ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ.ರೋಡ್ ಟು ಕಲಾಕ್ಷೇತ್ರ ವಯಾ ಒಂದೇ ಸಿಗ್ನಲ್!

ಶಾರ್ಟ್‌ ಕಟ್‌ -2
ಅಕ್ಷರ ಗಾತ್ರ

ಒಮ್ಮೆ ಹೀಗಾಯಿತು. ರವೀಂದ್ರ ಕಲಾ­ಕ್ಷೇತ್ರ­ದಲ್ಲಿ ಸಿದ್ಧಲಿಂಗಯ್ಯನವರ ‘ಊರು ಕೇರಿ’ ಆತ್ಮಕಥನದ ರಂಗ­ರೂಪದ ನೂರನೇ ಪ್ರದರ್ಶನ. ಸಂಜೆ 7ಕ್ಕೆ ಆರಂಭವಾಗಲಿದ್ದ ಪ್ರದ­ರ್ಶನ­ವದು.

ಯಾವುದೋ ಕೆಲಸದ ಮೇಲೆ ಎಂ.ಜಿ ರಸ್ತೆಗೆ ಬಂದಿದ್ದೆ (ಅಂತಹ ಘನ ಕೆಲಸ­ವೇನೂ ಅಲ್ಲ. ಆಗ ನಾನಿನ್ನೂ ಎಂ.ಎ ವಿದ್ಯಾರ್ಥಿ). ಬ್ರಿಗೇಡ್ ರಸ್ತೆಯ ಕೆಎಫ್‌ಸಿ­ಯಲ್ಲಿ ಕುಳಿತು ಕೆಂಟುಕಿ ಚಿಕನ್ ಮೆಲ್ಲುವ ಸವಿಯಲ್ಲಿ ಸಮಯ ಹೋಗಿದ್ದೇ ತಿಳಿದಿಲ್ಲ. ಸಂಜೆ ಅದಾಗಲೇ 6.45 ದಾಟಿದೆ.
ಕಲಾಕ್ಷೇತ್ರದ ಆಸನಗಳಲ್ಲಿ ಆಸೀನರಾಗಿದ್ದ ಗೆಳೆಯರು ಕರೆ ಮಾಡಿ, ‘ಲೋ ನೀನ್ ಬರ್ತಿಯೋ ಇಲ್ವೋ ಅಂತ ಹೇಳು. ಎಲ್ಲಾ ಸೀಟ್‌ಗಳು ತುಂಬೋ­ಗಿವೆ. ಇನ್ನೂ ನಿಂಗೆ ಅಂತ ಸೀಟ್ ಹಿಡ್ಕೊಂಡ್ ಇರೋಕಾಗಲ್ಲ’ ಎಂದು ರೇಗಾಡತೊ­ಡ­ಗಿದರು.

ಕೆಎಫ್‌ಸಿಯಿಂದ ಹೊರಬಿದ್ದು ಶೃಂಗಾರ್ ಕಾಂಪ್ಲೆಕ್ಸ್‌ನಲ್ಲಿ ಪಾರ್ಕ್‌ ಮಾಡಿದ್ದ ಬೈಕ್ ಹತ್ತುವಷ್ಟರಲ್ಲಿ ಮತ್ತೆ­ ಎರಡು ನಿಮಿಷ ಕಳೆದಿತ್ತು. ಅಂತೂ ಶರವೇಗ­ದಲ್ಲಿ ಬೈಕನ್ನು ಅನಿಲ್ ಕುಂಬ್ಳೆ ವೃತ್ತ­ದೆ­ಡೆಗೆ ತಿರುಗಿಸಿದೆ. ಶರವೇಗ ಎಲ್ಲಿ ಬಂತು, ಅನಿಲ್ ಕುಂಬ್ಳೆ ವೃತ್ತ­ದಿಂದ ‘ಟೈಮ್ಸ್‌ ಆಫ್ ಇಂಡಿಯಾ’ ಕಟ್ಟಡದವರೆಗೂ ವಾಹನ­ಗಳು ಒಂದನ್ನೊಂ­­ದನ್ನು ಮುದ್ದಿ­ಸುತ್ತಾ ತೆವಳುತ್ತಿವೆ. ಸಾಮಾನ್ಯ ಸ್ಥಿತಿ­ಯಲ್ಲೇ ಅನಿಲ್ ಕುಂಬ್ಳೆ ವೃತ್ತದ ಸಿಗ್ನಲ್ ದಾಟಲು ಈ ವಾಹನ ದಟ್ಟಣೆ­ಯಲ್ಲಿ ಇನ್ನು ಮೂರು ನಿಮಿಷ ಕೊಲ್ಲಬೇಕು.

ಆನಂತರ ಕಸ್ತೂರಬಾ ರಸ್ತೆ ಪ್ರವೇಶಿಸಲು ಮೂರು ನಿಮಿಷದ ಸಿಗ್ನಲ್‌ ಅನ್ನು ಕನಿಷ್ಠ ಎರಡು ಬಾರಿಯಾದರೂ ದಾಟಬೇಕು. ಆಮೇಲೆ ಕಿಕ್ಕಿರಿದು ತುಂಬಿರುವ ಕಸ್ತೂರಬಾ ರಸ್ತೆಯಲ್ಲಿ ವಿಠ್ಠಲ್ ಮಲ್ಯ ರಸ್ತೆಯವ­ರೆಗೂ ಸಾಗಿ ಮತ್ತೊಂದು ಸಿಗ್ನಲ್ ದಾಟಬೇಕು.

ಅಲ್ಲಿಗೇ ಮುಗಿಯಿತೆ? ಒತ್ತರಿಸಿ ಬರುತ್ತಿರುವ ವಾಹನಗಳ ಮಧ್ಯೆ ನುಗ್ಗಿ ರಾಜಾರಾಮ್ ಮೋಹನ್‌ ರಾಯ್ ರೋಡಿಗೆ ಬರಬೇಕು. ಆನಂತರ ಹಡ್ಸನ್ ವೃತ್ತದ ಸಿಗ್ನಲ್‌ನಲ್ಲಿ ಮೂರು ನಿಮಿಷ ಕಳೆದು, ಕಾರ್ಪೊರೇಷನ್ ವೃತ್ತದಲ್ಲಿ ಎರಡು ನಿಮಿ­ಷದ ಸಿಗ್ನಲ್‌ ದಾಟಿ ಮತ್ತೆ
ಪುರ­ಭವನದ (ಅದೇ ಟೌನ್‌ಹಾಲ್ ಅಂತೀ­ರಲ್ಲ ಅಲ್ಲಿ) ಮತ್ತೊಂದು ಸಿಗ್ನಲ್‌ನಲ್ಲಿ ಚಡಪಡಿ­ಸ­ಬೇಕು. ಅಲ್ಲಿಂದ  ಕಲಾಕ್ಷೇತ್ರಕ್ಕೆ ಹೋಗ­ಬೇಕು. ಈ ದಾರಿಯಲ್ಲಿರುವ ಎಲ್ಲಾ ಸಿಗ್ನಲ್‌ಗಳಲ್ಲೇ 15ಕ್ಕೂ ಹೆಚ್ಚು ನಿಮಿಷ ಕಾಯಬೇಕು.

ಇದನ್ನೆಲ್ಲಾ ನೆನೆಸಿಕೊಂಡು ‘ಇವತ್ತು ನಾನು ನಾಟಕ ನೋಡಿದ ಹಾಗೇ’ ಎಂದು ಸಂಕಟ­ವಾಗ­ತೊಡಗಿತು. ಅಷ್ಟರಲ್ಲೇ ವಿಠ್ಠಲ್ ಮಲ್ಯ ರಸ್ತೆಗೆ ಎಂ.ಜಿ ರಸ್ತೆ­ಯಿಂದ ಶಾರ್ಟ್‌­ಕಟ್ ಉಂಟಲ್ಲ ಎಂಬ ವಿಚಾರ ಹೊಳೆದು ಮತ್ತೆ ಉತ್ಸಾಹ ತುಂಬಿತು. ಹಿಂದೊಮ್ಮೆ ಗೆಳೆಯರೊ­ಬ್ಬರು ಈ ಶಾರ್ಟ್‌ಕಟ್‌ನಲ್ಲಿ ಕರೆದೊ­ಯ್ದಿದ್ದರು.

ಆಗ ಸಿಗ್ನಲ್ ಬಿಟ್ಟಿತ್ತಾದರೂ, ಮ್ಯೂಸಿಯಂ ರಸ್ತೆ ತಲುಪುವಷ್ಟರಲ್ಲಿ ಮತ್ತೆ ಸಿಗ್ನಲ್ ಬಿತ್ತು. ನನಗೇನೂ ಚಿಂತೆ­ಇರಲಿಲ್ಲ. ಗಾಡಿಯನ್ನು ಮ್ಯೂಸಿಯಂ ರಸ್ತೆಗೆ ನುಗ್ಗಿಸಿ, ಮದ್ರಾಸ್ ಬ್ಯಾಂಕ್  ರಸ್ತೆಯಲ್ಲಿ ಬಲಕ್ಕೆ ತಿರುಗಿದೆ. ಅಲ್ಲಿಂದ 20 ಸೆಕೆಂಡ್‌ಗಳಷ್ಟೆ. ಸೇಂಟ್ ಮಾರ್ಕ್ ರಸ್ತೆಯಲ್ಲಿ ಎಡ ತಿರುವು ಪಡೆದೆ. ಇಲ್ಲಿ ತುಸು ವಾಹನ ದಟ್ಟಣೆಯಿ­ದ್ದರೂ ಸಿಗ್ನಲ್‌ ಇಲ್ಲದಿರುವುದರಿಂದ
ತೊಂದ­ರೆ­ಯೇನಿಲ್ಲ. ನಂತರ ಒಂದೆರಡು ಫರ್ಲಾಂಗ್ ಸವೆಸಿ ಬಲಕ್ಕೆ ಹೊರಳಿದೆ.

ಈ ರಸ್ತೆಯಲ್ಲಿ ಕೇವಲ ಎರಡೂವರೆ ಅಡಿ ಎತ್ತರವಿರುವ, ನಾಲ್ಕಾರು ಕೋಟಿ ಬೆಲೆಯ ಲ್ಯಾಂಬ್ರೊಗಿನಿ ಕಾರುಗಳ ಷೋರೂಂ ಇದೆ. ಕಲಾಕ್ಷೇತ್ರದಲ್ಲಿ ನಾಟಕ ಶುರು­ವಾ­ಗುವ ಮುನ್ನ ತಲುಪಬೇಕಲ್ಲ. ಕಣ್ಣು­ಗಳು ಆ ಕಡೆ ಎಳೆಯುತ್ತಿ­ದ್ದರೂ ಕಾರುಗ­ಳನ್ನು ನೋಡುತ್ತಾ ನಿಲ್ಲದೆ ಹೊರಟೆ.

ಇಲ್ಲಿಂದ ನೇರವಾಗಿ ಯು.ಬಿ ಸಿಟಿ ರಸ್ತೆಯಲ್ಲಿ ಸಾಗಿ, ಕಸ್ತೂರಬಾ ರಸ್ತೆಯ ಸಿಗ್ನಲ್‌ನಲ್ಲಿ ಎಡಕ್ಕೆ ತಿರುಗಿ ವಿಠ್ಠಲ್ ಮಲ್ಯ ರಸ್ತೆಗೆ ಇಳಿದೆ (ಅಲ್ಲಿ ಸಿಗ್ನಲ್ ಇದ್ದರೂ ಬಹುಪಾಲು ‘ಫ್ರೀ ಲೆಫ್ಟ್ ಟರ್ನ್’ ಇರುತ್ತದೆ). ಅರೆ, 11 ನಿಮಿಷಗಳ ಸಿಗ್ನಲ್ ತಪ್ಪಿಸಿ ಕೇವಲ ನಾಲ್ಕು ನಿಮಿಷ­ದಲ್ಲಿ ರಾಜಾರಾಮ್ ಮೋಹನ್ ರಾಯ್ ರಸ್ತೆ ತಲುಪಿದ್ದೆ.

ಅಲ್ಲಿಂದ ಹಡ್ಸನ್ ವೃತ್ತದ ಕಡೆಗೆ ತಿರುಗದೆ, ನೇರವಾಗಿ ಸಾಗಿ ಸಂಪಂಗಿ ರಾಮನಗರದ 1ನೇ ಮುಖ್ಯರಸ್ತೆಗೆ ಇಳಿದೆ. ಲಾಲ್‌ಬಾಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯದು. ಈ ರಸ್ತೆಯ ಮೂರನೆ ತಿರುವಿನಲ್ಲಿ ಬಲಕ್ಕೆ ತಿರುಗಿ (8ನೇ ಅಡ್ಡರಸ್ತೆ) ನೇರವಾಗಿ ಸಾಗುತ್ತಾ ದೇವಾಂಗ ಸಮಾಜ ರಸ್ತೆಗೆ ಬಂದೆ. ಒಂದೂ ಸಿಗ್ನಲ್‌ನಲ್ಲಿ ನಿಲ್ಲದೆ ಕಾರ್ಪೊರೇ­ಷನ್ ಹಿಂಭಾಗ ತಲುಪಿದೆ.

ಇನ್ನು ಮಿಷನ್ ರಸ್ತೆಯ ಸಿಗ್ನಲ್‌ನಲ್ಲಿ ಒಂದು ನಿಮಿಷ ಕಳೆದು ಎಸ್‌ಸಿಎಂ ರಸ್ತೆಯಲ್ಲಿ ಸಾಗಿ, 3ನೇ ಕ್ರಾಸ್‌ ಮೂಲಕ ಜೈನ್ ಕಾಲೇಜು ರಸ್ತೆಗೆ ಬಂದೆ. ಅಲ್ಲಿಂದ ನಾಲ್ಕೇ ಮಾರು. ರವೀಂದ್ರ ಕಲಾಕ್ಷೇತ್ರ ಮತ್ತು ಕನ್ನಡ ಭವನದ ಹಿಂಬಾಗಿಲು. ಕಲಾಕ್ಷೇತ್ರದಲ್ಲಿ ಗೆಳೆಯರು ‘ರಿಸರ್ವ್’ ಮಾಡಿದ್ದ ಸೀಟಿನಲ್ಲಿ ಕುಳಿತಾಗ ನಾಟಕ ಆರಂಭ­ವಾಗಲು ಇನ್ನೂ ಒಂದು ನಿಮಿಷವಿತ್ತು.

ಕಸ್ತೂರಬಾ ರಸ್ತೆ, ಕಾರ್ಪೊರೇಷನ್ ವೃತ್ತದ ಮೂಲಕ ಕಲಾಕ್ಷೇತ್ರ ತಲುಪುವು­ದಕ್ಕಿಂತ ಈ ಶಾರ್ಟ್‌ಕಟ್‌­ನಲ್ಲಿ 800 ಮೀಟರ್ ಹೆಚ್ಚು ದೂರ ಕ್ರಮಿಸಬೇಕು. ಆದರೆ ಈ ಶಾರ್ಟ್‌ಕಟ್‌ನಲ್ಲಿ ನನಗೆ ಎದುರಾಗಿದ್ದು ಮಿಷನ್ ರಸ್ತೆಯ ಸಿಗ್ನಲ್ ಒಂದೇ. ಇನ್ನೂ ಐದು ಸಿಗ್ನಲ್‌­ಗಳಲ್ಲಿ ಹತ್ತಾರು ಬಾರಿ ಗೇರ್ ಬದಲಿ­ಸುತ್ತಾ ಪೆಟ್ರೋಲ್ ಮತ್ತು ಸಮಯ ಸುಡುವು­ದ­ಕ್ಕಿಂತ 800 ಮೀಟರ್ ಹೆಚ್ಚು ದೂರ ಕ್ರಮಿಸುವುದೇ ಲಾಭಕರ.

ನೀವೂ ಬರೆಯಿರಿ...
ನಗರದಲ್ಲಿ ಇರುವ ಇಂಥ ‘ಬೇರೆ ದಾರಿ’ಗಳು ನಿಮಗೂ ಗೊತ್ತಿರಬಹುದು. ಇದೇ ಧಾಟಿಯಲ್ಲಿ ಬರೆದು ಕಳುಹಿಸಿ. ಆಯ್ದ ಬರಹಗಳು ಮೆಟ್ರೊದಲ್ಲಿ ಪ್ರಕಟವಾಗಲಿವೆ. ನಿಜವಾದ ಹೆಸರಿನಲ್ಲಿ, ಪೂರ್ತಿ ವಿಳಾಸ ಬರೆದು ಕಳುಹಿಸಿದಲ್ಲಿ ಸೂಕ್ತ ಸಂಭಾವನೆ ಕೂಡ ಸಲ್ಲಲಿದೆ. ವಿಳಾಸ: ಮೆಟ್ರೊ, ಪ್ರಜಾವಾಣಿ, ನಂ.75, ಎಂ.ಜಿ. ರಸ್ತೆ, ಬೆಂಗಳೂರು– 560 001. ಯೂನಿಕೋಡ್‌, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಕೂಡ ಬರೆದು, metropv@prajavani.co.inಗೆ ಇ–ಮೇಲ್‌ ಮಾಡಬಹುದು. ಬರಹ 350 ಪದಗಳ ಮಿತಿಯಲ್ಲಿ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT