ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಬಳಕೆಗಿರಲಿ ಮಿತಿ ಲೆಕ್ಕ ತಪ್ಪಿದರೆ ದಂಡ ಪಾವತಿ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಜನರು ಬ್ಯಾಂಕಿಂಗ್ ವ್ಯವಹಾರಗಳನ್ನು ಹೊಂದುವ ವಿಧಾನಗಳು ಸತತವಾಗಿ ವಿಕಸನಗೊಳ್ಳುತ್ತಿವೆ. ದಶಕದ ಹಿಂದೆ ಅಗತ್ಯವಾದ ಹಣಕಾಸು ಸೇವೆಗಳಿಗಾಗಿ ಖಾತೆದಾರರು ಬ್ಯಾಂಕ್‌ ಶಾಖೆಗೇ ಭೇಟಿ ನೀಡುವುದು ಅನಿವಾರ್ಯವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಗ್ರಾಹಕರಿಗೆ ಬ್ಯಾಂಕಿಂಗ್ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ವೈವಿಧ್ಯಮಯ ಸೇವೆಗಳು, ಆಯ್ಕೆಯ ಅವಕಾಶಗಳು ಲಭ್ಯವಿವೆ. ಬ್ಯಾಂಕ್‌ ಶಾಖೆಗೆ ಭೇಟಿ ನೀಡಿದಾಗ ದೊರೆಯುತ್ತಿದ್ದಂತಹ ಪ್ರಯೋಜನಗಳನ್ನೇ ಈ ಆಧುನಿಕ ಸೌಲಭ್ಯಗಳ ಮೂಲಕ ಪಡೆಯಬಹುದಾಗಿದೆ. ಈ ಪೈಕಿ ಎಟಿಎಂ ಸಹ ಒಂದು ಸುಲಭ ಸಾಧನವಾಗಿದೆ.

ಮೊಬೈಲ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಚಾನೆಲ್‌ಗಳು ಗ್ರಾಹ ಕರಿಗೆ ಅತ್ಯಂತ ಸಮರ್ಥ ಮತ್ತು ಅನುಕೂಲಕರ ರೀತಿಯ ಬ್ಯಾಂಕಿಂಗ್ ವಹಿವಾಟು ಸೇವೆಗ ಳನ್ನು ಒದಗಿಸುತ್ತವೆ. ನಗದುರಹಿತ ಕೆಲವು ವಹಿವಾಟುಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ಚಾನೆಲ್‌ ವಿಧಾನಗಳ ಬಳಕೆಯನ್ನು ಅತ್ಯುತ್ತಮಪಡಿಸಲು ಇಲ್ಲಿ ಕೆಲವು ಕಿವಿಮಾತುಗಳಿವೆ. ಈ ವಿಧಾನಗಳನ್ನೇ ಅನುಸರಿಸುವ ಮೂಲಕ ಎಟಿಎಂ ಘಟಕದ ಸೇವೆಯನ್ನು ಹಣ ಪಡೆಯು ವುದಕ್ಕಷ್ಟೇ ಬಳಸಿಕೊಳ್ಳಬಹುದು.

ನಗದು ರಹಿತ ವಹಿವಾಟುಗಳಿಗೆ ಬ್ಯಾಂಕ್‌ಗಳು ಒದಗಿಸುವ ಮಿಸ್ಡ್ ಕಾಲ್ ಸೇವೆಯನ್ನು ಬಳಸಿರಿ. ಇದು ಸಂಪೂರ್ಣ ಉಚಿತ ಸೇವೆಯಾಗಿದೆ ಎಂಬುದನ್ನು ನೆನಪಿಡಿ. ನಗದು ಹಣ ಪಡೆಯುವುದಕ್ಕೆ ಹೊರತಾದ ವಹಿವಾಟುಗಳಿಗಾಗಿ ಕೆಲವು ಬ್ಯಾಂಕುಗಳು ಮಿಸ್ಡ್ ಕಾಲ್ ಬ್ಯಾಂಕಿಂಗ್ ಹೆಸರಿನಲ್ಲಿ ಉಚಿತ ಸೇವೆಯನ್ನು ಒದಗಿಸುತ್ತಿವೆ.

ಆ ಮೂಲಕ ಗ್ರಾಹಕರು ತಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ, ಕಳೆದ ಐದು ವಹಿವಾಟುಗಳಲ್ಲಿ ಎಷ್ಟು ಹಣ ಜಮಾ ಮಾಡಲಾಗಿದೆ ಅಥವಾ ವಾಪಸ್‌ ಪಡೆಯಲಾಗಿದೆ ಎಂಬ ಮಾಹಿತಿ ಕೋರಿದಾಗ ತಕ್ಷಣವೇ ಬ್ಯಾಂಕ್‌ನ ಕಡೆಯಿಂದ ಎಸ್‌ಎಂಎಸ್ ಸಂದೇಶ ರವಾನೆಯಾಗುತ್ತದೆ. ಈ ಸೇವೆಯನ್ನು ತಮ್ಮ ಖಾತೆಯಲ್ಲಿರುವ ಬಾಕಿ ಮೊತ್ತವನ್ನು ತಿಳಿದುಕೊಳ್ಳಲು, ಮಿನಿ-ಸ್ಟೇಟ್‌ಮೆಂಟ್ ಪಡೆಯಲು, ಚೆಕ್ ಪುಸ್ತಕವನ್ನು ಪಡೆಯುವುದಕ್ಕಾಗಿ ಕೋರಿಕೆ ಸಲ್ಲಿಸಲು ಮತ್ತು ಖಾತೆಯ ಸ್ಟೇಟ್‌ಮೆಂಟ್‌ಗಳನ್ನು ಪಡೆಯಲು ಬಳಸಿಕೊಳ್ಳಬಹುದಾಗಿದೆ.

ಈ ರೀತಿಯ ವಹಿವಾಟುಗಳನ್ನು, ನೆಟ್‌ವರ್ಕ್ ಉತ್ತಮ ಸ್ಥಿತಿಯಲ್ಲಿರುವಾಗ, ಕೆಲವೇ ಸೆಕೆಂಡ್‌ಗಳಲ್ಲಿ ಮಾಡಿ ಮುಗಿಸಬಹುದು. ಈ ಸೇವೆಯನ್ನು ಸ್ಮಾರ್ಟ್‌ಫೋನ್‌ಗಳಿಂದ ಮಾತ್ರವಲ್ಲ, ಸಾಮಾನ್ಯ ಫೋನ್‌ಗಳಿಂದಲೂ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ, ಸ್ಥಿರ ದೂರವಾಣಿಯಿಂದಲೂ ಬ್ಯಾಂಕ್‌ ಪ್ರಕಟಿಸಿದ ಶುಲ್ಕ ರಹಿತ ಕರೆಯ ದೂರವಾಣಿ ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡುವ ಮೂಲಕ ಮಾಹಿತಿ ಪಡೆಯಬಹುದು.

ಈ ಮಿಸ್ಡ್‌ಕಾಲ್‌ ಸೇವೆ ಉಚಿತ. ಅಲ್ಲದೇ, ಇದರಿಂದ ಶಾಖೆಗೆ ಅಥವಾ ಹತ್ತಿರದ ಎಟಿಎಂಗೆ ಹೋಗುವ ಸಮಯ ಮತ್ತು ಶ್ರಮವೂ ಉಳಿಯುತ್ತದೆ. ನಿಮ್ಮ ಬ್ಯಾಂಕ್‌ನ ಉಚಿತ ಸೇವೆ ಒದಗಿಸುವ ದೂರವಾಣಿ ಸಂಖ್ಯೆಯನ್ನು ಸೇವ್ ಮಾಡಿಕೊಂಡು, ಸುಲಭ ಮತ್ತು ಉಚಿತ ಸೇವೆಗಳನ್ನು ನಿಮಗೆ ಅಗತ್ಯ ಎನಿಸಿದಾಗಲೆಲ್ಲಾ ಪಡೆಯುತ್ತಿರಿ.

ನಗದು ವಹಿವಾಟಿಗೆ ಡೆಬಿಟ್ ಕಾರ್ಡ್‌ ಬಳಸಿ
ನಗದು ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವುದು ಈಗಿನ ದಿನಗಳಲ್ಲಿ ಅಪಾಯಕಾರಿಯೇ ಸರಿ. ಆದ್ದರಿಂದ ಸಾಧ್ಯವಿರುವ ಕಡೆಯಲ್ಲೆಲ್ಲಾ ಡೆಬಿಟ್ ಕಾರ್ಡುಗಳನ್ನು ಬಳಸುವುದನ್ನು ರೂಢಿಸಿಕೊಳ್ಳಿರಿ. ಡೆಬಿಟ್ ಕಾರ್ಡ್‌ಗಳನ್ನು ಷಾಪಿಂಗ್‌ ವೇಳೆ ಬಳಸುವವರು ಪಿಒಎಸ್ ಟರ್ಮಿನಲ್‌ನಲ್ಲಿ (ಪಾಯಿಂಟ್‌ ಆಫ್‌ ಸೇಲ್‌ ಯಂತ್ರದಲ್ಲಿ) ತಮ್ಮ ಖಾತೆಗೆ ಸಂಬಂಧಿಸಿದ ಪಿನ್ ಸಂಖ್ಯೆಯನ್ನು ದಾಖಲಿಸಬೇಕು.

ಇದು ಸುರಕ್ಷಿತ ಮತ್ತು ಅನುಕೂಲಕರ ಎರಡೂ ಅಂಶಗಳನ್ನು ಒಳಗೊಂಡಿದೆ.  ಜತೆಗೆ ಈ ಸೌಲಭ್ಯ ನಿಮಗೆ, ನಿಮ್ಮ ಬ್ಯಾಂಕ್ ಒದಗಿಸುವಂತಹ ಕೊಡುಗೆಗಳು, ರಿಯಾಯಿತಿಗಳು ಮತ್ತು ಕ್ಯಾಶ್ ಬ್ಯಾಕ್ ಸೌಲಭ್ಯಗಳನ್ನೂ ಒದಗಿಸುತ್ತದೆ. ಈ ಎಲ್ಲಾ ಸೌಲಭ್ಯಗಳು ನಿಮಗೆ ನಗದು ಪಾವತಿಗಳನ್ನು ಮಾಡಿದರೆ ದೊರಕುವಂತದ್ದಲ್ಲ.

ಮೊಬೈಲ್,‌ ನೆಟ್ ಬ್ಯಾಂಕಿಂಗ್‌ನಂತಹ ಪರ್ಯಾಯ ಮಾರ್ಗ ಬಳಸಿ
ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ತಮ್ಮ ಗ್ರಾಹಕರ ಅಗತ್ಯಗಳಿಗಾಗಿ ವಿವಿಧ ಮಾರ್ಗ ಗಳನ್ನು ಹೊಂದಿವೆ. ಮೊಬೈಲ್ ಬ್ಯಾಂಕಿಂಗ್ ನಿಮಗೆ ಯಾವುದೇ ಸ್ಥಳದಿಂದ ಬೇಕಾದರೂ ಅಥವಾ ನೀವು ಪ್ರಯಾಣಿಸುತ್ತಿರುವಾಗಲೂ ಸಹ ಸೇವೆಯನ್ನು ಒದಗಿಸುತ್ತದೆ. ಇದು ನಿಮಗೆ ಶುಲ್ಕದ ಅನುಕೂಲತೆಯೊಂದಿಗೆ, ಬಹಳ ಸುರಕ್ಷಿತ ವಹಿವಾಟುಗಳ ಸೇವೆಯನ್ನೂ ಒದಗಿಸುತ್ತದೆ. ನೆಟ್ ಬ್ಯಾಂಕಿಂಗ್ ಬಹಳ ಸರಳ, ಸುರಕ್ಷಿತ ಮತ್ತು ಶೀಘ್ರವಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು  ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರದ ಗ್ರಾಹಕರಿಗೂ ಸಹ ತಮ್ಮ ಖಾತೆ ವಿವರಗಳನ್ನು ಪಡೆಯಲು, ಎಸ್‌ಎಂಎಸ್ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿವೆ. ೨ಜಿ ಸಂಪರ್ಕವಿರುವಂತಹ ಗ್ರಾಹಕರಿಗಾಗಿ ಪ್ರತ್ಯೇಕ ಲೈಟ್ ಆವೃತ್ತಿಯ ಮೊಬೈಲ್ ಆಪ್ ಲಭ್ಯವಿದೆ. ಜೊತೆಗೆ ಹಿಂದಿ ಭಾಷೆಯ ಅಪ್ಲಿಕೇಷನ್ ಸಹ ಇದೆ. ಈ ಎಲ್ಲಾ ವಿಧಾನಗಳನ್ನು ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸ ಗೊಳಿಸಲಾಗಿದೆ.

ಈ ಎಲ್ಲಾ ಮಾರ್ಗಗಳು ವೈಯಕ್ತಿಕ ಸೇವೆಗಳಾದ ದೂರವಾಣಿ, ವಿದ್ಯುತ್‌, ನೀರು ಸೇರಿ ದಂತೆ ವಿವಿಧ ಬಿಲ್‌ಗಳಿಗೆ ಹಣ ಪಾವತಿಸುವುದು, ಗೃಹ ಅಥವಾ ವಾಹನ ಸಾಲಗಳ ಇಎಂಐ ಪಾವತಿಗಾಗಿ ಬಹಳ ಸರಳ ಮತ್ತು ಶೀಘ್ರವಾಗಿ ಬಳಸುವಂತಹ ಸೇವೆಗಳಾಗಿವೆ. ನಿಮ್ಮ ಬ್ಯಾಂಕ್‌ನ ಎನ್‌ಇಎಫ್‌ಟಿ ಮತ್ತು ಐಎಂಪಿಎಸ್ ಸೌಲಭ್ಯಗಳನ್ನು ಬಳಸಿಕೊಂಡು ಮೂರನೇ ವ್ಯಕ್ತಿಗೂ ಹಣ ವರ್ಗಾಯಿಸಬಹುದಾಗಿದೆ.

ಈ ಎಲ್ಲಾ ಹೊಸ ಬಗೆಯ ಬ್ಯಾಂಕಿಂಗ್ ಸೇವೆಗಳಿಂದಾಗಿ ಎಲ್ಲರೂ ನಗದು ಹಣವನ್ನೇ ವಿವಿಧ ವಹಿವಾಟುಗಳಿಗೆ ಅವಲಂಬಿಸುವುದನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬಹುದು ಮತ್ತು ಎಟಿಎಂ ಬಳಕೆಯ ಕನಿಷ್ಠ ಮಿತಿ ಮೀರಿದ ನಂತರ ಪ್ರತಿ ಬಾರಿ ಸೇವೆ ಬಳಸಿಕೊಂಡಾಗಲೂ ತೆರಬೇಕಾದ ಶುಲ್ಕಗಳಿಂದ ತಪ್ಪಿಸಿಕೊಳ್ಳಬಹುದು.

4 ದಿನಕ್ಕೊಮ್ಮೆ ನಗದು
ಅತ್ಯಂತ ತುರ್ತು ಸಂದರ್ಭಗಳು ಇಲ್ಲದೇ ಇರುವಾಗ, ನಾಲ್ಕು ದಿನಗಳಲ್ಲಿ ಒಂದಕ್ಕಿಂತ ಹೆಚ್ಚಿನ ಬಾರಿ ಎಟಿಎಂ ಘಟಕಕ್ಕೆ ಭೇಟಿ ನೀಡದೇ ಇರುವಂತೆ ಯೋಜನೆ ರೂಪಿಸಿಕೊಳ್ಳಿ. ಇದನ್ನು ಸಾಧ್ಯವಾಗಿಸಲು ನಿಮ್ಮ ನಗದು ಒಳಹರಿವನ್ನು ಸರಿಯಾಗಿ ಯೋಜಿಸಬೇಕು.
ಮಹಾ ನಗರಗಳನ್ನು ಹೊರತುಪಡಿಸಿ ಬೇರೆ ನಗರಗಳಲ್ಲಾದರೆ ಗ್ರಾಹಕರು ಎಟಿಎಂ ಬಳಸಿಕೊಳ್ಳುವುದಕ್ಕೆ ಮಿತಿಯನ್ನು ಹೆಚ್ಚಿನ ಪ್ರಮಾಣದಲ್ಲೇನೂ ವಿಧಿಸಲಾಗಿಲ್ಲ.

ಹಾಗಾಗಿ ಇಂತಹ ಚಿಕ್ಕ ನಗರ ಪಟ್ಟಣಗಳಲ್ಲಿ ಅತ್ಯಗತ್ಯ ಎನ್ನುವುದಾದರೆ ಮೂರು ದಿನಗಳಿಗೊಮ್ಮೆ ಎಟಿಎಂ ಘಟಕಕ್ಕೆ ಭೇಟಿ ನೀಡಿ ಸೇವೆ ಬಳಸಿಕೊಳ್ಳುವಂತೆ ಯೋಜನೆ ರೂಪಿಸಿಕೊಳ್ಳಬಹುದು. ಎಟಿಎಂಗಳಲ್ಲಿ ವಿವಿಧ ಬಗೆಯ ಸೇವಾ ಸೌಲಭ್ಯಗಳು ಲಭ್ಯ ಇರುತ್ತವೆ. ಆದರೆ ಸಾಧ್ಯವಾದಷ್ಟೂ ಎಟಿಎಂಗಳನ್ನು ನಗದು ಪಡೆಯುವುದಕ್ಕೆ ಮಾತ್ರವೇ ಬಳಸಿಕೊಳ್ಳುವುದಕ್ಕೆ ಸೀಮಿತ ಗೊಳಿಸಿಕೊಳ್ಳಿ. ಆದಷ್ಟೂ ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್‌ನ ಎಟಿಎಂ  ಘಟಕವನ್ನೇ ಬಳಸಲು ಪ್ರಯತ್ನಿಸಿ ಈಗ ಬಹುತೇಕ ಬ್ಯಾಂಕುಗಳು ತಮ್ಮ ಎಟಿಎಂಗಳಲ್ಲಿ ಗರಿಷ್ಠ ಐದು ಉಚಿತ ವಹಿವಾಟುಗಳನ್ನು ಒದಗಿಸುತ್ತಿವೆ.

ಅಂದರೆ ಪ್ರತಿ ವಾರ ನಿಮ್ಮ ಸ್ವಂತ ಬ್ಯಾಂಕ್‌ನ ಎಟಿಎಂನಲ್ಲಿ ಒಂದು ವಾರಕ್ಕೆ ಒಂದು ಉಚಿತ ವಹಿವಾಟು. ಯಾವುದೇ ಒಂದು ವಾರದಲ್ಲಿ ಯೋಜಿತ ಮೊತ್ತಕ್ಕಿಂತ ಹೆಚ್ಚು ವೆಚ್ಚಗಳು ಉಂಟಾಗುವ ಸಂದರ್ಭಗಳು ಉದ್ಭವಿಸಿದಲ್ಲಿ ಇತರೆ ಬ್ಯಾಂಕಿನ ಎಟಿಎಂ ಅನ್ನು ಬಳಸಿರಿ.
ನಿಮ್ಮ ಮನೆ ಅಥವಾ ಕಚೇರಿಗೆ ಹತ್ತಿರದಲ್ಲಿರುವ ಎಟಿಎಂ ಘಟಕವನ್ನು ಪತ್ತೆ ಹಚ್ಚಲು, ನಿಮ್ಮ ಮೊಬೈಲ್ ಫೋನ್‌ನಲ್ಲಿ ನಿಮ್ಮ ಬ್ಯಾಂಕ್‌ನ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT