ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟಿಎ: ಉದ್ಯೋಗದ ರಹದಾರಿ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಪ್ರವಾಸ್ಯೋದ್ಯಮ ಏರುಮುಖವಾಗಿದೆ. ಇಲ್ಲಿ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕ್ಷೇತ್ರಗಳು ಕೌಶಲವುಳ್ಳ, ಉತ್ಸಾಹಿ ಯುವ ಸಮೂಹದ ಶೋಧದಲ್ಲಿ ತೊಡಗಿವೆ. ಇಂಥ ಕೌಶಲ ವೃದ್ಧಿಗೆ ಪೂರಕವಾದ ಶಿಕ್ಷಣವನ್ನು ರಾಜ್ಯದ ಐದು ಕಾಲೇಜುಗಳು ಅಳವಡಿಸಿಕೊಂಡಿವೆ.

‘ಭಾರತ ನೋಡಲೇಬೇಕಾದ ಸ್ಥಳ’ ಎಂಬ ಮಾತು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ವಿದೇಶಿಗರು ಭಾರತದ ಸಂಸ್ಕೃತಿ, ಪರಂಪರೆ ಕುರಿತು ಕುತೂಹಲ ಹೊಂದಿದ್ದಾರೆ. ಇಲ್ಲಿನ ಪುರಾತನ ನಗರಗಳು, ಮೋಜಿನ ತಾಣಗಳು ಅವರಿಗೆ ಇಷ್ಟ. ಇವರ ಭೇಟಿಯಿಂದ ರಾಷ್ಟ್ರದ ಬೊಕ್ಕಸಕ್ಕೆ ವಿದೇಶಿ ವಿನಿಮಯವೂ ಹರಿದು ಬರುತ್ತಿದೆ. ವಿದೇಶಿಗರ ಪ್ರವಾಸದಿಂದ ವಾರ್ಷಿಕ 20 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಭಾರತಕ್ಕೆ ಲಭಿಸುತ್ತಿದೆ. 2015ರ ವೇಳೆಗೆ ಇದು 26 ಬಿಲಿಯನ್‌ಗೆ ತಲುಪಲಿದೆ ಎಂಬುದು ಭಾರತೀಯ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಘ ನೀಡುವ ಮಾಹಿತಿ.

ದೇಶದ ನಾಗರಿಕರೂ ಪ್ರವಾಸೋದ್ಯಮದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಐತಿಹಾಸಿಕ ಪ್ರದೇಶ, ಪವಿತ್ರ ಕ್ಷೇತ್ರಗಳು, ಅರಮನೆ, ಕೋಟೆಗಳು, ನೈಸರ್ಗಿಕ ತಾಣ, ಮನರಂಜನಾ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ದೇಶಿಗರ ಹಾಗೂ ವಿದೇಶಿಗರು ಮಾಡುವ ಖರ್ಚು ದೇಶದ ಪ್ರವಾಸೋದ್ಯಮದ ಆದಾಯದ ಮೂಲ. ಅಲ್ಲದೇ, ರಸ್ತೆ ಸಾರಿಗೆ, ವಿಮಾನ, ಹಡಗು ವಲಯದ ಪ್ರಗತಿಗೂ ನೆರವಾಗಲಿದೆ.

ಈ ಅಂಶಗಳನ್ನು ಮನಗಂಡ ರಾಜ್ಯದ ಕೆಲವು ಕಾಲೇಜುಗಳು ಪ್ರವಾಸೋದ್ಯಮ ಆಡಳಿತ ಸ್ನಾತಕೋತ್ತರ ಪದವಿ (ಎಂಟಿಎ) ಕೋರ್ಸ್ ಪರಿಚಯಿಸಿವೆ. ಸಂವಹನ ಕಲೆ ಇಲ್ಲಿನ ಮೂಲ ಬಂಡವಾಳ, ಮಾತುಗಾರಿಕೆ, ದೇಶ ಸುತ್ತುವ ಹಂಬಲ ಹಾಗೂ ಸಾಹಸಪ್ರಿಯರಿಗೆ ಈ ಕೋರ್ಸ್ ಸೂಕ್ತ. ಮೈಸೂರು, ಬೆಂಗಳೂರು, ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಆಯಾ ಭಾಗದ ವಿಶ್ವವಿದ್ಯಾಲಯದೊಂದಿಗೆ ಮಾನ್ಯತೆ ಪಡೆದ ಕಾಲೇಜುಗಳಿವೆ. ಜತೆಗೆ ಡಿಪ್ಲೊಮಾ ಕೋರ್ಸ್ ಕಲಿಸುವ ಕಾಲೇಜುಗಳು ಮುಂಚೂಣಿಯಲ್ಲಿವೆ.

ಎಂಟಿಎ ಪೂರೈಸಿದವರಿಗೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ನೇಮಕಾತಿಯಲ್ಲಿ ಆದ್ಯತೆ ನೀಡುತ್ತಿದೆ. ಕಲಿಕೆ ಹಂತದಲ್ಲಿಯೇ ಕೆಟಿಡಿಸಿ, ಐಟಿಡಿಸಿಯಲ್ಲಿ ತರಬೇತಿ ಪಡೆಯಬಹುದು. 5 ವರ್ಷ ಅವಧಿಯ ಸ್ನಾತಕೋತ್ತರ ಕೋರ್ಸ್‌ಗೆ ಪಿಯುಸಿ ಪಾಸಾದವರು ಪ್ರವೇಶ ಪಡೆಯಬಹುದು. ಮೂರು ವರ್ಷದ  ಪದವಿ ಪೂರೈಸಿ (ಎಕ್ಸಿಟ್) ನೌಕರಿ ಸೇರುವ ಅವಕಾಶ ಕೆಲವೆಡೆ ಇದೆ. ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಪ್ರವಾಸೋದ್ಯಮದ ಸಮಗ್ರ ಮಾಹಿತಿ ಅರಿಯುತ್ತಾರೆ. ಜಗತ್ತಿನ ಇತಿಹಾಸ, ವಿಶ್ವ ಪ್ರವಾಸೋದ್ಯಮ, ಹೋಟೆಲ್ ಮ್ಯಾನೇಜ್‌ಮೆಂಟ್, ಪರಿಸರ, ಚಾರಣ, ಪ್ರಮುಖ ಪ್ರವಾಸಿ ತಾಣಗಳು, ಆಹಾರ ಪದ್ಧತಿ, ವಿದೇಶ ಪ್ರವಾಸ ಕೈಗೊಳ್ಳುವ ವಿಧಾನ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ನಿರ್ವಹಣೆ, ಪ್ರವಾಸೋದ್ಯಮ ಕಾನೂನು... ಇತ್ಯಾದಿ ವಿಷಯ ಒಳಗೊಂಡ ಪಠ್ಯ ರೂಪಿಸಲಾಗಿದೆ. ಪ್ರತಿ ಸೆಮಿಸ್ಟರ್‌ನಲ್ಲಿ ಪ್ರಾಯೋಗಿಕ ಕಲಿಕೆಗೂ ಒತ್ತು ನೀಡಲಾಗಿದೆ.

ಎಂಟಿಎ ಪಾಸಾದವರಿಗೆ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ಎಂಬಿಎ ವಿದ್ಯಾರ್ಥಿಗಳಿಗೆ ಸಮವಾಗಿ ವೇತನ ಪಡೆಯಬಹುದು. ಆಂಗ್ಲ ಭಾಷಾ ಪ್ರಭುತ್ವ ಉಳ್ಳವರು ದೇಶ, ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಕೆಎಸ್‌ಡಿಸಿ, ಐಟಿಡಿಸಿ, ಜಂಗಲ್ ರೆಸಾರ್ಟ್, ಪ್ರತಿಷ್ಠಿತ ಹೋಟೆಲ್, ಟೂರ್ ಟ್ರಾವೆಲ್ ಏಜೆನ್ಸಿ, ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಗಳು, ವಿಮಾನಯಾನ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ. ಈಚೆಗೆ ಐಟಿ ಕಂಪೆನಿಗಳಲ್ಲಿ ಕೂಡ ಉದ್ಯೋಗ ಸೃಷ್ಟಿಯಾಗಿವೆ. ನೌಕರಿ ಬೇಡ ಎನ್ನುವವರು ಪ್ರವಾಸಿ ಮಾಹಿತಿ ಕೇಂದ್ರ, ಟೂರ್-ಟ್ರಾವೆಲ್ ಏಜೆನ್ಸಿ ಆರಂಭಿಸಿ ಸ್ವ ಉದ್ಯೋಗ ಕೈಗೊಳ್ಳಬಹುದು.

‘ಅತಿಥಿ ದೇವೋಭವ’ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಈ ಘೋಷದಡಿ ವಿವಿಧ ರಾಜ್ಯಗಳು ಪ್ರವಾಸಿಗರನ್ನು ಸೆಳೆಯಲು ವ್ಯಾಪಕ ಪ್ರಚಾರ ಕೈಗೊಂಡಿವೆ. ಗುಜರಾತ್, ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳು ಜಾಹೀರಾತು ಮೂಲಕ ತಮ್ಮ ರಾಜ್ಯಗಳ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೆರೆದಿಡುತ್ತಿವೆ. ‘ಒಂದು ರಾಜ್ಯ ಹಲವು ಜಗತ್ತು’ ಎಂಬುದು ಕರ್ನಾಟಕದ ಘೋಷಣೆ. ಈ ರಾಜ್ಯಗಳು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಎಂಟಿಎ ಶಿಕ್ಷಣ ಪಡೆದವರಿಗೆ ಅವಕಾಶ ನೀಡುತ್ತಿವೆ.

ಗುಲ್ಬರ್ಗದ ಶರಣಬಸವೇಶ್ವರ ಪದವಿ ಕಾಲೇಜಿನಲ್ಲಿ ಪ್ರವಾಸೋದ್ಯಮ ಆಡಳಿತ ಸ್ನಾತಕೋತ್ತರ ಪದವಿ (ಎಂಟಿಎ) ಕೋರ್ಸ್ ಪರಿಚಯಿಸಲಾಗಿದೆ. ಹೈದರಾಬಾದ್ ಕರ್ನಾಟಕದ ಏಕೈಕ ಕಾಲೇಜು ಇದಾಗಿದೆ. ಪ್ರತಿವರ್ಷ 40 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಮುಖಾಂತರ ಉದ್ಯೋಗಗಳ ಮಾಹಿತಿ ನೀಡಲಾಗುತ್ತಿದೆ. ತಾಜ್, ಕೇಸರಿ ಪ್ರವಾಸ ಆಯೋಜಿಸುವ ಸಂಸ್ಥೆ  ಸೇರಿದಂತೆ  ಹಲವೆಡೆ ಇಲ್ಲಿ ಕಲಿತವರು ಕೆಲಸ ಮಾಡುತ್ತಿದ್ದಾರೆ.

‘ಪ್ರವಾಸೋದ್ಯಮ ಕೋರ್ಸ್ ಪೂರೈಸಿದರೆ ದೇಶದ ವಿವಿಧೆಡೆ ಕೆಲಸ ಮಾಡಬಹುದು. ಪ್ರವಾಸಿ ತಾಣಗಳ ವೀಕ್ಷಣೆ, ಸಾಂಸ್ಕೃತಿಕ ಭಿನ್ನತೆ ಅರಿಯುವ, ಪರಂಪರೆ ಇತರರಿಗೆ ಪರಿಚಯಿಸಿಲು ಇದಕ್ಕಿಂತ ಉತ್ತಮ ಅವಕಾಶ ಬೇರೆ ಇಲ್ಲ’ ಎನ್ನುತ್ತಾರೆ ಗುಲ್ಬರ್ಗದ ಎಂಟಿಎ ಕಾಲೇಜಿನ ವಿದ್ಯಾರ್ಥಿನಿ ದಿಶಾ ಶಾನಭಾಗ.

ಎಲ್ಲಿದೆ ಭವಿಷ್ಯ?
ಇದೀಗ ಪ್ರವಾಸೋದ್ಯಮ ಬೆಳೆಯುತ್ತಿರುವ ವಾಣಿಜ್ಯ ಕ್ಷೇತ್ರವಾಗಿದೆ. ಪ್ರವಾಸ ದಿನನಿತ್ಯದ ಜಂಜಾಟಗಳಿಂದಾಚೆ ಹೋಗಲು ಎಲ್ಲರೂ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರವಾಸದ ಭಾಷ್ಯ ಬದಲಾಗಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತಿವೆ.
ಪ್ರವಾಸ ಆಯೋಜನೆಯ ಅಡಿಯಲ್ಲಿ ಯಾವ ಋತುಮಾನ ಯಾವ ಪ್ರದೇಶ, ಎಷ್ಟು ದಿನ, ಎಷ್ಟು ಹಣ ಇಂಥ ಎಲ್ಲ ಸಣ್ಣ ಸಣ್ಣ ಮಾಹಿತಿಗಳನ್ನೂ ಸಂಗ್ರಹಿಸಿ ಅದನ್ನು ನಿರ್ವಹಿಸುವ ಕೌಶಲವಿರಬೇಕು.

ಆತಿಥ್ಯದ ಅಡಿಯಲ್ಲಿ ಉತ್ತಮ ವಾತಾವರಣ, ಪರಿಸರ ನಿರ್ಮಾಣ ಮುಂತಾದವುಗಳತ್ತ ಗಮನ ಹರಿಸಬೇಕು. ಕೌಟುಂಬಿಕ ಪ್ರವಾಸದಲ್ಲಿ ಮಕ್ಕಳು ಆಡಲು ಹೆಚ್ಚು ಆದ್ಯತೆ ನೀಡುವಂತೆ, ಯುವಜನಾಂಗಕ್ಕೆ ಸಾಹಸ ಮಯ ಅನುಭವ ನೀಡುವಂತಿರಬೇಕು. ಇನ್ನು ಭಾರತದಂಥ ದೇಶದಲ್ಲಿ ಧಾರ್ಮಿಕ ಪ್ರವಾಸವೂ ಮುಖ್ಯವಾಗಿದೆ. ಇಲ್ಲಿ ಹಿರಿಯ ನಾಗರಿಕರು, ಅವರಿಗೆ ಅಗತ್ಯವಿರುವ ನೆರವು, ಪ್ರಯಾಣ, ಊಟ, ವಿಶ್ರಾಂತಿ ಮುಂತಾದವು ಎಲ್ಲವನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು.

ಟಿಕೆಟ್‌ ಕಾಯ್ದಿರಿಸುವಿಕೆಯಿಂದ ಆರಂಭವಾಗುವ ಈ ಕೋರ್ಸಿನಲ್ಲಿ ಹೋಟೆಲ್‌ ಮ್ಯಾನೆಜ್ಮೆಂಟ್‌, ಹಾಸ್ಪಿಟಾಲಿಟಿ ಮುಂತಾದ ಎಲ್ಲ ಆಯಾಮಗಳನ್ನೂ ಕಲಿಯಬೇಕಾಗುತ್ತದೆ. ಭಾರತದ ಇತಿಹಾಸ, ಸಂಸ್ಕೃತಿ, ಪ್ರಾಚ್ಯಶಾಸ್ತ್ರ, ಪರಿಸರ ಮುಂತಾದ ವಿಷಯಗಳನ್ನೂ ಕಲಿಯಬೇಕಾಗುತ್ತದೆ.
ಟೂರಿಸಂ ಓದಿದವರಿಗೆ ಸರ್ಕಾರಿ ವಲಯದಲ್ಲಿಯೂ ಉದ್ಯೋಗಾವಕಾಶಗಳು ಇವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲಸ ಮಾಡಬಹುದಾಗಿದೆ. ಖಾಸಗಿ ವಲಯದಲ್ಲಿ ಟಿಕೆಟ್‌ ಫ್ರಂಟ್‌ ಆಫೀಸ್‌, ಪ್ರವಾಸ ಆಯೋಜನಾ ಸಂಸ್ಥೆ, ಪ್ರವಾಸ ನಿರ್ವಹಣಾ ಸಂಸ್ಥೆ, ರಿಸಾರ್ಟ್‌ಗಳು, ಹೋಟೆಲ್‌ಗಳಲ್ಲಿಯೂ ಉತ್ತಮ ಅವಕಾಶಗಳಿವೆ.

ಪದವಿ ಪಡೆದ ವಿದ್ಯಾರ್ಥಿಗಳು ಪುಣೆಯಲ್ಲಿ ಪ್ರವಾಸೋದ್ಯಮದಲ್ಲಿ ಎಂಬಿಎ ಸಹ ಮಾಡಬಹುದು. ಭಾರತೀಯ ಪ್ರವಾಸೋದ್ಯಮ ಮಂತ್ರಾಲಯ ಸಂಸ್ಥೆಯಲ್ಲಿಯೂ ಭಾರತೀಯ ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ ಸಂಸ್ಥೆಯಲ್ಲಿ (ಇಂಡಿಯನ್‌ ಇನ್ಸ್ಟಟಿಟ್ಯೂಟ್‌ ಆಫ್‌ ಟೂರಿಸಂ ಅಂಡ್‌ ಟ್ರಾವೆಲ್‌ ಮ್ಯಾನೆಜ್‌ಮೆಂಟ್‌, –ಐಐಟಿಟಿಎಂ) ಉನ್ನತ ಅಧ್ಯಯನ ಕೈಗೊಳ್ಳಬಹುದಾಗಿದೆ.

ಸ್ನಾತಕೋತ್ತರ ಪದವಿ ಪಡೆದವರು  ಐಐಟಿಟಿಎಂನಿಂದ ಸಂಶೋಧನೆಗೆ ಫೆಲ್ಲೊಶಿಪ್‌ ಪಡೆಯಬಹುದು. ಯುಜಿಸಿಯಿಂದ ಉಪನ್ಯಾಸಕರ ಹುದ್ದೆಗಾಗಿ ಏರ್ಪಡಿಸುವ ಪರೀಕ್ಷೆಗಳನ್ನೂ ಬರೆಯಬಹುದು. ಸ್ನಾತಕೋತ್ತರ ಪದವಿ ಪಡೆದವರಿಗೆ ಖಾಸಗಿ ವಲಯದಲ್ಲಿ ಕೈತುಂಬ ಸಂಬಳ ಕೊಡುವ ಉದ್ಯೋಗಾವಕಾಶಗಳು ಹೇರಳವಾಗಿವೆ.

ಪ್ರವಾಸೋದ್ಯಮದ ಬಗ್ಗೆ ಪ್ರೀತಿ, ಒಲವು ಬೆಳೆಸಿಕೊಂಡರೆ ಈ ಕ್ಷೇತ್ರದಲ್ಲಿ ಯಶಸ್ವಿಯಾಗುವುದು ಕಷ್ಟವೇನಲ್ಲ. ಯಾವುದೇ ಪದವಿ ಪಡೆದಿರುವ ವಿದ್ಯಾರ್ಥಿಗಳೂ ಪ್ರವಾಸೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಐಐಟಿಟಿಎಂ ಇದಕ್ಕಾಗಿ ಲಿಖಿತ ಪರೀಕ್ಷೆ, ಸಂದರ್ಶನ, ಸಮೂಹ ಸಂದರ್ಶನ ಮುಂತಾದ ಪರೀಕ್ಷೆಗಳ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ದೇಶದ ವಿವಿಧೆಡೆ ಪ್ರವಾಸೋದ್ಯಮದಲ್ಲಿ ಸ್ನಾತಕೋತ್ತರ ಪದವಿ ನೀಡುವ ಹಲವು ಸಂಸ್ಥೆಗಳಿವೆ.

ನೌಕರಿ ಗ್ಯಾರಂಟಿ
ಪ್ರವಾಸೋದ್ಯಮ ಶಿಕ್ಷಣ ನೀಡುತ್ತಿರುವ ಐದು ಕಾಲೇಜುಗಳಿಂದ ಪ್ರತಿವರ್ಷ ಅಂದಾಜು 150 ವಿದ್ಯಾರ್ಥಿಗಳು ಹೊರಬರುತ್ತಾರೆ. ಅವರೆಲ್ಲರಿಗೂ ಕೆಲಸ ಸಿಗುತ್ತಿದೆ. ಶೇ 100ರಷ್ಟು ಉದ್ಯೋಗ ಗ್ಯಾರಂಟಿ ಇದೆ. ₨12ರಿಂದ ₨1 ಲಕ್ಷದ ವರೆಗೆ ವೇತನ ಪಡೆಯಬಹುದು. ಆದರೆ, ಪರಿಪೂರ್ಣ ವಿದ್ಯಾರ್ಥಿಗಳ ಕೊರತೆ ನಮ್ಮ ಪ್ರಮುಖ ಸಮಸ್ಯೆ. ಕೋರ್ಸ್ ಬಗ್ಗೆ ಹೆಚ್ಚು ಪ್ರಚಾರ ಇಲ್ಲ. ವಾಣಿಜ್ಯ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಇತ್ತ ಬರುತ್ತಿದ್ದಾರೆ. ಆದರೆ, ಕಲಾ ವಿಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಪ್ರವೇಶ ಪಡೆಯುತ್ತಿಲ್ಲ. ಬೆಂಗಳೂರು, ಮೈಸೂರು ಭಾಗದಲ್ಲಿ ಉತ್ತಮ ಸ್ಪಂದನೆ ಇದೆ. ಆದರೆ, ಹೈದರಾಬಾದ್‌ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಪ್ರತಿವರ್ಷ ನಮ್ಮ ಕಾಲೇಜಿನ ಎಲ್ಲ ಸೀಟುಗಳು ಭರ್ತಿಯಾಗುವುದಿಲ್ಲ. ಇದಕ್ಕಾಗಿ ವ್ಯಾಪಕ ಪ್ರಚಾರ ಕೈಗೊಂಡಿದ್ದೇವೆ.
-ವಾಣಿಶ್ರೀ, ವಿಭಾಗದ ಮುಖ್ಯಸ್ಥರು, ಎಂಟಿಎ ಕಾಲೇಜು, ಗುಲ್ಬರ್ಗ

ಎಂಟಿಎ ಕೋರ್ಸ್ ಎಲ್ಲೆಲ್ಲಿ?
*ಶರಣಬಸವೇಶ್ವರ ಪದವಿ ಕಾಲೇಜು, ಗುಲ್ಬರ್ಗ
*ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ
*ಮಹಾಜನ್ ಸ್ನಾತಕೋತ್ತರ ಕೇಂದ್ರ, ಮೈಸೂರು
*ಕೆಎಲ್‌ಇ ಕಾಲೇಜು, ಬೆಂಗಳೂರು
*ಕರ್ನಾಟಕ ವಿ.ವಿ ಕ್ಯಾಂಪಸ್, ಧಾರವಾಡ


(ಮಾಹಿತಿಗೆ: ಗುಲ್ಬರ್ಗದ ಶರಣಬಸವೇಶ್ವರ ಕಾಲೇಜು
08472 -250955)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT