ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೊಂದು ಕಾರು ಕಾರಿಗೊಂದು ಊರು

Last Updated 15 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಪ್ರದೇಶದಿಂದ ಪ್ರದೇಶಕ್ಕೆ, ಊರಿನಿಂದ ಊರಿಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಒಂದೊಂದು ಅಂಶದಲ್ಲೂ ಬದಲಾವಣೆ ಸಹಜ. ಈ ಬದಲಾವಣೆ ಭಾಷೆ, ವೇಷ ಭೂಷಣ, ಆಚರಣೆಯಲ್ಲಿ ಮಾತ್ರವಲ್ಲ, ವಾಹನ ಪ್ರಪಂಚದಲ್ಲೂ ಕಾಣುತ್ತಿದೆ. ಅದರಲ್ಲೂ ಕಾರು ಗ್ರಾಹಕರ ಹಲವು ಆಯ್ಕೆಗಳು ಪ್ರಾದೇಶಿಕ  ಮಾರುಕಟ್ಟೆ ಹಿಡಿತವನ್ನು ಸೂಚಿಸುತ್ತವೆ. ಕರ್ನಾಟಕ ರಾಜ್ಯವೊಂದನ್ನೇ ತೆಗೆದುಕೊಂಡರೂ ಒಂದೊಂದು ಕಡೆ ಒಂದೊಂದು ಬಗೆಯ ಕಾರುಗಳು ಮಾರಾಟವಾಗುತ್ತವೆ. ಇದು ಅಲ್ಲಿನ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಹಿನ್ನೆಲೆಯ ಪಾಲೂ ಆಗಿದೆ.

ಭಾರತದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ, ಒಂದೇ ಭಾಷೆ ಮಾತನಾಡುವವರೆಲ್ಲರೂ ಒಂದೇ ರಾಜ್ಯದವರಾದರು. ಆದರೂ ಅವರೆಲ್ಲರ ಮಾತಾಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಭಾಷೆ ಮಾತ್ರವಲ್ಲ ಉಡುಗೆ ತೊಡುಗೆಗಳು ಬೇರೆಯಾಗಿವೆ. ಊಟ, ಅಭಿರುಚಿ, ನಡವಳಿಕೆ ಹೀಗೆ ಎಲ್ಲವೂ ಭಿನ್ನ. ಹೀಗೆಯೇ ವಾಹನ ಪ್ರಪಂಚವೂ ಇದರಿಂದ ಹೊರತಾಗಿಲ್ಲ. ದಕ್ಷಿಣದವರಂತೆ ಉತ್ತರದವರಿಲ್ಲ, ಈಶಾನ್ಯದಂತೆ ವಾಯವ್ಯದವರಿಲ್ಲ.

ವಾಹನ ಪ್ರಪಂಚದಲ್ಲಿ ಬಗೆಬಗೆಯ ಕಂಪೆನಿಯ ಕಾರುಗಳು ಈಗ ಮಾರುಕಟ್ಟೆಯಲ್ಲಿವೆ. ಆಯ್ಕೆಗಳು ಗ್ರಾಹಕನ ಕೈಯಲ್ಲಿದೆ. ಇಂಥ ಸಂದರ್ಭದಲ್ಲಿ ದೇಶದ ಯಾವುದೇ ರಾಜ್ಯಗಳನ್ನು ತೆಗೆದುಕೊಂಡರೂ ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಕಾರುಗಳು ಹೆಚ್ಚು ಮಾರಾಟವಾಗುತ್ತಿರುವ ಉದಾಹರಣೆಗಳು ಸಿಗುತ್ತವೆ. ಇದು ಕಾರಿಗಷ್ಟೇ ಮೀಸಲು ಎಂದೇನೂ ಇಲ್ಲ. ಮಾರಾಟಕ್ಕೊಳಪಡುವ ಯಾವುದೇ ಉತ್ಪನ್ನಗಳೂ ಇಂಥದ್ದೊಂದು ಮಾರುಕಟ್ಟೆ ಹಿಡಿತ ಹೊಂದಿರುವುದು ಸಹಜ. ಆದರೆ ಪ್ರದೇಶದಿಂದ ಪ್ರದೇಶಕ್ಕೆ ಚಲಿಸುವ ವಾಹನಗಳಲ್ಲೂ ಪ್ರಾದೇಶಿಕ ಹಿಡಿತವಿರುವುದು ಕುತೂಹಲ.

ವಾಹನ ಪ್ರಪಂಚದಲ್ಲಿ ಇಡೀ ಕರ್ನಾಟಕವನ್ನೇ ಒಂದು ಮಾರುಕಟ್ಟೆಯನ್ನಾಗಿ ನೋಡಿದರೆ, ಕಾರು ಮಾರಾಟ ಪ್ರತಿನಿಧಿಗಳಿಗೆ ಬೆಂಗಳೂರು ತೀರಾ ಭಿನ್ನ. ಏಕೆಂದರೆ ಮಹಾನಗರದ 2011ರ ಸೆನ್ಸಸ್‌ ಆಧರಿಸಿ ಶೇ 15.9ರ ದರದಲ್ಲಿ ಇಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ ಎಂದು ದಾಖಲೆ ಹೇಳುತ್ತದೆ. ಅದೇ ಸಂದರ್ಭದಲ್ಲಿ ವಾಹನಗಳ ಸಂಖ್ಯೆ ಶೇ 181.3ರ ದರದಲ್ಲಿ ಹೆಚ್ಚುತ್ತಲಿದೆ. ಪ್ರತಿ ಇಬ್ಬರು ಬೆಂಗಳೂರಿಗರಿಗೆ ಒಂದು ವಾಹನ ಇರುವುದಂತೂ ಖಂಡಿತ. ಹೀಗಾಗಿ ಬೆಂಗಳೂರಿಗರು ಹೊಸತನಕ್ಕೆ ಹಾತೊರೆಯುತ್ತಾರೆ. ಆದರೆ ರಾಜ್ಯದ ಇತರೆಡೆ ಈಗಾಗಲೇ ಒಂದಷ್ಟು ಮಂದಿ ಖರೀದಿಸಿ, ಪರೀಕ್ಷಿಸಿ ಅವರೆಲ್ಲರೂ ಸೈ ಎಂದ ಮೇಲೆ ಖರೀದಿಸುವವರೇ ಹೆಚ್ಚಿದ್ದಾರೆ.

ಇದು ಒಂದು ಚಿಕ್ಕ ಉದಾಹರಣೆ. ಬ್ರಾಂಡ್‌ ಆಧರಿಸಿ ಹೇಳುವುದೇ ಆದಲ್ಲಿ, ದಕ್ಷಿಣ ಕರ್ನಾಟಕದಲ್ಲಿ ತೀರಾ ವಿರಳವೆನಿಸುವ ಬಹಳಷ್ಟು ಕಾರುಗಳು ಉತ್ತರದಲ್ಲಿ ತೀರಾ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಕಾಣಿಸುತ್ತದೆ. ಉದಾಹರಣೆಗೆ ಫಿಯೆಟ್‌ ಪುಂಟೊ ಬೆಂಗಳೂರಿನಲ್ಲಿ ಅಲ್ಲಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಹಾಗೂ ಫಿಯೆಟ್‌ ಕುರಿತು ಗೊತ್ತಿರುವವರು ಖರೀದಿಸಿದ ಉದಾಹರಣೆ ಗಳಿವೆ. ಆದರೆ ಉತ್ತರ ಕರ್ನಾಟಕ ಅಂದರೆ ಹುಬ್ಬಳ್ಳಿ ಧಾರವಾಡದ ರಸ್ತೆಗಳಲ್ಲಿ ಫಿಯೆಟ್‌ ಹೇರಳವಾಗಿ ಸಿಗುತ್ತದೆ. ಇಲ್ಲಿ ಒಂದೇ ವೃತ್ತಿಯವರೇ ಖರೀದಿಸಿದ್ದಾರೆ ಎಂದೇನೂ ಅಲ್ಲ. ಆದರೆ ಬಾಯಿಂದ ಬಾಯಿಗೆ ಆಗಿರುವ ಪ್ರಚಾರ, ಅಕ್ಕಪಕ್ಕ ನೋಡಿದ ಮಂದಿ ಅದೇ ಮಾದರಿ ಕಾರುಗಳನ್ನು ಖರೀದಿಸುವುದು ಸಾಮಾನ್ಯ ಎನ್ನುವುದು ವಾಹನ ಮಾರಾಟಗಾರರ ಹೇಳಿಕೆ.

ಮತ್ತೊಂದು ಉದಾಹರಣೆ ನೀಡುವುದೇ ಆದಲ್ಲಿ ಅಗ್ಗದ ದರದಲ್ಲಿ ಪುಟ್ಟ ಕಾರು ಮಾರುತಿ ಆಲ್ಟೊ ಇದೆ. ಆದರೆ ಅದೇ ಬೆಲೆಯ ಆಸುಪಾಸಿನಲ್ಲಿ ಲಭ್ಯವಿರುವ ಡಟ್ಸನ್‌ ಗೋ ಕಾರು ದಕ್ಷಿಣದಲ್ಲಿ ಹೆಚ್ಚು ಕಾಣಸಿಗದು, ಆದರೆ ಉತ್ತರದಲ್ಲಿ ಇವುಗಳ ಸಂಖ್ಯೆ ಗುರುತಿಸುವಷ್ಟರ ಮಟ್ಟಿಗೆ ಹೆಚ್ಚಿದೆ.

ಉಳಿದಂತೆ ಆಯಾಯ ಪ್ರದೇಶಗಳ ಜನ ಹಾಗೂ ಅವರ ಕೌಟುಂಬಿಕ ವಾತಾವರಣವನ್ನು ಆಧರಿಸಿ ಕಾರು ಖರೀದಿಸುವವರ ಸಂಖ್ಯೆಯೂ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು. ಜತೆಗೆ ಟ್ರಾಫಿಕ್‌ ಸಮಸ್ಯೆ. ಹೀಗಾಗಿ ಅಲ್ಲಿ ಪುಟ್ಟ ಕಾರುಗಳನ್ನು ಜನ ಹೆಚ್ಚಾಗಿ ಅಪೇಕ್ಷಿಸುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಅಭಿಭಕ್ತ ಕುಟುಂಬಗಳೇ ಹೆಚ್ಚಿರುವುದರಿಂದ ಈ ಭಾಗದಲ್ಲಿ ಕಾರು ಖರೀದಿಸುವ ಮುನ್ನ ತಮ್ಮ ಇಡೀ ಕುಟುಂಬವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಕರಾವಳಿಯವರು ಹೆಚ್ಚು ಲೆಕ್ಕಾಚಾರ ಹಾಕುವುದರಿಂದ ತಮ್ಮ ವ್ಯವಹಾರಕ್ಕೆ ಸರಿ ಹೊಂದುವಂಥ ಕಾರು ಖರೀದಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಓಮಿನಿ ಮಾರಾಟ ಹೆಚ್ಚಾಗಿದ್ದರೆ, ನಗರದಲ್ಲಿ ವಿದೇಶಿ ಕಂಪೆನಿಗಳ ಕಾರುಗಳು ಹೆಚ್ಚಾಗಿ ಮಾರಾಟವಾಗುತ್ತವೆ ಎಂದು ಕಾರು ಮಾರಾಟದ ದಾಖಲೆಗಳು ಹೇಳುತ್ತವೆ.

ಮಾರುಕಟ್ಟೆ ವಿಂಗಡನೆ
ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಈಗಲೂ ನಂ.1. ಮಾರಾಟ ಮಳಿಗೆ ಹಾಗೂ ಸೇವಾ ಕೇಂದ್ರಗಳ ಸಂಖ್ಯೆಯಲ್ಲೂ ಇವರೇ ಅಗ್ರಗಣ್ಯರು. ಹೀಗಾಗಿ ಮಾರುತಿ ಕರ್ನಾಟಕವನ್ನು ಬೆಂಗಳೂರು ಹಾಗೂ ಹುಬ್ಬಳ್ಳಿ ಎಂದು ಎರಡು ಪ್ರತ್ಯೇಕ ಮಾರುಕಟ್ಟೆ ಎಂದು ಪರಿಗಣಿಸುತ್ತದೆ. ಆದರೆ ಉಳಿದ ವಿದೇಶಿ ಮಾಲಿಕತ್ವದ ಕಂಪೆನಿಗಳು ಉತ್ತರ –ದಕ್ಷಿಣ ಎಂಬ ಮಾರುಕಟ್ಟೆಯನ್ನು ಹೊಂದಿವೆಯಷ್ಟೇ.

ಉದಾಹರಣೆಗೆ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೊಲ್ಲಿ ಹಾಗೂ ಮತ್ತಿತರ ರಾಷ್ಟ್ರಗಳಲ್ಲಿ ನೆಲೆಸಿದವರಿದ್ದಾರೆ. ಹೀಗಾಗಿ ಅಲ್ಲಿಂದ ಹಿಂದಿರುಗಿದವರು ಅದೇ ಬ್ರ್ಯಾಂಡ್‌ನ ಕಾರು ಖರೀದಿಗೆ ಮುಂದಾಗುತ್ತಾರೆ. ಹೀಗಾಗಿ ದಕ್ಷಣ ಕನ್ನಡದಲ್ಲಿ ಷವರ್ಲೆ ಹಾಗೂ ಫೋರ್ಡ್‌ ಹೆಚ್ಚಿನ ಸಂಖ್ಯೆಯಲ್ಲಿದೆ.

ವಿಭಿನ್ನ ಹುಬ್ಬಳ್ಳಿ
ಕಾರು ಮಾರುಕಟ್ಟೆಯಲ್ಲಿ ಹುಬ್ಬಳ್ಳಿಯನ್ನು ಇಡೀ ವಾಹನ ಪ್ರಪಂಚ ಅತ್ಯಂತ ಕುತೂಹಲದಿಂದ ನೋಡುತ್ತದೆ. ಏಕೆಂದರೆ 2013ರಲ್ಲಿ ಇಡೀ ಭಾರತವೇ ಎಸ್‌ಯುವಿ ಮಾರುಕಟ್ಟೆ ಹೊರಳುತ್ತಿತ್ತು. ಎಲ್ಲಿ ನೋಡಿದರೂ ಎಸ್‌ಯುವಿಗಳ ಭರಾಟೆ. ಎಸ್‌ಯುವಿ ಕಾರುಗಳ ಮಾರಾಟ ಶೇ 1.6ರಷ್ಟು ಏರಿಕೆ ಕಂಡಿದ್ದರೆ, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಅಷ್ಟೇ ಪ್ರಮಾಣದ ಇಳಿಕೆಯೂ ದಾಖಲಾಗಿ ವಾಹನ ಪ್ರಪಂಚಕ್ಕೆ ಅಚ್ಚರಿ ಮೂಡಿಸಿತ್ತು.

ಹುಬ್ಬಳ್ಳಿಯನ್ನು 800 ಮಾರುಕಟ್ಟೆ ಎಂದು ಕರೆಯಲಾಗುತ್ತದೆ. ಅಂದರೆ ಇಲ್ಲಿ ಪ್ರತಿ ತಿಂಗಳು ಒಟ್ಟು ಮಾರಾಟವಾಗುವ ಕಾರುಗಳು 800 ಮಾತ್ರ. ಆದರೆ 2014ರ ಮಧ್ಯದಿಂದ ಈಚೆಗೆ ಇದು 1000ಕ್ಕೆ ಏರಿದೆ. ಡೀಸೆಲ್‌ ಕಾರುಗಳ ಮಾರುಕಟ್ಟೆ ಎಂದೇ ಕರೆಯಿಸಿಕೊಳ್ಳುವ ಮುಂಬೈ ಕರ್ನಾಟಕದ ಈ ಭಾಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಈಗ ಪೆಟ್ರೋಲ್‌ ಕಾರು ಖರೀದಿಗೆ ಮಂದಿ ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಸೆಡಾನ್‌ ಹಾಗೂ ಎಂಯುವಿಗಳು ಇಲ್ಲಿನ ಜನರ ಅಚ್ಚುಮೆಚ್ಚಿನ ಮಾದರಿಗಳು.

ಫೋಕ್ಸ್‌ ವ್ಯಾಗನ್‌ ವೆಂಟೊ ಹಾಗೂ ಮಾರುತಿ ಡಿಸೈರ್‌ ಕಾರು ಅತಿ ಹೆಚ್ಚು ಮಾರಾಟವಾಗುವ ಸೆಡಾನ್‌ಗಳಾದರೆ, ಆಲ್ಟೊ, ವ್ಯಾಗನ್‌ಆರ್‌, ಹ್ಯುಂಡೈ ಐ10, ಐ20 ಕಾರುಗಳನ್ನು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಬಯಸುತ್ತಾರೆ. ಮಾರುತಿ ಅರ್ಟಿಗಾ, ಮಹಿಂದ್ರಾ ಕ್ಸೈಲೊ, ಸ್ಕಾರ್ಪಿಯೊ, ಟೊಯೊಟಾ ಇನ್ನೋವಾ, ಬೊಲೆರೊಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪೆಟ್ರೋಲ್‌ ಕಾರುಗಳ ಮಾರಾಟ ಪ್ರಗತಿ ಹೆಚ್ಚಾದಂತೆ ಹೋಂಡಾ ತನ್ನ ಮಾರುಕಟ್ಟೆ ಹಿಡಿತವನ್ನು ನಿಧಾನವಾಗಿ ಹೊಂದುತ್ತಿದೆ.

ಹೈದರಾಬಾದ್‌ ಕರ್ನಾಟಕದಲ್ಲಿ ವಿಸ್ತರಣೆ ಇಲ್ಲ
ಹೈದರಾಬಾದ್ ಕರ್ನಾಟಕದಲ್ಲಿ ಪ್ರಮುಖ ಕಾರು ಮಾರುಕಟ್ಟೆ ಬಳ್ಳಾರಿ ಹಾಗೂ ಹೊಸಪೇಟೆ. ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದ ಕಾಲಘಟ್ಟದಲ್ಲಿ ವಿಲಾಸಿ ಕಾರುಗಳೇ ಹೆಚ್ಚು ಮಾರಾಟಗೊಂಡವು. ಬಹಳಷ್ಟು ಗಣಿಧಣಿಗಳು ಇಂಥ ವಿಲಾಸಿ ಕಾರುಗಳ ಶೋರೂಂಗಳನ್ನು ತೆರೆದು ಅಲ್ಲಿಯೂ ಲಾಭ ಹುಡುಕುವ ಪ್ರಯತ್ನ ಮಾಡಿದರು. ಆದರೆ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ತಡೆ ಬಿದ್ದ ನಂತರ ಅಲ್ಲಿ ಕಾರುಗಳ ಮಾರಾಟವೂ ಏರಿದಷ್ಟೇ ವೇಗದಲ್ಲಿ ಕುಸಿತ ಕಂಡಿತು. ಹೀಗಾಗಿ ಅಲ್ಲಿ ಈಗ ಸಾಧಾರಣ ಭಾರತೀಯ ಕಾರುಗಳ ಮಾರಾಟವೇ ಹೆಚ್ಚು. ಇರುವ ವಿಲಾಸಿಗಳು ಸೆಕೆಂಡ್ ಹ್ಯಾಂಡ್‌ನಲ್ಲಿ ಮಾರಾಟವಾಗುತ್ತಿ ರುವುದೂ ಇದೆ.

ಹೊರರಾಜ್ಯಗಳಿಂದ ಬರುತ್ತಿರುವ ವಿಲಾಸಿ ಕಾರುಗಳು
ರಾಜ್ಯದಲ್ಲಿ ರೂ10 ಲಕ್ಷದೊಳಗಿನ ಕಾರುಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಅಷ್ಟೇ ಪ್ರಮಾಣದಲ್ಲಿ ವಿಲಾಸಿ ಕಾರುಗಳ ಮಾರುಕಟ್ಟೆಯೂ ದೊಡ್ಡದಾಗಿದೆ. ಆದರೆ ಕಾರು ದುಬಾರಿಯದ್ದೇ ಬೇಕೆನ್ನುವ ಮಂದಿ, ರೋಡ್ ಟ್ಯಾಕ್ಸ್‌ನಲ್ಲಿ ಮಾತ್ರ ಚೌಕಾಸಿ ಮಾಡುತ್ತಾರೆ. ಹೀಗಾಗಿ ಉತ್ತರ ಕರ್ನಾಟಕದವರು ಮಹಾರಾಷ್ಟ್ರದ ಕಾನಾಪುರದಿಂದ ಹಾಗೂ ದಕ್ಷಿಣ ಕರ್ನಾಟಕದವರು ಪುದುಚೆರಿಯಿಂದ ಕಾರು ಖರೀದಿಸುತ್ತಿದ್ದಾರೆ.

ಬಿಎಂಡಬ್ಲೂ, ಮರ್ಸಿಡೀಸ್‌, ಆಡಿ, ಜಾಗ್ವರ್‌ ಲ್ಯಾಂಡ್‌ರೋವರ್‌, ಆಸ್ಟನ್‌ ಮಾರ್ಟಿನ್‌ ಹೀಗೆ ದುಬಾರಿ ಮೊತ್ತದ ಕಾರುಗಳು ಕರ್ನಾಟಕಕ್ಕಿಂತ ಹೊರಗೆ ನೋಂದಣಿಯಾಗುವುದೇ ಹೆಚ್ಚು. ಇದಕ್ಕೆ ಕಾರಣವೂ ಇದೆ. ಕರ್ನಾಟಕದಲ್ಲಿ ರೂ5ಲಕ್ಷದೊಳಗಿನ ಕಾರುಗಳಿಗೆ ಶೇ 14ರಷ್ಟು ರಸ್ತೆ ತೆರಿಗೆ ವಿಧಿಸಿ ಬಂದ ಮೊತ್ತಕ್ಕೆ ಶೇ 11ರಷ್ಟು ಸೆಸ್‌ ಹಾಕಲಾಗುತ್ತದೆ. ಹಾಗೆಯೇ ರೂ5ರಿಂದ 10 ಲಕ್ಷದೊಳಗಿನ ಕಾರುಗಳಿಗೆ ಶೇ 15 ತೆರಿಗೆ ಮತ್ತು ಶೇ 11 ಸೆಸ್‌, ಇನ್ನು ರೂ10ಲಕ್ಷ ಮೇಲ್ಪಟ್ಟ ಕಾರುಗಳಿಗೆ ಶೇ 16 ತೆರಿಗೆ ಮತ್ತು ಶೇ 11ರಷ್ಟು ಸೆಸ್‌ ವಿಧಿಸಲಾಗುತ್ತಿದೆ. ಈ ಹೊರೆಯಿಂದ ತಪ್ಪಿಸಿಕೊಳ್ಳಲು ಹೊರ ರಾಜ್ಯಗಳ ಶೋರೂಂಗಳಿಗೆ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚು. ಇದರಿಂದಾಗಿ ಆ ರಾಜ್ಯಗಳಲ್ಲಿ ವಿಲಾಸಿ ಕಾರುಗಳ ಮಾರುಕಟ್ಟೆ ದೊಡ್ಡದಿದೆ.

ಕಾರು ಖರೀದಿಸುವವರ ಲೆಕ್ಕಾಚಾರ
ಇನ್ನು ಕಾರು ಖರೀದಿ ಎಂದರೆ ಕೆಲವರಿಗೆ ಜೀವಮಾನದ ಸಾಧನೆ. ಇನ್ನೂ ಕೆಲವರಿಗೆ ಅಗತ್ಯ. ಹೀಗಾಗಿ ಇಲ್ಲಿ ಆಯಾ ಪ್ರದೇಶದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿರುತ್ತದೆ. ಕೈಯಲ್ಲಿರುವ ಕಾಸಿಗೆ ಕಾರು ಸಿಗುವಂತಿರಬೇಕು ಎಂಬುದು ಕೆಲವರ ಅಪೇಕ್ಷೆ. ಇನ್ನೂ ಕೆಲವರಿಗೆ ಉತ್ತಮ ಬ್ರ್ಯಾಂಡ್‌ನದ್ದೇ ಕಾರು ಬೇಕು ಎಂಬ ಆಸೆ. ಬೆಂಗಳೂರಿಗರು ಹೆಚ್ಚಾಗಿ ಆಟೊಗೇರ್‌ ಹಾಗೂ ಪೆಟ್ರೋಲ್‌ ಕಾರನ್ನು ಬಯಸಿದರೆ, ಇತರೆಡೆ ಡೀಸೆಲ್‌ನತ್ತ ಒಲವು ಹೆಚ್ಚು.

ಉದಾಹರಣೆಗೆ ದೆಹಲಿ ದೇಶದಲ್ಲೇ ಅತಿ ಹೆಚ್ಚು ಕಾರು ಹೊಂದಿರುವ ನಗರ. ದೆಹಲಿ ಮಾರುಕಟ್ಟೆ ಸಂಪೂರ್ಣವಾಗಿ ಮಾರುತಿ ಹಾಗೂ ಹೊಂಡಾ ಹಿಡಿತದಲ್ಲಿದೆ. ದೆಹಲಿಯಲ್ಲಿ ಮಂದಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಸಮಾಜದಲ್ಲಿನ ಸ್ಥಾನಮಾನ ಬಹಳ ಅಗತ್ಯ. ಅದರಂತೆಯೇ ಮುಂಬೈ ಕೂಡ ವಿಲಾಸಿ ಕಾರುಗಳ ನಗರ. ಇಲ್ಲಿ ತಕ್ಷಣದ ಅಗತ್ಯಕ್ಕೆ ಟ್ಯಾಕ್ಸಿ ಬಳಸುತ್ತಾರೆ. ಆದರೆ ಸ್ನೇಹಿತರ ಮನೆ, ಮದುವೆ, ಪಾರ್ಟಿಗಳಿಗೆ ಹೋಗಲು ವಿಲಾಸಿ ಕಾರುಗಳೇ ಬೇಕು.

ಭಾರತ ವೈವಿಧ್ಯಮಯ ರಾಷ್ಟ್ರ ಎನ್ನುವುದು ವಾಹನಗಳ ಖರೀದಿಯಲ್ಲೂ ದೃಢಪಟ್ಟಿದೆ. ಪ್ರದೇಶದಿಂದ ಪ್ರದೇಶಕ್ಕೆ, ಊರಿನಿಂದ ಊರಿಗೆ, ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಎಲ್ಲವೂ ಬದಲಾಗುತ್ತಿದೆ. ಹೀಗಾಗಿ ಎಲ್ಲಾ ಕಾರು ಕಂಪೆನಿಗಳೂ ತಮ್ಮ ಮಾರುಕಟ್ಟೆ ಪ್ರದೇಶದಲ್ಲಿ ಹಿಡಿತ ಸಾಧಿಸಲು ಪೈಪೋಟಿ ನಡೆಸುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT