ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿಗೆ ಇಲ್ಮಿ, ಗೋಪಿನಾಥ್‌ ರಾಜೀನಾಮೆ

Last Updated 24 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು (ಪಿಟಿಐ): ಆಮ್‌ ಆದ್ಮಿ (ಎಎಪಿ) ಪಕ್ಷದ ಮುಖ್ಯಸ್ಥ  ಅರವಿಂದ ಕೇಜ್ರಿವಾಲ್‌ ಅವರ  ‘ಜೈಲು ರಾಜಕೀಯ’ಕ್ಕೆ  ಬೇಸತ್ತು ಪ್ರಮುಖ ಮುಖಂಡರಾದ ಶಾಜಿಯಾ ಇಲ್ಮಿ ಹಾಗೂ ಕ್ಯಾಪ್ಟನ್‌ ಜಿ.ಆರ್‌.ಗೋಪಿನಾಥ್‌ ಅವರು ಪಕ್ಷಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಈಗಾಗಲೇ ಪೆಟ್ಟು ತಿಂದಿರುವ ಪಕ್ಷಕ್ಕೆ ಇದು ಮತ್ತೊಂದು ಹಿನ್ನಡೆ­ಯಾಗಿದೆ. ‘ಕೇಜ್ರಿವಾಲ್‌ ಅವರ ನೀತಿ ಹಾಗೂ ಧೋರಣೆ ಎಳ್ಳಷ್ಟು ಸರಿ ಇಲ್ಲ’ ಎನ್ನುವುದು ಈ ಇಬ್ಬರು ಮುಖಂಡರ ಬಲವಾದ  ಆರೋಪವಾಗಿದೆ. ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿರುವ ಎಎಪಿ ಸ್ಥಾಪಕ ಸದಸ್ಯೆ ಶಾಜಿಯಾ ಇಲ್ಮಿ ,  ‘ಪಕ್ಷದಲ್ಲಿ  ಆಂತರಿಕ ಪ್ರಜಾ­ಪ್ರಭು­ತ್ವದ ಕೊರತೆ ಇದೆ’ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ಪಕ್ಷದಲ್ಲಿನ ‘‘ಜೈಲು ರಾಜಕೀಯ’ ಸಾಕಾಗಿ ಹೋಗಿದೆ.   ಸಾಕಷ್ಟು ಯೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ. ಮುಂದೆ ಯಾವ ಪಕ್ಷ­ವನ್ನೂ ಸೇರುವುದಿಲ್ಲ’ ಎಂದು ಅಜ್ಮಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ಪಕ್ಷದ ಮುಖ್ಯಸ್ಥರಾದವರು ‘‘ದಾಳಿ ಮಾಡಿ ಅಲ್ಲಿಂದ ಓಡಿ ಹೋಗುವ’’ ರಾಜಕೀಯ ಮಾಡ­ಬಾರದು’ ಎಂದು ಗೋಪಿನಾಥ್‌ ಹೇಳಿದ್ದಾರೆ.  ಬಿಜೆಪಿ ಮುಖಂಡ ನಿತಿನ್‌ “

ಗಡ್ಕರಿ ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜಾಮೀನು ಬಾಂಡ್‌್ ನೀಡಲು ನಿರಾಕರಿಸಿದ ಕೇಜ್ರಿವಾಲ್‌್ ಧೋರಣೆಯನ್ನೂ ಅವರು ಇಲ್ಲಿ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಜ್ಮಿ ಹೇಳಿದ್ದೇನು...?: ‘ನನ್ನ ಮಟ್ಟಿಗೆ ಇದು ಅತ್ಯಂತ ಕಷ್ಟದ ನಿರ್ಧಾರ. ಚೆನ್ನಾಗಿ ಯೋಚಿಸಿ  ಈ ನಿಲುವಿಗೆ ಬಂದಿದ್ದೇನೆ. ಕೇಜ್ರಿವಾಲ್‌್ ಅವರು ‘‘ಜೈಲು ರಾಜಕೀಯ’’ದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಜಾಮೀನು ಬಾಂಡ್‌ ನೀಡಿ, ಜನರ ಬಳಿ ಹೋಗಬೇಕಿತ್ತು. ಪಕ್ಷದ ಅಭ್ಯರ್ಥಿಗಳನ್ನು ಭೇಟಿಯಾಗಬೇಕಿತ್ತು.

‘ನಾನು ‘‘ಜೈಲು ರಾಜಕೀಯ’’ ಬೆಂಬಲಿಸುವು­ದಿಲ್ಲ. ಎಎಪಿಯನ್ನು ಪುನರ್‌ರಚಿಸಬೇಕಿದೆ. ಈ ರೀತಿಯ ಉದ್ರೇಕದ ರಾಜಕೀಯದಿಂದ ಆರಂಭದಲ್ಲಿ ನಮಗೆ ಅನುಕೂಲವಾಗಿರಬಹುದು. ಹಾಗಂತ ಇದನ್ನೇ ಚಾಳಿ ಮಾಡಿಕೊಂಡರೆ ಜನರು ನಮ್ಮ ಮೇಲಿಟ್ಟಿರುವ ಗೌರವ ಕಳೆದುಕೊಳ್ಳಬೇಕಾಗುತ್ತದೆ.

‘ಪಕ್ಷದಲ್ಲಿ ಹಠಾತ್‌್ ನಿರ್ಧಾರ ತೆಗೆದು­ಕೊಳ್ಳ­ಲಾಗುತ್ತದೆ. ವೈಯಕ್ತಿಕವಾಗಿ ಸ್ವಯಂ ಆಡಳಿತದ ತತ್ವ­ಗಳನ್ನು ಪಾಲಿಸುವಲ್ಲಿ ಕೇಜ್ರಿವಾಲ್‌್ ಸೋತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ವಿಧೇಯ ಸಿಪಾಯಿ­ಯಂತೆ ಕೆಲಸ ಮಾಡಿದ್ದೇನೆ. ಪ್ರತಿರೋಧದ ದನಿ ಎತ್ತಿದ್ದಕ್ಕೆ ಹಾಗೂ ರಚನಾತ್ಮಕವಾಗಿ ಟೀಕೆ ಮಾಡಿದ್ದಕ್ಕೆ ನನ್ನನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ.’

ಗೋಪಿನಾಥ್‌ ಟೀಕೆ: ‘ಪಕ್ಷದೊಳಗೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ’ ಎಂದಿರುವ ಗೋಪಿನಾಥ್‌, ಕೇಜ್ರಿವಾಲ್‌ ಅವರ ಇತ್ತೀಚಿನ ವರ್ತನೆಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ‘ನಾನು ಅಣ್ಣಾ ಹಜಾರೆ ಹಾಗೂ ಕೇಜ್ರಿವಾಲ್‌ ಅವರ ಅಭಿಮಾನಿ. ಆದರೆ   ಎಎಪಿ ಮುಖ್ಯಸ್ಥ ಕೇಜ್ರಿವಾಲ್‌ ಅವರು ತೆಗೆದುಕೊಂಡ ಕೆಲವು ನಿರ್ಧಾರ­ಗಳನ್ನು ನಾನು ಒಪ್ಪಿಲ್ಲ. ಪಕ್ಷದ ನಾಯಕತ್ವ ಹಾಗೂ ಅದರ ಕಾರ್ಯ ವಿಧಾನದ ಬಗ್ಗೆ ನನಗೆ ಭಿನ್ನಾಭಿ­ಪ್ರಾಯವಿದೆ. ಆದ್ದರಿಂದ  ಎಎಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಕರ್ನಾಟಕದಲ್ಲಿ ಎಎಪಿ ಸಂಚಾಲಕರಾಗಿರುವ ಪೃಥ್ವಿ ರೆಡ್ಡಿ ಅವರಿಗೆ ತಿಳಿಸಿದ್ದಾರೆ.

ಗೋಪಿನಾಥ್‌್ ಅವರು ತಮ್ಮ ಬ್ಲಾಗ್‌ನಲ್ಲಿ ಕೂಡ ಕೇಜ್ರಿವಾಲ್‌್ ಅವರ  ಧೋರಣೆಯನ್ನು ಪ್ರಶ್ನಿಸಿದ್ದಾರೆ. ‘ಕೇಜ್ರಿವಾಲ್‌್ ನಿರ್ಲಜ್ಜರಾಗಿ ನಡೆದುಕೊಂಡಿ­ದ್ದಾರೆ. ನಿಯಮ ಮುರಿದಿದ್ದಾರೆ’ ಎಂದೂ ಟೀಕೆ ಮಾಡಿದ್ದಾರೆ. 

ಅಸಮಾಧಾನ: ‘ಪಕ್ಷದ ಕಾರ್ಯವಿಧಾನ ಕೆಲವು ಸದಸ್ಯರಿಗೆ ಅಸಮಾಧಾನ ತಂದಿದೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯ ಸೇರಿದಂತೆ ಪಕ್ಷ ತೆಗೆದುಕೊಂಡ ವಿವಿಧ ನಿರ್ಧಾರ­ಗಳನ್ನು ಅವರು ಪ್ರಶ್ನಿಸಿದ್ದಾರೆ. ಪಕ್ಷದ ನಾಯಕತ್ವ, ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಮಧ್ಯೆ ಸಂವಹನ ಕೊರತೆಯ ಆರೋಪ ಕೂಡ ಇದೆ’ ಎಂದು ಮೂಲಗಳು ತಿಳಿಸಿವೆ.

ಶಾಜಿಯಾ ವಿರುದ್ಧ ವಾರಂಟ್‌
ನವದೆಹಲಿ (ಪಿಟಿಐ): ದೂರಸಂಪರ್ಕ ಖಾತೆ ನಿರ್ಗಮಿತ ಸಚಿವ ಕಪಿಲ್‌್ ಸಿಬಲ್‌್ ಅವರ ಪುತ್ರ ಅಮಿತ್‌್ ಹೂಡಿರುವ ಮಾನ­ನಷ್ಟ ಮೊಕದ್ದಮೆ ವಿಚಾ­ರಣೆ­ಯಲ್ಲಿ ಖುದ್ದು ಹಾಜರಾಗದ ಕಾರಣ ಶಾಜಿಯಾ ಇಲ್ಮಿ ವಿರುದ್ಧ ದೆಹಲಿ ಕೋರ್ಟ್‌್ ಶನಿವಾರ  ವಾರಂಟ್‌್ ಹೊರಡಿಸಿದೆ.

ಸಮ್ಸನ್‌ ನೀಡಿದ್ದರೂ ಕೋರ್ಟ್‌ಗೆ ಹಾಜರಾಗಿಲ್ಲ ಎನ್ನುವ ಕಾರಣಕ್ಕೆ ಮೆಟ್ರೊಪಾಲಿಟನ್‌್ ಮ್ಯಾಜಿಸ್ಟ್ರೇಟ್‌ ಸುನೀಲ್‌್ ಕುಮಾರ್‌ ಶರ್ಮಾ ಅವರು ಇಲ್ಮಿ  ವಿರುದ್ಧ ವಾರಂಟ್‌್ ಹೊರಡಿಸಿದ್ದಾರೆ.

ಈ ವಿಷಯವಾಗಿ ತನ್ನ ಮುಂದೆ ಹಾಜ­ರಾಗದಿದ್ದರೆ ಬಲವಂತದ ಕ್ರಮ ಜರುಗಿ­ಸ­ಬೇಕಾಗುತ್ತದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌, ಮನೀಶ್ ಸಿಸೋಡಿಯಾ, ಪ್ರಶಾಂತ್‌ ಭೂಷಣ್‌ ಹಾಗೂ ಶಾಜಿಯಾ ಇಲ್ಮಿ ಅವರಿಗೆ ಈ ಮೊದಲು ಕೋರ್ಟ್‌್ ಎಚ್ಚರಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT