ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತರದ ಅಪೂರ್ವ

Last Updated 21 ಮೇ 2015, 19:30 IST
ಅಕ್ಷರ ಗಾತ್ರ

ಆಕಸ್ಮಿಕವಾಗಿ ಮಾಡೆಲಿಂಗ್ ಲೋಕಕ್ಕೆ ಕಾಲಿರಿಸಿದ ಕರಾವಳಿ ಮೂಲದ ಅಪೂರ್ವ ಈಗ ಸಿನಿಮಾ ರಂಗದಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಓದಿನ ಗುರಿ ಮರೆಯದಿದ್ದರೂ ಸದ್ಯಕ್ಕೆ ಬಣ್ಣದ ಲೋಕವೇ ತನಗೆಲ್ಲಾ ಎನ್ನುವ ಮಟ್ಟಿಗಿನ ಸಿನಿಮಾ ಮೋಹಿ ಈಕೆ. ಸೌತ್ ಇಂಡಿಯಾ ಫೆಮಿನಾದಲ್ಲಿ ಟಾಪ್ ಹತ್ತರೊಳಗೆ ಸ್ಥಾನ ಪಡೆದಿದ್ದ ಸುಂದರಿ ಅಪೂರ್ವ ರೈ, ದಿಗಂತ್ ನಾಯಕರಾಗಿರುವ ‘ಹಿಟ್‌ ವಿಕೆಟ್‌’ ಚಿತ್ರದ ನಾಯಕಿ.

ಮಂಗಳೂರು ಮೂಲದವರಾದರೂ ಅಪೂರ್ವ ಬೆಳೆದಿದ್ದು ಶಿವಮೊಗ್ಗದಲ್ಲಿ. ಈ ಬಿ.ಕಾಂ ವಿದ್ಯಾರ್ಥಿನಿಗೆ ಸಿನಿಮಾ ಮತ್ತು ಮಾಡೆಲಿಂಗ್ ಬಗ್ಗೆ ವಿಪರೀತ ಮೋಹ. ಈ ಸೆಳೆತ ಬಾಲ್ಯದಲ್ಲಿಯೇ ಇತ್ತಾದರೂ ಸಿನಿಮಾ ರಂಗವೇ ಬದುಕೆನ್ನುವ ಸ್ಪಷ್ಟ ಗುರಿ ಇರಲಿಲ್ಲ. ರ್‍್ಯಾಂಪ್ ಮೇಲೆ ಹೆಜ್ಜೆ ಹಾಕಿದಂತೆ ಕನ್ನಡಿ ಮುಂದೆ ನಡೆದು, ಅಭಿನಯಿಸಿ ಪುಳಕಗೊಳ್ಳುತ್ತಿದ್ದವರಿಗೆ ಆ ಸುಪ್ತ ಬಯಕೆ ನಿಜವಾದ ಖುಷಿ ಈಗ.

ಕಾಲೇಜಿನಲ್ಲಿ ಓದುವಾಗ ರಜೆಗೆಂದು ಬೆಂಗಳೂರಿಗೆ ಬಂದಿದ್ದ ಅಪೂರ್ವ ಅವರನ್ನು ಗೆಳೆತಿಯೊಬ್ಬರು ಗ್ಲೋಬಲ್ ಫ್ಯಾಷನ್ ಸಪ್ತಾಹಕ್ಕೆ ಬರುವಂತೆ ಆಹ್ವಾನಿಸಿದರು. ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಮೊದಲ ಗಳಿಗೆ ಸವಿದು ಇನ್ನೂ ಒಂಬತ್ತು ತಿಂಗಳಾಗಿದ್ದವಷ್ಟೇ. ‘ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಪೂರ್ವ, ಫೆಮಿನಾ ಮಿಸ್‌ ಸೌತ್‌ ಇಂಡಿಯಾದಲ್ಲಿ ಮೊದಲ ಹತ್ತು ಸುಂದರಿಯರಲ್ಲಿ ಒಬ್ಬರೆನ್ನಿಸಿಕೊಂಡರು. ಹಲವು ಬಾರಿ ರ್‍್ಯಾಂಪ್ ಮೇಲೆ ಹೆಜ್ಜೆ ಹಾಕುವ ಅವಕಾಶವನ್ನೂ ಗಿಟ್ಟಿಸಿಕೊಂಡರು. ಎತ್ತರದ ನಿಲುವಿನ ಕಾರಣ ಫ್ಯಾಷನ್ ಲೋಕ ಖುಷಿಯಿಂದಲೇ ಅವರನ್ನು ಸ್ವಾಗತಿಸಿತು. ಹೀಗೆ ಏರು ದಾರಿಯಲ್ಲಿ ಇರುವಾಗಲೇ ಅಭಿನಯ ಕ್ಷೇತ್ರಕ್ಕೂ ಕಾಲಿಡುವ ಬಯಕೆ ಅವರಲ್ಲಿ ಚಿಗುರಿತು. ಅದಕ್ಕೆ ತಕ್ಕನಾಗಿ ಕೆಲವು ಸಿನಿಮಾ ಆಹ್ವಾನಗಳೂ ಎದುರಾದವು.

ಸಿದ್ಧತೆ ಇಲ್ಲದೆ ನೇರವಾಗಿ ಕ್ಯಾಮೆರಾ ಎದುರಿಸುವ ಸಾಹಸಕ್ಕೆ ಅಪೂರ್ವ ಮುಂದಾಗಲಿಲ್ಲ. ಉಷಾ ಭಂಡಾರಿ ಅವರ  ಬಳಿ ನಟನಾ ತರಬೇತಿ ಪಡೆದರು. ಅದಾದ ಬಳಿಕ ದೊರೆತದ್ದು ‘ಹಿಟ್‌ ವಿಕೆಟ್‌’ ಚಿತ್ರದಲ್ಲಿನ ಅವಕಾಶ.

ದಿಗಂತ್ ನಾಯಕರಾಗಿದ್ದ ‘ಬಿಸಿಲೆ’ ಎಂಬ ಚಿತ್ರ ನಿರ್ದೇಶಿಸಿದ್ದ ಸಂದೀಪ್‌ ‘ಹಿಟ್‌ ವಿಕೆಟ್‌’ಗೂ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಇದು ಕ್ರಿಕೆಟ್‌ಗೆ ಸಂಬಂಧಿಸಿದ ಕಥೆ. ಜತೆಗೆ ಪ್ರೀತಿ ಪ್ರೇಮದ ಪಾಠವೂ ಇದೆ. ದಿಗಂತ್ ಹೆಚ್ಚು ಪ್ರಬುದ್ಧ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅದಕ್ಕೆ ತದ್ವಿರುದ್ಧ ಪಾತ್ರ ಅಪೂರ್ವ ಅವರದು. ಮಗುವಿನಂತಹ ಮುಗ್ಧ ತರುಣಿಯ ಪಾತ್ರ ಅವರದು.

ಎನ್‌ಸಿಸಿ, ವಾಲಿಬಾಲ್, ಬೈಕ್‌ ರೈಡಿಂಗ್– ಹೀಗೆ ತುಸು ಸಾಹಸಮಯ ಚಟುವಟಿಕೆಗಳಲ್ಲಿ ಒಲವು ಹೊಂದಿರುವ ಅಪೂರ್ವ, ಇಷ್ಟವಿಲ್ಲದಿದ್ದರೂ ಅಮ್ಮನ ಬಲವಂತಕ್ಕಾಗಿ ಮೂರನೇ ತರಗತಿಯಿಂದ ಹೈಸ್ಕೂಲಿನವರೆಗೆ ಭರತನಾಟ್ಯ ನೃತ್ಯ ತರಗತಿಗೆ ಹೋದದ್ದಿದೆ. ಆ ಕಲಿಕೆ ಅವರಿಗೆ ಸಿನಿಮಾದಲ್ಲಿ ಪ್ರಯೋಜನಕ್ಕೆ ಬಂದಿದೆ. ಅಮ್ಮ ಒಲ್ಲದ ಮನಸಿನಿಂದ ಹೂಂಗುಟ್ಟಿದ್ದರೂ ತಂದೆ ಮತ್ತು ಸಂಬಂಧಿಕರ ಪ್ರೋತ್ಸಾಹ ಅವರ ಬಣ್ಣ ಹಚ್ಚುವ ಉಮೇದಿಗೆ ಉತ್ತೇಜನ ನೀಡಿದೆ.

ಎಲ್ಲಾ ಪ್ರಮುಖ ನಟರ ಜತೆ ನಟಿಸಬೇಕು ಎಂಬ ಹೆಬ್ಬಯಕೆ ಹೊಂದಿದ್ದರೂ ಅದು ಕಷ್ಟ ಎನ್ನುವ ಅರಿವು ಅವರಿಗಿದೆ. ಏಕೆಂದರೆ 5.9 ಅಡಿ ಎತ್ತರದ ತಮಗೆ ಎಲ್ಲಾ ಹೀರೊಗಳ ಜೋಡಿ ಹೊಂದಿಕೆಯಾಗುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಆದರೂ ‘ಚೆನ್ನೈ ಎಕ್ಸ್‌ಪ್ರೆಸ್‌್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಶಾರೂಕ್‌ ಖಾನ್‌ ಅವರ ಎತ್ತರದ ಅಂತರವನ್ನು ಕ್ಯಾಮೆರಾ ಚಳಕದಿಂದ ಸರಿದೂಗಿಸಿರುವಂತೆ ಇಲ್ಲಿಯೂ ಕೆಲ ನಾಯಕರೊಂದಿಗೆ ಮಾಡಬಹುದು ಎಂಬ ಭರವಸೆಯೂ ಅವರಲ್ಲಿದೆ.

ಹೆಸರು ಕೇಳಿದೊಡನೆ ಒಮ್ಮೆಲೆ ಐಶ್ವರ್ಯಾ ರೈ ನೆನಪಿಗೆ ಬರುತ್ತಾರಲ್ಲಾ? ಎಂದು ಕೇಳಿದರೆ ನಾಚಿ ಸಣ್ಣನೆ ನಗುವ ಅಪೂರ್ವ, ಇಬ್ಬರಿಗೂ ದೂರದ ನಂಟು ಇದ್ದರೂ ಇರಬಹುದು ಎನ್ನುತ್ತಾರೆ.

ತಮಿಳಿನಲ್ಲಿ ಅರ್ಜುನ್ ಸರ್ಜಾ ನಾಯಕರಾಗಿರುವ ಚಿತ್ರಕ್ಕೂ ಆಡಿಷನ್‌ ನೀಡಿ ಬಂದಿರುವ ಅಪೂರ್ವ, ಅಲ್ಲಿನ ಆಹ್ವಾನಕ್ಕಾಗಿ ಕಾದಿದ್ದಾರೆ. ಹೊಸ ನಾಯಕರೊಟ್ಟಿಗೆ ನಟಿಸಲು ಒಲ್ಲೆ ಎನ್ನುವ ಅವರಿಗೆ ವರ್ಷಕ್ಕೆ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಗುರ್ತಿಸಿಕೊಳ್ಳಬೇಕೆಂಬ ಆತುರವಿಲ್ಲ. ಒಳ್ಳೆಯ ಕಥೆ, ತಂಡ ಸಿಗುವರೆಗೂ ಕಾಯುವುದಕ್ಕೆ ಬೇಸರವಿಲ್ಲ ಎನ್ನುವ ಸಾವಧಾನ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT