ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್‌ಗಳ ಸಮ್ಮೇಳನಕ್ಕೆ ಚಾಲನೆ

Last Updated 30 ಅಕ್ಟೋಬರ್ 2014, 19:38 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಆಡಳಿತ, ಎಲೆಕ್ಟ್ರಾನಿಕ್ಸ್‌, ವಿಮಾನ ತಯಾರಿಕಾ ಉದ್ದಿಮೆಗಳ ಅಭಿವೃದ್ಧಿ ಮತ್ತು ಆಮದು ಪರ್ಯಾಯ ಕಾರ್ಯತಂತ್ರದಲ್ಲಿ ಬದಲಾವಣೆಯಾಗದಿದ್ದರೆ ಈ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಖ್ಯಾತ ವಿಜ್ಞಾನಿ, ಭೌತಿಕ ಸಂಶೋಧನಾ ಪ್ರಯೋಗಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಯು.ಆರ್‌. ರಾವ್‌ ಅಭಿಪ್ರಾಯಪಟ್ಟರು.

ಭಾರತೀಯ ರಾಷ್ಟ್ರೀಯ ಎಂಜಿನಿಯ­ರಿಂಗ್‌ ಅಕಾಡೆಮಿ (ಐಎನ್‌ಎಇ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜಂಟಿಯಾಗಿ ನಗರದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಎಂಜಿನಿಯರ್‌ಗಳ ಸಮ್ಮೇಳನ–2014’ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು, ಉತ್ಪಾದನಾ ಕ್ಷೇತ್ರ, ರಕ್ಷಣಾ ಉದ್ಯಮದ ಕಡೆಗಣನೆ, ಕೃಷಿ ಕ್ಷೇತ್ರದ ದುರ್ಬಲ ನಿರ್ವಹಣೆ, ಆಮದಿನ ಮೇಲೆಯೇ ಹೆಚ್ಚು ಅವಲಂಬನೆಯಿಂದಾಗಿ ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿ ಕುಂಠಿತವಾಯಿತು ಎಂದರು.

ತಮ್ಮ ಭಾಷಣದುದ್ದಕ್ಕೂ ಭಾರತ­ಮತ್ತು ಚೀನಾ ನಡುವೆ ಹೋಲಿಕೆ ಮಾಡಿದ ಅವರು, ದೇಶ ಯಾವ ಯಾವ ಕ್ಷೇತ್ರಗಳಲ್ಲಿ ಹಿಂದೆ ಬಿದ್ದಿದೆ ಎಂಬುದನ್ನು ಅಂಕಿ ಸಂಖ್ಯೆಗಳ ಸಮೇತ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್‌, ಗುಡ್ಡಗಾಡು ಪ್ರದೇಶಗಳ ವಿಷಯದಲ್ಲಿ ವಿಜ್ಞಾನ ಕ್ಷೇತ್ರ ಹೆಚ್ಚಿನ ಪಾತ್ರ ವಹಿಸುವ ಅಗತ್ಯವಿದೆ. ಈ ಪ್ರದೇಶಗಳಲ್ಲಿ ನಡೆಯಬಹುದಾದ ನೈಸರ್ಗಿಕ ವಿಪತ್ತು­ಗಳ ಸಂದರ್ಭದಲ್ಲಿ ಮುಂಚಿತವಾಗಿಯೇ ಎಚ್ಚರಿಕೆ ರವಾನಿಸಲು ಹಾಗೂ ದುರಂತದ ಸಂದರ್ಭದಲ್ಲಿ ಸವಾಲು­ಗಳನ್ನು ಎದುರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವಂತಾಗಬೇಕು ಎಂದರು.

ಇಸ್ರೊ ಈಗಾಗಲೇ ಸಂವಹನ, ಸಂಚಾರ ಮಾರ್ಗದರ್ಶಕ  ವ್ಯವಸ್ಥೆಗೆ ಸಂಬಂಧಿಸಿದ  25 ಉಪಗ್ರಹಗಳನ್ನು ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ಮತ್ತು ಜಾಗತಿಕ ತಾಪಮಾನ ಅಧ್ಯಯನ ನಡೆಸುವಂತಹ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ಎಂದರು.

ಐಎನ್‌ಎಇ ಅಧ್ಯಕ್ಷ ಡಾ. ಬಾಲ್‌ದೇವ್‌ ರಾಜ್‌ ಮಾತನಾಡಿ, ‘ಪವನ ವಿದ್ಯುತ್‌ ತಂತ್ರಜ್ಞಾನ ನಮ್ಮಲ್ಲಿಲ್ಲ. ಇದಕ್ಕಾಗಿ ಬೇರೆ ದೇಶಗಳನ್ನೇ ಅವಲಂಬಿಸ­­ಬೇಕಾಗಿದೆ. ಈ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕೆಲಸ ಆಗಬೇಕಿದೆ’ ಎಂದರು. ಅಕಾಡೆಮಿಯು ‘ಡಿಜಟಲ್‌ ಜ್ಞಾನ ಕೇಂದ್ರ’ವನ್ನು ಆರಂಭಿಸಿದೆ. ಡಿಜಿಟಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ­ಗಳನ್ನು ಸಂಗ್ರಹಿಸಿ ಜನರಿಗೆ ತಲುಪಿಸುವ ಪ್ರಯತ್ನ ಇದು ಎಂದರು.

ಮೂರು ದಿನಗಳ ಸಮ್ಮೇಳನ
ಗುರುವಾರ ಆರಂಭವಾಗಿರುವ ಸಮ್ಮೇಳನವು ಶನಿವಾರದವರೆಗೆ ನಡೆಯಲಿದೆ. ಇದು ಎರಡನೇ ವರ್ಷದ ಸಮ್ಮೇಳನ­ವಾಗಿದ್ದು, ‘ಗುಡ್ಡಗಾಡು ಪ್ರಾಂತ್ಯ­­ಗಳಿಗಾಗಿ ತಂತ್ರಜ್ಞಾನ’ ಮತ್ತು ‘ಬಾಹ್ಯಾ­ಕಾಶ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು’ ಎಂಬ ವಿಷಯಗಳ ಮೇಲೆ ಚರ್ಚೆ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT