ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡವಿ ಬಿದ್ದಿರುವ ದೇಶಕ್ಕೊಂದು ಪುಟ್ಟ ಸಾಂತ್ವನ...

Last Updated 21 ಫೆಬ್ರುವರಿ 2016, 19:49 IST
ಅಕ್ಷರ ಗಾತ್ರ

ಮರುಭೂಮಿಯಲ್ಲಿ ನಡೆದು ಹೋಗುತ್ತಿದ್ದವನಿಗೆ ಓಯಸಿಸ್‌ ಸಿಕ್ಕಿದ ಅನುಭವ. ಹಲವು ವಿವಾದ, ಆಟಗಾರರೊಂದಿಗೆ ತಿಕ್ಕಾಟ, ಹಣಕಾಸಿನ ಸಮಸ್ಯೆಗೆ ಸಿಲುಕಿ ತತ್ತರಿಸಿರುವ ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ಪಾಲಿಗೆ ಸಿಕ್ಕ ಸಾಂತ್ವನವಿದು. ಏಕೆಂದರೆ ವಿಂಡೀಸ್‌ಗೆ ಜೂನಿಯರ್‌ ವಿಶ್ವಕಪ್‌ ಪಟ್ಟ ಒಲಿದಿದೆ. ಈ ಬೆಳವಣಿಗೆಯನ್ನು ಗತಕಾಲದ ವೈಭವ ಕಂಡುಕೊಳ್ಳುವ ಪ್ರಯತ್ನದ ಮೊದಲ ಮೆಟ್ಟಿಲು ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಬಗ್ಗೆ ಕೆ.ಓಂಕಾರ ಮೂರ್ತಿ ಬರೆದಿದ್ದಾರೆ.

ಅದೊಂದು ಕಾಲವಿತ್ತು... ಕೆರಿಬಿಯನ್‌ ದ್ವೀಪಕ್ಕೆ ಕ್ರಿಕೆಟ್‌ ಆಡಲು ಪ್ರವಾಸ ಕೈಗೊಳ್ಳುವುದೆಂದರೆ ಆಟಗಾರರ ಎದೆ ನಡುಗಲಾರಂಭಿಸುತಿತ್ತು. ಸೋಲಿನ ಭಯ ಮಾತ್ರವಲ್ಲ; ದೇಹದ ಯಾವ ಭಾಗಕ್ಕೆ ಎಷ್ಟು ಹಾನಿ ಆಗಲಿದೆ ಎಂಬ ಆತಂಕ ಕಾಡುತಿತ್ತು. ಈ ಬಾರಿ ಏನು ಕಾದಿದೆಯೊ ಎನ್ನುವಷ್ಟು ಹೆದರಿಕೆ. ವೆಸ್ಟ್‌ಇಂಡೀಸ್‌ ತಂಡದ ಹೆಸರು ಕೇಳಿದರೆ ಆಟಗಾರರ ಕುಟುಂಬದವರೂ ಆತಂಕಕ್ಕೆ ಒಳಗಾಗುತ್ತಿದ್ದ ಕಾಲವದು.

ಕಾರಣವಿಷ್ಟೇ; 70, 80, 90ರ ದಶಕದಲ್ಲಿ ವೆಸ್ಟ್‌ಇಂಡೀಸ್‌ ತಂಡ ಕ್ರಿಕೆಟ್‌ ಜಗತ್ತಿನ ಮೇಲೆ ಸಾಧಿಸಿದ್ದ ಹಿಡಿತ ಅಂಥದ್ದು. ಪ್ರಚಂಡ ವೇಗಿಗಳು ಎನಿಸಿರುವ ಚಾರ್ಲಿ ಗ್ರಿಫಿತ್‌, ಮೈಕಲ್ ಹೋಲ್ಡಿಂಗ್, ಜೊಯೆಲ್ ಗಾರ್ನರ್‌, ಆ್ಯಂಡಿ ರಾಬರ್ಟ್ಸ್‌, ಮಾಲ್ಕಂ ಮಾರ್ಷಲ್‌, ಇಯಾನ್‌ ಬಿಷಪ್‌, ಕರ್ಟ್ನಿ ವಾಲ್ಷ್‌, ಕರ್ಟ್ನಿ ಅಂಬ್ರೋಸ್ ಕಣ್ಣಿನಿಂದಲೇ ಎದುರಾಳಿ ಆಟಗಾರರ ಬೆವರಿಳಿಸುತ್ತಿದ್ದರು. ಹಾಗೆಯೇ, ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಗ್ಯಾರಿ ಸೋಬರ್ಸ್‌, ಕ್ಲೈವ್‌ ಲಾಯ್ಡ್‌, ವಿವಿಯನ್ ರಿಚರ್ಡ್ಸ್‌, ಗಾರ್ಡನ್‌ ಗ್ರಿನಿಜ್‌, ಡೆಸ್ಮಂಡ್‌ ಹೇನ್ಸ್‌, ಬ್ರಯಾನ್‌ ಲಾರಾ ಅವರನ್ನು ಕಂಡರೆ ಬೌಲರ್‌ಗಳ ಉತ್ಸಾಹ ಕ್ಷಣಮಾತ್ರದಲ್ಲಿ ಅಡಗಿ ಹೋಗುತಿತ್ತು.

ನಿಮಗೆ ಗೊತ್ತಿರಬಹುದು. ಸಚಿನ್‌ ತೆಂಡೂಲ್ಕರ್‌ ಅವರು 15ನೇ ವಯಸ್ಸಿಗೆ ರಣಜಿ, ದುಲೀಪ್‌ ಟ್ರೋಫಿ ಹಾಗೂ ಇರಾನಿ ಕಪ್‌ನಲ್ಲಿ ಶತಕ ಗಳಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದರು. ಆ ಸಮಯದಲ್ಲಿಯೇ ವೆಸ್ಟ್‌ಇಂಡೀಸ್‌ ಪ್ರವಾಸಕ್ಕೆ ಹೋಗಲು ಭಾರತ ತಂಡಕ್ಕೆ ಆಹ್ವಾನ ಬಂದಿತ್ತು.

ವಿಂಡೀಸ್‌ ಪ್ರವಾಸವಾಗಿದ್ದರಿಂದ ತೆಂಡೂಲ್ಕರ್‌ ಅವರನ್ನು ಆಗ ಆಯ್ಕೆಗೆ ಪರಿಗಣಿಸಲಿಲ್ಲ! ಏಕೆಂದರೆ, ಕೆರಿಬಿಯನ್‌ ನಾಡಿನ ದೈತ್ಯ ವೇಗಿಗಳ ಭಯ ಆಯ್ಕೆದಾರರನ್ನು ಕಾಡುತಿತ್ತು. ಪುಟ್ಟ ಹುಡುಗನನ್ನು ಈ ಪ್ರವಾಸಕ್ಕೆ ಆಯ್ಕೆ ಮಾಡಿದರೆ ಅನಾಹುತವಾದೀತು ಎಂಬ ಆತಂಕ ಅವರದ್ದು. ವಿಂಡೀಸ್‌ ತಂಡ ಯಾವ ರೀತಿ ಪಾರಮ್ಯ ಸಾಧಿಸಿತ್ತು ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ.

ಸುಮಾರು ಮೂರು ದಶಕಗಳ ಕಾಲ ಕ್ರಿಕೆಟ್‌ ಪ್ರಪಂಚದ ತುತ್ತತುದಿಯಲ್ಲಿದ್ದ ತಂಡವದು. 1975 ಹಾಗೂ 1979ರ ವಿಶ್ವಕಪ್ ಮುಡಿಗೇರಿಸಿಕೊಂಡು ಹ್ಯಾಟ್ರಿಕ್‌ನತ್ತ ಹೆಜ್ಜೆ ಇಟ್ಟಿತ್ತು. ಆದರೆ, ಆ ಕನಸನ್ನು 1983ರ ಫೈನಲ್‌ನಲ್ಲಿ ‘ಕಪಿಲ್ ಡೆವಿಲ್ಸ್‌’ ನುಚ್ಚುನೂರು ಮಾಡಿದ್ದು ಬೇರೆ ಮಾತು. 1980ರಿಂದ 1995ರವರೆಗೆ ಆಡಿದ 27 ಟೆಸ್ಟ್‌ ಸರಣಿಗಳಲ್ಲಿ ಈ ದೇಶದ ತಂಡ ಅಜೇಯವಾಗುಳಿದಿತ್ತು.

ಕೆರಿಬಿಯನ್‌ ತಂಡದವರು ಕೊನೆಯ ಬಾರಿ ಐಸಿಸಿ ಏಕದಿನ ವಿಶ್ವಕಪ್‌ ಜಯಿಸಿದ್ದು 1979ರಲ್ಲಿ. ಬಳಿಕ 2004ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದರು. 2012ರಲ್ಲಿ ಐಸಿಸಿ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ಪಾತಾಳಕ್ಕೆ ಕುಸಿದ ವಿಂಡೀಸ್‌
ಹಲವು ವರ್ಷಗಳ ಕಾಲ ಕ್ರಿಕೆಟ್‌ ಜಗತ್ತನ್ನು ಆಳಿದ್ದ ವಿಂಡೀಸ್‌ ಈಗ ಪಾತಾಳಕ್ಕೆ ಕುಸಿದಿದೆ. ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಕೆಳ ಕ್ರಮಾಂಕದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ವಿದೇಶದಲ್ಲಿ ಆಡಿದ 38 ಟೆಸ್ಟ್‌ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದರಲ್ಲಿ. ಇದು ಬಾಂಗ್ಲಾದೇಶಕ್ಕಿಂತ ಕಳಪೆ ಸಾಧನೆ.

ಆಟಗಾರರಿಗೆ ವೇತನ ನೀಡಲಾಗದಷ್ಟು ಸಮಸ್ಯೆಯನ್ನು ಮಂಡಳಿ ಎದುರಿಸುತ್ತಿದೆ. ಹೀಗಾಗಿ ಆಟಗಾರರು ಸಿಡಿದೆದ್ದಿದ್ದಾರೆ. ಗುತ್ತಿಗೆ ಒಪ್ಪಂದ ಸಂಬಂಧ ಬಿಕ್ಕಟ್ಟು ಸೃಷ್ಟಿಯಾಗಿದೆ. ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಹಾಗೆಯೇ ಇದೆ. 2014ರಲ್ಲಿ ವೆಸ್ಟ್‌ಇಂಡೀಸ್‌ ತಂಡದವರು ಭಾರತ ಪ್ರವಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಸ್ವದೇಶಕ್ಕೆ ಹಿಂತಿರುಗಿದ್ದು ಎಲ್ಲರಿಗೂ ಗೊತ್ತೇ ಇದೆ. ಮಂಡಳಿಯೊಂದಿಗೆ ಒಪ್ಪಂದಕ್ಕೆ ಆಟಗಾರರು ಸಿದ್ಧರಿಲ್ಲ. ಹೆಚ್ಚು ವೇತನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮುಂಬರುವ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಆಡಲು ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ, ಕ್ರಿಸ್‌ ಗೇಲ್‌ ಸೇರಿದಂತೆ ಕೆಲವರು ದೇಶದ ತಂಡವನ್ನು ಪ್ರತಿನಿಧಿಸುವುದನ್ನು ಬಿಟ್ಟು ಟ್ವೆಂಟಿ–20 ಲೀಗ್‌ನಲ್ಲಿ ಆಡುತ್ತಾ ಹಣ ಸಂಪಾದಿಸುತ್ತಿದ್ದಾರೆ.

ಭರವಸೆಯ ಬೆಳಕು
ಇಂಥ ಕಷ್ಟಕಾಲದಲ್ಲಿ ಭರವಸೆಯ ಬೆಳಕು ಚೆಲ್ಲಿರುವುದು ಜೂನಿಯರ್‌ ತಂಡ. ಬಾಂಗ್ಲಾದೇಶದಲ್ಲಿ ಈಚೆಗೆ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದಿರುವ ಕೆರಿಬಿಯನ್‌ ದ್ವೀಪದ ಹುಡುಗರು ಗತಕಾಲದ ವೈಭವವನ್ನು ಮರುಕಳಿಸುವ ಸೂಚನೆ ನೀಡಿದ್ದಾರೆ. ಪ್ರತಿಭಾವಂತ ಆಟಗಾರರು ದೇಶದಲ್ಲಿ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ವಿಂಡೀಸ್‌ ತಂಡದವರು ಜೂನಿಯರ್‌ ವಿಶ್ವಕಪ್‌ ಗೆದ್ದಿರುವುದು ಇದೇ ಮೊದಲು.

ಭದ್ರತೆ ಕಾರಣ ನೀಡಿ ಆಸ್ಟ್ರೇಲಿಯಾ ತಂಡದವರು ಈ ಟೂರ್ನಿಯಿಂದ ಹಿಂದೆ ಸರಿದಿದ್ದರಿಂದ ಭಾರತವೇ ನೆಚ್ಚಿನ ತಂಡ ಎನಿಸಿತ್ತು. ವಿಂಡೀಸ್‌ ಬಗ್ಗೆ ಭರವಸೆ ಇಟ್ಟವರು ಕಡಿಮೆ. ಆದರೆ, ಅಚ್ಚರಿಯೇ ನಡೆದು ಹೋಗಿದೆ. ಆತಿಥೇಯ ಬಾಂಗ್ಲಾದೇಶ ತಂಡದವರು ಸೆಮಿಫೈನಲ್‌ ತಲುಪಿದ್ದು ಮತ್ತೊಂದು ವಿಶೇಷ.

‘ನಮ್ಮ ಮೇಲೆ ಯಾರಿಗೂ ನಂಬಿಕೆ ಇರಲಿಲ್ಲ. ಆದರೆ, ಈಗ ಟ್ರೋಫಿ ನಮ್ಮ ಕೈಯಲ್ಲಿದೆ. ಈ ಖುಷಿಯನ್ನು ಮಾತುಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಇಲ್ಲಿಂದ ವಿಂಡೀಸ್‌ ಕ್ರಿಕೆಟ್‌ ಬದಲಾಗಬಹುದು ಎಂಬುದು ನಿರೀಕ್ಷೆ ನಮ್ಮದು. ವಿಶ್ವಕಪ್‌ನಲ್ಲಿ ಆಡಿರುವ ಹೆಚ್ಚಿನ ಆಟಗಾರರು ಸೀನಿಯರ್‌ ತಂಡದಲ್ಲಿ ಆಡುವ ತಾಕತ್ತು ಹೊಂದಿದ್ದಾರೆ’ ಎಂದಿದ್ದು ವಿಂಡೀಸ್‌ ಜೂನಿಯರ್‌ ತಂಡದ ನಾಯಕ ಶಿಮ್ರಾನ್‌ ಹೆಟ್ಮೆಯರ್‌.

2004ರಲ್ಲಿ ಕೂಡ ಜೂನಿಯರ್‌ ತಂಡದವರು ಫೈನಲ್‌ ತಲುಪಿದ್ದರು. ಆದರೆ, ಫೈನಲ್‌ನಲ್ಲಿ ಸೋಲು ಕಂಡಿದ್ದರು. ಈ ಬಾರಿ ಭಾರತ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿದಿದ್ದಾರೆ.

ಅದೇನೇ ಇರಲಿ, ಕಳೆದ 10 ವರ್ಷಗಳಲ್ಲಿ 32 ಟೆಸ್ಟ್‌ ಸರಣಿ ಆಡಿರುವ ವಿಂಡೀಸ್‌ ಆರರಲ್ಲಿ ಮಾತ್ರ ಗೆದ್ದಿದೆ. ಇವೆಲ್ಲಾ ಸ್ವದೇಶದಲ್ಲಿಯೇ ಗೆದ್ದ ಸರಣಿಗಳು. ಇಂಥ ಸಂಕಷ್ಟಕ್ಕೆ ಸಿಲುಕಿರುವ ಕೆರಿಬಿಯನ್‌ ನಾಡಿನ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಜೂನಿಯರ್‌ ತಂಡ ಭರವಸೆ ಬೆಳಕಾಗಿದೆ.  

1983ರ ವಿಶ್ವಕಪ್‌ ನೆನಪಾದಾಗ..
19 ವರ್ಷದೊಳಗಿನವರ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ–ವೆಸ್ಟ್‌ಇಂಡೀಸ್‌ ಮುಖಾಮುಖಿಯಾಗಿದ್ದು 1983ರ ಸೀನಿಯರ್‌ ಏಕದಿನ ವಿಶ್ವಕಪ್‌ನ ನೆನಪುಗಳನ್ನು ಬಿಚ್ಚಿಟ್ಟಿತು.

ಆಗ ಹ್ಯಾಟ್ರಿಕ್‌ ಸಾಧಿಸುವ ಹುಮ್ಮಸ್ಸಿನಲ್ಲಿದ್ದ ವಿಂಡೀಸ್‌ ತಂಡಕ್ಕೆ ‘ಡಾರ್ಕ್‌ ಹಾರ್ಸ್‌’ ಭಾರತ ತಂಡದವರು ಅಡ್ಡಿಯಾಗಿದ್ದರು. ಕೆರಿಬಿಯನ್‌ ಬಳಗದ ಕನಸನ್ನು ನುಚ್ಚುನೂರು ಮಾಡಿ ಲಾರ್ಡ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು.

33 ವರ್ಷಗಳ ಬಳಿಕ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುವ ಅವಕಾಶ ಲಭಿಸಿದ್ದು ಮೀರ್‌ಪುರದಲ್ಲಿ. ಜೂನಿಯರ್‌ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿದ ವಿಂಡೀಸ್‌ ತಂಡ ಟ್ರೋಫಿ ಎತ್ತಿ ಹಿಡಿಯಿತು.

ಜೂನಿಯರ್‌ನಿಂದ ಸೀನಿಯರ್...
ಜೂನಿಯರ್‌ ವಿಶ್ವಕಪ್‌ನಲ್ಲಿ ಆಡಿದ ಅದೆಷ್ಟೊ ಕ್ರಿಕೆಟಿಗರು ಸೀನಿಯರ್‌ ತಂಡದಲ್ಲಿ ದೊಡ್ಡ ಹೆಸರು ಮಾಡಿದ ಉದಾಹರಣೆ ಇದೆ. ಸೀನಿಯರ್‌ ತಂಡವನ್ನು ಮುನ್ನಡೆಸಿದ ನಿದರ್ಶನವಿದೆ. ಅದಕ್ಕೆ ವಿರಾಟ್‌ ಕೊಹ್ಲಿ ಸಾಕ್ಷಿ.

2008ರಲ್ಲಿ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್‌ ಗೆದ್ದಾಗ ಕೊಹ್ಲಿ ನಾಯಕರಾಗಿದ್ದರು. ಈಗ ಟೆಸ್ಟ್‌ ತಂಡದ ನಾಯಕರಾಗಿದ್ದಾರೆ. ಅಷ್ಟೇ ಅಲ್ಲ; ಅದ್ಭುತ ಬ್ಯಾಟ್ಸ್‌ಮನ್‌ ಆಗಿ ರೂಪುಗೊಂಡಿದ್ದಾರೆ. ಯುವರಾಜ್‌ ಸಿಂಗ್‌, ಶಿಖರ್‌ ಧವನ್‌, ಮೊಹಮ್ಮದ್‌ ಕೈಫ್‌ ಕೂಡ ಜೂನಿಯರ್‌ ವಿಶ್ವಕಪ್‌ನಲ್ಲಿ ಆಡಿದವರು.

ಅಷ್ಟೇ ಅಲ್ಲ; ಕ್ರಿಕೆಟ್‌ ದಂತಕತೆ ಬ್ರಯಾನ್‌ ಲಾರಾ, ಜಿಮ್ಮಿ ಆ್ಯಡಮ್ಸ್‌ (ವೆಸ್ಟ್‌ಇಂಡೀಸ್‌), ಮೈಕಲ್‌ ಅಥರ್ಟನ್‌, ನಾಸಿರ್‌ ಹುಸೇನ್‌ (ಇಂಗ್ಲೆಂಡ್‌), ಇಂಜಮಾಮ್‌ ಉಲ್‌ ಹಕ್‌, ಮುಷ್ತಾಕ್‌ ಅಹ್ಮದ್‌ (ಪಾಕಿಸ್ತಾನ), ಸನತ್‌ ಜಯಸೂರ್ಯ (ಶ್ರೀಲಂಕಾ), ಕ್ರಿಸ್‌ ಕ್ರೇನ್ಸ್‌ (ನ್ಯೂಜಿಲೆಂಡ್‌) ಅವರೂ ಜೂನಿಯರ್‌ ವಿಶ್ವಕಪ್‌ನಲ್ಲಿ ಆಡಿದ್ದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT