ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎನ್‌ಎಫ್‌ ಗುಂಡೇಟಿಗೆ ಯುವಕ ಬಲಿ

ಶೃಂಗೇರಿ ಬಳಿ ಜಾನುವಾರು ಸಾಗಿಸುತ್ತಿದ್ದವರ ಮೇಲೆ ದಾಳಿ
Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶೃಂಗೇರಿ/ಮಂಗಳೂರು: ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿ­ಸು­­ತ್ತಿದ್ದ ಯುವಕನೊಬ್ಬ ಶೃಂಗೇರಿ ತಾಲ್ಲೂಕು ತನಿಕೋಡು ಅರಣ್ಯ ತಪಾಸಣಾ ಠಾಣೆಯ ಮುಂಭಾಗದಲ್ಲಿ ಶನಿವಾರ ಬೆಳಗಿನ ಜಾವ ನಕ್ಸಲ್‌ ನಿಗ್ರಹ ಪಡೆ(ಎಎನ್‌ಎಫ್‌) ಗುಂಡಿಗೆ ಬಲಿಯಾಗಿದ್ದಾನೆ.  

ಮಂಗಳೂರು ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಕಬೀರ್‌ (23) ಮೃತ ವ್ಯಕ್ತಿ. ಆತನ ಜತೆಗೆ ವಾಹನದಲ್ಲಿದ್ದ  ನಾಲ್ವರಲ್ಲಿ ಜೋಕಟ್ಟೆಯ ಶೇಖ್‌ ಉಮರ್‌ ಫಾರೂಕ್‌ ಪೊಲೀಸರ ವಶದಲ್ಲಿದ್ದಾನೆ. ಜೋಕಟ್ಟೆ ಮೂಲದ ಸರ್ಫರಾಜ್‌ ನಾಪತ್ತೆಯಾಗಿದ್ದಾನೆ. ವಾಹನ ಚಾಲಕ ಪ್ರಮೋದ್‌ (29) ಹಾಗೂ ರಫಿಕ್‌ (29)  ತಪ್ಪಿಸಿಕೊಂಡು ಮಂಗಳೂರು ಸೇರಿದ್ದಾರೆ.

ನಡೆದದ್ದೇನು?: ತೀರ್ಥಹಳ್ಳಿ ಕಡೆಯಿಂದ ಮಿನಿ ಲಾರಿಯಲ್ಲಿ (ಪಿಕಪ್‌) 20 ಜಾನುವಾರುಗಳನ್ನು ಮಂಗಳೂರಿನ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಯಾವುದೇ ವಾಹನ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆ ಘಾಟ್‌ ದಾಟಿ ಸಾಗಬೇಕಾದರೆ ತನಿಕೋಡು ಅರಣ್ಯ ತಪಾಸಣಾ ಠಾಣೆಯಲ್ಲಿ ವಿವರ ನೀಡಿ ರಸೀದಿ ಪಡೆಯಬೇಕು. ಅಲ್ಲಿನ ಅಧಿಕಾರಿಗಳು ನಮೂದಿಸಿದ ಸಮಯದ ಒಳಗೆ ಘಾಟ್‌ ಕೆಳಗಿನ ಕಾರ್ಕಳ ತಾಲ್ಲೂಕಿನ ಮಾಳದಲ್ಲಿರುವ ಅರಣ್ಯ ಇಲಾಖೆಯ ತಪಾಸಣಾ ಠಾಣೆಯನ್ನು ದಾಟಬೇಕು. 

ನಸುಕಿನ 3.30ರ ಸುಮಾರಿಗೆ ಜಾನುವಾರುಗಳಿದ್ದ ವಾಹನವನ್ನು ತನಿಕೋಡು ತಪಾಸಣಾ ಠಾಣೆಯ ಬಳಿ ನಿಲ್ಲಿಸಲಾಗಿತ್ತು. ಅರಣ್ಯ ಸಿಬ್ಬಂದಿ ಬಳಿ ರಸೀದಿ ಪಡೆಯಲು ರಫಿಕ್‌ ಕೆಳಗಿಳಿದಾಗ  ವಾಹನ­ದಲ್ಲಿದ್ದ ಒಬ್ಬಾತ  ಪರಾರಿಯಾಗಲು ಯತ್ನಿಸಿದ. ತಕ್ಷಣ ಎಎನ್‌ಎಫ್‌ ಯೋಧರು ಆತನ ಕಡೆಗೆ ಗುಂಡು ಹಾರಿಸಿದರು.

ಗುಂಡಿನ ಸದ್ದು ಕೇಳಿ ವಾಹನದಲ್ಲಿದ್ದ ಇತರರು ಓಡಲು ಯತ್ನಿಸಿದರು. ಈ ಸಂದರ್ಭದಲ್ಲಿ (ಶೇಖ್‌ ಉಮರ್‌ ಫಾರೂಕ್‌) ನಕ್ಸಲ್‌ ನಿಗ್ರಹ ಪಡೆಗೆ ಸಿಕ್ಕಿ ಬಿದ್ದ. ಗುಂಡು ತಾಗಿ ಕಬೀರ್‌ ಸ್ಥಳದಲ್ಲೇ ಅಸು ನೀಗಿದ. ಮುಂಜಾನೆ 4 ಗಂಟೆ ಸುಮಾರಿಗೆ ಮೃತ ದೇಹವನ್ನು ಸ್ಥಳದಿಂದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದ ಸಿಬ್ಬಂದಿ, ವಾಹನವನ್ನು ತನಿಖಾ ಠಾಣೆಯ ಇನ್ನೊಂದು ಬದಿಗೆ ಸ್ಥಳಾಂತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಆದರೆ ಉಸಿರುಗಟ್ಟುವಂತೆ ತುಂಬಿದ್ದ ಜಾನುವಾರುಗಳನ್ನು ಮಧ್ಯಾಹ್ನದವರೆಗೂ ವಾಹನದಲ್ಲೇ ಇರಿಸಿದ್ದರು. ಅವುಗಳಿಗೆ ನೀರು ಕೊಡುವುದಕ್ಕೂ ಸ್ಥಳೀಯರಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಹಲವು ಜಾನುವಾರುಗಳು ವಾಹನದಲ್ಲೇ ಅಸುನೀಗಿದವು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ 8 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗಿದ್ದ ಸಬ್‌ಇನ್‌ಸ್ಪೆಕ್ಟರ್‌ ಅವರು ಘಟನಾ ಸ್ಥಳಕ್ಕೆ ತೆರಳದಂತೆ ಹಾಗೂ ಫೋಟೋ ತೆಗೆಯದಂತೆ ಮಾಧ್ಯಮದವರಿಗೆ ತಡೆಯೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT