ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರ ಪ್ರಜ್ಞೆಯ ಪ್ರಬುದ್ಧ ‘ಊರ್ಮಿಳಾ’

Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ರಾಮಾಯಣ, ಮಹಾಭಾರತ ಕಾವ್ಯಗಳಲ್ಲಿ ವಿಜೃಂಭಿಸುವ ವೀರಗಾಥೆಯ ಪರಾಕ್ರಮಿ ನಾಯಕರಿಗಿಂತ ಸದ್ದಿಲ್ಲದೆ ತಮ್ಮ ವಿಶಿಷ್ಟ ವ್ಯಕ್ತಿತ್ವಗಳಿಂದ ನಮ್ಮ ಮನಸ್ಸನ್ನು  ಕದಿಯುವಂಥ, ಪರಿಣಾಮಕಾರಿಯಾದ ಅನೇಕ ಎಲೆಮರೆಯ ಪಾತ್ರಗಳು ಗೋಚರಿಸುತ್ತವೆ. ಅಂಥ ಪಾತ್ರಗಳ ಅಂತರಂಗದ ದನಿಯ ತರಂಗಗಳು ಅನಂತ, ವ್ಯಾಪ್ತಿ ವಿಸ್ತೃತವಾದದ್ದು. ಮೇಲ್ನೋಟಕ್ಕೆ ಕಥೆಯ ನಡೆಗೆ ಅಷ್ಟೇನೂ ಮುಖ್ಯವೆನಿಸದ, ಗೌಣ ಎನಿಸುವ ಕೆಲವು ಸ್ತ್ರೀ ಪಾತ್ರಗಳನ್ನೆತ್ತಿಕೊಂಡು, ಅವುಗಳ ಒಳಗಿನ ತುಮುಲ- ದುಃಖ,ದುಮ್ಮಾನ, ವ್ಯಕ್ತಿತ್ವಗಳನ್ನು ಶೋಧಿಸಿ, ವಿಶ್ಲೇಷಿಸುವ ಅನೇಕ ಕೃತಿಗಳು ಈಗಾಗಲೇ ಹೊರಬಂದಿವೆ. ಇಂಥದ್ದೇ ಒಂದು ಉತ್ತಮ ಪ್ರಯತ್ನ ಎಚ್.ಎಸ್.
ವೆಂಕಟೇಶಮೂರ್ತಿಯವರ ‘ಊರ್ಮಿಳಾ’ ಏಕವ್ಯಕ್ತಿ ನಾಟಕ. ನಗರದ ಕೆ.ಎಚ್. ಕಲಾಸೌಧದಲ್ಲಿ ಇತ್ತೀಚೆಗೆ ‘ಸಂಚಾರಿ’ ತಂಡದ ದಶಮಾನೋತ್ಸವ ಸಮಾರಂಭದ ಸಮಾರೋಪ ಸಂದರ್ಭದಲ್ಲಿ ಪ್ರದರ್ಶಿತವಾದ ನಾಟಕವಿದು.

ಊರ್ಮಿಳೆಯ ನೆನಪಿನ ಮೆರವಣಿಗೆಯಲ್ಲಿ ಕಳೆದ ೧೪ ವರ್ಷಗಳ ಹಿಂದಿನ ಪ್ರತಿಯೊಂದು ಸಂಗತಿ, ಸನ್ನಿವೇಶವೂ ಅನಾವರಣಗೊಳ್ಳುತ್ತ, ಅವಳದಕ್ಕೆ ಮುಖಾಮುಖಿಯಾಗಿ ಪ್ರತಿಕ್ರಿಯಿಸುವ ಪ್ರಹಸನ ಊರ್ಮಿಳಾ. ಇಲ್ಲಿ ಊರ್ಮಿಳಾ ಅಂದಿನಿಂದ ಇಂದಿನವರೆಗೂ ನಡೆದ ಎಲ್ಲ ಸಂಗತಿಗಳನ್ನು ತಾನು ಕಂಡಂತೆ ಬಿಚ್ಚಿಡುತ್ತಾ ಹೋಗುತ್ತಾಳೆ.

ಗಂಡನಿಲ್ಲದ ಈ ೧೪ ವರ್ಷಗಳನ್ನು ಅವಳು ಹೇಗೆ ಕಳೆದಿರಬಹುದೆಂಬ ಕವಿಹೃದಯದ ಸೃಜನಶೀಲ ಕಲ್ಪನೆ ಇಲ್ಲಿದೆ. ಅವಳು ತನ್ನ ಅರಮನೆಯನ್ನು ೧೪ ವರ್ಷಗಳ ನಂತರ ಪ್ರವೇಶಿಸುತ್ತಿದ್ದಾಳೆ. ಎಲ್ಲವೂ ಅಂದಿನಂತೆಯೇ, ವಸ್ತುಗಳು ಇಟ್ಟಂತೆಯೇ ಇವೆ, ಆದರೆ ಅಂದಿನ ನೆಮ್ಮದಿಯ ಮನಸ್ಥಿತಿಯೊಂದನ್ನು ಬಿಟ್ಟು. ಅರಮನೆಯ ವಿದ್ಯಮಾನಗಳನ್ನೆಲ್ಲ ಚೇಟಿ ಶ್ರುತಕೀರ್ತಿಯ ಮೂಲಕ ಅರಿತುಕೊಳ್ಳುವಳು.
ರಾಮನು ಹೆಂಡತಿ, ತಮ್ಮನೊಡನೆ ಕಾಡಿಗೆ ತೆರಳುವಾಗ ಲಕ್ಷ್ಮಣ, ತಮ್ಮೊಡನೆ ಬರಲಿಚ್ಛಿಸುವ ಊರ್ಮಿಳೆಯನ್ನು ತಡೆದು ಅವಳು ಅಯೋಧ್ಯೆಯಲ್ಲಿ ಹಿರಿಯರ ಯೋಗಕ್ಷೇಮ, ಧರ್ಮದ ಪಾಲನೆ ಮತ್ತು ಸಂತಾನಗಳ ರಕ್ಷಣೆಯ ಜವಾಬ್ದಾರಿ ನಿಭಾಯಿಸಬೇಕು ಎಂದು ಎಚ್ಚರಿಸಿ ಕಾಡಿಗೆ ತೆರಳುವನು. ಪತಿಯ ಸಾನ್ನಿಧ್ಯವಿಲ್ಲದ ಈ ನವ ವಧು ಯೌವ್ವನವತಿ ಸತಿ ಅದ್ಹೇಗೆ ಜೀವಿಸಿಯಾಳು ಎಂಬ ಕಿಂಚಿತ್ ಕಾಳಜಿಯೂ ಇಲ್ಲದೆ ನಿರ್ದಯನಾಗಿ ತೆರಳುವ ಗಂಡನ ವರ್ತನೆ ಅವಳನ್ನು ದುಃಖದ ಪ್ರಪಾತಕ್ಕೆ ತಳ್ಳುತ್ತದೆ. ಅವಳನ್ನು ಸಂತೈಸುವವರಾರೂ ಅಲ್ಲಿರಲಿಲ್ಲ. ಆದರೆ  ೧೪ ವರ್ಷಗಳ ನಂತರ ನಾಡಿಗೆ ಹಿಂತಿರುಗಿದ ಗಂಡ ಅವಳಿಗೆ ಕೊಟ್ಟ ಉಡುಗೊರೆಯಾದರೂ ಏನು?  ಸರಯೂ ನದೀತೀರದಲ್ಲಿ ತಮ್ಮನ್ನು ಎದುರುಗೊಳ್ಳದ ಹೆಂಡತಿಯ ಬಗ್ಗೆ ಆಕ್ಷೇಪಿಸಿ, ಎಲ್ಲರೂ ಏನಂದುಕೊಂಡಾರೆಂದು ಶಿಷ್ಟಾಚಾರದ ಬಗ್ಗೆ ವ್ಯಾಕುಲತೆ ತೋರುತ್ತಾನೆ. ಅಷ್ಟು ದೀರ್ಘ ಕಾಲದ ನಂತರ ಭೇಟಿಯಾದ ಹೆಂಡತಿಯ ಬಗ್ಗೆ ರೋಮಾಂಚಿತಗೊಳ್ಳದೆ ನಿರ್ಭಾವುಕನಂತೆ ಲಕ್ಷ್ಮಣ ಮಾತನಾಡುವುದಲ್ಲದೆ, ತಾನು ಈ ಹಿಂದೆ ತಿಳಿಸಿದ್ದ ಕರ್ತವ್ಯಗಳ ಪಾಲನೆಯ ಬಗ್ಗೆ ವಿಚಾರಿಸುತ್ತಾನೆ. ದೀರ್ಘ ಕಾಲದ ವಿರಹಿ ಊರ್ಮಿಳೆಯ ಭಾವುಕ ಮನಸ್ಥಿತಿಯ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ, ಅವಳ ತಲ್ಲಣಗಳನ್ನು ಅರ್ಥಮಾಡಿಕೊಳ್ಳದ ಅವನ ಹೃದಯ ಅವಳನ್ನು ಇರಿಯುತ್ತದೆ. ಅವನೆಲ್ಲ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿದ ಊರ್ಮಿಳಾ, ಕಡೆಯಲ್ಲಿ ಸಂಸಾರವೇ ಮಾಡದ ಅವನ ಸಂತಾನ ರಕ್ಷಣೆ ಎಂಬ ಹುಂಬ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡುತ್ತಾಳೆ. ವನದ ಅಂಗಳದಲ್ಲಿ ತಾನು ನೆಟ್ಟು ಬೆಳೆಸಿದ ಸಸಿಗಳು ಇಂದು ವಿಧ ವಿಧದ ವೃಕ್ಷಗಳಾಗಿ ಬೆಳೆದು ಪಲ್ಲೈಸಿರುವ ಬಗ್ಗೆ ಅತೀವ ಪ್ರೀತಿಯಿಂದ, ತನ್ನ ಈ ಕರುಳಕುಡಿಗಳನ್ನು ಜತನವಾಗಿ ಪೋಷಿಸಿರುವ ಬಗ್ಗೆ ತೃಪ್ತಿಯಿಂದ ಹೇಳಿಕೊಳ್ಳುತ್ತಾಳೆ.

ನಿತ್ಯ ಸಂತೋಷ ನೀಡುವ ಹಸಿರಿನ ಒಡನಾಟದಲ್ಲಿ ಅವಳ ಸಾರ್ಥಕತೆಯ ಬಾಳಿನ ಕ್ಷಣಗಳನ್ನು ಬಿಂಬಿಸುವ ಅವಳ ತನ್ಮಯತೆಯ ಭಾವ ಪರಾಕಾಷ್ಠೆ ಮುಟ್ಟುತ್ತದೆ. ವಿರಹವೇದನೆಯಲ್ಲಿ ಕುಗ್ಗುವ ಬದಲು ತನ್ನ ಚೈತನ್ಯವನ್ನು ಕ್ರಿಯಾಶೀಲವಾಗಿ ಬಳಸಿಕೊಡು ಸಾಧನಗೈವ ಇಲ್ಲಿನ ಊರ್ಮಿಳಾ ಅರ್ಥವಂತಿಕೆಯ ಸಾಕಾರಮೂರ್ತಿ, ಪ್ರಬುದ್ಧೆಯಾಗಿ ಆಪ್ತಳಾಗುತ್ತಾಳೆ. ಇಂಥ ಉನ್ನತ ಸಂದೇಶ ನೀಡುವ ಈ ಪರಿಸರ ಪ್ರೇಮಿ, ತ್ಯಾಗಜೀವಿ ಊರ್ಮಿಳೆಗೊಂದು ದೊಡ್ಡ ಸಲಾಮು!

ಈ ನಾಟಕದ ವಿಶೇಷವನ್ನು ಎರಡು ಭಾಗಗಳಲ್ಲಿ ಕಾಣಬಹುದು. ಮೊದಲನೆಯದು, ಊರ್ಮಿಳೆ ಪಾತ್ರದ ಬಗೆಗಿನ ಕವಿಯ ಅನನ್ಯ ಕಲ್ಪನೆ. ಅವಳ ಚಿಂತನ-ಮಂಥನ, ವಂಗ್ಯದ ನುಡಿಗಳು ಎಂಥವರನ್ನೂ ಚಿಂತನೆಗೆ ಹಚ್ಚುತ್ತವೆ. ಸತ್ಯದ ಬೆಳಕಿನಲ್ಲಿ ಕೆಲ ವಾಸ್ತವ ಸಂಗತಿಗಳನ್ನು ಮನಗಾಣಿಸುತ್ತವೆ.   ನ್ಯಾಯ- ಅನ್ಯಾಯಗಳ ಅನೇಕ ಮೂಲ ಪ್ರಶ್ನೆಗಳನ್ನೆತ್ತುವ ದಿಟ್ಟತನ ಪ್ರದರ್ಶಿಸುವ ದಾಷ್ಟಿಕ ಸ್ವಭಾವದ ಹೆಣ್ಣು ಇಲ್ಲಿನ ಊರ್ಮಿಳಾ. ಯಾರದೋ ತಪ್ಪಿಗೆ ಮತ್ಯಾರೋ ಬಲಿಯಾಗುವ ಅಮಾನವೀಯತೆಯ ಕ್ರೌರ್ಯ ಘಟನೆಗಳಿಗೆ ಹೊಣೆ ಯಾರು? ಇಂಥ ಕೆಟ್ಟ ರಾಜಕೀಯದಲ್ಲಿ ವಿನಾ ಕಾರಣ ಬಲಿಯಾಗುವ, ನಾಶವಾಗಿ ಹೋಗುವ ಜನಸಾಮಾನ್ಯರ ಪಾಡೇನು ಎಂದು ಲಂಕಾದಹನದ ದಾರುಣ ಪ್ರಕರಣ ಕುರಿತು ಮೊನಚು ಕಟಕಿಯಾಡುತ್ತಾಳೆ.

ಶಕ್ತಿಶಾಲಿ ಪಾತ್ರವಾಗಿ ಹೊರಹೊಮ್ಮಿದ ಊರ್ಮಿಳೆಯಲ್ಲಿ ಪರಕಾಯ ಪ್ರವೇಶ ಮಾಡಿ ನೋಡುಗರಿಗೆ ರಸ ರೋಮಾಂಚನದ ಅನುಭವ ನೀಡಿದ ಅಭಿನೇತ್ರಿ ಎನ್. ಮಂಗಳಾ ಅವರದ್ದು ಅದ್ಭುತ ನಟನೆ. ರಂಗದ ಮೇಲೆ ಏಕಾಂಗಿಯಾಗಿ ಅಭಿನಯಿಸಿದ ಮಂಗಳಾ ನಾನಾ ಪಾತ್ರಗಳನ್ನು ಎದುರು ನಿಲ್ಲಿಸುತ್ತಾರೆ. ಒಮ್ಮೆ ದಶರಥನ ನಡುಗು ಕಂಠ, ವೃದ್ಧಾಪ್ಯದ ಆಂಗಿಕ ಅಭಿವ್ಯಕ್ತಿ, ಮರುಕ್ಷಣವೇ ಕುಪಿತ, ಸೊಕ್ಕಿನ ಕೈಕೇಯಿ ಅವತರಿಸುತ್ತಾಳೆ. ಅವುಗಳನ್ನೆಲ್ಲ ಅರುಹುವ ಸಖಿ ಶ್ರುತಕೀರ್ತಿಯ ವಿಧೇಯ ನಿರೂಪಣೆ, ರಾಮ ಪತ್ನಿ ಸಮೇತ ಕಾಡಿಗೆ ತೆರಳುವ ದೃಶ್ಯದ ನಟನೆ, ಲಕ್ಷ್ಮಣನ ಆಣತಿಯ ಮಾತುಗಳ ಅನುಕರಣೆ, ಅದರಂತೆ ಗೃಹಸ್ಥಧರ್ಮದಲ್ಲಿ ಗಂಧ ತೇಯುವ ಜೀವನಾಭಿವ್ಯಕ್ತಿ ಹೀಗೆ ವಿವಿಧ ಪಾತ್ರಗಳ ಭಿನ್ನತೆ ಸೂಸುವ ವಿಭಿನ್ನ ಕಂಠಸಿರಿಯ ಪ್ರದರ್ಶನ, ಅಭಿನಯ ವೈವಿಧ್ಯ ಮಂಗಳಾ ಅವರ ಸಾಮರ್ಥ್ಯ. ಕೊಂಚವೂ ಬೇಸರ ತರಿಸದ ಈ ಏಕವ್ಯಕ್ತಿ ಪ್ರದರ್ಶನ ಸಾರ್ಥಕ ಪ್ರಯೋಗ. 

ಕಡೆಯಲ್ಲಿ ಊರ್ಮಿಳೆ ನೆಲದ ಮೇಲೆ ಹರಡಿದ್ದ ಹಸಿರು, ಕೆಂಪು ಗುಚ್ಛಗಳ ವಸ್ತ್ರಗಳನ್ನೆತ್ತಿ ಸಾಂಕೇತಿಕವಾಗಿ ಮರವಾಗಿ ನಿಂತು, ಹಸಿರುನೀತಿ ಸಾರುವ ದೃಶ್ಯ, ಮನಸ್ಸನ್ನು ತಟ್ಟುತ್ತದೆ. ಸರಳ ಸುಂದರ ಉಡುಗೆ ತೊಡುಗೆಗಳ ಊರ್ಮಿಳೆಗೆ ಬೆಳಕು ತೋರಿಸಿದ ಅರವಿಂದ ಕೊಪ್ಳೀಕರ್ ಒಪ್ಪವಾಗಿ ನೆರವಾದರು, ಜೊತೆಗೆ ಗಜಾನನ ಟಿ.ನಾಯ್ಕ ಅವಳ ಅಂತರಂಗದ ತುಮುಲಗಳನ್ನು ಎತ್ತಿಹಿಡಿಯುವಂತೆ ಸಂಗೀತ ಜೋಡಿಸಿದರು. ಆಕೆಯ ಪ್ರತಿ ಹೆಜ್ಜೆಗೆ ತಕ್ಕುದಾದ, ಪಾತ್ರ ಬದಲಿಸಲು ನೆರವಾಗುವಂಥ ಕೆತ್ತನೆಯ ಕಂಭವನ್ನೊಳಗೊಂಡ  ಸರಳರಂಗವನ್ನು ಅಣಿಗೊಳಿಸಿದ ಮಾಲತೇಶ ಬಡಿಗೇರರ ಸಜ್ಜಿಕೆ ಚೆನ್ನಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT