.

ಅದು ಒಳಗೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅರುಣ್‌ಗೆ ಹೆಣ್ಣು ಕೊಟ್ಟ ಮಾವನ ನಂಬರ್! ಊಟಿಯೇ ಅರುಣ್ ಪತ್ನಿಯ ಊರು. ಮೂರು ತಿಂಗಳ ಹಿಂದಷ್ಟೇ ಹುಟ್ಟಿದ್ದ ಮಗು ಮತ್ತು ಬಾಣಂತಿ ಪತ್ನಿಯನ್ನು ನೋಡಲು ಗೌರಿ–ಗಣಪತಿ ರಜೆಯಲ್ಲಿ ಊಟಿಗೆ ಬಂದಿದ್ದರು ಅರುಣ್.

ಸಂಜೆ ಮರಳಿ ಬೆಂಗಳೂರಿಗೆ ಹೊರಟಿದ್ದರು! ಬೆಳಿಗ್ಗೆಯಷ್ಟೇ ಮಾವನ ಗೆಳೆಯನ ಮೊಬೈಲ್ ಮಳಿಗೆಯಲ್ಲಿ ಹೊಸ ಫೋನ್ ಕೂಡ ಖರೀದಿಸಿದ್ದರು!

ಅರುಣ್ ಮಾವ ಮತ್ತು ಕುಟುಂಬದವರು ಆಸ್ಪತ್ರೆ ತಲುಪುವಷ್ಟರಲ್ಲಿ ಪೊಲೀಸರು ಕೂಡ ಅಲ್ಲಿಗೆ ಬಂದಾಗಿತ್ತು. ಪ್ರಥಮ ಚಿಕಿತ್ಸೆ ಪೂರೈಸಿದ್ದ ಡಾಕ್ಟರ್, ತಕ್ಷಣ ಅರುಣ್ ಅವರನ್ನು ಮುಂದಿನ ಚಿಕಿತ್ಸೆಗಾಗಿ ಕೊಯಮತ್ತೂರಿಗೆ ಕರೆದುಕೊಂಡು ಹೋಗಲು ಹೇಳಿದರು. ಖಾಸಗಿ ಆಂಬುಲೆನ್ಸ್ ಬಂದು ನಿಂತಿತು.

‘ನಾವ್ಯಾರಾದರೂ ಜೊತೆಯಲ್ಲಿ ಬರಬೇಕೆ?’ ಎಂದು ಕೇಳಿದಾಗ, ನಮ್ಮ ನಾಲ್ವರ ಕೈ ಹಿಡಿದ ಅರುಣ್ ಮಾವ, ‘ನೀವು ಇಷ್ಟವರೆಗೆ ಮಾಡಿದ ಉಪಕಾರಕ್ಕೆ ಏನು ಹೇಳಬೇಕು ಎಂದು ಅರ್ಥವಾಗುತ್ತಿಲ್ಲ. ಸಾಕಷ್ಟು ತೊಂದರೆ ತೆಗೆದುಕೊಂಡಿದ್ದೀರಿ. ನಾವೇ ಕರೆದುಕೊಂಡುತ್ತೇವೆ’ ಎಂದರು.

ಅಂಬುಲೆನ್ಸ್ ಆಸ್ಪತ್ರೆಯ ಆವರಣದಿಂದ ಕೊಯಮತ್ತೂರು ಕಡೆಗೆ ಧಾವಿಸಿತು. ಜೊತೆಯಲ್ಲಿದ್ದ ಮೂವರು ‘ಅರೆ ಪ್ರಜ್ಞಾವಂತ’ ಗೆಳೆಯರು ಎಷ್ಟೇ ಹೇಳಿದರೂ, ನಾವು ಬೆಳಿಗ್ಗೆಯೊಳಗೆ ವೈನಾಡಿನಲ್ಲಿ ಇರಬೇಕು ಎಂದು ಹೊರಟೇಬಿಟ್ಟರು. ರಾತ್ರಿ ಹನ್ನೆರಡು ದಾಟಿಹೋಗಿತ್ತು. ಆಸ್ಪತ್ರೆಯ ಆವರಣದಲ್ಲಿ ಉಳಿದುಕೊಂಡಿದ್ದು ನಾನು ಮತ್ತು ಆನಂದ್ ಮಾತ್ರ!

‘ಗೆಸ್ಟ್ ಹೌಸ್‌ಗೆ ಹೋಗೋಣ’ ಎಂದು ಆನಂದ್ ಹೇಳಿದಾಗ ಮರುಮಾತನಾಡದೇ ರಿಕ್ಷಾ ಹತ್ತಿದೆ. ಊಟಿ ಲೇಕ್‌ನ ಎದುರಿನ ಗುಡ್ಡದ ಮತ್ತೊಂದು ಬದಿಯ ಗೆಸ್ಟ್ ಹೌಸ್ ಒಳಗೆ ಕಾಲಿಟ್ಟ ಕೂಡಲೇ ಕುಸಿದುಬಿದ್ದೆ. ಆನಂದ್ ಒಳ ಹೋಗಿ ಗೀಸರ್ ಹಾಕಿದರು. ಅಡುಗೆ ಮನೆಯಿಂದ ನೀರಿನ ಬಾಟಲ್ ತಂದು ಮುಂದಿಟ್ಟರು. ಮಾತು ಹೊರಡುತ್ತಿರಲಿಲ್ಲ. ಕಷ್ಟಪಟ್ಟು, ‘ಅರುಣ್ ಖಂಡಿತ ಬದುಕುತ್ತಾರಲ್ಲಾ?’ ಎಂದು ಕೇಳಿದೆ.

‘ನೋಡೋಣ. ಏನೇ ಆದರೂ, ಅವರ ಮಾವ ನನಗೆ ಫೋನ್ ಮಾಡ್ತೀನಿ ಅಂದಿದ್ದಾರೆ. ನಿಮ್ಮ ಜೀನ್ಸ್ ಎಲ್ಲ ರಕ್ತ ಆಗಿದೆ. ಮೈಯಿಂದ ರಕ್ತದ ವಾಸನೆ ಹೊಡಿತಿದೆ. ಬಿಸಿ ನೀರಲ್ಲಿ ಸ್ನಾನ ಮಾಡಿ. ನಾನು ಹತ್ತು ನಿಮಿಷ ಇಲ್ಲೇ ಹೊರ ಹೋಗಿಬರುತ್ತೇನೆ’ ಎಂದ ಆನಂದ್ ಬಾಗಿಲು ಹಾಕಿಕೊಂಡು ಹೊರ ನಡೆದೇಬಿಟ್ಟರು.

ಸ್ನಾನದ ಮನೆಯಲ್ಲಿ ಕೊರೆವ ಚಳಿಯಲ್ಲಿ ಬಿಸಿ ನೀರಿನ ಷವರ್ ಕೆಳಗೆ ಬೆತ್ತಲಾದೆ. ಈ ದೇಹ ನಶ್ವರ! ಅರ್ಧ ಗಂಟೆಯ ನಂತರ ಅರೆ ಪ್ರಜ್ಞಾವಸ್ಥೆಯಲ್ಲಿಯೇ ಹೊರ ಬಂದು ನೋಡಿದರೆ...

ಎದುರಿದ್ದ ಡೈನಿಂಗ್ ಟೇಬಲ್ ಮೇಲಿನ ತಟ್ಟೆಯಲ್ಲಿ ಅನ್ನ. ಎದುರಿದ್ದ ಪಿಂಗಾಣಿ ಬೌಲ್‌ನಲ್ಲಿ ದಾಲ್. ಪಕ್ಕದಲ್ಲಿ ಉಪ್ಪಿನಕಾಯಿ ಬಾಟಲಿ. ‘ನೀವು ತುಂಬಾ ದಣಿದಿದ್ದೀರಿ. ಸ್ವಲ್ಪ ಊಟ ಮಾಡಿ ಮಲಗಿ.

ಬೆಳಿಗ್ಗೆ ಏನಾಗುತ್ತದೋ ಎಂದು ನೋಡೋಣ’ ಎಂದರು. ಏಕೋ ಊಟ ಮಾಡಲು ಮನಸ್ಸಾಗಲಿಲ್ಲ. ಆದರೆ, ನಡುರಾತ್ರಿಯಲ್ಲಿ ಬಂಧು–ಬಾಂಧವನಲ್ಲದ ಎದುರಿದ್ದ ಜೀವ ನನಗಾಗಿ ಹೊರ ಹೋಗಿ ಕಷ್ಟಪಟ್ಟು ಅನ್ನ ಹುಡುಕಿ ತಂದಿದೆ.

‘ನೀವೂ ಬನ್ನಿ’ ಎಂದೆ. ಮತ್ತೊಂದು ತಟ್ಟೆ ತೆಗೆದುಕೊಂಡು ಅದಕ್ಕೊಂದಿಷ್ಟು ಅನ್ನ ಹಾಕಿ, ಎರಡೂ ತಟ್ಟೆಗೆ ದಾಲ್ ಹಾಕಿಕೊಂಡೆವು. ಇನ್ನೇನು ಇಬ್ಬರೂ ತುತ್ತು ಬಾಯಿಗೆ ಇಡಬೇಕು, ಆನಂದ್ ಮೊಬೈಲ್ ರಿಂಗಾಯಿತು. ಮೊಬೈಲ್ ತೆಗೆದುಕೊಂಡ ಆನಂದ್ ತಮಿಳಿನಲ್ಲಿ ಮಾತನಾಡಿದ್ದು ಕೇವಲ ಹತ್ತಿಪ್ಪತ್ತು ಸೆಕೆಂಡುಗಳು!
‘ದಾರಿ ಮಧ್ಯದಲ್ಲಿಯೇ ಪ್ರಾಣ ಹೋಯ್ತಂತೆ’.

ಕುರ್ಚಿಯಿಂದ ಕುಸಿದು ಕೆಳ ಬಿದ್ದೆ. ಒಡಲಲ್ಲಿ ಅದುಮಿಕ್ಕಿಕೊಂಡಿದ್ದ ದುಃಖ ಒತ್ತರಿಸಿ ಹೊರಬಂದಿತು. ನೆಲದ ಮೇಲೆ ಬಿದ್ದು ಬಿದ್ದು ಚೀರಾಡಿ ಬಿಟ್ಟೆ. ಹತ್ತಿರ ಬಂದ ಆನಂದ್ ನನ್ನನ್ನು ಹಿಡಿದುಕೊಂಡು, ‘ನೀವು ನಿಮ್ಮ ಪ್ರಯತ್ನ ಮಾಡಿದ್ದಿರಿ. ಸ್ವಲ್ಪ ಸಮಾಧಾನ ಮಾಡಿಕೊಳ್ಳಿ’ ಎಂದು ಆಸರೆಯಾದರು.

ಸಮಾಧಾನ! ಎಲ್ಲಿಂದ!? ಅದೇ ಲಾರಿ ಒಂದು ಕ್ಷಣ ಮೊದಲು ಬಸ್ಸಿಗೆ ಬಂದು ಡಿಕ್ಕಿ ಹೊಡೆದಿದ್ದರೆ? ಸೀಟ್ ನಂಬರ್ 25ರ ಬದಲು 16ಕ್ಕೆ ಬಂದು ಅಪ್ಪಳಿಸಿದ್ದರೆ? ಅರುಣ್ ಸತ್ತು ಬದುಕಿದ್ದ. ನಾನು ಬದುಕಿ ಸತ್ತಿದ್ದೆ.

ಮುಂಜಾನೆ ಮೂರು ಗಂಟೆ. ಮಳೆ ಸುರಿಯುತ್ತಲೇ ಇತ್ತು. ಆನಂದ್, ‘ನೀವು ಇನ್ನಾದರೂ ಸ್ವಲ್ಪ ಮಲಗಿ. ನಾನು ಮನೆಗೆ ಹೋಗಿ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಬರುತ್ತೇನೆ’ ಎಂದು ಒತ್ತಾಯ ಮಾಡಿ, ನನ್ನನ್ನು ಮಲಗುವ ಕೋಣೆಗೆ ನೂಕಿ ಲೈಟ್ ಆರಿಸಿ ಹೊರ ನಡೆದರು.

ಇಡೀ ರಾತ್ರಿ ಕೊರೆವ ಚಳಿಯ ನಡುವೆ ಮಂಚದ ಮೇಲೆ ಕಂಬಳಿ ಹೊದ್ದು ಕೂತು ಮನಸಾರೆ ಅತ್ತುಬಿಟ್ಟೆ. ಸಾವಿಗೆ ಹೆದರಿ ಅಲ್ಲ, ಆ ಜೀವವನ್ನು ಬದುಕಲಾಗಿಸಲಿಲ್ಲವಲ್ಲ ಎಂಬ ಅಸಹಾಯಕತೆಯ ಸ್ಫೋಟ.

9 ಗಂಟೆಯ ಹೊತ್ತಿಗೆ ತಿಂಡಿ, ಚಹಾದೊಂದಿಗೆ ವಾಪಸು ಬಂದ ಆನಂದ್, ಬಲವಂತದಿಂದ ನನ್ನ ಹೊಟ್ಟೆ ತುಂಬಿಸಿದರು. ‘ಅರುಣ್ ಅಂತ್ಯಕ್ರಿಯೆ ಇವತ್ತು ಮಾಡೊಲ್ಲವಂತೆ. ನಾಳೆ ಮಾಡಬಹುದು. ನೀವು ಇಲ್ಲೇ ಇದ್ದರೆ ಮನಸ್ಸಿಗೆ ಇನ್ನಷ್ಟು ನೋವಾಗುತ್ತೆ. ಹತ್ತು ಗಂಟೆಯ ಬೆಂಗಳೂರು ಬಸ್ಸಿಗೆ ಟಿಕೇಟ್ ತಂದಿದ್ದೇನೆ’ ಎಂದು ನನ್ನನ್ನು ಹೊರಡಿಸಿಯೇ ಬಿಟ್ಟರು.

ಬಸ್‌ ಸ್ಟ್ಯಾಂಡ್‌ನಲ್ಲಿ ‘ಐರಾವತ’ದ ಒಳಗೆ ನನ್ನ ಬ್ಯಾಗ್ ಇಟ್ಟು, ಕೆಳಗೆ ಬಂದ ಆನಂದ್‌ಗೆ ಗೆಸ್ಟ್‌ ಹೌಸ್‌ನ ಬಾಡಿಗೆ ಮತ್ತು ಉಳಿದ ಖರ್ಚಿನ ಮೊತ್ತವನ್ನು ಕೊಡಲು ಮುಂದಾದೆ. ಬಿಲ್ಕುಲ್ ಆತ ಒಂದು ಪೈಸೆ ತೆಗೆದುಕೊಳ್ಳಲಿಲ್ಲ.

‘ಈ ಸಂದರ್ಭದಲ್ಲಿ ನಿಮ್ಮ ಹತ್ರ ಹಣ ತೆಗೆದುಕೊಂಡರೆ ದೇವರು ಕೂಡ ನನ್ನನ್ನ ಕ್ಷಮಿಸಲ್ಲ’ ಎಂದ ಎದುರಿದ್ದ ‘ದೇವರಕ್ಷಕ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT