ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಗೈ ಆಟಗಾರರ ಹೆಗ್ಗಳಿಕೆ

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಬ್ಯಾಟ್ಸ್‌ಮನ್‌ ಸ್ನೇಹಿ ಎನಿಸಿರುವ ಐಪಿಎಲ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳೇ ಹೆಚ್ಚಾಗಿ ಗಮನ ಸೆಳೆಯುತ್ತಿದ್ದಾರೆ. ಅದು 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯ. ಪುಣೆ ವಾರಿಯರ್ಸ್‌ ಎದುರಿನ ಹೋರಾಟದಲ್ಲಿ   ಕ್ರಿಸ್‌ ಗೇಲ್‌ 175 ರನ್‌ ಬಾರಿಸಿದ್ದರು. ದೈತ್ಯ ಗೇಲ್‌ ಅವರ ಆವತ್ತಿನ ಆಟಕ್ಕೆ ಪ್ರತಿಯೊಬ್ಬ ಕ್ರಿಕೆಟಿಗರೂ ತಲೆದೂಗಿದ್ದರು. ಇದರ ಜೊತೆಗೆ ಗೇಲ್‌ ಅವರ ಎಡಗೈ ಬ್ಯಾಟಿಂಗ್ ಶೈಲಿ ಎಲ್ಲರ ಗಮನ ಸೆಳೆದಿತ್ತು.

ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ ಎನಿಸಿರುವ ಗುಜರಾತ್‌ ಲಯನ್ಸ್‌ ತಂಡದ ನಾಯಕ ಸುರೇಶ್ ರೈನಾ, ಸನ್‌ರೈಸರ್ಸ್ ತಂಡದ ಆಟಗಾರ ಶಿಖರ್ ಧವನ್‌ ಮತ್ತು ಟ್ವೆಂಟಿ–20 ಮಾದರಿಯ ಆಟಕ್ಕೆ ಹೆಸರಾಗಿರುವ ಯುವರಾಜ್‌ ಸಿಂಗ್ ಅವರ ಬ್ಯಾಟಿಂಗ್ ಕಣ್ಣ ಮುಂದೆ ಬಂದಾಗಲೆಲ್ಲಾ ಎಡಗೈ ಶೈಲಿಯ ಬ್ಯಾಟಿಂಗ್ ನೆನಪಾಗುತ್ತದೆ.

ಇದು ಕೇವಲ ಬ್ಯಾಟ್ಸ್‌ಮನ್‌ಗಳ ವಿಚಾರದಲ್ಲಿಯಷ್ಟೇ ಅಲ್ಲ. ಬೌಲರ್‌ಗಳ ವಿಷಯದಲ್ಲಿಯೂ ಎಡಗೈ ಶೈಲಿ ಆಕರ್ಷಕವಾಗಿ ಕಾಣುತ್ತದೆ. ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ ಜಹೀರ್ ಖಾನ್‌, ಸನ್‌ರೈಸರ್ಸ್ ತಂಡದಲ್ಲಿರುವ ವೇಗಿ ಆಶಿಶ್‌ ನೆಹ್ರಾ, ಆರ್‌ಸಿಬಿ ತಂಡದಲ್ಲಿರುವ ಕರ್ನಾಟಕದ ಆಟಗಾರ ಎಸ್‌. ಅರವಿಂದ್ ಬೌಲಿಂಗ್ ಶೈಲಿ ಗಮನ ಸೆಳೆಯುತ್ತವೆ. ಇನ್ನೂ  ಕೆಲ ಆಟಗಾರರು   ಎಡಗೈ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಮೂಲಕವೂ ಗಮನ ಸೆಳೆದಿದ್ದಾರೆ.

ಈಗ ನಡೆಯುತ್ತಿರುವ ಐಪಿಎಲ್‌ ಟೂರ್ನಿಯಲ್ಲಿ  ಒಟ್ಟು ಹೆಚ್ಚು ರನ್ ಹೊಡೆದ (ಏಪ್ರಿಲ್‌ 29ರ ಪಂದ್ಯಗಳ ಅಂತ್ಯಕ್ಕೆ) ಮೊದಲ ಹತ್ತು ಆಟಗಾರರ ಪಟ್ಟಿಯಲ್ಲಿ ಮೂವರು ಎಡಗೈ ಬ್ಯಾಟ್ಸ್‌ಮನ್‌ಗಳು ಸ್ಥಾನ ಹೊಂದಿದ್ದಾರೆ. ಗೌತಮ್‌ ಗಂಭೀರ್‌ ಆರು ಪಂದ್ಯಗಳಿಂದ 296 ರನ್ ಗಳಿಸಿದ್ದಾರೆ. ಡೇವಿಡ್‌ ವಾರ್ನರ್‌ 6 ಪಂದ್ಯಗಳಿಂದ 294 ಮತ್ತು ರೈನಾ ಏಳು ಪಂದ್ಯಗಳಿಂದ 210 ರನ್ ಕಲೆ ಹಾಕಿದ್ದಾರೆ.

ಹಿಂದಿನ ಎಂಟೂ ಆವೃತ್ತಿಗಳಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರೇ ಪ್ರಾಬಲ್ಯ ಮೆರೆದಿದ್ದಾರೆ. ಎರಡು ಸಾವಿರ ಮತ್ತು ಅದಕ್ಕಿಂತ ಹೆಚ್ಚು ರನ್ ಗಳಿಸಿದ ಏಳು ಆಟಗಾರರಲ್ಲಿ ಕ್ರಿಸ್‌ ಗೇಲ್‌ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಭಾರತದ ಆಟಗಾರರೇ. ಇದರಲ್ಲಿ ಮೂವರು ಎಡಗೈ ಬ್ಯಾಟ್ಸ್‌ಮನ್‌ಗಳು ಎನ್ನುವುದು ವಿಶೇಷ. 

2008ರಿಂದ 2015ರ ಆವೃತ್ತಿಗಳವರೆಗೆ ರೈನಾ  112 ಪಂದ್ಯಗಳನ್ನಾಡಿದ್ದು ಒಟ್ಟು 3699 ರನ್ ಕಲೆ ಹಾಕಿದ್ದಾರೆ. ಗಂಭೀರ್ 2014ರವರೆಗಿನ ಟೂರ್ನಿಯ ಅಂತ್ಯಕ್ಕೆ 103 ಪಂದ್ಯಗಳನ್ನು ಆಡಿದ್ದು 2806 ರನ್ ಬಾರಿಸಿದ್ದಾರೆ. ವೆಸ್ಟ್‌ ಇಂಡೀಸ್‌ನ ಗೇಲ್‌   82 ಪಂದ್ಯಗಳಿಂದ 3199 ರನ್ ಬಾರಿಸಿದ್ದಾರೆ.
ಐಪಿಎಲ್‌ನಲ್ಲಿ 2000 ರನ್ ಗಳಿಸುವ ಹೊಸ್ತಿಲಲ್ಲಿರುವ   17 ಆಟಗಾರರಲ್ಲಿ ಐದು ಜನ ಎಡಗೈ ಬ್ಯಾಟ್ಸ್‌ಮನ್‌ಗಳೇ ಇದ್ದಾರೆ. 

ಈ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಹಲವಾರು ಆಟಗಾರರು ಗಮನ ಸೆಳೆದಿದ್ದಾರೆ.  ಒಟ್ಟಾರೆ ಟೂರ್ನಿಯಲ್ಲಿ 500 ರನ್ ಹೊಡೆದು 50 ವಿಕೆಟ್ ಪಡೆದ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎಂಟು ಆಟಗಾರರಿದ್ದಾರೆ. ಇದರಲ್ಲಿ ಮೂವರು ರವೀಂದ್ರ ಜಡೇಜ, ಇರ್ಫಾನ್‌ ಪಠಾಣ್‌ ಮತ್ತು ಮಾರ್ಕೆಲ್‌.

ಎಡಗೈ ಬ್ಯಾಟಿಂಗ್ ಶೈಲಿ ಕೇವಲ  ಐಪಿಎಲ್‌ನಲ್ಲಿ ಮಾತ್ರವಲ್ಲ. ಟೆಸ್ಟ್‌ ಮತ್ತು  ಏಕದಿನ ಮಾದರಿಯಲ್ಲಿಯೂ ಗಮನ ಸೆಳೆಯುತ್ತದೆ. ಅಲನ್‌ ಬಾರ್ಡರ್‌, ಬ್ರಯನ್‌ ಲಾರಾ, ಗ್ಯಾರಿ ಸೋಬರ್ಸ್‌, ಗ್ರೇಮ್‌ ಸ್ಮಿತ್‌, ಸೌರವ್‌ ಗಂಗೂಲಿ, ಕುಮಾರ ಸಂಗಕ್ಕಾರ ಅವರಂಥ ದಿಗ್ಗಜ ಕ್ರಿಕೆಟಿಗರು ಎಡಗೈ ಶೈಲಿಗೆ ಹೊಸ ಹೊಳಪನ್ನು ತಂದುಕೊಟ್ಟವರು. ಆದ್ದರಿಂದ ಈ ಶೈಲಿ ಬೇಗನೆ ಎಲ್ಲರ ಗಮನ ಸೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT