ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ, ಗೌರವ ಕಳೆದುಹೋಗುತ್ತಿದೆ!

ಸಂಸದರ ವೇತನಕ್ಕೆ ಆಯೋಗ
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸಂಸತ್‌ ಸದಸ್ಯರ ಸಂಬಳ, ಭತ್ಯೆ, ಇತರ ಸೌಲಭ್ಯಗಳ ಬಗ್ಗೆ ಶಿಫಾರಸು ಮಾಡಲು ಕೇಂದ್ರ ಸರ್ಕಾರ ರಚಿಸಲು ಹೊರಟಿರುವ ಸ್ವತಂತ್ರ ವೇತನ ಆಯೋಗದ ಪ್ರಸ್ತಾವಕ್ಕೆ, ವಿವಿಧ ಪಕ್ಷಗಳ ಮುಖ್ಯ ಸಚೇತಕರು ಸೇರಿದಂತೆ ಅಖಿಲ ಭಾರತ ಸಚೇತಕರ (ವಿಪ್‌) ಸಮಾವೇಶ ಸಮ್ಮತಿ ಸೂಚಿಸಿದೆ. ಇದು ಸ್ವಾಗತಾರ್ಹ ಸುದ್ದಿ!

ಸಾರ್ವಜನಿಕ ಹಣವನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಸಂಬಳ ರೂಪದಲ್ಲಿ ಪಡೆಯುವುದನ್ನು ನಿರ್ಧರಿಸುವ ಅಧಿಕಾರ ಇರುವ ದೇಶದ ಏಕೈಕ ಗುಂಪೆಂದರೆ ಅದು ಕೇಂದ್ರ, ರಾಜ್ಯ ಮಟ್ಟದಲ್ಲಿನ ಶಾಸನಕರ್ತೃಗಳು ಮಾತ್ರ. ಸಾರ್ವಜನಿಕ ಹಣವನ್ನು ವೆಚ್ಚ ಮಾಡುವುದಕ್ಕೆ ಯಾವುದೇ ಪ್ರಾಧಿಕಾರವೊಂದರ ಒಪ್ಪಿಗೆ ಇರಬೇಕು ಎಂಬ ಅಭಿಪ್ರಾಯಕ್ಕೆ ಇದು ವಿರುದ್ಧವಾದುದು. 14ನೇ ಲೋಕಸಭೆಯಲ್ಲಿ ಸಂಸದರ ಸಂಬಳ ನಿರ್ಧರಿಸಲು ಸ್ವಾಯತ್ತ ವೇತನ ಆಯೋಗ ರಚಿಸುವ ಯೋಚನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ಕೊಟ್ಟಿತ್ತು. ಆದರೆ ಮುಂದೆ ಏನೂ ಆಗಲಿಲ್ಲ.

ಸಂಸತ್‌ನಲ್ಲಿ ಕಾನೂನೊಂದನ್ನು ರೂಪಿಸಿ ಕಾಲಕಾಲಕ್ಕೆ ವೇತನ ಮತ್ತು ಭತ್ಯೆಗಳನ್ನು ಪಡೆಯುವುದಕ್ಕೆ ಸದಸ್ಯರು ಅರ್ಹರು ಎಂದು ಸಂವಿಧಾನದ 106ನೇ ಪರಿಚ್ಛೇದ ಹೇಳುತ್ತದೆ. ಸಂಸತ್‌ ಅಂತಹ ಕಾನೂನು ರೂಪಿಸುವ ತನಕ ಸಂವಿಧಾನ ರಚನಾ ಸಮಿತಿ ಸದಸ್ಯರು ಪಡೆಯುವ ವೇತನವಷ್ಟೇ ಇವರಿಗೂ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ. ಆಗ ದೇಶದ ಆರ್ಥಿಕ ಪರಿಸ್ಥಿತಿ ದುಃಸ್ಥಿತಿಯಲ್ಲಿತ್ತು. ಸಂವಿಧಾನ ನಿರ್ಮಾತೃಗಳೂ ಇದಕ್ಕೆ ತಕ್ಕಂತೆಯೇ ಸ್ಪಂದಿಸಿದ್ದರು. ದಿನಭತ್ಯೆಯ ರೂಪದಲ್ಲಿ 45 ರೂಪಾಯಿ ಪಡೆಯಬಹುದಿತ್ತಾದರೂ ಅವರು ಪಡೆಯುತ್ತಿದ್ದುದು 40 ರೂಪಾಯಿ ಮಾತ್ರ. ಅಂದರೆ, ಪ್ರಥಮ ಲೋಕಸಭೆ ಸದಸ್ಯರು ಪಡೆಯುತ್ತಿದ್ದುದು ಈ ಮೊತ್ತವಷ್ಟೇ.

1954ರಲ್ಲಿ ಸಂಸದರ ವೇತನ ಮತ್ತು ಭತ್ಯೆ ಕಾಯ್ದೆಯನ್ನು ಸಂಸತ್‌ ಅಂಗೀಕರಿಸಿತು. ಅದರಂತೆ ಸಂಸದರ ಮಾಸಿಕ ವೇತನ 400 ರೂಪಾಯಿ, ದಿನಭತ್ಯೆ 21 ರೂಪಾಯಿ ನಿಗದಿಯಾಯಿತು. ಅಲ್ಲಿಂದೀಚೆಗೆ ದೇಶದ ಆರ್ಥಿಕ ಸ್ಥಿತಿ ಹೇಗೇ ಇರಲಿ, ಜನರ ಬಡತನವನ್ನೂ ಲೆಕ್ಕಿಸದೆ ಸಂಸದರು ತಮ್ಮ ವೇತನ ಹೆಚ್ಚಿಸಿಕೊಳ್ಳುತ್ತಲೇ ಬಂದಿದ್ದಾರೆ. 1954ರ ಕಾಯ್ದೆಯನ್ನು ಸುಮಾರು 30 ಬಾರಿ ತಿದ್ದುಪಡಿಗೆ ಒಳಪಡಿಸಲಾಗಿದೆ. ಸಂಸದರಿಗೆ ಸಂಬಳ ಮತ್ತು ಭತ್ಯೆಯನ್ನು ಮಾತ್ರ ನೀಡುವ ಕಾನೂನು ರೂಪಿಸಬೇಕು ಎಂದು ಸಂವಿಧಾನ ತಿಳಿಸಿದ್ದರೂ, ಸದಸ್ಯರು ಬಳಿಕ ತಮಗೆ ಪಿಂಚಣಿಯನ್ನೂ ಮಂಜೂರು ಮಾಡಿಸಿಕೊಂಡರು. ಇಂದು ಈ ಕಾನೂನಿಗೆ ಸಂಸತ್‌ ಸದಸ್ಯರ (ಸಂಬಳ, ಭತ್ಯೆಗಳು, ಪಿಂಚಣಿ) ಕಾಯ್ದೆ ಎಂದು ಹೆಸರು. ಈ ಕಾಯ್ದೆಗೆ ಕೊನೆಯ ಬಾರಿ ಪ್ರಮುಖ ಪರಿಷ್ಕರಣೆಯಾದುದು 2010ರಲ್ಲಿ. ಇದೇ ವ್ಯಕ್ತಿಗಳು ಮುಂದೊಂದು ದಿನ ಸಮಾಜದ ಅವಲಂಬಿಗಳಾಗಿದ್ದುಕೊಂಡೇ ಸದಸ್ಯರಾಗಿ, ಸಚಿವರಾಗಿ ಮೆರೆಯುತ್ತ ವೃತ್ತಿಪರ ರಾಜಕಾರಣಿಗಳಾಗಿ ಬದಲಾಗಿ ಹೊಸದೊಂದು ವರ್ಗ ಸೃಷ್ಟಿಯಾಗುವ ಅಪಾಯವಿದೆ ಎಂದು ಸಂವಿಧಾನ ರಚನಾಕಾರರು ಅಂದೇ ಭಯಪಟ್ಟಿದ್ದರು. ಅದು ಇಂದು ಸತ್ಯವಾಗಿದೆ.

ಸಂಸದರಿಗೆ ಇರುವ ಸಾಕಷ್ಟು ಸೌಲಭ್ಯಗಳ ಜೊತೆಗೆ ‘ಸಂಸದರ ನಿಧಿ’ಯ ರೂಪದಲ್ಲಿ ವಾರ್ಷಿಕ ₹ 5 ಕೋಟಿಯ ಅನುದಾನವೂ ಇದೆ. ವಾಸ್ತವವಾಗಿ ಈ ‘ಸಂಸದರ ನಿಧಿ’ ಎಂಬುದು ಕಾರ್ಯಾಂಗ ಮತ್ತು ನ್ಯಾಯಾಂಗ ಅಧಿಕಾರಗಳಿಂದ ಪ್ರತ್ಯೇಕಗೊಂಡಿರುವುದರಿಂದ ಇಡೀ ಒಕ್ಕೂಟ ತತ್ವಕ್ಕೆ ವಿರುದ್ಧವಾದುದು. ಸಹಜವಾಗಿಯೇ ಇದು ಅಸಾಂವಿಧಾನಿಕ.

ಸಂಸತ್ತಿನ ಯಾವುದೇ ಸದನದ ಮಾಜಿ ಸದಸ್ಯನೊಬ್ಬ ತನ್ನ ಜೀವಮಾನಕ್ಕೆ ಬೇಕಾದಷ್ಟು ಪಿಂಚಣಿಯನ್ನು ಈಗ ಪಡೆಯುತ್ತಾನೆ. ಅದಕ್ಕೆ

ಕನಿಷ್ಠ ಇಂತಿಷ್ಟು ಅವಧಿ ಸದಸ್ಯನಾಗಿರಬೇಕು ಎಂಬ ನಿಯಮವೇನೂ ಇಲ್ಲ. ಒಂದು ದಿನದ ಮಟ್ಟಿಗೆ ಸದಸ್ಯನಾಗಿದ್ದರೂ ಆತ ಜೀವಮಾನ ಪೂರ್ತಿ ಪಿಂಚಣಿಗೆ ಅರ್ಹ. ಆತ ಮೃತಪಟ್ಟರೆ ಆತನ ಪತ್ನಿಗೆ ಕುಟುಂಬ ಪಿಂಚಣಿ ಸಿಗುತ್ತದೆ. 1991ರಲ್ಲಿ 9ನೇ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನ ಸಂಸತ್ತಿನ ಎರಡೂ ಸದನಗಳು ಕೆಲವೇ ನಿಮಿಷಗಳಲ್ಲಿ ಯಾವುದೇ ಚರ್ಚೆ ಇಲ್ಲದೆ, ಕೇವಲ ಒಂದು ವರ್ಷ ಸೇವೆ ಸಲ್ಲಿಸಿದ ಪ್ರತಿ ಮಾಜಿ ಸದಸ್ಯನಿಗೂ ಪಿಂಚಣಿ ನೀಡುವ ಮಸೂದೆಯನ್ನು ಅಂಗೀಕರಿಸಿದವು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ಮಸೂದೆಗೆ ಒಪ್ಪಿಗೆ ಕೊಡಬಾರದು ಎಂದು ಆಗ ನಾನು ಕೂಡ ರಾಷ್ಟ್ರಪತಿ ಆರ್‌.ವೆಂಕಟರಾಮನ್‌ ಅವರನ್ನು ಕೋರಿದ್ದೆ. ರಾಷ್ಟ್ರಪತಿ ಅವರು ಅಟಾರ್ನಿ ಜನರಲ್‌ ಅವರನ್ನು ಸಂಪರ್ಕಿಸಿ ಈ ಮಸೂದೆಗೆ ಒಪ್ಪಿಗೆ ಕೊಡದೆ ಇರಲು ನಿರ್ಧರಿಸಿದರು. ಹೀಗಾಗಿ ಮಸೂದೆ ಕಾನೂನಾಗಿ ಬದಲಾಗಲಿಲ್ಲ. ಆದರೆ 2003ರಲ್ಲಿ ಅದೇ ಮಸೂದೆಯನ್ನು ತಿದ್ದುಪಡಿಗೆ ಒಳಪಟ್ಟ ಮಸೂದೆಯ ರೂಪದಲ್ಲಿ ಮಂಡಿಸಲಾಯಿತು. ಸಂಸತ್‌ ಅದನ್ನು ಅಂಗೀಕರಿಸಿತು. ಅದು ಕಾನೂನೂ ಆಗಿಬಿಟ್ಟಿತು. ಅದರ ಅನ್ವಯ, ಜೀವಮಾನದ ಪಿಂಚಣಿಗೆ ಒಂದು ವರ್ಷದ ಸೇವೆಯೂ ಅಗತ್ಯವಿಲ್ಲ.

ದೇಶ ಕಂಡ ಮಹಾನ್‌ ಮುತ್ಸದ್ದಿ ಹಾಗೂ ಸ್ವತಃ ಸಂಸತ್‌ ಸದಸ್ಯರಾಗಿದ್ದ ನಾನಾಜಿ ದೇಶ್‌ಮುಖ್‌ ಸಂಸದರ ವೇತನ, ಭತ್ಯೆಗಳ ಬಗ್ಗೆ ಬಹಳ ಬೇಸರದಿಂದ 2004ರಲ್ಲಿ ಲೇಖನವೊಂದನ್ನು ಬರೆದಿದ್ದರು. ದೇಶ ಬಡತನ ಮತ್ತು ನಿರುದ್ಯೋಗದಿಂದ ಬಳಲುತ್ತಿರುವಾಗ ‘ನಮ್ಮ ತಥಾಕಥಿತ ಜನಪ್ರತಿನಿಧಿಗಳು’ ಶ್ರೀಮಂತರಾಗುತ್ತಲೇ ಹೋಗುವುದು, ತಮ್ಮ ಭತ್ಯೆಗಳನ್ನು ನಾಚಿಕೆ ಇಲ್ಲದೆ ಹೆಚ್ಚಿಸಿಕೊಳ್ಳುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಹೇಳಿದ್ದರು. ಸಂಸದರ ವೇತನಕ್ಕೆ ಸಂಬಂಧಿಸಿದ ಕಾಯ್ದೆ 1954ರಿಂದ 2002ರವರೆಗೆ 25 ಬಾರಿ ಪರಿಷ್ಕರಣೆ ಆಗಿದೆ ಮತ್ತು 50 ವರ್ಷಗಳಲ್ಲಿ ಸಂಬಳ, ಭತ್ಯೆ 90 ಪಟ್ಟು ಹೆಚ್ಚಾಗಿದೆ. ಜನಸಾಮಾನ್ಯರ ಒಳಿತಿಗಾಗಿ ಚರ್ಚೆ ಮಾಡಲು ಸಂಸತ್ತಿನಲ್ಲಿ ಅವಕಾಶ ನೀಡದ ವಿವಿಧ ಪಕ್ಷಗಳು, ತಮ್ಮ ಸ್ವಾರ್ಥಕ್ಕಾಗಿ ಒಗ್ಗಟ್ಟು ಪ್ರದರ್ಶಿಸುವುದನ್ನು ಅವರು ನೋವಿನಿಂದಲೇ ತೋಡಿಕೊಂಡಿದ್ದರು.

ನಾನಾಜಿ ಲೇಖನ ಬರೆಯುವಾಗ ಸಂಸದರ ಮಾಸಿಕ ವೇತನ ಇದ್ದುದು 12 ಸಾವಿರ ರೂಪಾಯಿ ಮಾತ್ರ. ಆದರೆ ಸಂಸದರೊಬ್ಬರಿಗಾಗಿ ಸರ್ಕಾರ ವ್ಯಯಿಸುವ ಹಣ 3 ಲಕ್ಷವನ್ನೂ ಮೀರಿದೆ ಎಂದು ಅವರು ತಮ್ಮ ಸ್ವಂತ ಅನುಭವವನ್ನೇ ಆಧರಿಸಿ ಹೇಳಿದ್ದರು. ಅವರ ಅಂದಾಜನ್ನೇ ಈಗಿನ ಸನ್ನಿವೇಶಕ್ಕೆ ಹೋಲಿಸಿ ಹೇಳುವುದಾದರೆ ಸಂಸದರಿಂದ ಬೊಕ್ಕಸಕ್ಕಾಗುವ ಹೊರೆ ಮಾಸಿಕ ₹ 10 ಲಕ್ಷಕ್ಕಿಂತಲೂ ಹೆಚ್ಚು. ಇದು  ಭಾರತೀಯನ ಇಂದಿನ ತಲಾ ಆದಾಯಕ್ಕಿಂತ ಕೆಲವು ನೂರು ಪಟ್ಟು ಅಧಿಕ. ಸಂಸದರ ವೇತನ ಹೆಚ್ಚಳವಾದ ತಕ್ಷಣ ಅದು ರಾಜ್ಯ ವಿಧಾನ ಮಂಡಲದಲ್ಲೂ ಪ್ರತಿಫಲಿಸುತ್ತದೆ. ಸಹಜವಾಗಿಯೇ ಪ್ರಜಾಪ್ರಭುತ್ವದ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತದೆ.
ಶಾಸನ ಸಭೆಗಳಲ್ಲಿ ಇಂದು ಬಹುಕೋಟ್ಯಧಿಪತಿಗಳಿದ್ದಾರೆ, ಅಪರಾಧ ಹಿನ್ನೆಲೆಯವರಿದ್ದಾರೆ. ಇಂತಹ ಸದಸ್ಯರಿಂದ ಎಂತಹ ಉಪಯುಕ್ತ ಚರ್ಚೆಯನ್ನು ದೇಶ ನಿರೀಕ್ಷಿಸಲು ಸಾಧ್ಯ? ಕಳೆದ 45 ವರ್ಷಗಳಲ್ಲಿ ಸಂಸತ್ತಿನಲ್ಲಿ ಒಂದೇ ಒಂದು ಖಾಸಗಿ ಸದಸ್ಯರ ಮಸೂದೆ ಅಂಗೀಕಾರಗೊಂಡಿಲ್ಲ. ಕಲಾಪ ಯಾವ ಹಂತ ತಲುಪಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಡ.

ಸಂಸದನೊಬ್ಬನಿಗೆ ಮಾಸಿಕ 3 ಲಕ್ಷ ವೇತನ ನೀಡುವುದಿದ್ದರೆ ಆತನ ಉಳಿದ ಎಲ್ಲ ವಿಶೇಷ ಭತ್ಯೆ, ರಿಯಾಯಿತಿಗಳನ್ನು ರದ್ದುಪಡಿಸಬೇಕು, ಇದರಿಂದ ಜನರ ಬೊಕ್ಕಸದ ಹೊರೆ ತಗ್ಗುತ್ತದೆ ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ಹೀಗೆ ಹೆಚ್ಚು ಹೆಚ್ಚು ವೇತನ ಪಡೆದ ಸದಸ್ಯರಿಂದ ಸಂಸತ್ತಿನ ಘನತೆ ಮತ್ತಷ್ಟು ಕುಸಿತಗೊಂಡಿರುವುದು ಇನ್ನೊಂದು ಆತಂಕದ ವಿಚಾರ. ಸಂವಿಧಾನದ ಕೆಲಸಗಳ ಪರಾಮರ್ಶೆಗೆ ರಚಿಸಲಾದ ರಾಷ್ಟ್ರೀಯ ಆಯೋಗ (ಎನ್‌ಸಿಆರ್‌ಡಬ್ಲ್ಯುಸಿ) 2002ರಲ್ಲಿ ವರದಿ ನೀಡಿತ್ತು. ಸಂಸದರು ತಮ್ಮ ಸ್ಥಾನವನ್ನು ಆಕರ್ಷಕ ಗಳಿಕೆಯ ಸ್ಥಾನವನ್ನಾಗಿ ಮಾಡಿಕೊಳ್ಳದೆ ಸೇವಾ ಕಚೇರಿಯಾಗಷ್ಟೇ ಉಳಿಸಿಕೊಳ್ಳಬೇಕು ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು.

ಎಷ್ಟೇ ವೇತನ, ಭತ್ಯೆ ಹೆಚ್ಚಿಸಿದರೂ ಸಂಸದರು ಈಗಲೂ ಹೇಳುವುದು ತಮ್ಮ ವೇತನ ಕಡಿಮೆಯಾಯಿತು ಎಂದೇ. ದೇಶದ ಅತ್ಯಂತ ಹಿರಿಯ ನಾಗರಿಕ ಸೇವಕರ (ಸಂಪುಟ ಕಾರ್ಯದರ್ಶಿ) ವೇತನದೊಂದಿಗೆ ತಮ್ಮ ವೇತನವನ್ನು ಹೋಲಿಸುವುದು, ಇತರ ಕೆಲವು ದೇಶಗಳ ಸಂಸದರೊಂದಿಗೆ ಹೋಲಿಸಿಕೊಳ್ಳುವುದು ಖಂಡಿತ ತಪ್ಪು. ಏಕೆಂದರೆ ಅತ್ಯಂತ ಹಿರಿಯ ಅಧಿಕಾರಿಯೂ ಉತ್ತಮ ವೇತನ ಪಡೆಯುವುದು ಮೂರು ದಶಕಗಳ ತನ್ನ ಸೇವೆಯ ಕೊನೆಯ ಹಂತದಲ್ಲಿ ಮಾತ್ರ. ವಿದೇಶಿ ಸಂಸದರ ವೇತನವನ್ನು ಅಲ್ಲಿನ ಜನರ ತಲಾ ಆದಾಯ, ಕರೆನ್ಸಿಯ ವಿನಿಮಯ ಮೌಲ್ಯ, ಕೊಳ್ಳುವ ಸಾಮರ್ಥ್ಯದಂತಹ ವಿಚಾರಗಳೊಂದಿಗೆ ಹೋಲಿಸಿ ನೋಡಬೇಕಾಗುತ್ತದೆ. ವಿದೇಶಿ ಸಂಸದರ ವೇತನ, ಭತ್ಯೆ, ಪಿಂಚಣಿ ಬಗ್ಗೆ ಹೋಲಿಸಿ ನೋಡಿದಾಗಲೂ ನಾವು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದೇವೆ. ಇಂಗ್ಲೆಂಡ್‌, ಕೆನಡಾ, ಆಸ್ಟ್ರೇಲಿಯಾ, ಜಪಾನ್‌, ಅಮೆರಿಕ, ಆಸ್ಟ್ರಿಯಾ, ಬೆಲ್ಜಿಯಂ, ಐರ್ಲೆಂಡ್‌, ನೆದರ್ಲೆಂಡ್ಸ್‌, ಜಿಂಬಾಬ್ವೆ ಮೊದಲಾದೆಡೆ ಸಂಸದರು ತಮ್ಮ ನಿವೃತ್ತಿ ಪಿಂಚಣಿ ನಿಧಿಗೆ ತಾವೇ ಕೊಡುಗೆ ನೀಡಬೇಕು. ಅವರ ವೇತನದಿಂದ ಈ ನಿಧಿಗೆ ಹಣ ಮುರಿದುಕೊಳ್ಳಲಾಗುತ್ತದೆ. ನಿರ್ದಿಷ್ಟ ನಿವೃತ್ತಿಯ ವಯಸ್ಸಿನ ನಂತರ ಅವರು ಪಾವತಿಸಿದ ಮೊತ್ತಕ್ಕೆ ತಕ್ಕಂತೆ ಪಿಂಚಣಿ ಸಿಗುತ್ತದೆ. ಆದರೆ ನಮ್ಮಲ್ಲಿ ಪಿಂಚಣಿ ನಿಧಿಗೆ ಪಾವತಿಯೂ ಇಲ್ಲ, ನಿವೃತ್ತಿ ವಯಸ್ಸು ಎಂಬುದೇ ಇಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ತಮ್ಮ ವೇತನ, ಭತ್ಯೆಗಳನ್ನು ಮೇಲಿಂದ ಮೇಲೆ ಹೆಚ್ಚಿಸಿಕೊಳ್ಳುತ್ತ ಜನರಿಂದ ಗೌರವ ಕಳೆದುಕೊಳ್ಳುವ ಸ್ಥಿತಿ ಅತ್ಯಂತ ಬೇಸರದ ಸಂಗತಿ. ರಾಜಕೀಯ ಎಂಬುದು ಸೇವೆ, ತ್ಯಾಗದ ಬದಲಾಗಿ ಬಹಳ ದೊಡ್ಡ ಆದಾಯ ಗಳಿಸುವ ವೃತ್ತಿಯಾಗಿ ಬದಲಾಗಿದೆ. ಇಲ್ಲಿ ಭಾರಿ ವೇತನ ಮಾತ್ರವಲ್ಲ, ಅಧಿಕಾರವೂ ಜತೆಗಿರುತ್ತದೆ. ಬಹಳ ಬೇಗ ‘ಶ್ರೀಮಂತ’ರಾಗುವುದಕ್ಕೆ ಇದು ರಹದಾರಿ. ಕೇಂದ್ರದ ನೂತನ ಸರ್ಕಾರ ಭ್ರಷ್ಟಾಚಾರ ರಹಿತ, ಪಾರದರ್ಶಕ, ಜನಸ್ನೇಹಿ ಅಧಿಕಾರ ನೀಡುವ ಮಾತನ್ನು ಆಡುತ್ತಿದೆ. ಜನಪ್ರತಿನಿಧಿಗಳಿಂದ ತ್ಯಾಗ, ಹೊಸ ಸಾರ್ವಜನಿಕ ಜೀವನವೂ ಈಗಲೇ ಆರಂಭವಾಗಲಿ. ಹಣಕಾಸು ವಿಚಾರದಲ್ಲಿ ಕಡಿಮೆ ಆಕರ್ಷಣೆಯಿಂದ ಕೂಡಿ, ದೇಶಕ್ಕೆ ಅರ್ಪಿಸಿಕೊಳ್ಳುವಂತಹ ಸ್ಥಾನವಾಗಿ ಬದಲಾಗಲಿ. ಆದರೆ ಇಂತಹ ಆದರ್ಶ ಆಡಿಕೊಳ್ಳಲು ಮಾತ್ರ ಹೊರತು ರೂಢಿಗೆ ತರುವುದಕ್ಕಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ಸಂಸದರ ವೇತನ ಹೆಚ್ಚಳವನ್ನಷ್ಟೇ ಸಮರ್ಥಿಸುವಂತಹ ಮತ್ತೊಂದು ಆಯೋಗ ರಚಿಸುವುದು ಸಲ್ಲ. ಬದಲಿಗೆ ಸಂಸದರ ಅಗೋಚರ ಭತ್ಯೆಗಳನ್ನು ಪ್ರಕಟಿಸುವ ಕೆಲಸವಾಗಬೇಕು. ‘ಕೆಲಸ ಇಲ್ಲ, ವೇತನವೂ ಇಲ್ಲ’ ಎಂಬ ನಿಯಮ ಸಂಸದರಿಗೂ ಅನ್ವಯವಾಗಬೇಕು. ಬಡವರಿಗೆ ಗ್ಯಾಸ್‌ ಸಬ್ಸಿಡಿ ಬಿಟ್ಟುಕೊಡಲು ಹೇಳುವಾಗ, ಜನಪ್ರತಿನಿಧಿಗಳೇ ತಮ್ಮ ಹೆಚ್ಚುವರಿ ಭತ್ಯೆಗಳನ್ನು ಬಿಟ್ಟುಕೊಡಲು ಮುಂದಾಗಬೇಕು. ತ್ಯಾಗ ಎಂಬುದು ಸಂಸದರಿಂದಲೇ ಆರಂಭವಾದಾಗ ವಿಧಾನ ಮಂಡಲಗಳ ಸದಸ್ಯರ ಮೇಲೂ ಅದು ಪರಿಣಾಮ ಬೀರುತ್ತದೆ. ಇದಕ್ಕೆ ಜನರಿಂದಲೂ ಬೆಂಬಲ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT