ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌: ಈ ವರ್ಷ ಶುಲ್ಕ ಹೆಚ್ಚಳ ಇಲ್ಲ

ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಸೂತ್ರ
Last Updated 22 ಏಪ್ರಿಲ್ 2014, 20:12 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌­­­ಗಳಿಗೆ ಹಾಲಿ ಇರುವ ಶುಲ್ಕ ಪದ್ಧತಿಯೇ 2014–15ನೇ ಸಾಲಿಗೂ ಮುಂದುವರಿಯಲಿದೆ. ಆದರೆ, ಈ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಮುಂದಿನ ವರ್ಷದಿಂದ ಹೆಚ್ಚಿನ ಶುಲ್ಕ ಭರಿಸ­ಬೇಕಾಗುತ್ತದೆ.

ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶ ಪಾಂಡೆ ಅವರು ಮಂಗಳವಾರ ಅನು­ದಾನ­ರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒಕ್ಕೂಟದ ಪ್ರತಿನಿಧಿ­ಗಳೊಂದಿಗೆ ನಡೆಸಿದ ಸಭೆಯಲ್ಲಿ ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಸೂತ್ರಕ್ಕೆ ಒಪ್ಪಲಾಯಿತು.

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 15 ವಿದ್ಯಾರ್ಥಿಗಳಿಗೆ ಒಬ್ಬ ಬೋಧಕ ಇರಬೇಕು ಎಂಬ ಷರತ್ತು ಇದೆ. ಇದನ್ನು ಸಡಿಲಿಸಿ 1:20ಕ್ಕೆ ಹೆಚ್ಚಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಒಂದೇ ಶುಲ್ಕ: ಪ್ರಸ್ತುತ ಎಂಜಿನಿಯ­ರಿಂಗ್‌ನಲ್ಲಿ ಎರಡು ರೀತಿಯ ಶುಲ್ಕ ಪದ್ಧತಿ ಇದೆ. ಇದನ್ನು ಒಟ್ಟುಗೂಡಿಸಿ ಒಂದೇ ಶುಲ್ಕವನ್ನು ನಿಗದಿಪಡಿಸ­ಲಾಗು­ತ್ತದೆ ಎಂದು ಗೊತ್ತಾಗಿದೆ.

ಈಗ ಸರ್ಕಾರಿ ಕೋಟಾ ಸೀಟಿಗೆ ₨41,590 ಶುಲ್ಕ ಪಡೆಯುವ ಖಾಸಗಿ ಕಾಲೇಜುಗಳು ಕಾಮೆಡ್‌– ಕೆ ಕೋಟಾ ಸೀಟಿಗೆ ₨1.10 ಲಕ್ಷ ಶುಲ್ಕ ಪಡೆಯುತ್ತಿವೆ.

ಅದೇ ರೀತಿ ಸರ್ಕಾರಿ ಕೋಟಾ ಸೀಟಿಗೆ ₨38,090 ಶುಲ್ಕ ಪಡೆಯುವ ಖಾಸಗಿ ಕಾಲೇಜುಗಳು ಆಡಳಿತ ಮಂಡಳಿ ಕೋಟಾ ಸೀಟುಗಳಿಗೆ ₨1.37 ಲಕ್ಷ ಶುಲ್ಕ ವಸೂಲಿ ಮಾಡುತ್ತಿವೆ.

ಇದರ ಬದಲು ಸರ್ಕಾರಿ ಕೋಟಾದ ಎಲ್ಲ ಸೀಟುಗಳಿಗೆ ₨41,590 ನಿಗದಿ ಮಾಡುವ ಸಾಧ್ಯತೆ ಇದೆ. ಹಾಗೆಯೇ ಕಾಮೆಡ್‌ – ಕೆ ಕೋಟಾ ಸೀಟುಗಳಿಗೆ ₨1.20 ಅಥವಾ ₨1.25 ಲಕ್ಷ ಶುಲ್ಕ ನಿಗದಿಯಾಗುವ ಸಾಧ್ಯತೆಗಳಿವೆ.

ಮುಂದೇನು?: ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಒಂದೆರಡು ದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮುಂದಿನ ವರ್ಷ ಶುಲ್ಕ ಹೆಚ್ಚಳ ಮಾಡುವ ಬಗ್ಗೆ ಸ್ಪಷ್ಟ ಭರವಸೆ ಪಡೆಯಲಿದ್ದಾರೆ.

ಇದಾದ ನಂತರ ಒಕ್ಕೂಟದ ಸದಸ್ಯ ಕಾಲೇಜುಗಳ ಪ್ರತಿನಿಧಿಗಳಿಗೂ ಈ ವಿಷಯವನ್ನು ತಿಳಿಸಲಿದ್ದಾರೆ. ಹಾಲಿ ಇರುವ ಶುಲ್ಕವನ್ನು ಮುಂದುವರಿಸಲು ಒಪ್ಪಿಗೆ ಸೂಚಿಸಿ ಪದಾಧಿಕಾರಿಗಳು ಸರ್ಕಾರಕ್ಕೆ ಲಿಖಿತ ಪತ್ರ ನೀಡಲಿವೆ.
ನಂತರ ಸರ್ಕಾರವು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಪರಸ್ಪರ ಮಾತುಕತೆ ಮೂಲಕ ಶುಲ್ಕ ನಿಗದಿ ಮಾಡುವುದಾಗಿ ತಿಳಿಸಲಿದೆ ಎಂದು ಗೊತ್ತಾಗಿದೆ.

ಬಿಗಿನಿಲುವು ಸಡಿಲ: ಯಾವುದೇ ಕಾರಣಕ್ಕೂ ಈ ವರ್ಷ ಶುಲ್ಕ ಹೆಚ್ಚಳ ಮಾಡುವುದಿಲ್ಲ. ಅಗತ್ಯಬಿದ್ದರೆ 2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸುವ ನಿಲುವನ್ನು ಸರ್ಕಾರ ತಳೆದಿದೆ.

ಈ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜು ಗಳು ಬಿಗಿಪಟ್ಟು ಸಡಿಲಿಸಿವೆ. ಒಂದು ವಾರದಲ್ಲಿ ವಿವಾದಕ್ಕೆ ತೆರೆ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರುವರಿ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿ ಇರುವ ಶುಲ್ಕ ಪದ್ಧತಿಯನ್ನೇ ಮುಂದುವರಿಸಲು ಖಾಸಗಿ ಕಾಲೇಜುಗಳು ಒಪ್ಪಿಕೊಂಡಿದ್ದವು.

ಆದರೆ, ಇದಾದ ಮೂರೇ ದಿನದಲ್ಲಿ ಖಾಸಗಿ ಕಾಲೇಜುಗಳು ರಾಗ ಬದಲಿಸುವ ಮೂಲಕ ಶುಲ್ಕ ಹೆಚ್ಚಳಕ್ಕೆ ಒತ್ತಡ ಹೇರುತ್ತಿವೆ.

ಶುಲ್ಕ ಏರಿಸಿದರೆ ಮಾತಿಗೆ ತಪ್ಪಿದಂತಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಹೆಚ್ಚಳಕ್ಕೆ ಒಪ್ಪುತ್ತಿಲ್ಲ. ಖಾಸಗಿ ಕಾಲೇಜುಗಳೂ ಹಿಂದೆ ಸರಿಯಲು ಸಿದ್ಧವಿಲ್ಲ. ಹೀಗಾಗಿ ಇಬ್ಬರಿಗೂ ಒಪ್ಪಿಗೆಯಾಗುವ ಸೂತ್ರವನ್ನು ರೂಪಿಸಲಾಯಿತು ಎಂದು ಗೊತ್ತಾಗಿದೆ.

ಅಪೂರ್ಣ: ಮಂಗಳವಾರ ನಡೆದ ಮಾತುಕತೆ ಅಪೂರ್ಣವಾಗಿದೆ.

ಮತ್ತೊಮ್ಮೆ ಮಾತುಕತೆ ನಡೆಯಲಿದೆ ಎಂದು ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿ ಎಂ.ಕೆ.ಪಾಂಡುರಂಗಶೆಟ್ಟಿ ತಿಳಿಸಿದರು.

‘ವಿವರವಾಗಿ ಚರ್ಚೆಯಾಗಿದೆ. ಆದರೆ, ಯಾವುದೇ ನಿರ್ಧಾರವಾಗಿಲ್ಲ. ಆಡಳಿತ ಮಂಡಳಿಯವರು ತಮ್ಮ ನಿಲುವನ್ನು 2–3 ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ’ ಎಂದು ಸಚಿವ ಆರ್‌.ವಿ.ದೇಶಪಾಂಡೆ ಸುದ್ದಿಗಾರರಿಗೆ ತಿಳಿಸಿದರು.

2006ರ ಕಾಯ್ದೆ ಪ್ರಕಾರ ಶುಲ್ಕ ನಿಗದಿ ಮಾಡಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ 13 ಖಾಸಗಿ ಕಾಲೇಜುಗಳು ಹೈಕೋರ್ಟ್‌ ಮೆಟ್ಟಿಲೇರಿವೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ತಿಂಗಳ 30ರ ಒಳಗೆ ತೀರ್ಮಾನ ತೆಗೆದು ಕೊಳ್ಳುವಂತೆ  ಸರ್ಕಾರಕ್ಕೆ  ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT