ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೇ ಗುರು ಕಸಿ ಕುಶಪ್ಪ

Last Updated 20 ಜೂನ್ 2016, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಹಳಿಯಾಳದಿಂದ 5 ಕಿಲೋಮೀಟರ್‌ ದೂರದಲ್ಲಿ ಬೆಳಗಾವಿ ರಸ್ತೆಯಂಚಿಗೆ ಹರಡಿಕೊಂಡಿರುವ ತೇರಗಾಂವ್ ಎಂಬ ಪುಟ್ಟಹಳ್ಳಿ. ಮೂರು ಸಾವಿರ ಜನಸಂಖ್ಯೆಯ ಆ ಊರಿನಲ್ಲಿ ಕಬ್ಬು, ಭತ್ತ, ಮಾವು ಮುಖ್ಯ ಬೆಳೆಗಳು. ಈಗ ಆ ಊರಿನ ದಾರಿಯ ಇಕ್ಕೆಲದಲ್ಲಿಯೂ ಮಾವಿನ ಘಮಲು. ಊರು ಹತ್ತಿರವಾದಂತೆ ಮಾವಿನ ಗಿಡಗಳಿಂದ ತುಂಬಿದ ನೂರಾರು ನರ್ಸರಿಗಳು  ಎದುರಾಗುತ್ತವೆ. ಇದು ತೇರಗಾಂವ್‌ನಲ್ಲಿ 35 ವರ್ಷಗಳ ಹಿಂದೆ ಮಾವಿನ ಕಸಿಯ ಉಪಕಸುಬನ್ನು ಆರಂಭಿಸಿದ ಕುಶಪ್ಪನವರ ಶ್ರಮದ ಫಲ.

‘ನಾ ಸಣ್ಣಾಂವ ಇದ್ದಾಗ ನಮ್ಮ ಹೊಲದಾಗ ಒಂದು ಮಾವಿನ ಮರಾ ಇತ್ತು. ಅದು ನಮ್ಮ ಅಜ್ಜಾ ರತ್ನಾಗಿರಿಯಿಂದ ಕೊಂಡು ತಂದು ಹಚ್ಚಿದ್ದು. ಅದರ ಬಣ್ಣಾ, ಪರಿಮಳಾ, ರುಚಿಗೆ ನಾವೆಲ್ಲ ಮಕುರಿಕೊಂಡು ಹಣ್ಣಿನ ಹಿಂದ ಬೀಳತಿದ್ವಿ’ ಎಂದು ಬಾಲ್ಯದ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಕುಶಪ್ಪ. ಬಾಲ್ಯದಲ್ಲಿಯೇ ಮಾವಿನ ಹಣ್ಣಿನ ರುಚಿಗೆ ಮರುಳಾದ ಅವರಿಗೆ ನಂತರದಲ್ಲಿ ಹೊಲದ ಉಸ್ತುವಾರಿಕೆ ಬಂದಾಗ ಅಂತಹುದೇ ಮಾವಿನ ಮರಗಳನ್ನು ಬೆಳೆಸಬೇಕೆಂಬ ಹಂಬಲ ತುಂಬಿಕೊಂಡಿತ್ತು.

40 ವರ್ಷಗಳ ಹಿಂದೆ ಮಾವಿನ ತೋಟವನ್ನು ನಿರ್ಮಿಸುವವರಿಗೆ ಬ್ಯಾಂಕ್‌ ಸಾಲ ಕೊಡುತ್ತಿತ್ತು. ಅದಕ್ಕೆಂದೇ ಆರು ಎಕರೆ ಹೊಲಖರೀದಿಸಿದರು. ಓಟೆ(ಬೀಜ)ಯಿಂದ ಗಿಡ ತಯಾರಿಸಿದರೆ ಫಲ ಕೊಡಲು ಹತ್ತಾರು ವರ್ಷ ಕಾಯಬೇಕಲ್ಲದೇ ಮೂಲ ಗಿಡದ ಗುಣ ಪೂರ್ಣ ಬರುವುದಿಲ್ಲ. ಕಲಮು ಮಾಡಿದ ಮಾವಿನ ಗಿಡಗಳನ್ನು ಖರೀದಿಸಬೇಕೆಂದರೆ ದೂರದ ರತ್ನಾಗಿರಿಗೆ ಹೋಗಬೇಕು. ಆದ್ದರಿಂದ ತಾವೇ ಕಸಿ ಮಾಡುವುದನ್ನು ಕಲಿಯಬಾರದೇಕೆ ಎಂಬ ವಿಚಾರ ಮೂಡಿತು ಕುಶಪ್ಪನವರಿಗೆ. ಕೃಷಿ ಇಲಾಖೆಯ ಅಧಿಕಾರಿ ಆನಂದ ಪಟಾಣಕರ ಅವರಿಂದ ಕಸಿ ಮಾಡುವುದನ್ನು ಕಲಿತರು.

ಮೊದಲನೇ ವರ್ಷ ಕಸಿ ಮಾಡಿದ ಐವತ್ತೂ ಗಿಡಗಳು ಸತ್ತು ನಿರಾಶೆಗೀಡಾದರು. ಮರುವರ್ಷ ಇಬ್ಬರೂ ಸೇರಿ ಕಸಿ ಮಾಡೋಣ ಎಂದು ಅಧಿಕಾರಿಗಳು ಮತ್ತೆ ಹುರುಪು ತುಂಬಿದರು. ಒಂದು ಕಚ್ಚಾ ಮಾವಿನ ಗಿಡಕ್ಕೆ ಒಂದು ಟೊಂಗೆ ಕಟ್ಟುವ(ಬಡ್ಡಿ ಕಲಮಿ)ಪದ್ಧತಿಯಲ್ಲಿ 500 ಗಿಡಗಳನ್ನು ತಯಾರಿಸಿದರು. ಆ ವರ್ಷ ತೆಗೆದುಕೊಂಡ ಕಾಳಜಿಯಿಂದಾಗಿ ಎಲ್ಲವೂ ಬದುಕಿದವು. ಗಿಡ ಮಾರಾಟ ಮಾಡಿ ಬಂದ ಹಣದಿಂದ ಹೊಲಕ್ಕಾಗಿ ಮಾಡಿದ ಸಾಲವೂ ತೀರಿತು. ಕುಶಪ್ಪನವರ ಸಾಹಸ ತೇರಗಾಂವಿನಲ್ಲಿ ಮನೆ ಮಾತಾಯಿತು!.

ಊರಿಗೇ ಗುರುವಾದರು: ಒಂದು ವರ್ಷದ ಯಶಸ್ಸಿಗೆ ತೃಪ್ತರಾಗದ ಕುಶಪ್ಪನವರು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದವರನ್ನು ಸಂಪರ್ಕಿಸಿ ಟೌನ್‌ಗ್ರಾಫ್ಟ್‌ (ಚೆಂಡ ಕಲಮಿ) ಮಾಡುವುದನ್ನೂ ಕಲಿತರು. ಜೂನ್ ತಿಂಗಳಿನಲ್ಲಿ ಮಣ್ಣು ಮತ್ತು ದಡ್ಡಿ ಗೊಬ್ಬರವನ್ನು ಸೇರಿಸಿದ ಲಕೋಟೆಯಲ್ಲಿ ಎರಡು ಹುಳಿ ಮಾವಿನ ಓಟೆ ಹಾಕುತ್ತಾರೆ. ಅದು 36 ದಿನಕ್ಕೆ ಕಸಿ ಕಟ್ಟಲು ಯೋಗ್ಯ ಗಿಡಗಳಾಗುತ್ತವೆ. 3 ತಿಂಗಳು ಪ್ಲಾಸ್ಟಿಕ್ ಸುತ್ತಿಡುತ್ತಾರೆ. ನಂತರ ಪ್ಲಾಸ್ಟಿಕ್ ಬಿಚ್ಚಿದರೆ ಮೂರು ಕಾಂಡಗಳೂ ಬೆಸೆದು ಒಂದೇ ಗಿಡವಾಗಿರುತ್ತದೆ.

ಎರಡು ಕಚ್ಚಾ ಸಸ್ಯಗಳ ಬೇರು ಏಕಕಾಲಕ್ಕೆ ಒಂದೇ ಗಿಡಕ್ಕೆ ಆಹಾರ ಒದಗಿಸುವುದರಿಂದ ಕಲಮು ಮಾಡಿದ ಗಿಡ ಬಲು ಬೇಗನೇ ಬೆಳೆಯುತ್ತದೆ. ಕಸಿ ಕಟ್ಟಿದ ಗಿಡ ಸಾಯುವುದು ಕಡಿಮೆ. ಕಸಿ ಕಟ್ಟಿದ ಗಿಡಗಳಿಗೆ ಪ್ರತಿ ದಿನ ನೀರುಣಿಸಿ ಒಂದು ವರ್ಷ ಜೋಪಾನ ಮಾಡಿ ಬೆಳೆಸುತ್ತಾರೆ. ಇವರ ಗಿಡಗಳನ್ನರಸಿ ಹಲವು ಊರುಗಳಿಂದ ಜನರು ಬರಲಾರಂಭಿಸಿದರು. ಬೇಡಿಕೆ ಹೆಚ್ಚಾದಂತೆ ತಮ್ಮೊಬ್ಬರಿಂದಲೇ ಇದನ್ನು ಪೂರೈಸಲು ಸಾಧ್ಯವಿಲ್ಲ, ಇನ್ನಷ್ಟು ಜನರು ಇದೇ ವೃತ್ತಿ ಮಾಡಿದರೆ ಮಾವಿನ ಗಿಡಗಳನ್ನರಸಿ ಬಂದವರಿಗೆ ನಿರಾಶೆಯಾಗುವುದಿಲ್ಲ ಎಂದು ಕುಶಪ್ಪನವರು ಆಸಕ್ತರಿಗೆ ಕಲಮು ಕಟ್ಟುವ ಕಸುಬು ಹೇಳಿಕೊಡಲಾರಂಭಿಸಿದರು.

ಇಂದು ತೇರಗಾಂವಿನಲ್ಲಿ 225ಕ್ಕೂ ಹೆಚ್ಚು ಕುಟುಂಗಳು ಕಸಿ ಗಿಡ ತಯಾರಿಸುವ ಕಸುಬು ಮಾಡುತ್ತಿವೆ. 25–50 ರೂಪಾಯಿ ಬೆಲೆಗೆ ಸುಮಾರು ನಾಲ್ಕು ಲಕ್ಷ ಗಿಡಗಳ ಬಿಕರಿಯಾಗುತ್ತವೆ!  ಕುಶಪ್ಪನವರ ಶಿಷ್ಯರೇ ಇಂದು ಕಸಿ ಉದ್ಯಮದಲ್ಲಿ ಪ್ರತಿಸ್ಪರ್ಧಿಗಳು. ಸ್ಪರ್ಧೆಯನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿರುವುದೇ ಕುಶಪ್ಪನವರ ಹೆಚ್ಚುಗಾರಿಕೆ. ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದ ಈ ಕಾಯಕಕ್ಕೆ ಪತ್ನಿ ಹಾಗೂ ಮೂವರು ಮಕ್ಕಳು ಕೈಜೋಡಿಸಿದ್ದಾರೆ. ಈ ವರ್ಷವೂ ಹನ್ನೊಂದು ಸಾವಿರ ಗಿಡಗಳನ್ನು ತಯಾರಿಸಿದ್ದಾರೆ. ಆಪೂಸು, ಮಲ್ಲಿಕಾ, ನೀಲಂ ಜಾತಿ ಗಿಡಗಳು ಇವರಲ್ಲಿ ಲಭ್ಯ.

‘ಕಲಮಿ ಗಿಡಗಳನ್ನು ಮೂರು ವರ್ಷ ನೀರು ಕೊಟ್ಟು ಆರೈಕೆ ಮಾಡಿ ಬೆಳೆಸಿದರೆ, ನೂರು ವರ್ಷದವರೆಗೆ  ಹಣ್ಣು ಕೊಡುತ್ತವೆ. ಇಂಥ ಗಿಡ ಮತ್ಯಾವುದಿದೆ ಹೇಳ್ರೀ? ಅದಕ್ಕೆ ಫಲವತ್ತಾದ ಭೂಮಿ ಬೇಕೆಂಬುದೂ ಇಲ್ಲ, ಗುಡ್ಡದ ತಲೆ ಮೇಲೆ ನೆಟ್ಟರೂ ಬದುಕುತ್ತದೆ. ಹಣ್ಣುಗಳನ್ನು ಕೊಟ್ಟು ತಿಂದವರ ಬಾಯನ್ನು ಸಿಹಿಯಾಗಿಸುತ್ತದೆ’ ಎಂಬ ಕುಶಪ್ಪನವರ ಮಾತು ಮನದಲ್ಲಿ ಅನುರಣಿಸುತ್ತಿದೆ. ಅವರ ಸಂಪರ್ಕಕ್ಕೆ: 9980645822.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT