ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್ ಪುಂಡಾಟಿಕೆ ಖಂಡನೆ

Last Updated 29 ಜುಲೈ 2014, 20:34 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಯಳ್ಳೂರ ಗ್ರಾಮದಲ್ಲಿ ಮಹಾರಾಷ್ಟ್ರ ರಾಜ್ಯದ ನಾಮಫಲಕ ತೆರವಿನ ವೇಳೆ ಮಹಾ­ರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಮಾಡಿದ ಪುಂಡಾಟಿಕೆಯನ್ನು ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಂಗಳ­ವಾರ ಪ್ರತಿಭಟನೆ ಮಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.­­ದೊರೆಸ್ವಾಮಿ ಅವರ ನೇತೃ­ತ್ವ­­ದಲ್ಲಿ ಪ್ರತಿಭಟನೆ ಮಾಡಿದ ಕನ್ನಡ ವೇದಿಕೆ ಸದಸ್ಯರು, ‘ಎಂಇಎಸ್ ಕಾರ್ಯ­ಕ­ರ್ತರು, ಶಿವಸೇನೆ ಮುಖಂಡರು ಹಾಗೂ ಅವರ ಬೆಂಬಲಕ್ಕೆ ನಿಂತಿರುವ ರಾಜ­ಕಾ­ರಣಿಗಳನ್ನು ಕೂಡಲೇ ಬಂಧಿಸ­ಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಎಚ್‌.­ಎಸ್.­­ದೊರೆ­­ಸ್ವಾಮಿ, ‘ಯಳ್ಳೂರ ಗ್ರಾಮ­ದ­ಲ್ಲಿದ್ದ ಅನಧಿಕೃತ ನಾಮಫಲಕ ಹೈಕೋರ್ಟ್‌ ಆದೇಶದಂತೆ ತೆರವು­ಗೊ­ಳಿ­ಸ­­­ಲಾಗಿತ್ತು. ಆದರೆ, ಎಂಇಎಸ್‌ ಕಾರ್ಯ­­ಕರ್ತರು ಪುನಃ ನಾಮಫಲಕ­ಗ­ಳನ್ನು ಹಾಕಿದ್ದಾರೆ. ಅಲ್ಲದೆ, ಪೊಲೀ­ಸರು ಮತ್ತು ಜನಸಾಮಾನ್ಯರ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು­ಮಾಡಿದ್ದಾರೆ. ಹೀಗೆ ನ್ಯಾಯಾ­ಲ­ಯದ ಆದೇಶ ಉಲ್ಲಂಘನೆ ಮಾಡಿದ­ವ­­ರನ್ನು ಗೂಂಡಾ ಕಾಯ್ದೆಯಡಿ ಬಂಧಿ­ಸ­ಬೇಕು’ ಎಂದು ಒತ್ತಾಯಿಸಿದರು.
‘ಶಿವಸೇನೆ ಮತ್ತು ಎಂಇಎಸ್‌ ಕಾರ್ಯ­­­­­­ಕರ್ತರ ಪುಂಡಾಟಿಕೆ ಇಂದು ನಿನ್ನೆ­ಯ­­ದಲ್ಲ. ಅವರನ್ನು ಸರಿದಾರಿಗೆ ತರಲು ಕನ್ನಡಿಗರೆಲ್ಲ ಒಂದಾಗಬೇಕಿದೆ. ಸರ್ಕಾರ ಬೆಳಗಾವಿ ಸುತ್ತಮುತ್ತಲ ಪ್ರದೇ­ಶ­­­ಗಳಲ್ಲಿ ಕಾರ್ಖಾನೆಗಳನ್ನು ತೆರೆದು, ಅಲ್ಲಿ ಕನ್ನಡಿ­ಗ­­ರಿಗೆ ಉದ್ಯೋಗಾ­ವ­ಕಾಶ ನೀಡ­ಬೇಕು. ಆ ಭಾಗದಲ್ಲಿ ಕನ್ನಡಿ­ಗರ ಸಂಖ್ಯೆ ಹೆಚ್ಚಾ­ದರೆ ಪುಂಡರು ಸುಮ್ಮನಾ­ಗು­ತ್ತಾರೆ’ ಎಂದರು.

ಪ್ರತಿಕೃತಿ ದಹನ: ಬೆಳಗಾವಿ ಶಾಸಕ ಸಂಭಾ­ಜಿ­­ರಾವ್ ಪಾಟೀಲ್, ಎಂಇಎಸ್ ಮತ್ತು ಶಿವಸೇನೆ ಮುಖಂಡರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕ್ರಾಂತಿ­ವೀರ ಸಂಗೊಳ್ಳಿ ರಾಯಣ್ಣ ಕನ್ನಡ ಸೇನೆ ಕಾರ್ಯಕರ್ತರು, ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರನ್ನು ಗಡಿ­ಪಾರು ಮಾಡಬೇಕೆಂದರು.

ಸೇನೆಯ ಅಧ್ಯಕ್ಷ ಎಸ್.ಡಿ. ಚಿಕ್ಕಣ್ಣ, ‘ಸಂಭಾಜಿ ಪಾಟೀಲ್ ಅವರು ಕರ್ನಾ­ಟ­ಕದ ಶಾಸಕರಾಗಿದ್ದು, ಇಲ್ಲಿನ ಸರ್ಕಾ­ರದ ಎಲ್ಲ ಸೌಲಭ್ಯಗಳನ್ನು ಪಡೆದು­ಕೊಳ್ಳು­ತ್ತಿ­ದ್ದಾರೆ. ಆದರೆ, ಮಹಾರಾಷ್ಟ್ರ ಗೂಂಡಾ­ಗಳ ಪರವಾಗಿ ಶಾಂತಿಗೆ ಭಂಗ ತರುತ್ತಿ­ದ್ದಾರೆ. ಅವರ ಬೆಂಬಲದಿಂದಾಗಿ ಬೆಳ­ಗಾವಿ ಮತ್ತು ಆ ತಾಲೂಕಿನ ಗಡಿ­ಭಾಗ­ದಲ್ಲಿ ಶಿವಸೇನೆ ಹಾಗೂ ಎಂಇಎಸ್ ಕಾರ್ಯ­­ಕರ್ತರ ಪುಂಡಾಟಿಕೆ ಹೆಚ್ಚಿದೆ. ಹಗಲಲ್ಲೇ ಮಾರಕಾಸ್ತ್ರಗಳನ್ನು ಹಿಡಿದು ಹಲ್ಲೆಗೆ ಮುಂದಾಗುತ್ತಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ­ಯಾ­ಗಿದೆ’ ಎಂದು ದೂರಿದರು.‘ಶಾಸಕ ಸಂಭಾಜಿ ಪಾಟೀಲ್ ಶಾಸಕತ್ವ ರದ್ದುಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT